ADVERTISEMENT

ದುಷ್ಟ ಕೂಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 20:12 IST
Last Updated 19 ಫೆಬ್ರುವರಿ 2019, 20:12 IST
   

ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಅವನ ಅಮಾತ್ಯನಾಗಿ ಹುಟ್ಟಿ ಬಂದಿದ್ದ. ಅವನು ಯಾವಾಗಲೂ ಸರಿಯಾದ ಸಲಹೆಯನ್ನು ಕೊಡುತ್ತ ರಾಜನ ತೀರ್ಮಾನಗಳು ಸರಿಯಾಗಿರುವಂತೆ ನೋಡಿಕೊಳ್ಳುತ್ತಿದ್ದ. ಆದರೆ ರಾಜ ಸ್ವಲ್ಪ ಜಿಪುಣನೂ, ಲೋಭಿಯೂ ಆಗಿದ್ದ.

ರಾಜನಿಗೆ ಕುದುರೆಗಳ ಬಗ್ಗೆ ಬಹು ಮೋಹ. ದೇಶ ವಿದೇಶಗಳಿಂದ ಕುದುರೆಗಳನ್ನು ತರಿಸಿಕೊಳ್ಳುತ್ತಿದ್ದ. ಕುದುರೆಗಳು ಬಂದಾಗ ಬೋಧಿಸತ್ವ ಅವುಗಳ ಗುಣಲಕ್ಷಣಗಳನ್ನು ನೋಡಿ ಸರಿಯಾದ ಬೆಲೆ ಕಟ್ಟುತ್ತಿದ್ದ. ಮಾರಲು ಬಂದವರಿಗೂ ಆ ಬೆಲೆ ಒಪ್ಪಿತವಾಗುತ್ತಿತ್ತು. ಆದರೆ ರಾಜನಿಗೆ ಇದು ಇಷ್ಟವಾಗಲಿಲ್ಲ. ಹೇಗಾದರೂ ಮಾಡಿ, ಕುದುರೆಗಳಲ್ಲಿ ಏನಾದರೂ ದೋಷಗಳನ್ನು ಕಂಡುಹಿಡಿದು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವುದು ಅವನ ಉದ್ದೇಶ. ಈ ಅಪ್ರಾಮಾಣಿಕತೆ ಬೋಧಿಸತ್ವನಿಗೆ ಇಷ್ಟವಾಗದ್ದರಿಂದ ರಾಜ ಬೋಧಿಸತ್ವನ ಬದಲಾಗಿ ಮತ್ತೊಬ್ಬ ಅಮಾತ್ಯನನ್ನು ಆರಿಸಿಕೊಂಡು ಅವನಿಗೆ ಹೇಳಿದ, “ನೀನು ಕುದುರೆಗಳಿಗೆ ಬೆಲೆ ಕಟ್ಟುವುದಕ್ಕಿಂತ ಮೊದಲು ನಮ್ಮಲ್ಲಿ ಮಹಾಸೋಣ ಎಂಬ ದುಷ್ಟ ಕುದುರೆ ಇದೆಯಲ್ಲ, ಅದನ್ನು ಆ ಕುದುರೆಗಳ ಗುಂಪಿನಲ್ಲಿ ಬಿಟ್ಟುಬಿಡು. ಅದು ಮಹಾ ದುರಹಂಕಾರಿ, ಕೋಪಿಷ್ಠವಾದ ಕುದುರೆ.

ಅದು ಎಲ್ಲ ಕುದುರೆಗಳನ್ನು ಕಚ್ಚಿ, ತಳ್ಳಿ ಗಾಯ ಮಾಡಿಬಿಡುತ್ತದೆ. ನಂತರ ನೀನು ಹೋಗಿ ಆ ಪೆಟ್ಟಾದ ಕುದುರೆಗಳಿಗೆ ಕಡಿಮೆ ಬೆಲೆಯನ್ನು ಕಟ್ಟು. ಆಗ ನಮಗೆ ಒಳ್ಳೆಯ ಕುದುರೆಗಳು ಕಡಿಮೆ ಹಣದಲ್ಲಿ ದೊರಕುತ್ತವೆ”. ಆ ಮಂತ್ರಿ ಅದನ್ನೊಪ್ಪಿ ಕುದುರೆಗಳ ಗುಂಪಿನಲ್ಲಿ ಮಹಾಸೋಣ ಕುದುರೆಯನ್ನು ಬಿಟ್ಟು ಗಾಯ ಮಾಡಿಸಿ ತುಂಬ ಕಡಿಮೆ ಬೆಲೆ ಗೊತ್ತು ಮಾಡಿದ. ಆದರೆ ಅದರಿಂದ ಕುದುರೆಗಳನ್ನು ಮಾರಲು ಬಂದವರಿಗೆ ಬಹಳ ಅಸಮಾಧಾನವಾಯಿತು. ತಮಗೆ ಮೋಸವಾಯಿತು ಎಂದು ಗೋಳಾಡಿಕೊಂಡರು.

ADVERTISEMENT

ಬೋಧಿಸತ್ವನ ಮುಂದೆ ತಮ್ಮ ಗೋಳನ್ನು ಹೇಳಿಕೊಂಡು ಪರಿಹಾರ ಕೇಳಿದರು. ಆತ ಕ್ಷಣಕಾಲ ಯೋಚಿಸಿ ಕೇಳಿದ, “ನಿಮ್ಮ ದೇಶದಲ್ಲಿ ಕೆಟ್ಟ ಕುದುರೆ ಇಲ್ಲವೇ?”. ಅವರು, “ಇದೆ ಸ್ವಾಮಿ. ಸುಹನು ಎಂಬ ಮಹಾ ದುಷ್ಟ ಕುದುರೆ ಇದೆ. ಅದರ ಹತ್ತಿರ ಹೋಗುವುದು ಯಾರಿಗಾದರೂ ಕಷ್ಟ. ಬೇರೆ ಯಾವ ಕುದುರೆಯನ್ನು ಕಂಡರೂ ಓಡಿಹೋಗಿ ಕಚ್ಚಿ ಗಾಯ ಮಾಡಿಬಿಡುತ್ತದೆ” ಎಂದರು. “ಹಾಗಾದರೆ ಮುಂದಿನ ಬಾರಿ ಕುದುರೆಗಳನ್ನು ಮಾರಲು ಬರುವಾಗ ಆ ದುಷ್ಟ ಕುದುರೆಯನ್ನು ಕರೆತಂದು ಬಿಡಿ” ಎಂದು ಸಲಹೆ ನೀಡಿದ.

ಅಂತೆಯೇ ಮರುತಿಂಗಳು ಹೆಚ್ಚು ಕುದುರೆಗಳನ್ನು ಮಾರಲು ಬಂದಾಗ ಸುಹನು ಕುದುರೆಯನ್ನು ಬೇರೆಯಾಗಿ ತಂದರು. ಕುದುರೆಗಳು ಬಂದ ಸುದ್ದಿಯನ್ನು ತಿಳಿದ ರಾಜ ತನ್ನ ಅಮಾತ್ಯನಿಗೆ ಪರೀಕ್ಷೆ ಮಾಡಿ ಬೆಲೆಕಟ್ಟುವಂತೆ ತಿಳಿಸಿದ. ಆ ಕುವಿಚಾರದ ಮಂತ್ರಿ ಮಹಾಸೋಣ ಕುದುರೆಯನ್ನು ತಂದು ಗುಂಪಿನಲ್ಲಿ ಬಿಟ್ಟ. ಅದನ್ನ ಕಂಡ ವ್ಯಾಪಾರಿಗಳು ತಾವೂ ಸುಹನು ಕುದುರೆಯನ್ನು ಬಿಟ್ಟರು. ಆಗೊಂದು ಆಶ್ಚರ್ಯ ಕಾದಿತ್ತು. ಎರಡೂ ದುಷ್ಟ ಕುದುರೆಗಳು ಹತ್ತಿರ ಬಂದೊಡನೆ ಕೋಪದಿಂದ ಕಚ್ಚಾಡುವ ಬದಲು ಪರಸ್ಪರ ಮೈ ನೆಕ್ಕುತ್ತ ಅತ್ಯಂತ ಪ್ರೀತಿಯಿಂದ ನಿಂತುಬಿಟ್ಟವು! ಉಳಿದ ಯಾವ ಕುದುರೆಗಳಿಗೂ ತೊಂದರೆಯಾಗಲಿಲ್ಲ.

ಈ ವಿಚಿತ್ರವನ್ನು ಕಂಡ ರಾಜ ಬೋಧಿಸತ್ವನಿಗೆ ಕೇಳಿದ, “ಇವೆರಡೂ ಬಲು ಕೆಟ್ಟ ಕುದುರೆಗಳು. ಬೇರೆ ಕುದುರೆಗಳನ್ನು ಕಂಡರೆ ಬೆನ್ನತ್ತಿ ಕಚ್ಚಿ ಗಾಯಮಾಡುವ ಈ ದುಷ್ಟ ಕುದುರೆಗಳು ಈಗ ಪರಸ್ಪರ ಪ್ರೀತಿಯಿಂದ ಆನಂದವಾಗಿ ನಿಂತಿವೆ, ಇದಕ್ಕೇನು ಕಾರಣ?” ಬೊಧಿಸತ್ವ ಹೇಳಿದ, “ಒಳ್ಳೆಯ ಗುಣದವರು ಒಳ್ಳೆಯವರನ್ನೇ ಹುಡುಕಿಕೊಂಡು ಹೋಗುವಂತೆ, ನೀಚರು ಸುತ್ತಲೂ ಸಾವಿರ ಜನ ಒಳ್ಳೆಯವರಿದ್ದರೂ ನೀಚರನ್ನೇ ಹುಡುಕಿ ಸ್ನೇಹ ಮಾಡುತ್ತಾರೆ. ಇದು ಸಮಾನ ಸ್ವಭಾವದ, ಸಮಾನ ಧಾತುಗಳ ಗುಣ” ನಂತರ ರಾಜ ಲೋಭಿಯಾಗುವುದು ಬೇಡ, ವ್ಯಾಪಾರಿಗಳಿಗೆ ಸರಿಯಾದ ಬೆಲೆ ಕೊಡುವಂತೆ ಬೋಧನೆ ಮಾಡಿ ಒಪ್ಪಿಸಿದ.

ಇಂದಿಗೂ ಹಾಗೆಯೇ ಇಲ್ಲವೇ? ಸಜ್ಜನರು ಸಜ್ಜನರನ್ನೇ ಹುಡುಕಿಕೊಂಡು ಹೋಗುತ್ತಾರೆ ಅಂತೆಯೇ ದುಷ್ಟರು ಎಲ್ಲೆಂದೆಲ್ಲಿಗೋ ಬಂದು ಸೇರಿಕೊಂಡು ಕೂಟ ರಚಿಸಿಕೊಳ್ಳುತ್ತಾರೆ, ಅನಾಹುತ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.