ADVERTISEMENT

ಶಿಕ್ಷಣವಾದ ಶಿಕ್ಷೆ

ಡಾ. ಗುರುರಾಜ ಕರಜಗಿ
Published 16 ಜೂನ್ 2019, 20:34 IST
Last Updated 16 ಜೂನ್ 2019, 20:34 IST
   

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಅವನಿಗೆ ಬ್ರಹ್ಮದತ್ತ ಕುಮಾರನೆಂಬ ಮಗನಿದ್ದ. ಮಗನಿಗೆ ಸರಿಯಾದ ಜ್ಞಾನ ದೊರೆಯಲಿ ಎಂದು ಅವನಿಗೆ ಸಾವಿರ ನಾಣ್ಯಗಳನ್ನು ಕೊಟ್ಟು ತಕ್ಕಶಿಲೆಗೆ ಕಳುಹಿಸಿದ.

ರಾಜಕುಮಾರ ಗುರುಗಳ ಮನೆಯ ಮುಂದೆ ಕಾದಿದ್ದು ಅವರು ಬಂದೊಡನೆ ನಮಸ್ಕಾರ ಮಾಡಿ ನಿಂತ. ತಾನು ವಾರಣಾಸಿಯ ರಾಜಕುಮಾರನೆಂದು ಹೇಳಿಕೊಂಡ. ಅವರು ಕೇಳಿದರು, “ನೀನು ಆಚಾರ್ಯಭಾಗಿಯೋ ಅಥವಾ ಧರ್ಮಶಿಷ್ಯನೋ?” ಹೀಗೆಂದರೆ, ಆಚಾರ್ಯಭಾಗದವನು ಎಂದರೆ ಗುರುದಕ್ಷಿಣೆಯನ್ನು ತಂದವನು, ಆಚಾರ್ಯರ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಾನೆ. ಆದರೆ ಹಣಕೊಡುವ ಶಕ್ತಿ ಇಲ್ಲದವನು ಗುರುವಿನ ಮನೆಯಲ್ಲಿ ಸೇವೆ ಮಾಡಿಕೊಂಡು ಕಲಿಯುತ್ತಾನೆ. ಅವನು ಧರ್ಮಶಿಷ್ಯ. ಬ್ರಹ್ಮದತ್ತಕುಮಾರ ತಾನು ತಂದ ಸಾವಿರ ನಾಣ್ಯಗಳನ್ನು ಗುರುಗಳಿಗೆ ಕೊಟ್ಟು ಆಚಾರ್ಯಭಾಗಿಯಾದ.

ರಾಜಕುಮಾರನ ಶಿಕ್ಷಣ ನಡೆದಿತ್ತು. ಒಂದು ದಿನ ಗುರುಗಳ ಜೊತೆಗೆ ನದಿಗೆ ಸ್ನಾನಕ್ಕೆ ಹೋಗುವಾಗ ದಾರಿಯಲ್ಲಿ ಒಬ್ಬ ಮುದುಕಿ ಶುದ್ಧಗೊಳಿಸಿದ ಎಳ್ಳನ್ನು ಬಿಸಿಲಿಗೆ ಒಣಗಿಸಲು ಹಾಕಿದ್ದಳು. ರಾಜಕುಮಾರನಿಗೆ ಆಸೆಯಾಗಿ ಒಂದು ಮುಷ್ಟಿ ಎಳ್ಳನ್ನು ತೆಗೆದು ಬಾಯಿಗೆ ಹಾಕಿಕೊಂಡ. ಮುದುಕಿ ಅದನ್ನು ನೋಡಿದರೂ ಸುಮ್ಮನಿದ್ದಳು. ಮರುದಿನವೂ ಹಾಗೆಯೇ ಮಾಡಿದ. ಆಗಲೂ ಮುದುಕಿ ಏನೂ ಹೇಳಲಿಲ್ಲ. ಮೂರನೇ ದಿನವೂ ಎಳ್ಳನ್ನು ತಿಂದಾಗ ಮುದುಕಿ ಆಚಾರ್ಯನನ್ನು ಕಂಡು ಗೋಳಾಡಿದಳು. “ನಿನ್ನ ಶಿಷ್ಯ ಲೋಭಿ, ನನ್ನ ಮೂರು ಮುಷ್ಟಿ ಎಳ್ಳನ್ನು ತಿಂದಿದ್ದಾನೆ” ಎಂದಳು. ಆಗ ಗುರುಗಳು, “ಆತ ನಿನಗೆ ಸರಿಯಾದ ಬೆಲೆಯನ್ನು ನೀಡುತ್ತಾನೆ” ಎಂದಾಗ ಆಕೆ, “ನನಗೆ ಬೆಲೆ ಬೇಡ. ಆತ ಇನ್ನೊಮ್ಮೆ ಈ ತರಹದ ತಪ್ಪು ಮಾಡದಂತೆ ಶಿಕ್ಷೆ ಕೊಡಿ” ಎಂದಳು. ಆಗ ಆಚಾರ್ಯ ಮುದುಕಿಯ ಬಳಿಯಿದ್ದ ಬೆತ್ತದ ಕೋಲನ್ನು ಎತ್ತಿಕೊಂಡು ಮೂರು ಮುಷ್ಟಿ ಎಳ್ಳಿಗೆ ಮೂರು ಪೆಟ್ಟು ಎಂದು ರಾಜಕುಮಾರನ ಬೆನ್ನಿನ ಮೇಲೆ ಮೂರು ಪೆಟ್ಟು ಹಾಕಿದ.

ADVERTISEMENT

ರಾಜಕುಮಾರನಿಗೆ ಅಪಮಾನವಾದಂತಾಗಿ ಗುರುವನ್ನು ದುರುಗುಟ್ಟಿ ನೋಡಿದ. ಮನಸ್ಸಿನಲ್ಲಿಯೇ ತೀರ್ಮಾನಮಾಡಿದ. ತಾನು ರಾಜನಾದ ಮೇಲೆ ಆಚಾರ್ಯನನ್ನು ವಾರಣಾಸಿಗೆ ಕರೆಸಿ ಆತನಿಗೆ ಮರಣದಂಡನೆಯನ್ನು ನೀಡಬೇಕು.

ಶಿಕ್ಷಣ ಮುಗಿಸಿ ವಾರಣಾಸಿಗೆ ಮರಳಿದ ಬ್ರಹ್ಮದತ್ತಕುಮಾರ. ಕೆಲವೇ ವರ್ಷಗಳಲ್ಲಿ ಮಗನಿಗೆ ರಾಜ್ಯಭಾರ ವಹಿಸಿ ಬ್ರಹ್ಮದತ್ತ ಕಾಡಿಗೆ ಹೋದ. ಬ್ರಹ್ಮದತ್ತಕುಮಾರ ರಾಜನಾದ ನಂತರ ತನ್ನ ಆಚಾರ್ಯರಿಗೆ ವಾರಣಾಸಿಗೆ ಬರುವಂತೆ ಆಮಂತ್ರಣ ನೀಡಿದ. ತನ್ನ ಶಿಷ್ಯ ಈಗ ತಾನೇ ರಾಜನಾಗಿದ್ದಾನೆ, ಸ್ವಲ್ಪ ದಿನ ಹೋಗಲಿ, ಸ್ವಲ್ಪ ಇನ್ನೂ ತಿಳುವಳಿಕೆ ಬರಲಿ ಎಂದು ಕಾಯ್ದ. ನಾಲ್ಕಾರು ವರ್ಷಗಳ ನಂತರ ರಾಜನಿಂದ ಮತ್ತೊಂದು ಕರೆ ಬಂದಾಗ ಆಚಾರ್ಯ ವಾರಣಾಸಿಗೆ ಬಂದ. ಆಚಾರ್ಯ ಅರಮನೆಗೆ ಬಂದಾಗ ಅವನನ್ನು ಎದುರುಗೊಂಡ ರಾಜ ಅವನನ್ನು ದುರುಗುಟ್ಟಿ ನೋಡಿದ. ನಂತರ ಮಂತ್ರಿಗಳ ಕಡೆಗೆ ತಿರುಗಿ ಹೇಳಿದ, “ಈ ಆಚಾರ್ಯ ನನಗೆ ಹಾಕಿದ ಮೂರು ಪೆಟ್ಟಿನ ನೋವು ನನಗಿನ್ನೂ ಇದೆ. ಈ ಆಚಾರ್ಯ ತನ್ನ ತಲೆಯ ಮೇಲೆ ಮೃತ್ಯುವನ್ನು ಹೊತ್ತುಕೊಂಡು ಬಂದಿದ್ದಾನೆ. ಅವನ ವಧೆ ಮಾಡಿಬಿಡಿ”.

ಆಚಾರ್ಯ ನಕ್ಕ, “ಆಚಾರ್ಯನಾದವನು ಶಿಷ್ಯನನ್ನು ದಾರಿಗೆ ತರಲು ಶಿಕ್ಷೆ ನೀಡುತ್ತಾನೆ. ಅದನ್ನು ಅರ್ಥಮಾಡಿಕೊಳ್ಳದ ಶಿಷ್ಯ ಬದುಕಿನುದ್ದಕ್ಕೂ ಅನಾರ್ಯನಾಗಿಯೇ ಇರುತ್ತಾನೆ. ಆಗ ಎಳ್ಳನ್ನು ಕಳ್ಳತನದಲ್ಲಿ ತಿಂದಾಗ ದಂಡಿಸದಿದ್ದರೆ ಮುಂದೆ ನೀನು ಬಹುದೊಡ್ಡ ಕಳ್ಳನಾಗುತ್ತಿದ್ದೆ” ಎಂದ. ಮಂತ್ರಿಗಳೂ ಆ ಮಾತನ್ನು ಅನುಮೋದಿಸಿ ರಾಜನ ಮನಸ್ಸನ್ನು ಬದಲಿಸಿದರು. ರಾಜ ಕ್ಷಮೆ ಕೇಳಿದ.

ಗುರು ಸರಿಯಾದ ಸಮಯದಲ್ಲಿ ನೀಡಿದ ಶಿಕ್ಷೆಯೇ ಶಿಕ್ಷಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.