ADVERTISEMENT

ವಿಧಿಯ ಕಾರ್ಯ

ಡಾ. ಗುರುರಾಜ ಕರಜಗಿ
Published 9 ಜುಲೈ 2019, 17:50 IST
Last Updated 9 ಜುಲೈ 2019, 17:50 IST
   

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಟ್ಟುತ್ತ |
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |
ಬಾಯ ಚಪ್ಪರಿಸುವನು – ಮಂಕುತಿಮ್ಮ || 156 ||

ಪದ-ಅರ್ಥ: ಈಯವನಿಯೊಲೆಯೊಳೆಮ್ಮಯ=ಈ+ಅವನಿಯ (ಪ್ರಪಂಚದ+ಒಲೆಯೊಳು+ಎಮ್ಮಯ, ಬಾಳನಟ್ಟು=ಬಾಳನು+ಅಟ್ಟು (ಅಡುಗೆ ಮಾಡಿ)
ವಾಚ್ಯಾರ್ಥ: ತೋಯಿಸಿ, ಬೇಯಿಸಿ, ಹೆಚ್ಚಿ, ಕೊಚ್ಚಿ, ಕಾಯಿಸಿ, ಕರಿದು, ಹುರಿದು, ಸುಟ್ಟು, ವಿಧಿ ಈ ಪ್ರಪಂಚದ ಒಲೆಯಲ್ಲಿ ನಮ್ಮ ಬಾಳನ್ನು ಅಡುಗೆಮಾಡಿ ಬಾಯಿ ಚಪ್ಪರಿಸುತ್ತದೆ

ವಿವರಣೆ: ಅಲ್ಲಮಪ್ರಭು ಹೇಳಿದ, ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಅಂದರೆ ಒಂದು ಚಿಕ್ಕ ಸಂತೋಷವನ್ನು ಪಡೆಯಲು ಅಷ್ಟೊಂದು ದುಃಖ ಪಡಲು ಸಿದ್ಧರಾಗಿರಬೇಕು. ಯಾರಿಗೆ ದುಃಖ ತಪ್ಪಿಲ್ಲ, ನೋವು ತಾಗಲಿಲ್ಲ? ಸತ್ಯವನ್ನು, ನೇರವಾದ ಬದುಕನ್ನೇ ತನ್ನ ಆದರ್ಶವೆಂದು ಬದುಕಿದ ಶ್ರೀರಾಮನಿಗೆ ಕಡಿಮೆ ಪರೀಕ್ಷೆಗಳು ಬಂದುವೇ? ಶ್ರೀಕೃಷ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ, ಬಸವಣ್ಣ ಇವರೆಲ್ಲರಿಗೂ ಬದುಕು ರೇಶಿಮೆಯ ಹಾಸಿಗೆಯಾಗಿತ್ತೇ?

ADVERTISEMENT

ಸತ್ಯವನ್ನೇ ಹೇಳುತ್ತೇನೆ ಎಂದು ಸತ್ಯವ್ರತನಾದ ಹರಿಶ್ಚಂದ್ರ ಪಟ್ಟ ಕಷ್ಟಗಳಿಗೆ ಮಿತಿಯುಂಟೇ? ಆರನೇ ಶತಮಾನದಲ್ಲಿಯೇ ಅತ್ಯಂತ ಶ್ರೇಷ್ಠ ಸಂತಳಾಗಿದ್ದ ರಾಬಿಯಾ ಮತ್ತೊಬ್ಬರ ಮನೆಯ ದಾಸಿಯಾಗಿ ಅನವರತ ಕಷ್ಟ ಪಟ್ಟಿದ್ದು ಯಾಕೆ? ಇದೆಲ್ಲಕ್ಕೂ ಏನಾದರೂ ಒಂದು ವಿವರಣೆ ಇದೆಯೇ ಎಂದು ದಾರ್ಶನಿಕರು ಅಂದಿನಿಂದ ಚಿಂತಿಸುತ್ತಲೇ ಬಂದಿದ್ದಾರೆ. ಕೊನೆಗೆ ಅವರೊಂದು ಸಿದ್ಧಾಂತಕ್ಕೆ ಬಂದಿದ್ದಾರೆ. ನಮ್ಮ ಬದುಕಿಗೆ ಐದು ಜನ ಯಜಮಾನರಿದ್ದಾರೆ.

1. ಸಂದರ್ಭ ಅಥವಾ ಪರಿಸ್ಥಿತಿ - ಪ್ರತಿಕ್ಷಣಕ್ಕೊಂದು ಬೇರೆ ಸಂದರ್ಭ ಬರಬಹುದು
2. ಕರ್ತಾ- ಕಾರ್ಯ ಮಾಡುವವನು, ಅವನೇ ಕಾರ್ಯಕ್ಕೆ, ಆ ಕಾರ್ಯಕ್ಕೆ ಬಾಧ್ಯ.
3. ಕರಣ- ಕಾರ್ಯಮಾಡಲು ಬೇಕಾದ ಉಪಕರಣಗಳು, ಸಹಾಯಕ್ಕೆ ಬಂದ ಜನ, ಸಾಧನಗಳು ಇತ್ಯಾದಿ
4. ಚೇಷ್ಟಾ – ಕಾರ್ಯಯೋಜನೆ, ವಿಧಾನ
5. ದೈವ -ಇದನ್ನು ವಿಧಿ ಎನ್ನಿ, ದೈವ ಎನ್ನಿ, ಭಗವಂತ ಎನ್ನಿ. ಇದು ಎಲ್ಲವನ್ನೂ ಮೀರಿದ್ದು ಮೊದಲಿನ ನಾಲ್ಕು ಮನುಷ್ಯರ ಅಧೀನವಾದವು. ಆದರೆ ಕೊನೆಯದು ದೈವದ ಭಾಗ. ಅದು ಅನುಕೂಲವಾಗದಿದ್ದರೆ ಉಳಿದುದೆಲ್ಲ ವ್ಯರ್ಥ. ಉದಾಹರಣೆಗೆ ಮಹಾಭಾರತದ ಯುದ್ಧವನ್ನು ತೆಗೆದುಕೊಳ್ಳೋಣ. ಸಂದರ್ಭ – ದಾಯಾದಿ ದ್ವೇಷ.

ಕರ್ತಾ- ಧರ್ಮರಾಜ, ಕರಣಗಳು – ಅವನ ತಮ್ಮಂದಿರು, ಭೀಷ್ಮ, ದ್ರೋಣ, ದುರ್ಯೋಧನ, ಸೈನ್ಯ, ಶಸ್ತ್ರಗಳು. ಚೇಷ್ಟಾ – ಅರ್ಜುನ ಪಶುಪತ ಪಡೆದದ್ದು, ಸಂಧಾನ, ಧರ್ಮರಾಜ ಸುಳ್ಳು ಹೇಳಬೇಕಾದದ್ದು, ಕರ್ಣನ ಸರ್ವಾಸ್ತ್ರ ವಿಧಿ - ಲೋಕದಲ್ಲಿ ಧರ್ಮಸ್ಥಾಪನೆ ಮಾಡುವುದು ಕೃಷ್ಣನ ನಿರ್ಧಾರ.

ದೈವದ ತೀರ್ಮಾನವನ್ನು ನಡೆಸಲು ಅಷ್ಟೊಂದು ಕೋಲಾಹಲ, ಹೋರಾಟ, ಸಾವು, ರಕ್ತಪಾತ. ಕೌರವ-ಪಾಂಡವರು ತಮ್ಮ ದ್ವೇಷಕ್ಕಾಗಿ ಹೊಡೆದಾಡಿದರು ಎಂದು ಪ್ರಪಂಚ ನಂಬುತ್ತದೆ. ಅಷ್ಟೊಂದು ಅಕ್ರೋಹಿಣಿ ಸೈನಿಕರು ತಮ್ಮನ್ನು ಕೊಚ್ಚಿಕೊಂಡು, ಒದ್ದಾಡಿ ಸತ್ತದ್ದು ಯಾಕೆ? ಪರಸ್ಪರ ವೈರಕ್ಕೇ? ಅಲ್ಲ. ಇದೆಲ್ಲ ನಡೆದದ್ದೂ ದೈವದ ತೀರ್ಮಾನವನ್ನು ನಡೆಸುವುದಕ್ಕಾಗಿ. ಅವೆಲ್ಲ ಒದ್ದಾಡಿದ್ದು ವಿಧಿಯ ನಿಶ್ಚಯದಂತೆ. ಅದಕ್ಕೆ ಕಗ್ಗ ಮನುಷ್ಯನಿಗೆ ವಿಧಿ ಏನೇನು ಮಾಡುತ್ತ್ತದೆಂಬುದನ್ನು ಅಡುಗೆ ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಯೊಂದಿಗೆ ಸ್ವಾರಸ್ಯವಾಗಿ ವರ್ಣಿಸುತ್ತದೆ. ವಿಧಿ ಏನೆಲ್ಲ ಮಾಡುತ್ತದೆ, ನಮ್ಮನ್ನು ಪರೀಕ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.