ADVERTISEMENT

ಕೈ ಚಾಚದ ಗುರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 4:48 IST
Last Updated 19 ಅಕ್ಟೋಬರ್ 2019, 4:48 IST
   

ಹಿಂದೆ ಪಾಂಚಾಲನಗರದಲ್ಲಿ ಪಾಂಚಾಲರಾಜ ಆಳುತ್ತಿದ್ದಾಗ ಬೋಧಿಸತ್ವ ಹತ್ತಿರದ ಗ್ರಾಮದಲ್ಲಿ ಬ್ರಾಹ್ಮಣನ ಮಗನಾಗಿ ಹುಟ್ಟಿದ್ದ. ದೊಡ್ಡವನಾಗುತ್ತಿದ್ದಂತೆ ತಕ್ಕಶಿಲೆಗೆ ಹೋಗಿ ಸಕಲ ವಿದ್ಯೆಗಳನ್ನು ಕಲಿತ. ನಂತರ ಹಿಮಾಲಯಕ್ಕೆ ತೆರಳಿ ತಪಸ್ವಿಯಾಗಿ ಅಲ್ಲಿಯೇ ಆಶ್ರಮಕಟ್ಟಿಕೊಂಡು ಉಳಿದ. ಕಂದಮೂಲಗಳನ್ನು ತಿನ್ನುತ್ತ ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತ ಇದ್ದ.

ಒಮ್ಮೆ ತಪ್ಪಲುಪ್ರದೇಶಕ್ಕೆ ಬಂದು ಸುತ್ತಾಡಿ ಪಾಂಚಾಲನಗರಕ್ಕೆ ಬಂದು, ರಾಜೋದ್ಯಾನದಲ್ಲಿ ನೆಲೆಸಿದ. ಅವನನ್ನು ಪಾಂಚಾಲರಾಜ ನೋಡಿದ. ಅವನ ಮುಖಕಾಂತಿಯನ್ನು ಕಂಡು ಬೆರಗಾಗಿ ರಾಜ ಅವನನ್ನು ಅರಮನೆಗೆ ಕರೆತಂದ. ಉನ್ನತವಾದ ಆಸನದಲ್ಲಿ ಕುಳ್ಳರಿಸಿ ಸತ್ಕಾರ ಮಾಡಿದ. ತನ್ನ ರಾಜೋದ್ಯಾನದಲ್ಲೇ ತಾವು ನೆಲೆಸಬೇಕು ಎಂದು ಆಗ್ರಹಿಸಿ ಅದಕ್ಕೆ ಅನುಕೂಲತೆಗಳನ್ನು ಮಾಡಿದ. ದಿನನಿತ್ಯವೂ ಬೋಧಿಸತ್ವನ ಭೋಜನ ಅರಮನೆಯಲ್ಲೇ ಆಗುತ್ತಿತ್ತು. ಆಗ ಬೋಧಿಸತ್ವನ ಮನಸ್ಸಿನಲ್ಲಿ ಒಂದು ಆಸೆ ಮೂಡಿತು.

ದಾರಿಯಲ್ಲಿ ಹೋಗಿ ಬರಲು ಅನುಕೂಲವಾಗುವಂತೆ ಒಂದು ಅಟ್ಟೆ ಇದ್ದ ಚಪ್ಪಲಿ ಹಾಗೂ ತಾಳೆಗರಿಯ ಒಂದು ಕೊಡೆ ಇದ್ದರೆ ಚೆನ್ನಾಗಿರುತ್ತಿತ್ತು. ಇದನ್ನು ರಾಜನ ಬಳಿ ಕೇಳಬೇಕೆಂದುಕೊಂಡು ಮರುದಿನ ಪ್ರವಚನ ಮುಗಿದ ನಂತರ, ‘ಮಹಾರಾಜಾ, ತಮ್ಮ ಹತ್ತಿರ ನಾನು ಏಕಾಂತದಲ್ಲಿ ಮಾತನಾಡಬೇಕು’ ಎಂದ. ರಾಜ ಎಲ್ಲರನ್ನೂ ದೂರ ಕಳುಹಿಸಿ, ‘ಭಂತೆ, ತಾವು ಏನು ಹೇಳಬೇಕೋ ಹೇಳಿ’ ಎಂದ. ಒಂದು ಕ್ಷಣ ಚಿಂತಿಸಿ ಬೋಧಿಸತ್ವ. ‘ಮತ್ತೊಮ್ಮೆ ಹೇಳುತ್ತೇನೆ ಬಿಡು” ಎಂದು ಮಾತು ಮುಗಿಸಿದ. ಮುಂದಿನ ವಾರವೂ ಇದೇ ರೀತಿ ಏಕಾಂತವನ್ನು ಬಯಸಿದ, ಆದರೆ ಏನನ್ನೂ ಕೇಳದೆ ಮತ್ತೊಮ್ಮೆ ನೋಡೋಣ ಎಂದು ಮುಂದೂಡಿದ. ಇದೇ ರೀತಿ ಯಾವುದನ್ನೂ ಬೇಡದೆ ಹನ್ನೆರಡು ವರ್ಷಗಳನ್ನು ಕಳೆದ. ಪಾಂಚಾಲರಾಜ ತನ್ನ ಪಟ್ಟದರಾಣಿಯೊಂದಿಗೆ ಯೋಚಿಸಿದ, ‘ಸನ್ಯಾಸಿಗಳು ನನ್ನಿಂದ ಏನನ್ನೋ ಅಪೇಕ್ಷಿಸಿದ್ದಾರೆ.

ADVERTISEMENT

ಆದರೆ ಏನನ್ನೂ ಕೇಳುತ್ತಿಲ್ಲ. ಬಯಕೆಯನ್ನು ಹತ್ತಿಕ್ಕಿಕೊಂಡೇ ಹನ್ನೆರಡು ವರ್ಷಗಳನ್ನು ಕಳೆದಿದ್ದಾರೆ. ಬ್ರಹ್ಮಚರ್ಯದ ಎಲ್ಲ ಅವಧಿಯನ್ನು ಹೀಗೆಯೇ ಕಳೆದಿರುವುದರಿಂದ ಬಹುಶ: ಅವರಿಗೆ ರಾಜ್ಯವನ್ನು ಭೋಗಿಸುವ ಇಚ್ಛೆಯಾಗಿರಬಹುದು. ಅವರು ಸಿಂಹಾಸನವನ್ನೇ ಬಯಸುತ್ತಿರಬಹುದು. ಕೇಳಿದರೆ ನಾನೆಲ್ಲಿ ಹೋಗಬೇಕೆಂಬ ಚಿಂತೆಯಿಂದ ಕೇಳುತ್ತಿಲ್ಲ. ಅವರು ರಾಜ್ಯವನ್ನು ಕೇಳಿದರೆ ಕೊಡಲು ನಾನು ಸಿದ್ಧನಾಗಿದ್ದೇನೆ. ಅದಲ್ಲದೆ ಅವರು ಏನನ್ನು ಬಯಸಿದರೆ ಅದನ್ನು ಕೊಟ್ಟೇ ತೀರುತ್ತೇನೆ’.

ಮರುದಿನ ಬೋಧಿಸತ್ವ ತಾನು ಮರಳಿ ಹಿಮಾಲಯಕ್ಕೆ ಹೋಗುವುದನ್ನು ತೀರ್ಮಾನಿಸಿರುವುದಾಗಿ ರಾಜನಿಗೆ ತಿಳಿಸಿದ. ರಾಜ ಎಷ್ಟು ಒತ್ತಾಯಿಸಿದರೂ ಕೇಳಲಿಲ್ಲ. ಕೊನೆಗೆ ರಾಜ ಕೇಳಿದ, ‘ಭಂತೇ, ಹನ್ನೆರಡು ವರ್ಷಗಳಿಂದ ನನ್ನನ್ನೇನೋ ಕೇಳಲು ಬಯಸಿದ್ದಿರಿ. ಆದರೆ ಕೇಳಲೇ ಇಲ್ಲ. ಅದೇನೆಂದು ಕೇಳಬಹುದೇ?’. ಬೋಧಿಸತ್ವ ನಕ್ಕು ಹೇಳಿದ, ‘ಅದರ ವಿಚಾರ ಈಗ ಬೇಕಿಲ್ಲ. ನನಗೆ ಮಳೆಗಾಲದಲ್ಲಿ ಬೇಕಾದದ್ದು ಅಟ್ಟೆ ಇರುವ ಒಂದು ಜೊತೆ ಚಪ್ಪಲಿ ಮತ್ತು ತಾಳೆಗರಿಯ ಒಂದು ಕೊಡೆ. ಈಗ ಅದಾವುದೂ ಬೇಡ’. ರಾಜ, ‘ಅದನ್ನು ತಾವು ಏಕೆ ಕೇಳಲಿಲ್ಲ?’ ಎಂದು ಕೇಳಿದ. ಬೋಧಿಸತ್ವ, ‘ಗುರುವಾದವನು ಶಿಷ್ಯನ ಮುಂದೆ ಎಂದಿಗೂ ಕೈ ಚಾಚಬಾರದು. ಹಾಗೆ ಮಾಡಿದರೆ ಅವನು ಮಾರ್ಗದರ್ಶನ ಮಾಡುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ’ ಎಂದ.

ಈ ಮಾತು ನಮ್ಮೆಲ್ಲ ಗುರುಗಳ ಮನದಲ್ಲಿ ಇಳಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.