ADVERTISEMENT

ಸುಖದ ಅಪೇಕ್ಷೆಯ ಸೆಳೆತ

ಡಾ. ಗುರುರಾಜ ಕರಜಗಿ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು |
ಬೆದಕುತಿರುವುದು ಲೋಕ ಸೊಗದಿರವನೆಳಸಿ ||
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ |
ಮುದಗಳಮಿತದ ನಿಧಿಗೆ – ಮಂಕುತಿಮ್ಮ || 224 ||

ಪದ-ಅರ್ಥ: ಬೆದಕು=ಹುಡುಕಾಟ, ಸೊಗದಿರವನೆಳಸಿ=ಸೊಗದ+ಇರವ (ಇರುವಿಕೆಯ)+ಎಳಸಿ (ಅಪೇಕ್ಷಿಸಿ), ಊಟೆ=ಬುಗ್ಗೆ, ಮುದಗಳಮಿತದ=ಮುದಗಳ (ಸಂತೋಷಗಳ)+ಅಮಿತದ (ಮಿತಿಯಿಲ್ಲದ)

ವಾಚ್ಯಾರ್ಥ: ಅದು ಬೇಕು, ಇದು ಬೇಕು, ಅನಂತರ ಮತ್ತೊಂದು ಬೇಕೆಂದು ಈ ಜಗತ್ತು ಸೊಗಸನ್ನು ಅಪೇಕ್ಷಿಸುತ್ತ ಹುಡುಕಾಡುತ್ತಿರುವುದು. ಪ್ರಪಂಚದಲ್ಲಿ ಸಂತೋಷಗಳ ಅನಂತವಾದ ನಿಧಿ ಇದೆ ಎನ್ನುವುದಕ್ಕೆ ಪ್ರತಿಯೊಬ್ಬರ ಹೃದಯದಲ್ಲಿ ಉಕ್ಕುತ್ತಿರುವ ಸಂತೋಷದ ಅಪೇಕ್ಷೆಯ ಬುಗ್ಗೆಯೇ ಸಾಕ್ಷಿ.

ADVERTISEMENT

ವಿವರಣೆ: ಮನುಷ್ಯನ ಅಪೇಕ್ಷೆಗೆ ಮಿತಿಯೇ ಇಲ್ಲ. ಏನು ಸಿಕ್ಕಿದರೂ ಮತ್ತಷ್ಟರಾಸೆ. ಸಂತೋಷಪಡುವುದಕ್ಕೆ ಒಂದು ಸೀಮೆಯೇ ಇಲ್ಲ ಎನ್ನಿಸುತ್ತದೆ. ಒಬ್ಬ ವ್ಯಾಪಾರಿ ದುಡ್ಡು ಗಳಿಸಿದ. ಆ ದುಡ್ಡು ಮತ್ತಷ್ಟು ದುಡ್ಡನ್ನು ಗಳಿಸಿತು. ಅವನ ಕಲ್ಪನೆಯ ಮಿತಿಯನ್ನು ಮೀರಿ ಸಂಪತ್ತು ಬಂದಿತು. ಒಂದು ದಿನ ಆತ ತನ್ನ ಗುಮಾಸ್ತನನ್ನು ಕರೆದು ಕೇಳಿದ, ‘ನನ್ನ ಸಂಪತ್ತು ಎಷ್ಟಿದೆ?’ ಆತ ಎಲ್ಲ ಲೆಕ್ಕ ಹಾಕಿ ಹೇಳಿದ, ‘ಸ್ವಾಮಿ, ನಿಮ್ಮ ಮನೆತನದ ಏಳು ತಲೆಮಾರಿನವರೆಗೂ ಯಾವ ತೊಂದರೆಯೂ ಇಲ್ಲ. ಅವರು ಏನೂ ಕೆಲಸ ಮಾಡದೆ ಕುಳಿತು ತಿಂದರೂ ಸಾಕಾಗುವಷ್ಟಿದೆ’. ವ್ಯಾಪಾರಿಯ ಮುಖ ಬಿಳಿಚಿತು, ‘ಅಯ್ಯೋ, ಹಾಗಾದರೆ ನನ್ನ ಎಂಟನೇ ತಲೆಮಾರಿನವ ಏನು ಮಾಡಬೇಕು? ಹಾಗಾದರೆ ಮತ್ತಷ್ಟನ್ನು ಈಗಲೇ ಗಳಿಸಬೇಕು” ಎಂದ. ಇದು ನಮ್ಮ ಹಣೆಬರಹ. ಸುಖದ ಅಪೇಕ್ಷೆಯ ಬೆನ್ನೇರಿ ಉಸಿರು ಬಿಗಿಹಿಡಿದು ನಾಗಾಲೋಟದಿಂದ ದಿಕ್ಕು ದಿಕ್ಕಿಗೆ ಓಡುವ ತವಕ.

ಪ್ರಪಂಚದಲ್ಲಿ ಸಂತೋಷ ನೀಡುವ ಸ್ಥಾನಗಳು ಎಷ್ಟಿವೆ? ಎಣಿಸಲಾಗದಷ್ಟು. ಎಲ್ಲಿ ನೋಡಿದರೂ ಅಲ್ಲೊಂದು ಸುಖದ ತಾಣ. ಒಂದೆಡೆಗೆ ಕಣ್ಣನ್ನು ಸೆಳೆಯುವ ಸುಖದ ಸ್ಥಾನಗಳು. ಜನ ಹಣ ಖರ್ಚುಮಾಡಿ ದೇಶ, ದೇಶ ನೋಡಲು ಹೋಗುವುದೇತಕ್ಕೆ? ಕಣ್ಣಿನ ಸಂತೋಷದ ಸೆಳೆತಕ್ಕೆ. ಇದರಂತೆಯೇ ವಾಸನೆಗಳನ್ನು ಹುಡುಕಿಕೊಂಡು ಹೋಗುತ್ತದೆ ಜನ, ಹೂವುಗಳನ್ನು, ಸುಗಂಧ ದ್ರವ್ಯಗಳನ್ನು ಅರಸಿ. ಮಧುರಾತಿಮಧುರ ಸಂಗೀತವನ್ನು ಕೇಳಲು ಕಾತರಪಡುವ ಜನರ ಸಮೂಹ ಮತ್ತೊಂದೆಡೆಗೆ. ನಾಲಿಗೆಯ ರುಚಿಯ ಸೆಳವು ತುಂಬ ದೊಡ್ಡದು. ಸಕ್ಕರೆ ಕಾಯಿಲೆ ಇದ್ದರು, ವೈದ್ಯರು ಬೇಡವೆಂದರೂ ಇಷ್ಟವಾದ ಸಿಹಿ ತಿನಿಸು ಮುಂದೆ ಬಂದಾಗ ವೈದ್ಯರ ಎಚ್ಚರಿಕೆಯನ್ನು ಹಿಂದೆ ಸರಿಸಿ ಸ್ವಲ್ಪವಾದರೂ ತಿನ್ನಬಯಸುತ್ತದೆ ನಾಲಿಗೆ. ಪ್ರಪಂಚದ ಈ ಅಡುಗೆ ಮನೆಯಲ್ಲಿ ಅದೆಷ್ಟು ತರಹದ ರುಚಿಗಳು! ಇವೆಲ್ಲಕ್ಕಿಂತ ತೀಕ್ಷ್ಣವಾದದ್ದು ಸ್ಪರ್ಶ ಸುಖ. ತಾಯಿಗೆ ಮಗುವಿನ ಸ್ಪರ್ಶ ಅತ್ಯಂತ ಸಂತೋಷ ಕೊಟ್ಟರೆ, ಪ್ರೇಮಿಗಳಿಗೆ ಪರಸ್ಪರ ಸ್ಪರ್ಶ ಸುಖ. ಕೆಲವರಿಗೆ ತಮ್ಮಲ್ಲಿದ್ದ ಬಂಗಾರ, ಬೆಳ್ಳಿ, ಹಣವನ್ನು ಸ್ಪರ್ಶಿಸಿದಾಗ ಸಂತೋಷ; ಕೆಲವರಿಗೆ ಮುದ್ದಿನ ಪ್ರಾಣಿಗಳನ್ನು ಮುಟ್ಟಿದಾಗ ಸಂತೋಷ.

ಈ ಕಗ್ಗ ಹೇಳುವುದು ಅದನ್ನೇ. ಸೊಗಸಿನ ಮೂಲಗಳನ್ನು ಹುಡುಕುತ್ತ ಲೋಕದ ಜನರು ಬೇಕು, ಬೇಕು ಎಂದು ಓಡುತ್ತಿದ್ದಾರೆ. ಈ ಪ್ರಪಂಚದಲ್ಲಿ ಎಂದಿಗೂ ತೀರದಷ್ಟು ಸುಖದ ಸ್ರೋತಗಳಿವೆ ಎಂಬುದಕ್ಕೆ ಮನುಷ್ಯನ ಹೃದಯದಲ್ಲಿರುವ, ಸದಾ ಉಕ್ಕುತ್ತಿರುವ ಸುಖದ ಅಪೇಕ್ಷೆಯ ಬುಗ್ಗೆಯೇ ಸಾಕ್ಷಿ. ಅದು ಎಂದಿಗೂ ಮುಗಿಯದ, ನಿಲ್ಲದ ಬುಗ್ಗೆ. ಆದರೆ ಸೆಳೆತ ಅಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.