ADVERTISEMENT

ದೇಹಬಲದ ಸೊಕ್ಕು

ಡಾ. ಗುರುರಾಜ ಕರಜಗಿ
Published 15 ಡಿಸೆಂಬರ್ 2019, 18:27 IST
Last Updated 15 ಡಿಸೆಂಬರ್ 2019, 18:27 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಅತ್ಯಂತ ಸುಂದರವಾದ, ಬಲಿಷ್ಠವಾದ ಆನೆಯಾಗಿ ಹುಟ್ಟಿ ಎಂಬತ್ತು ಸಾವಿರ ಆನೆಗಳಿಗೆ ನಾಯಕನಾಗಿದ್ದ. ಆ ಸಮಯದಲ್ಲಿ ಒಂದು ಪುಟ್ಟ ಪುರಲಿ ಹಕ್ಕಿ ನೆಲದ ಮೇಲೆ ಮೊಟ್ಟೆಯನ್ನಿಟ್ಟು ಕಾಯುತ್ತಿತ್ತು. ಮೊಟ್ಟೆ ಒಡೆದು ಮರಿ ಹೊರಗೆ ಬಂದಿತು. ಅದಕ್ಕಿನ್ನು ಹಾರಲು ಬಾರದು. ಆ ಹೊತ್ತಿಗೆ ಬೋಧಿಸತ್ವನ ತಂಡದ ಆನೆಗಳು ಅತ್ತ ಬಂದವು. ಪುಟ್ಟ ಪಕ್ಷಿ ಹೌಹಾರಿತು. ಆನೆಗಳು ತನ್ನ ಮರಿಯನ್ನು ತುಳಿದರೆ ಏನು ಮಾಡುವುದು? ಪಾಪ! ಹಕ್ಕಿ ಹಾರಿ ಬೋಧಿಸತ್ವನ ಮುಂದೆ ಬಂದು, “ಹೇ ಗಜರಾಜ, ದಾರಿಯಲ್ಲಿ ನನ್ನ ಪುಟ್ಟ ಕಂದ ಇದೆ. ದಯವಿಟ್ಟು ಅದನ್ನು ತುಳಿಯದೆ ರಕ್ಷಿಸು” ಎಂದು ಬೇಡಿತು. ಕರುಣಾಮಯಿಯಾದ ಬೋಧಿಸತ್ವ ತನ್ನ ತಂಡದವರಿಗೆಲ್ಲ ಎಚ್ಚರಿಕೆಯಿಂದ, ಮರಿಗೆ ತೊಂದರೆಯಾಗದಂತೆ ನಡೆಯಲು ಹೇಳಿತು. ಆಮೇಲೆ ಪಕ್ಷಿಗೆ ಹೇಳಿತು, “ಹಿಂದೆ ಒಂದು ಮದವೇರಿದ ಸಲಗ ಬರುತ್ತದೆ. ಅದು ಸೊಕ್ಕಿನ ಪ್ರಾಣಿ. ಅದಕ್ಕೂ ಪ್ರಾರ್ಥನೆ ಮಾಡು”.

ಸ್ವಲ್ಪ ಹೊತ್ತಿಗೆ ಆ ಮೊಂಡ, ಕೋಪಿಷ್ಠ ಆನೆ ಬಂದಿತು. ಪುರಲಿ ಹಕ್ಕಿ ಆ ಆನೆಯನ್ನು ಪ್ರಾರ್ಥಿಸಿತು. ಆದರೆ ಆ ಸೊಕ್ಕಿದ ಆನೆ ಗರ್ವದಿಂದ, “ಹೇ ಪುಟ್ಟ, ಅಳುಬುರುಕ ಹಕ್ಕಿ, ನನ್ನ ಶಕ್ತಿಯ ಮುಂದೆ ನೀನೇನು ಮಾಡಬಲ್ಲೆ? ನೋಡು ನನ್ನ ಶಕ್ತಿಯನ್ನು” ಎಂದು ಮುಂದೆ ರಭಸದಿಂದ ನುಗ್ಗಿ ಪಕ್ಷಿಯ ಮರಿಯನ್ನು ತುಳಿದು ಹೊಸಕಿ ಹಾಕಿತು. ಪರುಲಿಹಕ್ಕಿ ಮಗುವನ್ನು ಕಳೆದುಕೊಂಡು ಗೋಳಾಡಿತು. ಅದು ಹೇಳಿತು, “ಹೇ ಸೊಕ್ಕಿನ ಆನೆ. ನಿನಗೆ ನಿನ್ನ ಶಕ್ತಿಯ ಬಗ್ಗೆ ಗರ್ವವಿದೆಯಲ್ಲ, ನೋಡು ನಾನು ಬುದ್ಧಿಯಿಂದ ನಿನ್ನ ಬಲವನ್ನು ಮುರಿದು ಬಿಡುತ್ತೇನೆ”. ಆನೆ ಗಹಗಹಿಸಿ ನಕ್ಕು ಹೊರಟು ಹೋಯಿತು.

ಪುರಲಿ ಹಕ್ಕಿ ಒಂದು ಕಾಗೆಯ ಬಳಿ ಬಂದು ಅದರ ಸೇವೆ ಮಾಡಿತು. ಅದರಿಂದ ತೃಪ್ತವಾದ ಕಾಗೆ ನನ್ನಿಂದ ಏನು ಸಹಾಯಬೇಕು ಎಂದು ಕೇಳಿತು. ಆಗ ಪಕ್ಷಿ, “ನೀನು ದಯವಿಟ್ಟು ಈ ಸೊಕ್ಕಿದ ಆನೆಯ ಎರಡೂ ಕಣ್ಣುಗಳನ್ನು ಕುಕ್ಕಿಬಿಡಬೇಕು” ಎಂದು ಬೇಡಿತು. ನಂತರ ಪಕ್ಷಿ ಒಂದು ನೊಣಕ್ಕೆ ತನ್ನ ಸೇವೆ ಸಲ್ಲಿಸಿ, ಆನೆಯ ಕಣ್ಣುಗಳಲ್ಲಿ ಮೊಟ್ಟೆಗಳನ್ನು ಇಡುವಂತೆ ಕೇಳಿಕೊಂಡಿತು ಅದಾದ ಮೇಲೆ ಒಂದು ಕಪ್ಪೆಗೆ ಆಹಾರವನ್ನು ತಂದುಕೊಟ್ಟು ಸೇವೆ ಮಾಡಿತು. ಸಂತೋಷಗೊಂಡ ಕಪ್ಪೆ, “ನಾನು ನಿನಗೆ ಏನು ಮಾಡಲಿ?” ಎಂದು ಕೇಳಿದಾಗ, “ಆ ಮದವೇರಿದ ಆನೆ ಇತ್ತ ಬಂದಾಗ ಪರ್ವತದ ಮೇಲೆ ನಿಂತು ವಟಗುಟ್ಟು. ಅದು ಮುಂದೆ ಬಂದಾಗ ಪ್ರಪಾತದ ಅಂಚಿನಲ್ಲಿ ನಿಂತು ವಟವಟ ಶಬ್ದಮಾಡು” ಎಂದು ಕೇಳಿತು. ಕಪ್ಪೆ ಒಪ್ಪಿತು. ಎಲ್ಲವೂ ಸಿದ್ಧವಾದ ಮೇಲೆ ಹಕ್ಕಿ ಮಾತಿನಂತೆ ಕಾಗೆ ಆನೆಯ ಎರಡೂ ಕಣ್ಣುಗಳನ್ನು ಕುಕ್ಕಿಬಿಟ್ಟಿತು. ನೊಣ ಆ ಕಣ್ಣುಗಳಲ್ಲಿ ಮೊಟ್ಟೆಗಳನ್ನಿಟ್ಟಿತು. ಅಲ್ಲಿ ಕ್ರಿಮಿಗಳು ಹುಟ್ಟಿಕೊಂಡು ಕುರುಡಾದ ಆನೆಗೆ ಬಹಳ ಉರಿಯಾಗಿ ಸಂಕಟವಾಯಿತು. ನೀರನ್ನು ಹುಡುಕಿಕೊಂಡು ಅಲೆದಾಡುತ್ತಿತ್ತು. ಆಗ ಕಪ್ಪೆಯ ವಟವಟ ಸದ್ದು ಕೇಳಿ ನೀರು ಹತ್ತಿರದಲ್ಲೇ ಇರಬೇಕೆಂದು ಮುಂದೆ ಬಂದಿತು. ಆಗ ಕಪ್ಪೆ ಪ್ರಪಾತದ ಅಂಚಿಗೆ ಬಂದು ಮತ್ತೆ ವಟಗುಟ್ಟಿತು. ಆ ಸದ್ದನ್ನು ಹಿಂಬಾಲಿಸಿ ಮುಂದುವರೆದ ಆನೆ ಪ್ರಪಾತಕ್ಕೆ ಬಿದ್ದು ಸತ್ತು ಹೋಯಿತು.

ADVERTISEMENT

ದೇಹಶಕ್ತಿ ಒಳ್ಳೆಯದೇ. ಆದರೆ ಅದನ್ನು ಸರಿಯಾಗಿ ಬಳಸಿದರೆ ಮಾತ್ರ ಪ್ರಯೋಜನಕಾರಿ. ಅದರ ಸೊಕ್ಕಿನಲ್ಲಿ ನಡೆದರೆ ಅದೇ ನಾಶಕ್ಕೆ ಕಾರಣವೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.