ADVERTISEMENT

ಬೆರಗಿನ ಬೆಳಕು | ಸಮನ್ವಯತೆ

ಡಾ. ಗುರುರಾಜ ಕರಜಗಿ
Published 11 ಮಾರ್ಚ್ 2020, 19:30 IST
Last Updated 11 ಮಾರ್ಚ್ 2020, 19:30 IST
   

ಆಟವೋ ಮಾಟವೋ ಕಾಟವೋ ಲೋಕವಿದು !|
ಊಟ ಉಪಚಾರಗಳ ಬೇಡವೆನ್ನದಿರು ||
ಪಾಟವವು ಮೈಗಿರಲಿ, ನೋಟ ತತ್ವದೊಳಿರಲಿ |
ಪಾಠಿಸು ಸಮನ್ವಯವ – ಮಂಕುತಿಮ್ಮ || 261 ||

ಪದ-ಅರ್ಥ: ಪಾಟವ=ಕಲಿತನ, ಆರೋಗ್ಯ, ಪಾಠಿಸು=ಸಾಧಿಸು
ವಾಚ್ಯಾರ್ಥ: ಈ ಲೋಕವನ್ನು ಏನೆಂದು ಹೇಳುವುದು? ಇದು ಆಟವೋ, ಮಾಟವೋ, ಕಾಟವೋ? ಇಲ್ಲಿ ಬದುಕಿರುವಾಗ ಊಟ, ಉಪಚಾರಗಳನ್ನು ಬೇಡವೆನ್ನದಿರು. ಆರೋಗ್ಯ, ಪಟುತ್ವ ದೇಹಕ್ಕಿರಲಿ ಆದರೆ ದೃಷ್ಟಿ ತತ್ವದಲ್ಲಿರಲಿ. ಈ ಸಮನ್ವಯವನ್ನು ಸಾಧಿಸು.

ವಿವರಣೆ: ಈ ಪ್ರಪಂಚವೇ ಒಂದು ವಿಸ್ಮಯ. ಇದನ್ನು ಭಗವಂತನ ಆಟ ಎನ್ನುತ್ತಾರೆ. ಮತ್ತೆ ಕೆಲವರು ಇದನ್ನು ಮಾಯೆ ಎನ್ನುತ್ತಾರೆ. ಬಹಳಷ್ಟು ಜನ ಇದನ್ನೊಂದು ಕಾಟ ಎನ್ನುತ್ತಾರೆ. ಭಕ್ತನಿಗೆ ಇದೊಂದು ಪರಮಾತ್ಮನ ಆಟ, ತನ್ನದು ಅದರಲ್ಲೊಂದು ಪಾತ್ರ. ಅದನ್ನು ಅವನ ಅಣತಿಯಂತೆ ಕಳೆಯುವುದು ಬದುಕಿನುದ್ದೇಶ. ಜಿಜ್ಞಾಸುವಿಗೆ ಪ್ರಪಂಚವೊಂದು ಮಾಯೆ. ಇಲ್ಲದೆಯೇ ಇದ್ದಂತೆ ತೋರಿ ನಮಗೆ ಶ್ರಮವನ್ನುಂಟು ಮಾಡುವ ಮಾಟವಿದು. ಇದೊಂದು ಪೊರೆ, ಮಂಜಿನ ತೆರೆ. ಈ ತೆರೆಯಿಂದಾಗಿ ಜೀವಿಗೆ ಅತ್ತ ಕಡೆಗೆ ಇರುವ ಈಶ್ವರ ತತ್ವದ ದರ್ಶನವಾಗುವುದಿಲ್ಲ.

ADVERTISEMENT

ಇದು ಆಟವೋ, ಮಾಟವೋ, ಕಾಟವೋ, ಮತ್ತೇನೋ! ಆದರೆ ಈ ಲೋಕದ ಬದುಕನ್ನು ಬಿಡಲಾಗುವುದಿಲ್ಲ! ಹಾಗಾದರೆ ಇಲ್ಲಿ ಬದುಕಿ ಬಾಳುವ ಸರಿಯಾದ ಉಪಾಯ ಯಾವುದು?

ಮೊದಲನೆಯದು ದೇಹವನ್ನು ಚೆನ್ನಾಗಿ ಇಟ್ಟುಕೋ. ಊಟ, ಉಪಚಾರಗಳನ್ನು ನಿರಾಕರಿಸದಿರು. ನಾವು ಏನನ್ನು ಸಾಧಿಸಹೊರಟರೂ ಈ ದೇಹದ ಮೂಲಕವೇ ತಾನೇ? ಅದು ಅಶಕ್ತವಾದರೆ ಯಾವುದೂ ಸಾಧ್ಯವಿಲ್ಲ. ಸರಿಯಾದ ಆಹಾರ, ಅವಶ್ಯವಾದ ವ್ಯಾಯಾಮಗಳಿಂದ ಶರೀರವನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು.

ದೇಹದಲ್ಲಿ ಇನ್ನೊಂದು ಅಡಕವಾಗಿದೆ, ಅದನ್ನು ಮರೆಯುವಂತಿಲ್ಲ. ಅದು ಮನಸ್ಸು. ಅದರ ಪೋಷಣೆಯೂ ಆಗಬೇಕು, ಉನ್ನತಿಯೂ ಅಗಬೇಕು. ಅದು ಆಗುವುದು ಮನಸ್ಸು ತತ್ವದಲ್ಲಿದ್ದಾಗ. ಯಾವಾಗ ತತ್ವಮರೆತಿತೋ, ಬದುಕಿನ ದಾರಿ ತಪ್ಪಿತು. ಇದಕ್ಕೊಂದು ಉದಾಹರಣೆಯೆಂದರೆ ಕುದುರೆ ಬಂಡಿ. ಈ ಬಂಡಿಯಲ್ಲಿ ಎರಡು ಭಾಗಗಳು. ಒಂದು ಬಂಡಿ, ಮತ್ತೊಂದು ಕುದುರೆ. ಕುದುರೆಯನ್ನು ಉಪವಾಸವಿಟ್ಟು, ಚೆಂದ ಕಾಣಲೆಂದು ಬಂಡಿಗೆ ಬಣ್ಣ ಹಚ್ಚಿ ಅಲಂಕಾರ ಮಾಡುತ್ತಿದ್ದರೆ ಏನಾಗುತ್ತದೆ? ಅಶಕ್ತ ಕುದುರೆ ಬಂಡಿಯನ್ನು ಎಳೆಯಲಾರದು. ಅಥವಾ ಬರೀ ಕುದುರೆಗೇ ಆರೈಕೆ ಮಾಡುತ್ತ, ಮೈ ತಿಕ್ಕುತ್ತ, ಆಹಾರ ನೀಡುತ್ತ ಬಂಡಿಯನ್ನು ಗಮನಿಸದಿದ್ದರೆ ಏನಾದೀತು? ಬಂಡಿ ನಿರ್ವಹಣೆಯಿಲ್ಲದೆ ಚಲಿಸಲಾರದೆ ಮುಗ್ಗರಿಸುತ್ತದೆ. ಈ ಬಂಡಿ ಸುಸೂತ್ರವಾಗಿ ಓಡಬೇಕಾದರೆ ಬಂಡಿ ಮತ್ತು ಕುದುರೆ ಎರಡೂ ಸುಸ್ಥಿತಿಯಲ್ಲಿರುವುದು ಮುಖ್ಯ.

ಅಂತೆಯೇ ನಮ್ಮ ಶರೀರ ಬಂಡಿ ಇದ್ದಂತೆ ಮತ್ತು ಕುದುರೆ ಮನಸ್ಸಿನಂತೆ. ಕಗ್ಗ ಹೇಳುವುದು ಈ ತತ್ವವನ್ನೇ. ದೇಹ ಪಟುವಾಗಿರಲಿ ಆದರೆ ಮನಸ್ಸು ತತ್ವದೆಡೆ ಇರಲಿ. ಇವೆರಡರ ಸಮನ್ವಯವನ್ನು ಸಾಧಿಸುವುದೇ ಬದುಕಿನ ಗುರಿ ಹಾಗೂ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.