ADVERTISEMENT

ಸಮೃದ್ಧ ಬದುಕಿನ ಅವಶ್ಯಕತೆ

ಡಾ. ಗುರುರಾಜ ಕರಜಗಿ
Published 7 ಡಿಸೆಂಬರ್ 2018, 1:15 IST
Last Updated 7 ಡಿಸೆಂಬರ್ 2018, 1:15 IST
   

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |

ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||

ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |

ADVERTISEMENT

ನಿತ್ಯಭೋಜನ ನಮಗೆ – ಮಂಕುತಿಮ್ಮ || 64 ||

ಪದ-ಅರ್ಥ: ಚಿತ್ತದನುಭವ=ಚಿತ್ತದ(ಮನಸ್ಸಿನ)+ಅನುಭವ, ಸಂಭಾವನೆ=ಚಿಂತನೆಗಳು, ಆಲೋಚನೆಗಳು, ಬತ್ತವದನು=ಬತ್ತ+ಅದನು, ತತ್ತ್ವತಂಡುಲ=ತತ್ತ್ವತಂಡುಲ (ಅಕ್ಕಿ), ವಿವೇಚಿತ=ವಿವೇಚನೆಯಿಂದ ಬಂದ.

ವಾಚ್ಯಾರ್ಥ: ಮನಸ್ಸಿನ ಅನುಭವ, ಭಾವ ಮತ್ತು ಆಲೋಚನೆಗಳೆಲ್ಲ ಬತ್ತವಿದ್ದಂತೆ. ಅದನ್ನು ವಿಚಾರ, ಯುಕ್ತಿಗಳು ಕುಟ್ಟಿದಾಗ ತತ್ವವೆಂಬ ಅಕ್ಕಿ ನಮಗೆ ದೊರೆಯುತ್ತದೆ. ಅದೇ ವಿವೇಚಿತವಾದ ತತ್ವ. ಅದು ನಿತ್ಯಭೋಜನವಾಗಿ ನಮ್ಮನ್ನು ಪೋಷಣೆ ಮಾಡುತ್ತದೆ.

ವಿವರಣೆ: ಬದುಕಿನ ಪ್ರತಿಕ್ಷಣದಲ್ಲಿಯೂ ಕಣ್ಣಮುಂದೆ ಆಯ್ಕೆಗಳು ಬರುತ್ತವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಯಾವುದರ ಆಧಾರದ ಮೇಲೆ ತೀರ್ಮಾನ ಮಾಡಬೇಕು? ಹಿರಿಯರು ಅದನ್ನು ತತ್ವದ ಆಧಾರದ ಮೇಲೆ ಮಾಡಬೇಕು ಎನ್ನುತ್ತಾರೆ. ಈ ತತ್ವವೇ ಧರ್ಮಕ್ಕೆ ಆಧಾರ. ಈ ವಿವೇಚನೆಯಿಂದ ಕೂಡಿದ ತತ್ವವೇ ನಮ್ಮ ಸುಂದರ ಬದುಕಿನ ಅಗತ್ಯತೆ, ಅದೇ ನಿತ್ಯ ಭೋಜನ.

ಈ ತತ್ವ ನಮಗೆ ದೊರಕುವುದು ಹೇಗೆ? ಇದು ಪ್ರಾರಂಭವಾಗುವುದು ನಮ್ಮ ಮನಸ್ಸಿನಿಂದ. ಈ ಮನಸ್ಸಿಗೆ ಆಹಾರವನ್ನು ನೀಡುವುವು ಪಂಚೇಂದ್ರಿಯಗಳು. ಕಣ್ಣು ನೋಡುತ್ತದೆ, ಕಿವಿ ಕೇಳುತ್ತದೆ, ಮೂಗು ವಾಸನೆಯನ್ನು ಗ್ರಹಿಸುತ್ತದೆ, ನಾಲಿಗೆ ರುಚಿಯನ್ನು ಗುರುತಿಸುತ್ತದೆ, ಚರ್ಮ ಸ್ಪರ್ಶದಿಂದ ಜ್ಞಾನ ಪಡೆಯುತ್ತದೆ. ಇವು ತಂದು ತಂದು ಹಾಕುವ ಸರಕೇ ಮನಸ್ಸಿನ ಕಚ್ಚಾ ಸಾಮಗ್ರಿ. ಇವೇ ಮನಸ್ಸಿಗೆ ಅನುಭವವನ್ನು ನೀಡುತ್ತವೆ. ಮನಸ್ಸು ಚಂಚಲವಾಗಿದ್ದರೆ, ಮೋಹ, ವ್ಯಾಕುಲತೆಗಳಿಂದ ಕಲುಷಿತವಾಗಿದ್ದರೆ ಇಂದ್ರಿಯಗಳಿಂದ ಬಂದ ಅನುಭವ ಪೂರ್ಣ ಸತ್ಯವಾಗಲಾರದು. ಅದಕ್ಕೇ ಭಗವದ್ಗೀತೆ ಹೇಳುತ್ತದೆ, ‘‘ಸಮಾಧಾನವಚಲಾ ಬುದ್ಧಿ’’. ಮನಸ್ಸು ಅಲುಗಾಡದೆ ಒಂದೇ ಧ್ಯಾನಸ್ಥ ಸ್ಥಿತಿಯಲ್ಲಿ ಇರಬೇಕು, ಇದೇ ಸಮಾಧಾನ. ಈ ಮನಸ್ಸಿನ ಅನುಭವಗಳು, ಏಳುವ ಭಾವಗಳು ಹಾಗೂ ಆಲೋಚನೆಗಳು ನಮ್ಮ ಮೂಲಸಾಮಗ್ರಿಗಳು. ಅವುಗಳನ್ನು ಪರಿಷ್ಕರಿಸದಿದ್ದರೆ, ಕೇವಲ ಭಾವನೆಗಳು ಆಲೋಚನೆಗಳಾಗಿಯೇ ಉಳಿಯುತ್ತವೆ. ಅವುಗಳನ್ನು ವಿಚಾರ ಮತ್ತು ಯುಕ್ತಿಗಳ ಒನಕೆಗಳಿಂದ ಕುಟ್ಟಿದಾಗ, ಒರೆಗೆ ಹಚ್ಚಿದಾಗ ಅನಾವಶ್ಯಕವಾದ ಪ್ರತೀತಿಗಳು ಹೊಟ್ಟಿನಂತೆ ಕಳೆದುಹೋಗಿ ಪ್ರಯೋಜನಕಾರಿಯಾದ ಅಕ್ಕಿಯಂತಿರುವ ತತ್ವ ನಮಗೆ ದೊರೆಯುತ್ತದೆ.

ಹೀಗೆ ವಿವೇಚನೆಯಿಂದ ಲಭ್ಯವಾದ ತತ್ವವೇ ನಮ್ಮ ಬದುಕಿನ ಬೆಳವಣಿಗೆಗೆ ಬೇಕಾದ ಅಂಶ. ಅದೇ ವಿವೇಕ. ಅದರಿಂದಲೇ ಸರಿ ಯಾವುದು, ತಪ್ಪಾವುದು ಎಂಬುದು ತಿಳಿಯುವುದು. ಈ ತಿಳಿವಳಿಕೆಯೇ ಧರ್ಮದ ಅಡಿಪಾಯ ಮತ್ತು ಸಮೃದ್ಧ ಬದುಕಿನ ಅವಶ್ಯಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.