ADVERTISEMENT

ಪೆಟ್ಟಿಗೆಯೊಳಗಿನ ರಹಸ್ಯ

ಡಾ. ಗುರುರಾಜ ಕರಜಗಿ
Published 18 ಡಿಸೆಂಬರ್ 2018, 19:28 IST
Last Updated 18 ಡಿಸೆಂಬರ್ 2018, 19:28 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎಲ್ಲ ಅರೆಬೆಳಕು ಅರೆಸುಳಿವು ಅರೆಳಿವುಗಳಿಲ್ಲಿ |
ಎಲ್ಲ ಪರಿಪೂರಣವೊ ಅದನರಿಯುವನಕ ||
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? |
ಎಲ್ಲ ಬಾಳು ರಹಸ್ಯ – ಮಂಕುತಿಮ್ಮ || 68 ||

ಪದ-ಅರ್ಥ: ಪರಿಪೂರಣವೊ=ಪರಿಪೂರ್ಣವೊ, ಸೊಲ್ಲಿಸುವರಾರು=ಸೊಲಿಸುವವರು (ಹೇಳುವವರು)+ ಯಾರು, ಪೇಟಿಯೊಳಗುಟ್ಟ=ಪೇಟಿಯ(ಪೆಟ್ಟಿಗೆ)+ಒಳಗುಟ್ಟ.

ವಾಚ್ಯಾರ್ಥ: ಎಲ್ಲವೂ ಅರೆಮರೆ ಬೆಳಕು, ಅರೆಸುಳಿವು, ಅರ್ಧಮರ್ಧತಿಳಿವುಗಳು. ಸೃಷ್ಟಿಯನ್ನು ಇವುಗಳಿಂದ ಪರಿಪೂರ್ಣವಾಗಿ ಅರಿಯುವುದು ಹೇಗೆ? ಈ ಸೃಷ್ಟಿಯೆಂಬ ಮಾಯಾಪೆಟ್ಟಿಗೆಯಲ್ಲಿ ಅವಿತಿಟ್ಟುಕೊಂಡ ಗುಟ್ಟನ್ನು ತಿಳಿದು ಹೇಳುವವರಾರು? ಇಡೀ ಬಾಳೇ ರಹಸ್ಯ.

ADVERTISEMENT

ವಿವರಣೆ: ಇಲ್ಲಿ ಎಲ್ಲವೂ ಅರೆಬೆಳಕು, ಏನೋ ಸುಳಿದಂತಾಗುತ್ತದೆ. ಆದರೆ ಸ್ಪಷ್ಟವಾಗಿ ಕಾಣುವುದಿಲ್ಲ, ಅರೆಬರೆ ತಿಳಿವೂ ಕಾಡುತ್ತಿದೆ.
ಇವೆಲ್ಲವೂ ಪರಿಪೂರ್ಣವಾದದ್ದನ್ನು ಅರಿಯಲು ಅಡ್ಡಿಯಾಗಿವೆ. ಹಾಗಾದರೆ ಸೃಷ್ಟಿಯೆಂಬ ಮಾಯಾಪೆಟ್ಟಿಗೆಯಲ್ಲಿರುವ ಅದರ ಸೃಷ್ಟಿಕರ್ತನ ಬಗೆಗೆ ನಿಖರವಾಗಿ ತಿಳಿಸುವವರಾರು? ಈ ಬದುಕೆಲ್ಲ ರಹಸ್ಯವಾಗಿಯೇ ಉಳಿಯಬೇಕೇ? ನಮಗೆ ಈ ಅರೆಬೆಳಕು, ಅರೆಸುಳಿವು,ಅರೆತಿಳಿವುಗಳೇಕೆ? ಬಸವಣ್ಣನವರು ಇದನ್ನು ತುಂಬ ಸುಂದರವಾಗಿ ಹೇಳುತ್ತಾರೆ

ಕಾಯವಿಕಾರ ಕಾಡಿಹುದಯ್ಯಾ;
ಮನೋವಿಕಾರ ಕೂಡಿಹುದಯ್ಯಾ;
ಇಂದ್ರಿಯವಿಕಾರ ಸುಳಿವುದಯ್ಯಾ !
ಸುಳಿವಿನೊಳಗೆ ಸುಳಿವುತ್ತಲಿದ್ದೇನೆ; ಸಿಲುಕಿಸದಿರಯ್ಯಾ !
ಅನ್ಯ ಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ !
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ !

ಹಸಿವು, ತೃಷೆ, ಕಾಮ ಮೊದಲಾದ ಕಾಮವಿಕಾರಗಳು, ಲೋಭ, ಮೋಹಾದಿ ಮನೋವಿಕಾರಗಳು ಹಾಗೂ ಇವುಗಳನ್ನು ಉಲ್ಬಣಗೊಳಿಸುವ ಇಂದ್ರಿಯ ವಿಕಾರಗಳು ನಮ್ಮನ್ನು ಸುಳಿಯಲ್ಲಿ ಸಿಲುಕಿಸಿದಾಗ ಅರೆಬೆಳಕು, ಅರೆತಿಳಿವು, ಅರೆಸುಳಿವುಗಳುಂಟಾಗುತ್ತದೆ. ಹಾಗಾದರೆ ಪರಿಪೂರ್ಣವನ್ನು ಅರಿಯುವ ಬಗೆ ಏನು? ಅದಕ್ಕೆ ಬಸವಣ್ಣ ಕೂಡಲಸಂಗಮನಲ್ಲಿ ಬೇಡುತ್ತಾರೆ, ‘ನನ್ನ ಚಿತ್ತ ನಿನ್ನನ್ನು ಬೆಟ್ಟಿಗಲದಂತೆ ಮಾಡು’ ನನಗೆ ಈ ವಚನದಲ್ಲಿ ತುಂಬ ಇಷ್ಟವಾದ ಮಾತು, ‘ಅನುಪಮಸುಖಸಾರಾಯ ಶರಣರು’. ಯಾರಿವರು?

ಸುಖಸಾರಾಯರು ಎಂದರೆ ಭಗವಂತನ ಸಾರವತ್ತಾದ ಸುಖವನ್ನು ಪಡೆದವರು. ಅಂತಹ, ಭಗವಂತನ ದರ್ಶನದ ಅನುಪಮವಾದ ಸಾರವತ್ತಾದ ಸುಖವನ್ನು ಪಡೆದ ಜ್ಞಾನಿಗಳಲ್ಲಿ, ಶರಣರಲ್ಲಿ ನಮ್ಮ ಮನಸ್ಸು ನಿಲ್ಲಬೇಕು. ಇವರೇ ಸೃಷ್ಟಿಯ ಪೆಟ್ಟಿಗೆಯೊಳಗಿನ ಒಳಗುಟ್ಟನ್ನು ನಮಗೆ ತಿಳಿಸಿ ಹೇಳುವವರು. ಅಲ್ಲಿಯವರೆಗೂ ಬದುಕು ಒಂದು ರಹಸ್ಯವಾಗಿಯೇ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.