ADVERTISEMENT

ಬೆರಗಿನ ಬೆಳಕು | ದುಷ್ಟರಿಗೆ ಮದ್ದು

ಡಾ. ಗುರುರಾಜ ಕರಜಗಿ
Published 8 ಏಪ್ರಿಲ್ 2020, 20:00 IST
Last Updated 8 ಏಪ್ರಿಲ್ 2020, 20:00 IST
   

ಹಿಂದೆ ಮಗಧರಾಜ್ಯದಲ್ಲಿ ಬೋಧಿಸತ್ವ ಒಬ್ಬ ದೊಡ್ಡ ಶ್ರೀಮಂತನ ಮನೆಯಲ್ಲಿ ಹುಟ್ಟಿ ಬೆಳೆದ. ಎಲ್ಲ ತರಹದ ಶಿಕ್ಷಣವನ್ನು ಪಡೆದ. ನಂತರ ಬದುಕಿನ ಕಾಮ-ಭೋಗಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡು ಋಷಿ ಪ್ರವ್ರಜ್ಯವನ್ನು ಸ್ವೀಕರಿಸಿದ. ಬಹಳ ಕಾಲ ಹಿಮಾಲಯದಲ್ಲಿ ಧ್ಯಾನವನ್ನು ಮಾಡಿ ಪರ್ವತದ ಶ್ರೇಣಿಗಳಿಂದ ಕೆಳಗಿಳಿದು ಬಂದು ಒಂದು ತೊರೆಯ ಪಕ್ಕ ಪರ್ಣಕುಟಿಯನ್ನು ಕಟ್ಟಿಕೊಂಡು ವಾಸಮಾಡತೊಡಗಿದ.

ಅನೇಕ ಜನ ಕುರಿ ಕಾಯುವವರು ಕುರಿಗಳನ್ನು ಈ ಮಾರ್ಗವಾಗಿಯೇ ಕರೆದೊಯ್ಯುತ್ತ ಕುರಿಗಳಿಗೆ ನೀರು ಕುಡಿಯಲು ಅನುವು ಮಾಡಿಕೊಡುತ್ತಿದ್ದರು. ಒಂದು ಚಿರತೆ ಇದನ್ನು ನೋಡುತ್ತ ಹೊಂಚು ಹಾಕುತ್ತಿತ್ತು. ಒಂದು ಗುಂಪಿನ ಕುರಿ ಸ್ವಲ್ಪ ಹಿಂದೆ ಉಳಿಯಿತು. ತಡಮಾಡಿ ನೀರು ಕುಡಿಯಲು ಬರುವಷ್ಟರಲ್ಲಿ ಉಳಿದ ಕುರಿಗಳು ಮತ್ತು ಕುರಿ ಕಾಯುವ ಹುಡುಗ ಮುಂದೆ ಹೋಗಿ ಬಿಟ್ಟಿದ್ದರು. ಆಗ ಚಿರತೆ ಛಕ್ಕನೆ ಹಾರಿ ಕುರಿಯ ಮುಂದೆ ಬಂದು ನಿಂತಿತು. ಗಾಬರಿಯಾದ ಕುರಿಗೆ ತಾನಿನ್ನು ಬದುಕುವುದಿಲ್ಲ ಎಂಬುದು ಖಚಿತವಾಯಿತು. ಉಪಾಯದಿಂದ ಮಾತನಾಡಿ ಅದರ ಮನಸ್ಸನ್ನು ಒಲಿಸಿ ಪಾರಾಗಬೇಕು ಎಂದುಕೊಂಡಿತು.

‘ಮಾಮಾ, ನೀನು ಕ್ಷೇಮವೇ? ನನ್ನ ತಾಯಿ, ಎಂದರೆ ನಿನ್ನ ತಂಗಿ ನಿನ್ನ ಕ್ಷೇಮವನ್ನು ಕೇಳಿದ್ದಾಳೆ’ ಎಂದಿತು. ‘ಎಲಾ, ಈ ಕುರಿ ಒಳ್ಳೆಯ ಮಾತನಾಡಿ ನನ್ನನ್ನು ಒಲಿಸಿಕೊಳ್ಳಲು ನೋಡುತ್ತಿದೆ. ಅದಕ್ಕೆ ಬುದ್ಧಿ ಕಲಿಸುತ್ತೇನೆ ಎಂದುಕೊಂಡು – ‘ಏ ಕುರಿ, ಎಷ್ಟು ನಿನ್ನ ಸೊಕ್ಕು? ಮಲಗಿದ್ದ ನನ್ನನ್ನು ನೋಡದೆ ನನ್ನ ಬಾಲವನ್ನು ದಾಟಿ ಬಂದದ್ದಲ್ಲದೆ, ನನ್ನನ್ನು ಮಾಮಾ ಎಂದು ಕರೆಯುತ್ತೀಯಾ?’ ಎಂದು ಜೋರು ಮಾಡಿತು.

ADVERTISEMENT

‘ಮಾಮಾ, ನೀನು ಪೂರ್ವಕ್ಕೆ ಮುಖ ಮಾಡಿ ಕುಳಿತ್ತಿದ್ದೀಯಾ, ನಾನು ಪಶ್ಚಿಮದಿಂದ ಬಂದಿದ್ದೇನೆ. ನಿನ್ನ ಬಾಲವನ್ನು ಹೇಗೆ ದಾಟಲು ಸಾಧ್ಯ?’

‘ಕುರಿ, ನಾನು ಏನೆಂದು ತಿಳಿದೆ? ನನ್ನ ಬಾಲ ಸಮುದ್ರ, ಪರ್ವತಗಳನ್ನು ಸೇರಿ ನಾಲ್ಕು ದ್ವೀಪಗಳಲ್ಲಿ ಹರಡಿದೆ. ನೀನು ದಾಟದೆ ಬರುವುದು ಸಾಧ್ಯವೇ ಇಲ್ಲ’

‘ನನಗೆ ಗೊತ್ತು ದುಷ್ಟರ ಬಾಲ ಬಹಳ ಉದ್ದವೆಂದು. ಆದರೆ ನಾನು ನೆಲದಲ್ಲಿ ಬರಲೇ ಇಲ್ಲ. ಆಕಾಶಮಾರ್ಗವಾಗಿ ಬಂದಿದ್ದೇನೆ’ ಎಂದಿತು ಕುರಿ.

ಚಿರತೆ ಅರಚಿತು, ‘ಕುರಿ, ನೀನು ಆಕಾಶಮಾರ್ಗವಾಗಿ ಬಂದದ್ದು ನನಗೆ ತಿಳಿದಿದೆ. ಆದ್ದರಿಂದಲೇ ನೀನು ನನ್ನ ಭೋಜನವನ್ನು ಹಾಳು ಮಾಡಿಬಿಟ್ಟೆ’.

‘ನಿನ್ನ ಭೋಜನವನ್ನು ನಾನು ಹೇಗೆ ಹಾಳು ಮಾಡಿದೆ? ಆಕಾಶಮಾರ್ಗವಾಗಿ ಬರುವಾಗ ನಾನು ಯಾವ ಪ್ರಾಣಿಯನ್ನೂ ನೋಡಲಿಲ್ಲ’ ಎಂದು ದೈನ್ಯದಿಂದ ಹೇಳಿತು ಕುರಿ.

‘ನೀನು ಆಕಾಶಮಾರ್ಗವಾಗಿ ಬರುವುದನ್ನು ಕಂಡು ನಾನು ಆಕ್ರಮಣ ಮಾಡಬೇಕಿದ್ದ ಜಿಂಕೆಗಳ ಹಿಂಡು ಓಡಿ ಹೋಯಿತು. ಅದಕ್ಕೆ ನೀನೇ ಕಾರಣ’ ಎಂದು ನಕ್ಕಿತು ಚಿರತೆ.

ಕುರಿಗೆ ಬೇರೆ ದಾರಿ ಇಲ್ಲದೆ ಅಳುತ್ತ, ‘ಮಾಮಾ, ನನ್ನನ್ನು ಬಿಟ್ಟು ಬಿಡು’ ಎಂದು ಕೇಳಿಕೊಳ್ಳತೊಡಗಿತು. ಆದರೆ ರಕ್ತಪಿಪಾಸುವಾದ ಚಿರತೆ ಹಾರಿ ಕುರಿಯ ಕತ್ತನ್ನು ಹಿಡಿದು ಕಚ್ಚಿ, ಕೊಂದು, ತಿಂದುಬಿಟ್ಟಿತು.

ಅದನ್ನು ಕಂಡು ಬೋಧಿಸತ್ವ ಹೇಳಿದ, ‘ದುಷ್ಟರ ಮುಂದೆ ಸುಭಾಷಿತ ವ್ಯರ್ಥ. ದುಷ್ಟನಿಗೆ ನ್ಯಾಯವೂ ಇಲ್ಲ, ಧರ್ಮವೂ ಇಲ್ಲ. ದುಷ್ಟನಿಗೆ ಶಿಕ್ಷೆಯೊಂದೇ ಮದ್ದು. ಆತನೊಂದಿಗೆ ಪ್ರೀತಿಯ ವ್ಯವಹಾರ ಫಲಕಾರಿಯಲ್ಲ’.

ಇಂದೂ ದುಷ್ಟರಿಗೆ ಅದೇ ಸರಿಯಾದ ಮದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.