ADVERTISEMENT

ನಮಗಿರುವ ಆಯ್ಕೆಗಳು

ಡಾ. ಗುರುರಾಜ ಕರಜಗಿ
Published 14 ಫೆಬ್ರುವರಿ 2019, 20:30 IST
Last Updated 14 ಫೆಬ್ರುವರಿ 2019, 20:30 IST

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಜನಿಸಿದ. ತಂದೆ ಹುಟ್ಟಿನಿಂದ ಬ್ರಾಹ್ಮಣನಾದರೂ ವೃತ್ತಿಯಿಂದ ವ್ಯಾಪಾರಿ. ಬೋಧಿಸತ್ವನಿಗೆ ಹದಿನಾರು ವರ್ಷ ವಯಸ್ಸಾದಾಗ ಅವನ ತಂದೆ ಮಗನನ್ನು ಕರೆದುಕೊಂಡು ವ್ಯಾಪಾರಕ್ಕಾಗಿ ವಾರಣಾಸಿಗೆ ಬಂದ. ದ್ವಾರಪಾಲಕನ ಮನೆಯಲ್ಲಿ ಅಡುಗೆ ಮಾಡಿಕೊಂಡು ಊಟಮಾಡಿದರು. ನಂತರ ವಸತಿಗಾಗಿ ಏನಾದರೂ ಅವಕಾಶವಿದೆಯೇ ಎಂದು ಕೇಳಿದಾಗ ದ್ವಾರಪಾಲಕ, ‘ಈ ವೇಳೆಯಲ್ಲಿ ನಿಮಗೆಲ್ಲಿ ಸ್ಥಳ ದೊರೆತೀತು? ನಗರದ ಹೊರಗಡೆ ಒಂದು ಧರ್ಮಶಾಲೆಯಿದೆ. ನೀವು ಅಲ್ಲಿರಬಹುದು. ಆದರೆ ಅಲ್ಲಿ ಭೂತ ಪ್ರೇತಾದಿಗಳಿವೆಯೆಂದು ಪ್ರತೀತಿ’ ಎಂದ. ಬೋಧಿಸತ್ವ, ‘ಅದಾವ ಭೂತ? ನಮಗೇನು ಮಾಡುತ್ತದೆ ನೋಡಿಬಿಡೋಣ’ ಎಂದು ಧೈರ್ಯದಿಂದ ತಂದೆಯನ್ನು ಕರೆದುಕೊಂಡು ಧರ್ಮಶಾಲೆಗೆ ಹೋದ.

ಧರ್ಮಶಾಲೆಯಲ್ಲಿ ಅಪ್ಪ ಮಲಗಿದಾಗ ಮಗ ಅವನ ಕಾಲು ಒತ್ತುತ್ತ ಕುಳಿತ. ಹನ್ನೆರಡು ವರ್ಷಗಳಿಂದ ಆ ಮನೆಯಲ್ಲಿ ವಾಸವಾಗಿದ್ದ ಭೂತದಂತೆ ಬದುಕಿದ್ದ ಯಕ್ಷ ಕುಬೇರನ ಶಿಷ್ಯ. ಧರ್ಮಶಾಲೆಗೆ ಬಂದ ಮನುಷ್ಯರಲ್ಲಿ ಯಾರಾದರೂ ಸೀನಿದಾಗ ಅವರ ಮುಂದಿದ್ದವರು ‘ದೀರ್ಘಾಯುಷಿಯಾಗು’ ಎನ್ನದಿದ್ದರೆ ಅವರನ್ನು ತಿಂದುಬಿಡುತ್ತಿದ್ದ. ಅವರು ಹಾಗೆ ಹೇಳಿದಾಗ ಸೀನಿದವರು, ‘ನೀನೂ ಬಾಳು’ ಎನ್ನದಿದ್ದರೆ ಅವರನ್ನು ತಿನ್ನುತ್ತಿದ್ದ. ಇದು ಕುಬೇರ ಅವನಿಗೆ ಕೊಟ್ಟ ವರ. ಬೋಧಿಸತ್ವನ ತಂದೆ ಸೀನುವಂತೆ ಆಗಲೆಂದು ಒಂದು ಸೂಕ್ಷ್ಮವಾದ ಚೂರ್ಣವನ್ನು ಗಾಳಿಯಲ್ಲಿ ಊದಿಬಿಟ್ಟ. ಅದು ಮಲಗಿದವರ ಮೂಗಿಗೆ ಅಡರಿ ಸೀನು ಬಂದಿತು. ಬೋಧಿಸತ್ವ ‘ದೀರ್ಘಾಯುಷಿಯಾಗು’ ಎನ್ನಲಿಲ್ಲ. ಆಗ ಯಕ್ಷ ನಿಧಾನವಾಗಿ ಬಾಗಿಲ ಚೌಕಟ್ಟಿನಿಂದ ಕೆಳಗಿಳಿಯತೊಡಗಿದ. ಆಗ ಬೋಧಿಸತ್ವನಿಗೆ ಹೊಳೆಯಿತು, ಬಹುಶ: ‘ದೀರ್ಘಾಯುಷಿಯಾಗು’ ಎನ್ನದಿದ್ದರೆ ಈ ಯಕ್ಷ ತನ್ನ ತಂದೆಯನ್ನು ತಿಂದುಬಿಡಬಹುದು. ತಕ್ಷಣ ಜೋರಾಗಿ ‘ದೀರ್ಘಾಯುಷಿಯಾಗು’ ಎಂದ. ಯಕ್ಷನಿಗೆ ನಿರಾಸೆಯಾಯಿತು. ತಾನಿನ್ನು ಈ ಹಿರಿಯರನ್ನು ತಿನ್ನಲಾರೆ ಎಂದುಕೊಂಡ. ಆದರೆ ಅವರು ಮಗನ ಮಾತಿಗೆ ಪ್ರತಿವಚನವಾಗಿ ‘ನೀನೂ ಬಾಳು’ ಎನ್ನಲಿಲ್ಲವಲ್ಲ. ಆದ್ದರಿಂದ ಮಗನನ್ನೇ ತಿನ್ನಬಹುದು ಎಂದು ಮತ್ತೆ ಕೆಳಗಿಳಿಯತೊಡಗಿದ. ಆಗ ಬೋಧಿಸತ್ವನ ತಂದೆಗೆ ವಿಚಾರಬಂದಿತು. ತಾನು, ‘ನೀನೂ ಬಾಳು’ ಎನ್ನದಿದ್ದುದಕ್ಕೆ ಮಗನನ್ನು ತಿನ್ನಲು ಬರುತ್ತಿರಬೇಕೆಂದುಕೊಂಡು ಜೋರಾಗಿ, ‘ನೀನೂ ಬಾಳು’ ಎಂದ. ಯಕ್ಷ ಈ ಮಾತನ್ನು ಕೇಳಿ ಇಬ್ಬರನ್ನು ತಿನ್ನುವ ಅವಕಾಶ ತನಗಿಲ್ಲವೆಂದು ದು:ಖಕ್ಕೆ ಒಳಗಾದ. ಅದನ್ನು ಗಮನಿಸಿದ ಬೋಧಿಸತ್ವ ಕೇಳಿದ, “ಯಕ್ಷ, ಯಾಕೆ ನೀನು ಧರ್ಮಶಾಲೆಗೆ ಬಂದವರನ್ನು ಕೊಂದು ತಿನ್ನುತ್ತೀ?”
‘ನಾನು ಹನ್ನೆರಡು ವರ್ಷಗಳ ಕಾಲ ಕುಬೇರನ ಸೇವೆ ಮಾಡಿ ಈ ವರವನ್ನು ಪಡೆದಿದ್ದೇನೆ. ಅದು ನನ್ನ ಅಧಿಕಾರ’

‘ಎಲ್ಲರನ್ನೂ ತಿನ್ನುತ್ತೀಯಾ’
‘ಇಲ್ಲ, ‘ದೀರ್ಘಾಯುಷಿಯಾಗು’ ಎನ್ನದಿದ್ದಾಗ ಮತ್ತು ಅದಕ್ಕೆ ಪ್ರತಿಯಾಗಿ ‘ನೀನು ಬಾಳು’ ಎನ್ನದಿದ್ದರೆ ಮಾತ್ರ ತಿನ್ನುತ್ತೇನೆ’ ಎಂದ ಯಕ್ಷ.

ADVERTISEMENT

ಆಗ ಬೋಧಿಸತ್ವ, ‘ಎಲೈ ಯಕ್ಷ, ನೀನು ಹನ್ನೆರಡು ವರ್ಷ ಕುಬೇರನ ಸೇವೆ ಮಾಡಿ ಇಂಥ ಕೆಟ್ಟದ್ದನ್ನೇಕೆ ಬೇಡಿಕೊಂಡೆ? ನೀನು ಹಿಂದಿನ ಜನ್ಮದಲ್ಲಿ ಕೆಟ್ಟ ಕೆಲಸ ಮಾಡಿ ಈಗ ಮತ್ತೊಬ್ಬರಿಗೆ ತೊಂದರೆಕೊಡುವ ಪ್ರೇತವಾಗಿದ್ದೀಯಾ. ಈಗಲೂ ಕೆಟ್ಟ ಕಾರ್ಯಗಳನ್ನೇ ಮಾಡುತ್ತಿದ್ದರೆ ಮುಂದೆ ಇನ್ನೂ ಕೆಟ್ಟ ಜನ್ಮ ಬರುತ್ತದೆ. ಆದ್ದರಿಂದ ಇವೆಲ್ಲ ನೀಚಕಾರ್ಯಗಳನ್ನು ಬಿಟ್ಟು ಸತ್ಕಾರ್ಯ
ಗಳನ್ನು ಮಾಡು, ಜನರಿಗೆ ತೊಂದರೆಕೊಡುವ ಬದಲು ಸಹಾಯಮಾಡು. ಆಗ ನಿನಗೆ ಶ್ರೇಷ್ಠ ಜನ್ಮ ಬರುತ್ತದೆ” ಎಂದು ಹೇಳಿ ಅವನಿಗೆ ಪಂಚಶೀಲಗಳನ್ನು ಬೋಧಿಸಿದ. ಯಕ್ಷ ಮುಕ್ತನಾದ.

ಆ ಅವಕಾಶ ನಮಗೂ ಇದೆ. ಕೆಟ್ಟ ಕೆಲಸಗಳನ್ನು ಮಾಡಿ ನೀಚ ಜೀವನ ನಡೆಸುವುದು, ಇಲ್ಲವೇ ಒಳ್ಳೆಯ ಕೆಲಸಗಳನ್ನು ಮಾಡಿ ಉದಾತ್ತ ಬದುಕನ್ನು ಸಾಗಿಸುವುದು. ಆಯ್ಕೆ ನಮ್ಮದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.