ADVERTISEMENT

ಬೆರಗಿನ ಬೆಳಕು:  ಶವವಾಹಕರ ನಿರ್ಲಿಪ್ತತೆ

ಡಾ. ಗುರುರಾಜ ಕರಜಗಿ
Published 15 ಸೆಪ್ಟೆಂಬರ್ 2022, 19:30 IST
Last Updated 15 ಸೆಪ್ಟೆಂಬರ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮೃತನ ಸಂಸಾರಕಥೆ ಶವವಾಹಕರಿಗೇಕೆ? |
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ||
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |
ಧೃತಿಯ ತಳೆ ನೀನಂತು – ಮಂಕುತಿಮ್ಮ || 716 ||

ಪದ-ಅರ್ಥ: ಶವವಾಹಕರಿಗೇಕೆ=ಶವವಾಹಕರಿಗೆ(ಹೆಣ ಹೊರುವವರಿಗೆ)+ಏಕೆ, ಸಾಲಿಗನು=ಸಾಲಕೊಟ್ಟವನು,
ಜಿತಮನದಿ=ಧೃಡವಾದ ಮನಸ್ಸಿನಿಂದ, ಧೃತಿಯ=ಧೈರ್ಯವ, ತಳೆ=ತಾಳು, ನೀನಂತು=ನೀನು+ಅAತು.

ವಾಚ್ಯಾರ್ಥ: ಹೆಣ ಹೊತ್ತೊಯ್ಯುವವರಿಗೆ ಸತ್ತವನ ಸಂಸಾರದ ಚಿಂತೆ ಏಕೆ? ಹೆಂಡತಿ ದು:ಖಿಸಲಿ, ಸಾಲ ಕೊಟ್ಟವನು ಹಾರಾಡಲಿ, ಅವರು ಗಟ್ಟಿಮನಸ್ಸ್ಸಿನಿಂದ ಹೆಣವನ್ನು ಚಿತೆಗೆ ಕಟ್ಟಿ ಎತ್ತಿಕೊಂಡು
ಹೋಗುತ್ತಾರೆ. ಆ ತರಹದ ಧೈರ್ಯವನ್ನು ನೀನು ಹೊಂದು. ವಿವರಣೆ: ಡಿ.ವಿ.ಜಿ ಯವರ ಜೀವನಾನುಭವ ಕಗ್ಗದಲ್ಲಿ ಮಡುಗಟ್ಟಿ ನಿಂತಿದೆ. ಅವರು ಕಂಡ ಯಾವುದೋ ಘಟನೆ ಜೀವಪೋಷಕವಾಗಿಕಂಡಿದೆ. ಅದೊಂದು ಅನ್ಯಾದೃಶವಾದ ಉದಾಹರಣೆಯಾಗಿ ಹೊಮ್ಮಿದೆ. ಕಗ್ಗ, ನಮ್ಮ ಕಣ್ಣ ಮುಂದೆ ಚಿತ್ರವೊಂದನ್ನು ಸೃಷ್ಟಿಸುತ್ತದೆ. ಯಾರೋ ಒಬ್ಬರು ನಿಧನರಾಗಿದ್ದಾರೆ. ಸಹಜವಾಗಿ ಮನೆಯಲ್ಲಿ ದು:ಖ ತುಂಬಿದೆ. ಹೆಂಡತಿ, ಅಗಲಿಕೆ ತಡೆಯಲಾರದವಳಾಗಿ ಭೋರೆಂದು ಅಳುತ್ತಿದ್ದಾಳೆ. ಸುತ್ತ ಜನ ನೆರೆದಿದ್ದಾರೆ. ಅದರಲ್ಲೊಬ್ಬ ತೀರಿ ಹೋದವನಿಗೆ ಸಾಲ ಕೊಟ್ಟವನು. ಈತ ಹೋದ ದು:ಖ ಅವನಿಗಿಲ್ಲ, ಅವನಿಗೆ ತನ್ನ ಹಣ ಮರಳಿ ಬರುತ್ತದೆಯೋ ಎಂಬ ಚಿಂತೆ. ಅದಕ್ಕಾಗಿ ಆತ ಬೊಬ್ಬಿಡುತ್ತಾನೆ. ಈಗ ಶವವನ್ನು ಅಂತ್ಯಕ್ರಿಯೆಗೆ ಒಯ್ಯಲು ಹೆಣ ಹೊರುವವರು ಬಂದಿದ್ದಾರೆ. ಅವರಿಗೆ ನಿತ್ಯ ಅದೇ ಕೆಲಸ. ಇಂಥ ಸಂದರ್ಭಗಳನ್ನು ಕಂಡು,
ಕಂಡು ಅವರ ಮನಸ್ಸು ಮರಗಟ್ಟಿದೆ. ಅವರಿಗೆ ಅದೊಂದು ಕರ್ತವ್ಯ. ಎಷ್ಟು ಬೇಗ ಮುಗಿಸಿ ಹೋದರೆ ಅಷ್ಟು ಒಳ್ಳೆಯದು. ಅವರು ದು:ಖಿಸುತ್ತ ಕುಳಿತರೆ, ಸಾಲಿಗನೊಡನೆ ಚರ್ಚೆ ಮಾಡಿದರೆ.

ADVERTISEMENT

ತಮ್ಮ ಕಾರ್ಯವಾದೀತೇ? ಅವರು ಮನೆಯ ವಾತಾವರಣಕ್ಕೆ ಮನ ಕೆಡಿಸಿಕೊಳ್ಳದೆ, ಯಾವ ಭಾವನೆಗಳಿಲ್ಲದೆ ಹೆಣವನ್ನು ಚಿತೆಗೆ ಕಟ್ಟಿಹೊತ್ತುಕೊಂಡು ಹೋಗುತ್ತಾರೆ. ನೀನು ಆ ತರಹದ ಧೈರ್ಯವನ್ನು, ಮನಸ್ಥಿತಿಯನ್ನು ಹೊಂದು ಎನ್ನುತ್ತದೆ ಈ ಕಗ್ಗ. ಈ ಬಗೆಯ ನಿರ್ಲಿಪ್ತತೆ ಸಾಧ್ಯವೆ? ಒಂದೇ ಬಾರಿಗೆ ಸಾಧ್ಯವಿಲ್ಲ. ಆದರೆ ಸತತವಾದ ಪ್ರಯತ್ನದಿಂದ ಮನಸ್ಸನ್ನು ಸಾಕ್ಷೀಭಾವಕ್ಕೆ
ಒಗ್ಗಿಸಬೇಕು. ವಿದ್ಯಾರಣ್ಯರ ‘ಪಂಚದಶೀ’ ಯಲ್ಲಿ ಒಂದು ಶ್ಲೋಕ ಹೀಗಿದೆ

ಅಹಂಕಾರ: ಪ್ರಭು: ಸಭ್ಯಾ ವಿಷಯಾ ನರ್ತಕೀ ಮತಿ: |
ತಾಲಾದಿಧಾರಿಣ್ಯಕ್ಷಾಣಿ ದೀಪ: ಸಾಕ್ಷö್ಯವÀಭಾಸಕ: || (10.14)

“ರಾಜನಾದ ಅಹಂಕಾರನು ಸಿಂಹಾಸನದ ಮೇಲೆ ಕುಳಿತಿದ್ದಾನೆ. ವಿಷಯಗಳೆಂಬ ಸಭಾಸದರು ನೆರೆದಿದ್ದಾರೆ. ಮನಸ್ಸೆಂಬ ನರ್ತಕಿ ನರ್ತಿಸುತ್ತಿದ್ದಾಳೆ. ಚಕ್ಷಂ ಮೊದಲಾದ ಇಂದ್ರಿಯಗಳು ತಾಳ, ಮೃದಂಗಗಳನ್ನು ನುಡಿಸುತ್ತಿವೆ. ಇವೆಲ್ಲವುಗಳನ್ನು ಬೆಳಗುವ ದೀಪವೇ ಸಾಕ್ಷಿ”.

ಇಲ್ಲಿ ದೀಪ ಎಲ್ಲ ಕ್ರಿಯೆಗಳನ್ನು ಬೆಳಗಿಸಿದರೂ ತಾನು ಯಾವ ಕ್ರಿಯೆಯಲ್ಲಿಯೂ ತೊಡಗದಂತೆ ಕೇವಲ
ಸಾಕ್ಷಿಯಾಗಿದೆ. ಅದರಂತೆ ನಾವೂ ನಮ್ಮೆಲ್ಲ ಸುಖ, ದು:ಖದ ಕ್ರಿಯೆಗಳನ್ನು ಕೇವಲ ಸಾಕ್ಷಿಯಂತೆ ನೋಡಬೇಕು. ‘ನೋಡು’ ಎನ್ನುವ ಕ್ರಿಯಾಪದವನ್ನು ಬಳಸಿದ್ದರೂ ಅದು ಕ್ರಿಯೆಯಲ್ಲ-ಶುದ್ಧ ಅರಿವು. ಆ ಸಾಕ್ಷೀಭಾವವನ್ನು ಸಾಧಿಸಲು ಜೀವನಪೂರ್ತಿ ಹೆಣಗಬೇಕು. ಸಾಧಿಸಿದರೆ ಬದುಕು ಧನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.