ADVERTISEMENT

ಬೆರಗಿನ ಬೆಳಕು: ನತದೃಷ್ಟನ ಕರ್ಮ

ಡಾ. ಗುರುರಾಜ ಕರಜಗಿ
Published 8 ಮಾರ್ಚ್ 2021, 20:57 IST
Last Updated 8 ಮಾರ್ಚ್ 2021, 20:57 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮಿಥಿಲೆಯಲ್ಲಿ ಪಿಂಗುತ್ತರ ಎಂಬ ಒಬ್ಬ ಕುಬ್ಜ ಮನುಷ್ಯನಿದ್ದ. ಆತ ತಕ್ಕಶಿಲೆಗೆ ಬಂದು ಪ್ರಸಿದ್ಧರಾದ ಗುರುಗಳ ಕಡೆಗೆನಿಂತು ವಿದ್ಯೆಗಳನ್ನು ಕಲಿತ. ಶಿಕ್ಷಣ ಮುಗಿದ ಮೇಲೆ ಗುರುಗಳಿಂದ ಮನೆಗೆ ಹೋಗಲು ಅಪ್ಪಣೆ ಕೇಳಿದ. ಈತ ಬುದ್ಧಿವಂತನಾದ್ದರಿಂದ ತನ್ನ ಮಗಳನ್ನು ಆತನಿಗೇ ಕೊಟ್ಟು ಮದುವೆ ಮಾಡುವುದಾಗಿ ಗುರು ಯೋಚನೆ ಮಾಡಿದ. ಅವನ ಮಗಳು ತುಂಬ ಸುಂದರಿ, ಅಪ್ಸರೆಯರಿಗಿಂತ ರೂಪವತಿಯಾಗಿದ್ದಳು.

ಗುಣದಲ್ಲಿಯೂ ಆಕೆ ಶ್ರೇಷ್ಠಳು, ಪುಣ್ಯವಂತೆ. ಈ ಪಿಂಗುತ್ತರ ನಿರ್ಭಾಗ್ಯ. ಗುರುಗಳು ಹೇಳಿದಾಗ ಇಲ್ಲವೆನ್ನಲಾರದೆ ಮದುವೆಯಾದ. ರಾತ್ರಿ ಅಲಂಕೃತ ಶಯನಾಗಾರದಲ್ಲಿ ಹಾಸಿಗೆಯ ಮೇಲೆ ಮಲಗಿದಾಗ, ಆಕೆ ಹಾಸಿಗೆಗೆ ಬಂದಾಗ, ಈತ ಗಾಬರಿಯಾಗಿ ಕೆಳಗಿಳಿದು
ನೆಲದ ಮೇಲೆ ಮಲಗಿದ. ಆಕೆಯೂ ಇಳಿದು ಅವನ ಬಳಿಗೆ ಬಂದಾಗ, ಈತ ಎದ್ದು ಹಾಸಿಗೆಯ ಮೇಲೆ ಮಲಗಿದ. ಆಕೆ ಮತ್ತೆ ಹಾಸಿಗೆಗೆ ಬಂದಾಗ ಪಿಂಗುತ್ತರ ನೆಲದ ಮೇಲೆ ಮಲಗಿದ. ಆಕೆ, ಈತ ನತದೃಷ್ಟ, ಲಕ್ಷ್ಮಿಯ ಬೆಲೆ ಅವನಿಗೇನು ಗೊತ್ತು ಎಂದು ಹಾಸಿಗೆಯ ಮೇಲೆ ಮಲಗಿದಳು. ಮರುದಿನ ಇಬ್ಬರೂ ತಮ್ಮ ಊರಿಗೆ ಹೊರಟರು. ಆತ ಅವಳೊಂದಿಗೆ ಒಂದು ಮಾತೂ ಆಡಲಿಲ್ಲ. ಮಿಥಿಲೆಯ ಹತ್ತಿರ ಬಂದಾಗ, ತುಂಬ ಹಸಿವಾಗಿತ್ತು. ಅಲ್ಲೊಂದು ಹಣ್ಣುಗಳಿಂದ ತುಂಬಿದ ಅತ್ತಿಯ ಮರವಿತ್ತು. ಈತ ಸರಸರನೆ ಮೇಲೇರಿ ಹಣ್ಣು ತಿನ್ನತೊಡಗಿದ. ಆಕೆ ಮರದ ಕೆಳಗೆ ಬಂದು, ‘ನನಗೂ ಹಣ್ಣು ಉದುರಿಸು’ ಎಂದು ಬೇಡಿದಳು. ಆತ, ‘ನಿನಗೆ ಕೈ, ಕಾಲು ಇಲ್ಲವೇ? ಬೇಕಾದರೆ ನೀನೇ ಮರ ಹತ್ತಿ ಹಣ್ಣು ತಿನ್ನು’ ಎಂದ ಒರಟಾಗಿ. ಆಕೆ ಮರ ಏರಿದಾಗ ಪಿಂಗುತ್ತರ ಕೆಳಗೆ ಹಾರಿಕೊಂಡು, ಆಕೆ ಕೆಳಗೆ ಬರದಂತೆ ಮರದ ಕೆಳಗೆ ಮುಳ್ಳುಕಂಟಿಗಳನ್ನು ತುಂಬಿ ನಗರಕ್ಕೆ ಓಡಿ ಹೋದ.

ಪಾಪ! ಆಕೆ ಅಳುತ್ತ ಮರದ ಮೇಲೆ ಕುಳಿತಳು. ಅಂದು ಸಂಜೆ ಉದ್ಯಾನದಲ್ಲಿ ಕ್ರೀಡೆಯನ್ನು ಪೂರೈಸಿ ಆನೆಯ ಮೇಲೆ ಕುಳಿತು ರಾಜ ನಗರ ಪ್ರವೇಶ ಮಾಡುವಾಗ ಮರದ ಮೇಲೆ ಕುಳಿತಿದ್ದ ಅವಳನ್ನು ಕಂಡು, ಅವಳ ರೂಪಕ್ಕೆ ಬೆರಗಾಗಿ, ಆಸಕ್ತನಾಗಿಬಿಟ್ಟ. ಮಂತ್ರಿಗಳಿಗೆ ಹೇಳಿದ, ‘ಹೋಗಿ ಅವಳನ್ನು ಮಾತನಾಡಿಸಿಕೊಂಡು ಬನ್ನಿ. ಆಕೆ ಬೇರೊಬ್ಬರ ಪತ್ನಿಯಾಗಿದ್ದರೆ ವಿಚಾರಬೇಡ. ಕನ್ಯೆಯಾಗಿದ್ದರೆ ಕರೆತನ್ನಿ ಅವಳನ್ನು ನಾನು ಮದುವೆಯಾಗುತ್ತೇನೆ’. ವಿಚಾರಿಸಿ ಬಂದು ಅಮಾತ್ಯ ಹೇಳಿದ, ‘ಸ್ವಾಮಿ, ಆಕೆಗೆ ಗಂಡ ಇದ್ದಾನೆ. ಆದರೆ ಆಕೆಯನ್ನು ಮುಟ್ಟುವುದು ದೂರವಿರಲಿ, ಆಕೆಯ ಜೊತೆಗೆ ಮಾತೂ ಆಡದೆ, ಆಕೆಯನ್ನು ತ್ಯಾಜ್ಯಮಾಡಿ ಹೋಗಿದ್ದಾನೆ. ಒಡೆಯನಿಲ್ಲದ ವಸ್ತು ರಾಜನಿಗೆ ಸೇರಿದ್ದು’. ರಾಜ ಆಕೆಯನ್ನು ಕರೆತಂದು ಪಟ್ಟದರಾಣಿಯನ್ನಾಗಿ ಮಾಡಿಕೊಂಡ. ಆಕೆ ಔದುಂಬರ ವೃಕ್ಷದಲ್ಲಿ ದೊರಕಿದ್ದುದರಿಂದ ಅವಳಿಗೆ ಉದುಂಬರಾದೇವಿ ಎಂದು ಹೆಸರು ಕೊಟ್ಟ.

ADVERTISEMENT

ಒಂದು ದಿನ ರಾಜ ತನ್ನ ರಾಣಿಯೊಂದಿಗೆ ಹೊಸದಾಗಿ ನಿರ್ಮಾಣವಾಗುತ್ತಿದ್ದ ರಸ್ತೆಯ ಕಾರ್ಯದ ವೀಕ್ಷಣೆಗೆ ಹೊರಟ. ಅಲ್ಲಿ ಪಿಂಗುತ್ತರ ಕಚ್ಚೆ ಬಿಗಿದು, ನೆಲ ಅಗಿದು, ಕೂಲಿ ಮಾಡುತ್ತಿದ್ದ. ಅವನನ್ನು ಕಂಡು ರಾಣಿ ನಕ್ಕಳು. ರಾಜ ಕಾರಣ ಕೇಳಿದಾಗ, ‘ಆತ ನನ್ನ ಮೊದಲನೆಯ ಗಂಡ. ಈತನೇ ನನ್ನನ್ನು ಬಿಟ್ಟು ಓಡಿ ಹೋದವನು. ಅವನಿಗೆ ಲಕ್ಷ್ಮಿಯ ಬೆಲೆ ಹೇಗೆ ತಿಳಿದೀತು?’ ಎಂದಳು. ರಾಜ ಅಮಾತ್ಯ ಸೆನೆಕನ ಅಭಿಪ್ರಾಯ ಕೇಳಿದ. ಆತ, ‘ಸಾಧ್ಯವಿಲ್ಲ ಸ್ವಾಮಿ, ಇಂಥ ಚೆಲುವೆಯನ್ನು ಯಾರಾದರೂ ಬಿಡುತ್ತಾರೆಯೇ? ರಾಣಿ ಸುಳ್ಳು ಹೇಳುತ್ತಾಳೆ’ ಎಂದು ರಾಜನ ತಲೆ ತುಂಬಿದ. ಈ ಮನೆ ಒಡೆಯುವ ಮಾತುಗಳನ್ನು ಕೇಳಿ ಮಹೋಷಧಕುಮಾರ ಹೇಳಿದ, “ಪ್ರಭೂ, ರಾಣಿ ಹೇಳಿದ್ದು ಸತ್ಯ. ನತದೃಷ್ಟನ ಮುಂದೆ ಲಕ್ಷ್ಮಿ ಬಂದರೂ ಆತ ನೋಡಲಾರ. ಅವನ ಕರ್ಮವೇ ಅಂಥದ್ದು. ಸುಖದಲ್ಲಿಯೇ ದು:ಖವನ್ನರಸುವುದು ನತದೃಷ್ಟರ ದೈವ. ಇಲ್ಲದಿದ್ದರೆ ಲಕ್ಷ್ಮಿಯಂತಹ ಹೆಂಡತಿಯನ್ನು ಬಿಟ್ಟು ನೆಲ ಅಗೆಯುವ ಕರ್ಮ ಆತನಿಗೆ ಬರುತ್ತಿತ್ತೇ?’. ರಾಜ ಅವನ ಮಾತು ಒಪ್ಪಿದ. ನಿಜ, ದೈವವಿಲ್ಲದಿದ್ದರೆ, ಕಣ್ಣ ಮುಂದಿದ್ದ ಸ್ವರ್ಗವೂ ನರಕದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.