ADVERTISEMENT

ಬೆರಗಿನ ಬೆಳಕು: ನಿಗ್ರಹಿಸಿದ ಶಕ್ತಿಶಾಲಿ ಕುದುರೆ

ಡಾ. ಗುರುರಾಜ ಕರಜಗಿ
Published 11 ಮಾರ್ಚ್ 2021, 20:16 IST
Last Updated 11 ಮಾರ್ಚ್ 2021, 20:16 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು |
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ||
ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ |
ನಮ್ಮ ಗುರಿಗೈದಿಪುದು - ಮಂಕುತಿಮ್ಮ || 396 ||

ಪದ-ಅರ್ಥ: ಕಲ್ಮಷ= ಕೊಳಕು, ವಲ್ಮೀಕ= ಹುತ್ತ, ಋಷಿಗಳೊರೆದಿಹರು= ಋಷಿಗಳು+ಒರೆದಿಹರು (ಹೇಳಿರುವರು), ಹಮ್ಮುಳ್ಳ= ಶಕ್ತಿಯುಳ್ಳ, ಹಯ= ಕುದುರೆ, ಕಾಪಿಟ್ಟು= ಕಾಪಾಡಿ, ಗುರಿಗೈದಿಪುದು= ಗುರಿಗೆ+ಐದಿಪುದು (ಸೇರಿಸುವುದು).

ವಾಚ್ಯಾರ್ಥ: ಈ ದೇಹವನ್ನು ಕೊಳಕಿನ ಹುತ್ತವೆಂದು ಹೀಯಾಳಿಸಬೇಡ. ಋಷಿಗಳು ಅದನ್ನು ಬ್ರಹ್ಮಪುರಿಯೆಂದು ಕರೆದಿದ್ದಾರೆ. ಶಕ್ತಿಯುಳ್ಳ ಕುದುರೆಯನ್ನು ಚೆನ್ನಾಗಿ ಕಾಪಾಡಿ, ಕಡಿವಾಣ ಹಾಕಿ ನಿಗ್ರಹಿಸಿದಾಗ ಅದು ನಮ್ಮ ಗುರಿಯನ್ನು ಸೇರಿಸುತ್ತದೆ.

ADVERTISEMENT

ವಿವರಣೆ: ಮಾನವ ದೇಹ ಮೂಳೆ ಮಾಂಸಗಳ ತಡಿಕೆ, ಅದೊಂದು ಮಲಮೂತ್ರಗಳನ್ನು ತುಂಬಿಕೊಂಡ ಕೊಳಕಿನ ಚೀಲ, ಅದರಲ್ಲಿ ಯಾವ ಸುಖವೂ ಇಲ್ಲ ಎಂದು ಕೆಲವರು ನಿರಾಸೆಯಿಂದ, ಋಣಾತ್ಮಕತೆಯಿಂದ ಹೇಳುವುದುಂಟು. ಆದರೆ ದೇಹವಿಲ್ಲದೆ ಯಾವುದಾದರೂ ಕಾರ್ಯವಾದೀತೇ? ಚೇತನದ ಕಾರ್ಯವನ್ನು ಸಾಧಿಸಿ ತೋರಿಸುವುದು ದೇಹ. ಅದನ್ನು ಋಷಿಗಳು ಬ್ರಹ್ಮಪುರಿ ಎಂದು ಸಾರಿದ್ದಾರೆ. ಅದು ಚೈತನ್ಯದ ಸಾಧನೆಯ ವಾಹನ. ಅದರ ಬಗ್ಗೆ ತಿರಸ್ಕಾರ ಬೇಡ.

ನಾವು ಯಾವುದೇ ಚಿಂತನೆಯನ್ನು ಆಳವಾಗಿ ವಿಶ್ಲೇಷಿಸುತ್ತ ಹೋದರೆ ಅದು ನಮ್ಮನ್ನು ಸ್ಥೂಲದಿಂದ ಸೂಕ್ಷ್ಮದ ಕಡೆಗೆ, ಸೂಕ್ಷ್ಮದಿಂದ ಸೂಕ್ಷಾತಿಸೂಕ್ಷ್ಮದ ಕಡೆಗೆ ಕರೆದೊಯ್ಯುತ್ತದೆ. ಒಂದು ಮೇಜನ್ನು ಗಮನಿಸಿ. ಅದು ಮರದಿಂದ ಆದದ್ದು. ಆ ಮರ ನಿರ್ಮಾಣವಾದದ್ದು ವಿವಿಧ ಅಣುಗಳಿಂದ. ಅಣುಗಳನ್ನು ವಿಶ್ಲೇಷಿಸಿದಾಗ ಪರಮಾಣು ಬರುತ್ತದೆ. ಪರಮಾಣುವನ್ನು ಮತ್ತ್ತೂ ವಿಶ್ಲೇಷಿಸಿದಾಗ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್‍ಗಳು ಕಾಣುತ್ತವೆ. ಅವುಗಳನ್ನು ಇನ್ನು ವಿಶ್ಲೇಷಣೆ ಮಾಡಿದರೆ ಅವೆಲ್ಲ ಮರೆಯಾಗಿ ಕ್ಪಾರ್ಕ ಎಂಬ ಸೂಕ್ಷ್ಮಾತಿಸೂಕ್ಷ್ಮ ಕಣ ಕಂಡೀತು. ಹೀಗೆ ವಿಜ್ಞಾನಿಗಳು ವಸ್ತುಗಳನ್ನು ವಿಶ್ಲೇಷಿಸಿದಂತೆ ನಮ್ಮ ಹಿಂದಿನ ಋಷಿಗಳು ಮನುಷ್ಯನ ವ್ಯಕ್ತಿತ್ವವನ್ನು ವಿಶ್ಲೇಷಿಸಿದರು. ಅವನ ನಿಜವಾದ ವ್ಯಕ್ತಿತ್ವ ಯಾವುದು? ದೇಹ-ಇಂದ್ರಿಯವಷ್ಟೇ ಅವನ ವ್ಯಕ್ತಿತ್ವವೇ? ಮನುಷ್ಯನ ವ್ಯಕ್ತಿತ್ವ ಅನೇಕ ಪದರುಗಳಿಂದ ಆಗಿದ್ದನ್ನು ಗುರುತಿಸಿದರು. ಜಾಗ್ರತ್, ಸ್ಪಪ್ನ ಮತ್ತು ಸುಷುಪ್ತಿ ಎಂಬ ಮೂರು ಅವಸ್ಥೆಗಳ ವಿಶ್ಲೇಷಣೆಯಿಂದ ವ್ಯಕ್ತಿತ್ವ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಂದ ಕೂಡಿದೆ ಎಂದು ಕಂಡುಹಿಡಿದರು. ಸ್ಥೂಲವಾದ ದೇಹದಲ್ಲಿ ಅಸಾಧ್ಯವಾದ ಶಕ್ತಿ ಇದೆ.

ಭಗವದ್ಗೀತೆ, ದೇಹವನ್ನು, ‘ದೇಹೋ ದೇವಾಲಯ: ಪ್ರೋಕ್ತ: ಜೀವೋ ಹಂಸ: ಸದಾಶಿವ:’ ಎನ್ನುತ್ತದೆ. ಈ ದೇಹ ಭಗವಂತನು ವಾಸಿಸುವ ದೇವಾಲಯ. ಕಾಳಿದಾಸ, ‘ಶರೀರಮಾದ್ಯಂ ಖಲು ಧರ್ಮಸಾಧನಮ್’ ಎನ್ನುತ್ತಾನೆ. ಧರ್ಮ ಸಾಧನೆಯಲ್ಲಿ ಶರೀರವೇ ಮೊದಲನೆಯದು. ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಕರ್ತವ್ಯ. ನಾವು ದೇಹವನ್ನು ಎರಡು ರೀತಿಯಲ್ಲಿ ಕೆಡಿಸುತ್ತೇವೆ. ಒಂದು ಅತಿಯಾದ ಭೋಗದಿಂದ ಮತ್ತೊಂದು ಅತಿಯಾದ ದಂಡನೆಯಿಂದ. ಎರಡು ಅತಿರೇಕಗಳೂ ತಪ್ಪು. ಕಗ್ಗ ಅದನ್ನು ಹೇಳುತ್ತದೆ. ಈ ದೇಹ ಪವಿತ್ರವಾದದ್ದು. ಅದೊಂದು ಶಕ್ತಿಶಾಲಿಯಾದ ಕುದುರೆ ಇದ್ದಂತೆ. ಅದನ್ನು ಚೆನ್ನಾಗಿ ಕಾಪಾಡುವುದು ಎಷ್ಟು ಮುಖ್ಯವೋ, ಅದನ್ನು ಕಡಿವಾಣ ಹಾಕಿ ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ. ಹಾಗೆ ಮಾಡಿದಾಗ ಈ ದೇಹ ನಮ್ಮ ಗುರಿಯನ್ನು ತಲುಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.