ADVERTISEMENT

ಬೆರಗಿನ ಬೆಳಕು: ವೈರುಧ್ಯಗಳ ಏಕತೆ

ಡಾ. ಗುರುರಾಜ ಕರಜಗಿ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲ|
ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ||
ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ |
ಉಳಿವಿಗಳಿವಿನ ನೆರೆಯೊ – ಮಂಕುತಿಮ್ಮ || 403 ||

ಪದ-ಅರ್ಥ: ಬಿಡುವಿನಿತು=ಬಿಡುವು
(ಅಂತರ)+ಇನಿತು, ಅನಿತಿನಿತು=ಅನಿತು(ಅಷ್ಟು)+ಇನಿತು(ಇಷ್ಟು), ಉಳಿವಿಗೆ(ಬದುಕಿಗೆ)+
ಅಳಿವಿನ(ಸಾವಿನ), ನೆರೆ(ಹತ್ತಿರದ್ದು, ಸಂಬಂಧ)

ವಾಚ್ಯಾರ್ಥ: ರತ್ನದಲ್ಲಿ ಹೊಳಪಿನ ಮುಖಗಳ ನಡುವೆ ಕೊಂಚ ಅಂತರವಿದೆ. ಎರಡು ಬೆಳಕುಗಳ ನಡುವೆ ಕೊಂಚ ಕತ್ತಲು. ಗದ್ದೆಗಳಲ್ಲಿ ಬೆಳಸಿನ ಸಾಲಿನ ನಡುವೆ ಬದುವಿದೆ. ಅಂತೆಯೇ ಉಳಿವು ಮತ್ತು ಅಳಿವುಗಳು ಒಂದಕ್ಕೊಂದು ಪೂರಕವಾದವುಗಳು.

ADVERTISEMENT

ವಿವರಣೆ: ಇದೊಂದು ಅತ್ಯದ್ಭುತವಾದ ಚೌಪದಿ. ವಿಸ್ತರಿಸಿದಷ್ಟೂ ಹಿಗ್ಗುವ ಅರ್ಥವ್ಯಾಪ್ತಿ. ನಾವು ಯಾವುದನ್ನು ವಿರೋಧಗಳು ಎಂದು ಭಾವಿಸಿದ್ದೇವೋ ಅವು ನೈಜದಲ್ಲಿ ಒಂದಕ್ಕೊಂದು ಪೂರಕವಾದವುಗಳಷ್ಟೇ ಅಲ್ಲ, ಅವು ಒಂದೇ ಸತ್ಯದ ಎರಡು ಮುಖಗಳು.

ಬಗದಾದಿನ ಮಹಾ ಸೂಫೀ ಸಂತ ಹಸನ್ ಒಂದು ಗ್ರಾಮಕ್ಕೆ ಸಂಜೆಗೆ ಹೋದ. ಅವನಿಗೆ ಇರಲಿಕ್ಕೆ ಕೋಣೆಯೊಂದನ್ನು ಮನೆಯ ಯಜಮಾನಿ ಕೊಟ್ಟಳು. ಕೋಣೆಯೊಳಗೆ ಕತ್ತಲೆ. ಯಜಮಾನಿ ತನ್ನ ಪುಟ್ಟ ಮಗಳೊಡನೆ ಒಂದು ದೀಪವನ್ನು ಕಳುಹಿಸಿದಳು. ಕತ್ತಲೆ ಕರಗಿತು. ಹಸನ್ ಮಗುವಿಗೆ ಕೇಳಿದ, ‘ಮಗೂ, ಈ ದೀಪಕ್ಕೆ ಬೆಳಕು ಬಂದಿದ್ದು ಎಲ್ಲಿಂದ?’ ಮಗು ಅಷ್ಟೇ ಮುಗ್ಧವಾಗಿ ನಕ್ಕು, ತುಟಿ ಚಾಚಿ ಉಫ್ ಎಂದು ಊದಿ ದೀಪವನ್ನು ಆರಿಸಿಬಿಟ್ಟು ಕೇಳಿತು, ‘ಈಗ ಬೆಳಕು ಹೋದದ್ದು ಎಲ್ಲಿಗೆ?’

ಕತ್ತಲೆಯಿಂದಲೇ ಬೆಳಕಿಗೊಂದು ಅರ್ಥ, ಅಲ್ಲಿಂದಲೇ ಬೆಳಕಿನ ಉಗಮ. ಕತ್ತಲೆಯ ಗರ್ಭದಿಂದಲೇ ಬೆಳಕಿನ ಹುಟ್ಟು. ಅಂದರೆ ಕತ್ತಲೆ-ಬೆಳಕುಗಳು ಒಂದಕ್ಕೊಂದು ವಿರೋಧವಲ್ಲ. ಒಂದಿಲ್ಲದೆ ಮತ್ತೊಂದಿಲ್ಲ. ಅಷ್ಟೇ ಅಲ್ಲ ಒಂದರಿಂದಲೇ ಮತ್ತೊಂದರ ಅಸ್ತಿತ್ವ.

ಇದೇ ರೀತಿ ಸಾವು-ಹುಟ್ಟುಗಳು. ‘ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ|’ ಹುಟ್ಟಿದವರಿಗೆ ಸಾವು ತಪ್ಪಿದ್ದಲ್ಲ ಅಂತೆಯೇ ಮೃತನಿಗೆ ಮರುಹುಟ್ಟು ತಪ್ಪಿದ್ದಲ್ಲ. ಪ್ರಾಣಿ ಹುಟ್ಟಿದ ತಕ್ಷಣ ಅವನ ಕಾಲನ್ನು ಸಾವು ಹಿಡಿದುಕೊಂಡಿದೆ. ಪ್ರಾಣಿ ಬೆಳೆದಂತೆಯೇ ಸಾವು ಗಾಢವಾಗುತ್ತ, ಹತ್ತಿರವಾಗುತ್ತ ಹೋಗುತ್ತದೆ. ನಮಗೆ ಸಾವು ಮತ್ತು ಹುಟ್ಟುಗಳನ್ನು ವಿರೋಧಿಗಳಾಗಿಯೇ ನೋಡಿ ಅಭ್ಯಾಸ. ಆದರೆ ಅಖಂಡತ್ವದಲ್ಲಿ ಸಾವು ಮತ್ತೊಂದು ಹುಟ್ಟಿನ ಆರಂಭ ಹಾಗೂ ಹುಟ್ಟು ಮತ್ತೊಂದು ಸಾವಿನ ಅವತರಣ.

ಅಸಂಗತವೆಂದು ತೋರುವ ತತ್ವಗಳು ಅಖಂಡತ್ವದಲ್ಲಿ ಒಂದೇ ಆಗಿರುತ್ತವೆ. ಇದನ್ನು ಕಗ್ಗ ಸುಂದರವಾಗಿ ಉಪಮೆಗಳ ಮೂಲಕ ಹೇಳುತ್ತದೆ. ಒಂದು ಸಾಣೆ ಹಿಡಿದ ವಜ್ರಕ್ಕೆ ನೂರಾರು ಮುಖಗಳು. ಆ ಮುಖಗಳ ನಡುವೆ ಇರುವ ಅಂಚು ಬೆಳಕನ್ನು ಅಷ್ಟು ಪ್ರತಿಫಲಿಸಲಾರದು. ಅದೊಂದು ಚೂರು ನೆರಳು. ಈ ನೆರಳಿನಿಂದಲೇ ಆ ಮುಖಗಳು ಫಳ್ ಎಂದು ಹೊಳೆಯುವುದು. ಎಲ್ಲವೂ ನೇರವಾಗಿ ಮುಖವೇ ಆಗಿಬಿಟ್ಟಿದ್ದರೆ ಅದು ವಜ್ರವಾಗದೆ ಕನ್ನಡಿಯಾಗುತ್ತಿತ್ತು. ಹಾಗೆಯೇ ಎರಡು ಹಗಲುಗಳ ನಡುವೆ ಒಂದು ರಾತ್ರಿ. ರಾತ್ರಿ ಇರುವುದರಿಂದಲೇ ಹಗಲಿಗೊಂದು ವಿಶೇಷತೆ. ಗದ್ದೆಯಲ್ಲಿ ಬೆಳೆ ತೊನೆಯುತ್ತಿರುವಾಗ ನೋಡುವ ದೃಶ್ಯ ಅಪ್ಯಾಯಮಾನವಾದದ್ದು. ಒಂದು ಗದ್ದೆಯಿಂದ ಮತ್ತೊಂದು ಗದ್ದೆಯ ನಡುವೆ ಇದ್ದ ಬದುವು ಒಂದು ಆತ್ಯಂತಿಕ ಸುಂದರತೆಯನ್ನು ನೀಡುತ್ತದೆ. ಕೊನೆಗೆ ಈ ಕಗ್ಗ ಭರತವಾಕ್ಯವೊಂದನ್ನು ಹೇಳುತ್ತದೆ. ‘ಉಳಿವಿಗೆ ಅಳಿವಿನ ನೆರೆ’. ಬದುಕು, ಸಾವು ನೀಡಿದ ಭಿಕ್ಷೆ; ಸಾವು, ಬದುಕು ನೀಡಿದ ಕರುಣೆ. ಒಂದಕ್ಕೊಂದು ಅನ್ಯೋನ್ಯ ಸಂಬಂಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.