ADVERTISEMENT

ಬೆರಗಿನ ಬೆಳಕು | ಇದೂ ಶಾಶ್ವತವಲ್ಲ

ಡಾ. ಗುರುರಾಜ ಕರಜಗಿ
Published 26 ಡಿಸೆಂಬರ್ 2022, 8:46 IST
Last Updated 26 ಡಿಸೆಂಬರ್ 2022, 8:46 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕುಂದದೆಂದಿಗುಮೆನ್ನಿಸುವ ಮನದ ಕಾತುರತೆ - |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ – ಮಂಕುತಿಮ್ಮ || 785 ||

ಪದ-ಅರ್ಥ: ಕುಂದದೆಂದಿಗುಮೆನ್ನಿಸುವ=ಕುಂದದು (ಕಡಿಮೆಯಾಗದು)+ ಎಂದಿಗು+ಎನ್ನಿಸುವ, ಮಂದದಾ=ಮಂದದ (ದಟ್ಟವಾದ)+ಆ, ಕಾರ್ಮೋಡ=ಮಳೆಸುರಿಸುವ ಕಪ್ಪು ಮೋಡ.

ವಾಚ್ಯಾರ್ಥ: ಎಂದೆಂದಿಗೂ ಕಡಿಮೆಯಾಗದು ಎಂದುಕೊಂಡ ಮನಸ್ಸಿನ ತಳಮಳ ದಿನಕಳೆದಂತೆ ತಾನೇ ಸೋತು ತಣ್ಣಗಾಗುತ್ತದೆ. ದಟ್ಟವಾದ ಕರಿಮೋಡವೂ ಕರಗಿ ನೀರಾಗಿ ಸುರಿದು, ಸೂರ್ಯ ಮತ್ತೆ ಹೊಳೆಯುತ್ತಾನೆ. ಹಾಗೆ ಆದಾಗ ದೊರೆಯುವ ಸುಖವೇ ಸುಖ.

ADVERTISEMENT

ವಿವರಣೆ: ಅವನೊಬ್ಬ ರಾಜ. ಸಮರ್ಥ. ತನ್ನ ರಾಜ್ಯವನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆತ ಸೂಕ್ಷ್ಮ ಕೂಡ. ಆಗಾಗ ಜ್ಞಾನಿಗಳೊಡನೆ, ಸಂತರೊಡನೆ ಚಿಂತನೆ ನಡೆಸಿ ತನ್ನ ಬಾಳನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅವನಿಗೆ ಒಂದೇ ಪ್ರಶ್ನೆ. ಅದನ್ನೇ ತನ್ನ ಸಂಪರ್ಕಕ್ಕೆ ಬಂದ ಎಲ್ಲ ಸಂತರಿಗೆ ಕೇಳುತ್ತಿದ್ದ. ದುಃಖದಲ್ಲೂ ಸಂತೋಷದಲ್ಲೂ ಮನಸ್ಸನ್ನು ತಿಳಿಮಾಡುವ ಒಂದೇ ಸಂದೇಶ ಇದೆಯೇ? ಎಲ್ಲರೂ ಆತನಿಗೆ ಹೇಳುತ್ತಿದ್ದರು, 'ದುಃಖಕ್ಕೆ ಒಂದುಸಮಾಧಾನ ಹೇಳಬಹುದು, ಸಂತೋಷಕ್ಕೆ ಬಂದು ಮೆಚ್ಚಿಕೆಯ ಮಾತು ಸಹಜ. ಎರಡಕ್ಕೂ ಹೊಂದಾಣಿಕೆಯಾಗುವ ಒಂದೇ ಮಾತು ಕಷ್ಟ. ಯಾಕೆಂದರೆ ಎರಡೂ ಬೇರೆ ಸಂದರ್ಭಗಳಲ್ಲವೆ?' ಆತ ಒಮ್ಮೆ ಹಿಮಾಲಯಕ್ಕೆ ಪ್ರವಾಸ ಹೊರಟ.

ಅಲ್ಲಿಯೂ ಅವನಿಗೆ ಅದೇ ಚಿಂತೆ. ಎಲ್ಲ ಸಂದರ್ಭಗಳಿಗೂ ಹೊಂದುವ ತಿಳುವಳಿಕೆಯ ಒಂದು ಮಾತು. ದಾರಿಯಲ್ಲಿ ಸಿಕ್ಕವರನ್ನೆಲ್ಲ ಕೇಳಿದ. ಯಾರೂ ಸಮಾಧಾನಕರವಾದ ಉತ್ತರವನ್ನು ನೀಡಲಿಲ್ಲ. ಕೊನೆಗೆ ನಿರಾಶನಾಗಿ ತನ್ನ ರಾಜ್ಯಕ್ಕೆ ಮರಳಿ ಹೊರಡಬೇಕು ಎಂದುಕೊಂಡಾಗ, ನದೀ ತೀರದಲ್ಲಿ ಒಬ್ಬ ಮನುಷ್ಯ ಏಕಾಂಗಿಯಾಗಿ ಧ್ಯಾನ ಮಾಡುತ್ತ ಕುಳಿತದ್ದನ್ನು ಕಂಡ. ರಾಜ ಅವನ ಮುಂದೆ ಹೋಗಿ ಕುಳಿತ. ಅರ್ಧಗಂಟೆಯನಂತರ ಕಣ್ಣು ತೆರೆದ ಆ ಸಾಧಕ, ಮುಂದೆ ಕುಳಿತ ರಾಜನನ್ನು ಕಂಡ. ಈತ ಮತ್ತೆ ತನ್ನ ಅದೇ ಪ್ರಶ್ನೆಯನ್ನು ಕೇಳಿದ. ಆತ ಮುಗುಳ್ನಗೆ ನಕ್ಕು ಒಂದು ಕಾಗದವನ್ನು ರಾಜನಿಂದ ಇಸಿದುಕೊಂಡು, ಅದರಲ್ಲಿ ಎರಡು ಪದಗಳನ್ನು ಬರೆದು ಕೊಟ್ಟ. ಅದರಲ್ಲಿ ಬರೆದಿತ್ತು 'ಇದೂ ಶಾಶ್ವತವಲ್ಲ'. ರಾಜ ಪ್ರಶ್ನಾರ್ಥಕವಾಗಿ ಹುಬ್ಬೇರಿಸಿ ಆ ವ್ಯಕ್ತಿಯನ್ನು ನೋಡಿದ.

ಆತ ನಕ್ಕು ಹೇಳಿದ, 'ಇದೊಂದು ಮಾತು ಯಾವ ಸಂದರ್ಭಕ್ಕೂ ಸಾಕು. ಸಂಭ್ರಮ ಬಂದಾಗ ಬೀಗುವುದು ಬೇಡ, ಯಾಕೆಂದರೆ ಅದು ಶಾಶ್ವತವಲ್ಲ. ದುಃಖ ಬಂದಾಗ ಬಾಡುವುದೂ ಬೇಡ. ಯಾಕೆಂದರೆ ಅದೂ ಶಾಶ್ವತವಾಗಿ ಇರುವುದಿಲ್ಲ'. ರಾಜ ಪ್ರಸನ್ನನಾದ. ಜಗದ ನಿಯಮವೇ ಪರಿವರ್ತನೆ. ಯಾವುದೂ ಶಾಶ್ವತವಾಗಿ ಇರುವುದಲ್ಲ. ಈ ಕಗ್ಗ ಧ್ವನಿಸುವುದು ಅದನ್ನೇ. ಮನಸ್ಸಿಗೆ ಏನೋ ಆಘಾತವಾಗಿದೆ, ಮನೆಯಲ್ಲಿ ಅತ್ಯಂತ ಆತ್ಮೀಯರಾದವರು ಗತಿಸಿದ್ದಾರೆ. ಆಗ ಈ ನೋವಿಗೆ ಕೊನೆಯೇ ಇಲ್ಲ ಎನ್ನಿಸುತ್ತದೆ. ಅದೇ ಎಂದಿಗೂ ಕುಂದದ ಕಳವಳ. ಆದರೆ ದಿನಕಳೆದಂತೆ ದುಃಖ ಮರೆಯಾಗುತ್ತದೆ. ಹತ್ತು ವರ್ಷಗಳಲ್ಲಿ ಮರೆತೇ ಹೋಗುತ್ತದೆ. ದಟ್ಟವಾದ ಮೋಡ ಇಡೀ ವಾತಾವರಣವನ್ನು ಗಾಢಾಂಧಕಾರಕ್ಕೆ ತಳ್ಳಿದಂತೆನಿಸಿದರೂ, ಮಳೆಸುರಿದು ಖಾಲಿಯಾದ ಮೇಲೆ ಮತ್ತೆ ಸೂರ್ಯ ಬೆಳಗುತ್ತಾನೆ. ಹಾಗೆ ದುಃಖ ಕರಗಿದಾಗ, ಕಾರ್ಮೋಡ ಸರಿದಾಗ ದೊರಕುವ ಸುಖವೇ ಆತ್ಯಂತಿಕವಾದದ್ದು, ನಮಗೆ ದಕ್ಕುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.