ADVERTISEMENT

ಬೆರಗಿನ ಬೆಳಕು | ಎಲ್ಲದಕ್ಕೂ ಸಿದ್ಧತೆ

ಡಾ. ಗುರುರಾಜ ಕರಜಗಿ
Published 22 ಡಿಸೆಂಬರ್ 2022, 22:31 IST
Last Updated 22 ಡಿಸೆಂಬರ್ 2022, 22:31 IST
   

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |

ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷಿಪಣಿಯೇ ಕರಗೀತು; ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು – ಮಂಕುತಿಮ್ಮ || 784 ||

ಪದ-ಅರ್ಥ: ಏನಾದೊಡೆಯುಮುಪ್ಪುದುಂಟು=ಏನು+ಆದೊಡೆಯುಂ+ಅಪ್ಪುಂ ಆಟು(ಆಗುತ್ತದೆ), ಸಿದ್ಧನಿರದಕೆ=ಸಿದ್ಧನಿರು+ಅದಕೆ, ಭಾನು=ಸೂರ್ಯ, ಸೋಮ=ಚಂದ್ರ, ಭೂಮಿ.

ವಾಚ್ಯಾರ್ಥ: ಏನಾದರೂ ಆಗಬಹುದು, ಅದಕ್ಕೆ ನೀನು ಸಿದ್ಧನಿರು. ಸೂರ್ಯ ತಂಪಾಗಬಹುದು, ಚಂದ್ರ ಸುಟ್ಟಾನು, ಭೂಮಿ ಕರಗಿ ಹೋದೀತು; ಜಗತ್ತೇ ಶೂನ್ಯವಾಗಿ ಹೋಗಬಹುದು. ನೀನು
ಮೌನದಲ್ಲಿ ಸಿದ್ಧನಿರು.

ವಿವರಣೆ: ಸ್ಪೇನ್ ದೇಶದ ಆಂತರಿಕ ಯುದ್ಧದ ಇತಿಹಾಸದಲ್ಲಿ ಚಿರಸ್ಮರಣೀಯವಾದದ್ದು ಈ ಘಟನೆ. 1936 ರಲ್ಲಿ ಟೊಲಿಡೋ ಪ್ರಾಂತದ ರಾಜ್ಯಪಾಲನಾಗಿದ್ದವನು ಕರ್ನಲ್ ಜೋಸ್ ಮೊಸ್ಕಾರ್ಡೊ.ಅವನು ಮಹಾನ್ ದೇಶಪ್ರೇಮಿ. ದೇಶದ್ರೋಹಿಗಳು ಬಹುದೊಡ್ಡ ಪಡೆಯನ್ನು ರಚಿಸಿಕೊಂಡು ದೇಶಪ್ರೇಮಿಗಳ ಸಂಘಟನೆಯನ್ನು ಮುರಿದು ದೇಶವನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಕರ್ನಲ್ಮೊಸ್ಕಾರ್ಡೊನ ಬಳಿ ಇದ್ದದ್ದು ಕೇವಲ ಹದಿಮೂರು ನೂರು ಸೈನಿಕರು. ಅವರಿಗೆ ರಕ್ಷೆಯಾಗಿದ್ದುದು ಟೊಲಿಡೋದ ಅಲ್ಕಝಾರ್ ಕಲ್ಲಿನಕೋಟೆ. ಈ ಕೋಟೆಯನ್ನು ಬಿಟ್ಟರೆ ಸ್ಪೇನ್ ದೇಶದ ನೈತಿಕ ಬಲವೇ ಕುಸಿದು ಹೋಗುತ್ತಿತ್ತು. ಕೋಟೆಯ ರಕ್ಷಣೆ ಪೂರ್ತಿ ಕರ್ನಲ್ ಮೊಸ್ಕಾರ್ಡೊನ ಮೇಲಿತ್ತು. ಯುದ್ಧ ಭೀಕರವಾಗುತ್ತಿತ್ತು. ವೈರಿಗಳನ್ನು ಸೇರಿದ್ದ ಕೆಲವರು, ಮೊದಲು ದೇಶಪ್ರೇಮಿಗಳ ತಂಡದಲ್ಲಿದ್ದವರು, ದ್ರೋಹದಿಂದ ಮೊಸ್ಕಾರ್ಡೊನ ಹೆಂಡತಿ, ಕಿರಿಯಮಗ ಮತ್ತು ಮಗಳನ್ನು ಕೊಂದು ಹಾಕಿ ಅವನ ಹಿರಿಯ ಮಗ ಲೂಯಿಸ್‌ನನ್ನು ಹಿಡಿದೊಯ್ದು ವೈರಿಗಳಿಗೆ ಕೊಟ್ಟರು. ಅವರು ಮೊಸ್ಕಾರ್ಡೊಗೆ ಪೋನ್ ಮಾಡಿ, ಅವನ ಉಳಿದ ಒಬ್ಬನೇ ಮಗ ಅವರ ವಶದಲ್ಲಿರುವುದಾಗಿಯೂ, ಕರ್ನಲ್ ಶರಣಾಗತರಾಗಿ ಕೋಟೆಯನ್ನು ವಶಕ್ಕೆ ನೀಡದಿದ್ದರೆ ಅವನನ್ನು ಕೊಂದು ಹಾಕುವುದಾಗಿಯೂ ತಿಳಿಸಿದರು. ಐವತ್ತು ವರ್ಷದ ಕರ್ನಲ್‌ನ ಪ್ರಪಂಚ ಮುಳುಗಿ ಹೋಗಿತ್ತು. ಅವನವರು ಎನ್ನುವವರು ಯಾರೂ ಉಳಿದಿರಲಿಲ್ಲ, ಹಿರಿಯ ಮಗ ಲೂಯಿಸ್ ಒಬ್ಬನನ್ನುಳಿದು. ಆಗ ಕರ್ನಲ್ ತನ್ನ ಮಗನಿಗೆ ಫೋನ್ ಕೊಡಿ ಎಂದು ಅವನ ಹತ್ತಿರ ಮಾತನಾಡಿದರು, “ಮಗೂ, ನೀನು ಒಬ್ಬನೇ ನನಗೆ ಉಳಿದವನು. ನಾನು ಕೋಟೆ ಮತ್ತು ನಿನ್ನಲ್ಲಿ ಒಂದು ಆಯ್ಕೆ ಮಾಡಬೇಕು. ಎನು ಮಾಡಲಿ?” ಮಗ ಹೇಳಿದ, “ಅಪ್ಪಾ, ನಾನು ನಿನ್ನ ಮಗ, ಕೋಟೆ ಮುಖ್ಯ.

ADVERTISEMENT

ಎಲ್ಲರಿಗೂ ನನ್ನ ಪ್ರಣಾಮಗಳನ್ನು ಹೇಳಿ. ಸ್ಪೇನಿಗೆ ಜಯವಾಗಲಿ”. ಮರುಕ್ಷಣವೇ ಆತನ ಹತ್ಯೆಯಾಯಿತು. ಕರ್ನಲ್‌ನ ಸಮಸ್ತವೂ ಮುಳುಗಿ ಹೋಯಿತು. ಆದರೆ ಅಲ್ಕಝಾರ್ ಕೋಟೆಯೊಂದಿಗೆ ಅವನ ಹೆಸರು ಚಿರಸ್ಥಾಯಿಯಾಯಿತು. ಕಗ್ಗದ ಮಾತೇ ಇದು. ಕೆಲವು ಕ್ಷಣಗಳಲ್ಲಿ ಎಲ್ಲವೂ ಮುಗಿದು ಹೋದಂತೆನಿಸಬಹುದು. ಸೂರ್ಯತಂಪಾದಂತೆ, ಚಂದ್ರ ಬೆಂಕಿಯಾದಂತೆ, ಭೂಮಿ ಕರಗಿದಂತೆ ಆಗಿ ಜಗತ್ತೇ ಶೂನ್ಯವಾಗುತ್ತದೆ. ಆದರೆ ಆಗ ನಾವು ಸಿದ್ಧರಾಗಬೇಕು. ಬರೀ ಸಿದ್ಧರಾಗುವುದು ಮಾತ್ರವಲ್ಲ, ಮೌನದಲ್ಲಿ ಸಿದ್ಧರಿರಬೇಕು. ಸಂಕಟದಲ್ಲಿ ಜಗತ್ತಿಗೆಲ್ಲ ಕಷ್ಟವನ್ನು ಸಾರಿ, ಕೂಗಿಕೊಂಡು ಗದ್ದಲವೆಬ್ಬಿಸದೆ, ಮನಸ್ಸನ್ನು ಏಕಾಗ್ರಮಾಡಿಕೊಂಡು ಪರಿಹಾರಕ್ಕೆ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.