ADVERTISEMENT

ಬೆರಗಿನ ಬೆಳಕು: ಹಗುರಾದ ಬದುಕು

ಬೆರಗಿನ ಬೆಳಕು

ಡಾ. ಗುರುರಾಜ ಕರಜಗಿ
Published 11 ಜುಲೈ 2023, 18:59 IST
Last Updated 11 ಜುಲೈ 2023, 18:59 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು |
ಹೇಳುತ್ತ ಹಾಡುಗಳ, ಭಾರಗಳ ಮರೆತು ||
ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ |
ಬಾಳ ನಡೆಸುವುದೆಂದೊ? – ಮಂಕುತಿಮ್ಮ || 925 ||

ಪದ-ಅರ್ಥ: ಪಿಡಿದು= ಹಿಡಿದು, ನೀನೂರಿನೂರಿಗೆ=ನೀನು+ಊರಿನ್(ಊರಿನಿಂದ)+ಊರಿಗೆ,
ಮೇಲುಗಳೆಣಿಕೆಯಿಂ=ಮೇಲುಗಳ+ಎಣಿಕೆಯಿಂ(ಎಣಿಕೆಯಿಂದ), ಮನವನಲುಗಿಸದೆ=ಮನವನು+ಅಲುಗಿಸದೆ,
ನಡೆಸುವುದೆಂದೊ=ನಡೆಸುವುದು+ಎಂದೊ.
ವಾಚ್ಯಾರ್ಥ: ಜೋಳಿಗೆಯನ್ನು ಹಿಡಿದು, ಊರಿಂದೂರಿಗೆ ಹಾಡುತ್ತ, ಭಾರಗಳನ್ನೆಲ್ಲ ಮರೆತು ನಡೆದು, ಬೀಳು ಸೋಲುಗಳನ್ನು ಚಿಂತಿಸದೆ, ಮನವನ್ನು ಕಲಕಿಸಿಕೊಳ್ಳದೆ, ಬಾಳನ್ನು ನಡೆಸುವುದೆಂದು?
ವಿವರಣೆ: ಈ ಕಗ್ಗ ಹೇಳುವುದು ಜೀವನ್ಮುಕ್ತನ ಲಕ್ಷಣಗಳನ್ನು. ಜೀವನ್ಮುಕ್ತಿ ಎಂಬುವುದು ಮನುಷ್ಯನ ಆಂತರಿಕ ಪರಮ ಸ್ವಾತಂತ್ರ್ಯ. ಆ ಸ್ವಾತಂತ್ರö್ಯ ನಿತ್ಯಸುಖಕ್ಕೆ ಕಾರಣ. ರಶಿಯಾದ ಅನುಭಾವಿ ಲೇಖಕಿ, ಚಿಂತಕಿ. ಹೆಲೆನಾ ಬ್ಲಾವಾಸ್ಕಿ, “ಯಾರ ಮನಸ್ಸು ಅತ್ಯಂತ ಪ್ರಶಾಂತವಾಗಿದೆಯೊ, ಒಂದಿಷ್ಟೂ ವಿಲಿತವಾಗುವುದಿಲ್ಲವೊ
ಅವನೇ ಮುಕ್ತ” ಎನ್ನುತ್ತಾರೆ. ಅಂದರೆ ಮುಕ್ತತೆ ಮನಸ್ಸಿನ ನಿರಾಳತೆಯನ್ನು ಅವಲಂಬಿಸಿದೆ.
ಮುಕ್ತನಾದವನು ಪ್ರಪಂಚದಲ್ಲೇ ಇರುತ್ತಾನೆ. ಆ ಪ್ರಪಂಚ ಅವನಲ್ಲಿ ಇಲ್ಲ. ಎಲ್ಲವನ್ನೂ ಸಾಕ್ಷಿಯಂತೆ
ನೋಡುತ್ತಾನೆ. ಆದರೆ ಯಾವುದೂ ಅವನದಲ್ಲ. ಹೊರಗೆ ಸಾಕಾರವಾದ ಸಂಭ್ರಮದ ಜಗತ್ತು, ಒಳಗೆ ನಿರಾಕಾರವಾದ ನಿರ್ವಯಲು. ಒಬ್ಬ ಮನುಷ್ಯ ಸಂಗೀತ ಕಚೇರಿಗೆ ಹೋದ. ಅಲ್ಲಿ ಕೊಳಲುವಾದನದ ಕಾರ್ಯಕ್ರಮ. ಅದೇನು ಸಂಗೀತ! ಅದೆಂಥ ವಾದ್ಯ! ಅವನ ಮನಸ್ಸು ಅವರ್ಣನೀಯವಾದ ಸಂತೋಷದಿAದ ತುಂಬಿ
ಹೋಯಿತು. ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಯ ಮೇಲೆ ಹೋದ. ಕೊಳಲುವಾದಕನ ಅಪ್ಪಣೆ ಪಡೆದು
ಕೊಳಲುಗಳನ್ನೆಲ್ಲ ಮುಟ್ಟಿನೋಡಿದ. ಅಯ್ಯೋ ಅವೆಲ್ಲ ಬಿದಿರಿನ ತುಂಡುಗಳು! ಕೊಳಲಿನ ಒಳಗೆ ಇಣುಕಿ ನೋಡಿದ. ಅಲ್ಲೇನಿದೆ? ಬರೀ ಖಾಲಿ. ವಾದಕನನ್ನು ಕೇಳಿದ, “ಒಳಗಡೆ ಏನೂ ಇಲ್ಲ, ಆದರೆ ಈ ಅದ್ಭುತ ನಾದ ಬಂದದ್ದು ಹೇಗೆ? ಎಲ್ಲಿಂದ?” ವೇಣುವಾದಕ ಮೆಲ್ಲನೆ ನಕ್ಕು ಹೇಳಿದ, “ಗೆಳೆಯಾ ಅದು ಖಾಲಿಯಾಗಿದ್ದರಿಂದಲೇ ಆ
ಸುಮಧುರ ನಾದ ಬಂದದ್ದು. ಅದು ತುಂಬಿದ್ದರೆ ಯಾವ ಧ್ವನಿಯೂ ಹೊರಡುತ್ತಿರಲಿಲ್ಲ”. ಹೊರಗಡೆಗೆ ಕೊಳಲಿನ
ಹೊಳಪಿದೆ ಆದರೆ ಒಳಗೆ ಖಾಲಿ. ಹೀಗೆ ಒಳಗೆ ಖಾಲಿಯಾಗುವುದೇ ಜೀವನ್ಮುಕ್ತನ ಲಕ್ಷಣ. ಅದನ್ನೇ ಕಗ್ಗ ಹೇಳುತ್ತದೆ. ನನ್ನ ಪದವಿಗಳ, ಅಧಿಕಾರಗಳ, ಹಮ್ಮುಬಿಮ್ಮುಗಳ ಕುಣಿಕೆಗಳನ್ನುಕಳೆದುಕೊಂಡು, ದಾಸನಂತೆ ಜೋಳಿಗೆಯನ್ನು ಹಿಡಿದು ಊರಿಂದೂರಿಗೆ ಹಾಡುತ್ತ ನಡೆದು, ಬದುಕಿನ ಭಾರಗಳನ್ನು ಕಳೆದು, ಜೀವನದಲ್ಲಿ ಬಂದ ಮೇಲು ಬೀಳುಗಳನ್ನು ಮರೆತು, ಮನವನ್ನು ಏಕಾಗ್ರಗೊಳಿಸಿ ಬಾಳ ನಡೆಸು ಎನ್ನುತ್ತದೆ. ಹಾಗೆ ನಡೆಯುವುದು ಸಾಧ್ಯವಾದೀತೇ? ತಲೆಯಲ್ಲಿ ಸತ್ಯದ ಬೆಳಕು, ಹೃದಯದಲ್ಲಿ ಪ್ರೇಮದ ಗಂಗೆ ಹರಿದಾಗ ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT