ಬೆನ್ನಿನಗಲವನಳೆದು ಹೊರೆಗೆ ನೀನದನೊಡ್ಡು |
ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ||
ಬನ್ನ ನಿನಗೊದಗಲದನಾತ್ಮ ಶಿಕ್ಷಣವೆನ್ನು |
ಮಾನ್ಯದೊಪ್ಪಂದವಿದು – ಮಂಕುತಿಮ್ಮ || 579 ||
ಪದ-ಅರ್ಥ: ಬೆನ್ನಿನಗಲವನಳೆದು=ಬೆನ್ನಿನ+
ಅಗಲವನು+ಅಳೆದು, ನೀನದನೊಡ್ಡು=ನೀನು+ಅದನು+ಒಡ್ಡು, ತನ್ನದೆನುವುದನು=
ತನ್ನದು+ಎನುವುದನು, ಬನ್ನ=ಭಂಗ, ಸೋಲು, ನಿನಗೊದಗಲದನಾತ್ಮ ಶಿಕ್ಷಣವೆನ್ನು=ನಿನಗೆ+ಒದಗಲು+ಅದನು+ಆತ್ಮಶಿಕ್ಷಣ+ಎನ್ನು, ಮಾನ್ಯದೊಪ್ಪಂದವಿದು=ಮಾನ್ಯದ(ಒಪ್ಪುವ)+
ಒಪ್ಪಂದ+ಇದು.
ವಾಚ್ಯಾರ್ಥ: ನಿನ್ನ ಬೆನ್ನಿನ ಅಗಲವನ್ನು ಅಳೆದು, ಎಂದರೆ ನಿನ್ನ ಶಕ್ತಿಯ ಮಿತಿಗಳನ್ನು ಅರಿತು, ಕಾರ್ಯಕ್ಕೆ ನೀನು ಒಪ್ಪಿ ಭಾರ ಹೊರು. ವಿಧಿ ಯಾವುದನ್ನಾದರೂ ತನ್ನದು ಎಂದರೆ ಅದಕ್ಕೆ ಅದನ್ನು ಬಿಟ್ಟು ಬಿಡು. ಮಾಡುವ ಕಾರ್ಯದಲ್ಲಿ ಸೋಲುಂಟಾದರೆ ಅದನ್ನು ಆತ್ಮಶಿಕ್ಷಣವೆಂದು ಭಾವಿಸು. ಇದು ನಿನಗೂ ಮತ್ತು ವಿಧಿಗೂ ಇರುವ ಒಪ್ಪಿತವಾದ ಒಪ್ಪಂದ.
ವಿವರಣೆ: ಈಶಾವಾಸ್ಯ ಉಪನಿಷತ್ತಿನ
ಮೊದಲನೆಯ ಮಂತ್ರ,
ಈಶಾವಾಸ್ಯಮಿದಗ್‌ಂ ಸರ್ವಂ |
ಯತ್ಯಿಂಚ ಜಗತ್ಯಾಂ ಜಗತ್ ||
ತೇನ ತ್ಯಕ್ತೇನ ಭುಂಜೀಥಾಃ |
ಮಾಗೃಧ: ಕಸ್ಯಸ್ಪಿತ್ ಧನಂ ||
‘ಜಗತ್ತಿನಲ್ಲಿ ಯಾವುಯಾವುದು ಇದೆಯೋ ಅದೆಲ್ಲ ಈಶ್ವರನ ಮನೆ ಮತ್ತು ಅದಕ್ಕೆಲ್ಲ ಈಶ್ವರನೇ ಮನೆ. ಈ ಜಗತ್ತನ್ನು ನೀನು ನನ್ನದಲ್ಲವೆಂಬ ಭಾವದಿಂದ ಅನುಭವಿಸತಕ್ಕದ್ದು. ಇದನ್ನು ಈಶ್ವರನ ಪ್ರಸಾದವೆಂದು ಸ್ವೀಕರಿಸತಕ್ಕದ್ದು. ಯಾರೊಬ್ಬರ ಒಡವೆಗಾಗಿಯೂ ಆಸೆಪಡಬೇಡ’.
ಅದೇ ಉಪನಿಷತ್ತಿನ ಎರಡನೇ ಮಂತ್ರ ಹೇಳುತ್ತದೆ,
ಕುರ್ವನ್ನೇವೇಹ ಕರ್ಮಾಣಿ |
ಜಿಜೀವಿಷೇಚ್ಛತಗ್‌ಂ ಸಮಾಃ ||
ಏವಂ ತ್ವಯಿ ನಾನ್ಯಥೇತೋಸ್ತಿ |
ನ ಕರ್ಮ ಲಿಪ್ಯತೇ ನರೇ ||
‘ಈ ಲೋಕದಲ್ಲಿ ನೀನು ಮಾಡಬೇಕಾದ ಕರ್ತವ್ಯಗಳನ್ನು ಮಾಡಿಕೊಂಡೇ ನೂರು ವರ್ಷ ಬಾಳಲು ಮನಸ್ಸು ಮಾಡು. ಈಶ್ವರ ಸೇವಾಬುದ್ಧಿಯಿಂದ ಕೆಲಸ ಮಾಡಿದರೆ ನಿನಗೆ ಕರ್ಮದ ದೋಷ ತಟ್ಟುವುದಿಲ್ಲ. ಸದ್ಗತಿಯನ್ನು ಪಡೆಯಲು ಅದಲ್ಲದೆ ಬೇರೆ ದಾರಿಯಿಲ್ಲ’.
ಇವೆರಡೂ ಮಂತ್ರಗಳ ಅರ್ಥವನ್ನು ಸಮನ್ವಯಿಸಿದರೆ ಈ ಕಗ್ಗದ ಅರ್ಥ ಹೊಳೆಯುತ್ತದೆ. ನಾವು ಸದಾ ಕರ್ತವ್ಯಪರರಾಗಿಯೇ ಇರಬೇಕು. ಇದು ಈಶ್ವರನ ಅಥವಾ ವಿಧಿಯ ಪ್ರಪಂಚ ಎಂದು ತಿಳಿದಿದ್ದೂ ಪ್ರಯತ್ನ ಮಾಡಲೇಬೇಕು. ನಮ್ಮ ಶಕ್ತಿಯ ಮಿತಿಗಳನ್ನು ಅರಿತು (ಬೆನ್ನಿನ ಅಗಲವನ್ನು ಅಳೆದು), ಆ ಮಿತಿಯನ್ನು ಮೀರುವವರೆಗೆ ದುಡಿಯಬೇಕು. ಕೆಲವು ಕಾರ್ಯಗಳು ಸಾಧ್ಯವಾಗದಾಗ ಅವು ವಿಧಿಯ ಮುಡಿಪು ಎಂದು ಅದಕ್ಕೇ ಬಿಟ್ಟುಬಿಡು. ಕಾರ್ಯವಾಗದೇ ಭಂಗ ಬಂದದ್ದನ್ನು ವಿಧಿ ನಿನಗೆ ನೀಡಿದ ಆತ್ಮಶಿಕ್ಷಣ ಎಂದು ಬಗೆ. ಯಾಕೆಂದರೆ ಉಪನಿಷತ್ತಿನ ಮಾತಿನಂತೆ, ಈ ಪ್ರಪಂಚ ಈಶ್ವರನದು, ಕರ್ತವ್ಯ ನನ್ನದು. ಸಾಧನೆಯಾದರೆ ಸಂತೋಷ, ಆಗದಿದ್ದರೆ ವಿಧಿ ನೀಡಿದ ಆತ್ಮಶಿಕ್ಷಣ. ಈ ತರದ ಮನುಷ್ಯ ಪ್ರಯತ್ನ ಮತ್ತು ವಿಧಿಗಳ ನಡುವಿನ ಒಪ್ಪಂದ ನಿಷ್ಕಾಮ ಕರ್ಮಕ್ಕೆ ಅವಶ್ಯವಾದದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.