ADVERTISEMENT

ಬೆರಗಿನ ಬೆಳಕು | ಶಾಶ್ವತ ಮರೆವಿನ ಮುಸುಕು

ಡಾ. ಗುರುರಾಜ ಕರಜಗಿ
Published 7 ಆಗಸ್ಟ್ 2022, 21:29 IST
Last Updated 7 ಆಗಸ್ಟ್ 2022, 21:29 IST
   

ಅಂತೊ ಇಂತೋ ಎಂತೊ ಜೀವಕಥೆಮುಗಿಯುವುದು |
ಅಂದೊ ಇಂದೋ ಎಂದೊ ಜನುಮಕಳೆಯುವುದು||
ಒಂದೆಮರೆವಿನಮುಸುಕುಮುಸುಕಲಿಹುದೆಲ್ಲವನು|

ಸಂತಸದ ಮಾತಿಷ್ಟೆ – ಮಂಕುತಿಮ್ಮ || 685 ||

ಪದ-ಅರ್ಥ: ಮುಸುಕಲಿಹುದೆಲ್ಲವನು=ಮುಸುಕಲು+ ಇಹುದು+ಎಲ್ಲವನು.

ವಾಚ್ಯಾರ್ಥ: ಹೀಗೋ, ಹಾಗೋ ಈ ಜೀವಕಥೆ ಮುಗಿಯುತ್ತದೆ. ಎಂದೋ ಒಂದು ದಿನ ಈ ಜನ್ಮ ಕಳೆಯುತ್ತದೆ. ನಂತರ ಎಲ್ಲವೂಮರೆವಿನಮುಸುಕಿನಲ್ಲಿ ಮುಚ್ಚಿ ಹೋಗುತ್ತದೆ. ಅದೇ
ಸಂತೋಷದ ವಿಷಯ.

ವಿವರಣೆ: ಈ ಜಗತ್ತಿನ ವಿಶೇಷ ಅದರ ಆವರ್ತನ ಗುಣ. ಎಲ್ಲಿಂದ ಪ್ರಾರಂಭವಾಗುತ್ತದೆಯೋ ಮತ್ತೆ ಅಲ್ಲಿಗೇ ಹೋಗಿ ಮುಕ್ತಾಯವಾಗುತ್ತದೆ. ಹೀಗೆ ಅದರ ಚಕ್ರ ಸುತ್ತುತ್ತಿರುತ್ತದೆ. ಪುಟ್ಟದಾಗಿ ಮೊಟ್ಟೆಯಂತಿದ್ದದ್ದು ಸಿಡಿದು ದಿಕ್ಕು ದಿಕ್ಕುಗಳಿಗೆ ಹಬ್ಬಿ ವಿಸ್ತಾರಗೊಳ್ಳುತ್ತ ಅನಂತ ವಿಶ್ವವಾಯಿತು. ಮುಂದೊಂದು ದಿನ ಅದು
ಆಕುಂಚನಗೊಳ್ಳುತ್ತ, ಚಿಕ್ಕದಾಗುತ್ತ ಮತ್ತೆ ಮೊದಲಿನ ಅಣುರೂಪಕ್ಕೆ ಬರುತ್ತದೆ. ಮತ್ತೆ ವಿಸ್ತಾರ, ಆಕುಂಚನಗಳ ಚಕ್ರ ತಿರುಗುತ್ತದೆ. ಒಂದು ಬೀಜ ತನ್ನನ್ನು ಸೀಳಿಕೊಂಡು ವೃಕ್ಷವಾಗುತ್ತದೆ. ವೃಕ್ಷದಿಂದ ಅನೇಕ ಬೀಜಗಳು. ಆ ಬೀಜಗಳಿಂದ ಮತ್ತನೇಕ ವೃಕ್ಷಗಳು. ಬೀಜದ ಸಾವು, ಮರದ ಬದುಕು. ಇದೊಂದು ಚಕ್ರ, ತಾಯಗರ್ಭದಲ್ಲಿ ಅಣುಮಾತ್ರದ ಜೀವಸ್ಫುರಣ. ಅಲ್ಲಿಂದ ಬೆಳವಣಿಗೆ. ಮಗು, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ, ಕೊನೆಗೆ ಅನಿವಾರ್ಯವಾದ ಸಾವು. ಅದು ಮತ್ತೊಂದು ಹುಟ್ಟಿಗೆ ಕಾರಣ. ಇದೊಂದು ಆವರ್ತನ. ಚಿರಂತನವಾದ ಆವರ್ತನ.

ಈ ಆವರ್ತನದಲ್ಲಿ ಒಂದು ನಿಲ್ದಾಣ ದೇಹ. ದೇಹಭಾವ ಬಲಿತ ಕೂಡಲೇ ಅದರೊಂದಿಗೆ ಮೋಹ, ಲೋಭ ಮುಂತಾದ ಪಾಶಗಳು ಬಿಗಿಯತೊಡಗುತ್ತವೆ. ಬುದ್ಧಿವಂತರಿಗೂ ದೇಹವೇ ನಾನು ಎಂಬಭಾವ ಬಲಿಯುತ್ತದೆ. ದೇಹ ಪ್ರಜ್ಞೆ ಬಲವಾಗಿದ್ದಾಗ ಮರಣದ, ದೇಹನಾಶದ ಕಲ್ಪನೆ ಬರುವುದೇ ಇಲ್ಲ. ದೇಹ ಅಶಕ್ತವಾದಂತೆ ಸಾವಿನ ದಂಡೆ ಕಾಣತೊಡಗುತ್ತದೆ. ಯಾವ ದೇಹ ಅಭಿಮಾನಕ್ಕೆ ಕಾರಣವಾಗಿತ್ತೋ, ಅದು ಈಗ ಭಾರವಾಗತೊಡಗುತ್ತದೆ. ಸಾಕು ಎನ್ನಿಸುತ್ತದೆ. ಹೇಗೋ, ಎಂದೋ, ಈ ಜನ್ಮ ಕರಗಿ ಹೋಗಲಿ, ಕರಗುವುದು ಮಾತ್ರವಲ್ಲ ಮತ್ತೊಮ್ಮೆ ಬರದಿರಲಿ, ಎಲ್ಲವೂ ಮರವೆಯಲ್ಲಿ ಮುಚ್ಚಿ ಹೋಗಲಿ ಎನ್ನುತ್ತಾನೆ ಸಾಧಕ. ದೇಹ ಬರೀನಾಶವಾಗುವುದಲ್ಲ, ಅದು ಶಿವಾರ್ಪಣವಾಗಿ ಪುನರ್ಜನ್ಮವಿಲ್ಲದಂತಾಗಬೇಕು ಎಂದು ಆಶಿಸುತ್ತಾನೆ.
ಪಾವನಾತ್ಮರಾದ ಶ್ರೀ ಶಿವಯೋಗಿ ಶಿವಾಚಾರ್ಯರು ರಚಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಒಂದು ಸುಂದರವಾದ ಮಾತಿದೆ:

ADVERTISEMENT

ಯದಾ ಶಿವಾಯ ಸ್ಪಾತ್ಮಾನುದತ್ತವಾನ್ದೇಶಿಕಾತ್ಮನೇ |

ತದಾ ಶೈವೊ ಭವೇದ್ದೇವಿ ತ ತತೋಸ್ತಿ ಪುನರ್ಭವ:||

‘ಹೇ ದೇವಿ, ಶಿವಸ್ಪರೂಪದಂತಿರುವ ಶ್ರೀ ಗುರುವಿಗೆ ದೇಹವನ್ನು ಅರ್ಪಿಸಿದಾಗ ಜೀವನು ದೇವನೇ ಆಗುತ್ತಾನೆ. ಹೀಗಾಗಿ ಅವನಿಗೆ ಪುನರ್ಜನ್ಮವಿಲ್ಲ’.ಹೀಗೆ ಜೀವಕಥೆ, ದೇಹಕಥೆ ಮುಗಿಯುತ್ತದೆ. ಜನ್ಮದ ಭಾರ ಕಳೆಯುತ್ತದೆ. ಆದರೆ ಅದು ಮತ್ತೊಮ್ಮೆ ಬಾರದಂತೆ ಶಾಶ್ವತವಾದಮರೆವಿನಮುಸುಕಲಿ ಎಂಬುದು ಪ್ರಾರ್ಥನೆ. ಹಾಗಾದರೆ ಅದೊಂದು ಸಂತೋಷ. ಕಗ್ಗದ ಧ್ವನಿ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.