ADVERTISEMENT

ಅರ್ಥವಾಗದ ಮನಸ್ಸು

ಡಾ. ಗುರುರಾಜ ಕರಜಗಿ
Published 20 ಅಕ್ಟೋಬರ್ 2019, 18:33 IST
Last Updated 20 ಅಕ್ಟೋಬರ್ 2019, 18:33 IST

ಪದರ ಪದರಗಳಿಹವು ಗಂಟುಗಂಟುಗಳಿಹವು |
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||
ಇದಮಿತ್ಥಮೆಲ್ಲಿಯದು ಮನುಜಸ್ವಭಾವದಲಿ ? |
ವಿಧಿಯ ಕೈಚಿತ್ರವದು – ಮಂಕುತಿಮ್ಮ || 199 ||

ಪದ-ಅರ್ಥ: ವಾಕ್ಚರ್ಯೆಗಳಲಿ=ವಾಕ್(ಮಾತು)+ಚರ್ಯೆ(ನಡತೆ)ಗಳಲಿ, ಇದಮಿತ್ಥಂ=ಇದು ಹೀಗೆಯೇ ಸರಿಯಾದದ್ದು, ಕೈಚಿತ್ರ=ವಿಚಿತ್ರ.

ವಾಚ್ಯಾರ್ಥ: ಮನುಷ್ಯನ ಮನಸ್ಸು, ಸ್ವಭಾವ ಹೀಗೆಯೇ ಎಂದು ಖಚಿತವಾಗಿ ಹೇಳುವುದು ಹೇಗೆ? ಅವನ ಹೃದಯದ, ಬುದ್ಧಿಯ, ಮಾತು ಮತ್ತು ಕ್ರಿಯೆಗಳ ಪದರು ಪದರುಗಳಲ್ಲಿ ಗಂಟುಗಂಟುಗಳು ಸೇರಿಹೋಗಿವೆ.
ವಿವರಣೆ: ಮನಸ್ಸೆಂಬುದು ಭಾವನೆಗಳನ್ನು, ಅರಿವನ್ನು ಮತ್ತು ನಡವಳಿಕೆಗಳನ್ನು ಏಕೀಕೃತವಾಗಿ ವಿವರಿಸುವ ವ್ಯವಸ್ಥೆ, ನಮ್ಮ ಕೋಪತಾಪಗಳು, ದೃಷ್ಟಿಕೋನಗಳು, ಬುದ್ಧಿವಂತಿಕೆ, ಕಲಿಕೆ, ನೆನಪುಗಳು, ಏಕಾಗ್ರತೆ, ದೇಹದ ಅಂಗಾಂಗಗಳ ನಿಯಂತ್ರಣ, ಪರಿಸರದೊಂದಿಗೆ ವ್ಯವಹರಿಸುವಿಕೆ, ತರ್ಕ, ತೀರ್ಮಾನಿಸುವ ಶಕ್ತಿ, ಕಲ್ಪನೆ, ಹೊಂದಾಣಿಕೆ, ಮುಂದಾಲೋಚನೆ ಇವುಗಳೊಂದಿಗೆ ತನ್ನತನದ ಅರಿವು ಇವೆಲ್ಲ ಮನಸ್ಸಿನ ನಾನಾ ವಿಧದ ಕಾರ್ಯಲಕ್ಷಣಗಳು ಹಾಗೂ ಅದು ನಿಭಾಯಿಸುವ ಜವಾಬ್ದಾರಿಗಳು. ಇಷ್ಟೊಂದು ಜವಾಬ್ದಾರಿಯನ್ನು ಸಮಾನವಾಗಿ ನಿರ್ವಹಿಸುವ ಮನುಷ್ಯನ ಮನಸ್ಸು ಯಾವಾಗ, ಹೇಗೆ ಬದಲಾದೀತು ಎಂಬುದನ್ನು ಹೇಳುವುದು ಕಷ್ಟ.

ADVERTISEMENT

ಮನೋವಿಜ್ಞಾನಿಗಳ ವಿವರಣೆಯಂತೆ ಮನಸ್ಸು ಒಂದು ತಳವಿಲ್ಲದ ಬುಟ್ಟಿ. ಮನಸ್ಸು ಯಾವುದನ್ನೂ ಮರೆಯುವುದಿಲ್ಲ. ಪ್ರತಿಯೊಂದು ಅನುಭವವೂ ಅದರಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ – ಅಟ್ಟದ ಮೇಲೆ ತುಂಬಿದ ಸಾಮಾನುಗಳಂತೆ. ಅಟ್ಟವನ್ನು ಹತ್ತಿ ಯಾವುದೋ ವಸ್ತುವನ್ನು ಹುಡುಕಲು ಹೋದಾಗ ಮತ್ತಾವುದೋ ಹಳೆಯ ವಸ್ತು ದೊರಕಿದಾಗ ‘ಎಲಾ, ಇದು ಇಲ್ಲೆ ಇದೆಯಲ್ಲ, ಕಳೆದು ಹೋಯ್ತು ಎಂದುಕೊಂಡಿದ್ದೆ’ ಎನ್ನಿಸಿಲ್ಲವೇ? ನಾವು ಹುಟ್ಟಿದ ಕ್ಷಣದಿಂದ ಈ ಕ್ಷಣದವರೆಗಿನ ಪ್ರತಿಯೊಂದು ನೆನಪು ಅಲ್ಲಿದೆ. ಯಾವುದೋ ನೆನಪು ಮತ್ತೊಂದನ್ನು ಕೆದಕಿ ಮೇಲಕ್ಕೆ ತರುತ್ತದೆ. ಪ್ರವಾಸದಲ್ಲಿರುವಾಗ ಒಂದು ಸ್ಥಳವನ್ನು ನೋಡುತ್ತ ತಕ್ಷಣ ಇದನ್ನು ಯಾವಾಗಲೋ ನೋಡಿದ್ದೆ ಎನ್ನಿಸಿ ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ಥಟ್ಟನೆ ನೆನಪಿನ ಮೇಲ್ಪದರಕ್ಕೆ ಬಂದು ಬಿಡುತ್ತವೆ.
ಹೀಗೆ ಮನಸ್ಸು ಪದರಪದರವಾಗಿ ಹರಡಿಕೊಂಡಿದೆ. ಪ್ರತಿಯೊಂದು ಪದರಿನಲ್ಲಿಯೂ ಸಹಸ್ರಾರು ಘಟನೆಗಳು ಗಂಟುಗಂಟಾಗಿ ಕುಳಿತಿವೆ. ಅದಕ್ಕೇ ಮನೋವಿಜ್ಞಾನಿಗಳು ಮನುಷ್ಯನನ್ನು ಸಂಮೋಹನಕ್ಕೆ ಗುರಿಮಾಡಿ ಮನಸ್ಸನ್ನು ಹಿಂದೆ ಹಿಂದಕ್ಕೆ ಕರೆದೊಯ್ದು ಆ ಪದರುಗಳಲ್ಲಿ ಅಡಗಿದ್ದ ಗಂಟುಗಳನ್ನು ಬಿಡಿಸಲು ಪ್ರಯತ್ನಿಸುತ್ತಾರೆ.

ಈ ಕಗ್ಗ ಹೇಳುವುದು ಅದನ್ನೇ. ಮನಸ್ಸಿನ ಪದರು ಪದರುಗಳಲ್ಲಿ ಗಂಟುಗಂಟಾಗಿರುವ ಅನುಭವಗಳು ನಮ್ಮ ಹೃದಯದ ಭಾವನೆಗಳ ಅಭಿವ್ಯಕ್ತಿಯಲ್ಲಿ, ಬುದ್ಧಿಯ ಚಾತುರ್ಯದಲ್ಲಿ ಮತ್ತು ನಮ್ಮ ಮಾತು, ನಡತೆಗಳಲ್ಲಿ ಹೊರಬರುತ್ತವೆ. ಆದರೂ ಮನಸ್ಸು ಹೀಗೆಯೇ ಇರುತ್ತದೆ ಎಂದು ದೃಢವಾಗಿ ಹೇಳುವುದು ಅಸಾಧ್ಯ. ಕಗ್ಗ ಇದನ್ನು ವಿಧಿಯ ವಿಚಿತ್ರ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.