ADVERTISEMENT

ಬೆರಗಿನ ಬೆಳಕು | ಆತ್ಯಂತಿಕ ಸ್ನೇಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 20:00 IST
Last Updated 10 ಏಪ್ರಿಲ್ 2020, 20:00 IST
   

ಹಿಂದೆ ಹಿಮಾಲಯದಲ್ಲಿ ಗಂಗಾನದಿಯ ದಂಡೆಯ ಮೇಲೆ ಒಂದು ಬಹುದೊಡ್ಡದಾದ ಔದುಂಬರ ವೃಕ್ಷ (ಅತ್ತಿಯ ಮರ) ಇತ್ತು. ಮರದಲ್ಲಿ ಸಹಸ್ರಾರು ಗಿಳಿಗಳು ವಾಸವಾಗಿದ್ದವು. ಬೇಸಿಗೆ ಬಂದಾಗ ಹಣ್ಣುಗಳೆಲ್ಲ ಉದುರಿ ಹೋದಾಗ ಗಿಳಿಗಳು ಬೇರೆ ಕಡೆಗೆ ಹಾರಿ ಹೋಗುತ್ತಿದ್ದವು. ಆದರೆ ಒಂದು ಗಿಳಿ ಮಾತ್ರ ಒಂದು ಹಣ್ಣು ಇರದಿದ್ದರೂ, ಸಿಪ್ಪೆಯನ್ನೋ, ಎಲೆಯನ್ನೋತಿಂದು ಗಂಗಾನದಿಯ ನೀರು ಕುಡಿದು ಮರದಲ್ಲೇ ಇರುತ್ತಿತ್ತು. ಅದು ಅತ್ಯಂತ ಅಲ್ಪತೃಪ್ತವಾದ ಪಕ್ಷಿ. ಅದರ ಈ ಅಲ್ಪತೃಪ್ತಿಯ ಗುಣ ಮತ್ತು ಮರದ ಪ್ರೀತಿ ಎಷ್ಟು ಆದರ್ಶವಾಗಿತ್ತೆಂದರೆ ಅವುಗಳಿಂದಾಗಿ ಸ್ವರ್ಗದಲ್ಲಿ ಇಂದ್ರನ ಸಿಂಹಾಸನ ಕಂಪಿಸಿತಂತೆ. ತನ್ನ ದಿವ್ಯಜ್ಞಾನದಿಂದ ಇದನ್ನು ತಿಳಿದ ಇಂದ್ರ ಗಿಳಿಯನ್ನು ಪರೀಕ್ಷಿಸಲೆಂದು ತನ್ನ ಶಕ್ತಿಯಿಂದ ಆ ಮರವನ್ನು ಪೂರ್ತಿ ಒಣಗಿಸಿಬಿಟ್ಟ. ಆದರೆ ಗಿಳಿ ಮಾತ್ರ ಆ ಮೋಟು ಮರದಲ್ಲೇ ಒಂದು ರಂಧ್ರವನ್ನು ಮಾಡಿಕೊಂಡು, ಆಗಾಗ ಮರದ ಕಾಂಡದಿಂದ ಒಸರುತ್ತಿದ್ದ ರಸವನ್ನು ಕುಡಿದು, ಬಿಸಿಲು-ಗಾಳಿಗಳನ್ನು ಲೆಕ್ಕಿಸದೆ, ಬೇರೆ ಕಡೆಗೆ ಹೋಗದೆ ಅಲ್ಲಿಯೇ ಉಳಿಯಿತು.

ಸಂಪ್ರೀತನಾದ ಇಂದ್ರ ಭೂಮಿಗೆ ಬಂದು ಅತ್ತಿಯ ಮರದ ಕೆಳಗೆ ಕುಳಿತ. ಗಿಳಿಗೆ ಕೇಳಿಸುವಂತೆ ಮಾತನಾಡಿದ, ‘ಮರದಲ್ಲಿ ಹಣ್ಣುಗಳು ತುಂಬಿರುವಾಗ ಎಲ್ಲ ಪಕ್ಷಿಗಳು ಅಲ್ಲಿಗೆ ಬಂದು ನಿಲ್ಲುತ್ತವೆ. ಹಣ್ಣುಗಳೆಲ್ಲ ಉದುರಿ ಹೋದ ಮೇಲೆ ಬೇರೆ ಕಡೆಗೆ ಹಾರಿ ಹೋಗುವುದು ಸಾಮಾನ್ಯ’ ಗಿಳಿ ಏನೂ ಮಾತನಾಡಲಿಲ್ಲ. ಇಂದ್ರ ಗಿಳಿಯನ್ನೇ ಕೇಳಿದ ‘ಹೇ, ಸುಂದರವಾದ ಗಿಳಿಯೆ, ನಿನ್ನ ರೆಕ್ಕೆಗಳು ಗಟ್ಟಿಯಾಗಿವೆ. ಆದರೂ ಈ ಒಣಮರದ ಪೊಟರೆಯಲ್ಲಿ ಕುಳಿತು ಏನು ಧ್ಯಾನ ಮಾಡುತ್ತಿರುವೆ? ಗಿಡದಲ್ಲಿ ಒಂದು ಹಣ್ಣು ಇಲ್ಲ, ಒಂದು ಎಲೆಯೂ ಇಲ್ಲ. ನೀನು ಏಕೆ ಈ ಮೋಟು ಮರವನ್ನು ಬಿಟ್ಟು ಹಾರಿ ಹೋಗುವುದಿಲ್ಲ?’. ಗಿಳಿ ಹೇಳಿತು, ‘ಇಂದ್ರ, ನಾನು ಈ ಮರಕ್ಕೆ ಕೃತಜ್ಞನಾಗಿದ್ದೇನೆ. ಅದನ್ನು ಬಿಟ್ಟು ಹೇಗೆ ಹೋಗಲಿ?’. ಮತ್ತೆ ಇಂದ್ರ ಹೇಳಿದ, ‘ಇದೆಂಥ ಕೃತಜ್ಞತೆ? ಅತ್ಯಂತ ಮಿತ್ರರಾಗಿರುವವರು ಸಹಿತ ಕ್ಷೀಣಕಾಲದಲ್ಲಿ, ಅವಸಾನಕಾಲದಲ್ಲಿ, ಕೈಬಿಟ್ಟು ಹೋಗಿಬಿಡುತ್ತಾರೆ. ಈ ಮರ ನಿನ್ನ ಸಂಬಂಧಿಯೂ ಅಲ್ಲ’. ‘ಇಂದ್ರ, ಈ ಮರ ನನ್ನ ಮಿತ್ರ, ಸಂಬಂಧಿ ಮತ್ತು ನಾನು ಇದುವರೆಗೂ ಬದುಕಲು ಕಾರಣವಾದದ್ದು. ನಾನು ಬದುಕಬೇಕೆಂದು ಅದರ ಕ್ಷೀಣಾವಸ್ಥೆಯಲ್ಲಿ ಅದನ್ನು ಬಿಟ್ಟು ಹೋಗಲಾರೆ. ಅದು ಧರ್ಮವಲ್ಲ’ ಎಂದಿತು ಗಿಳಿ. ಅದರ ಮಾತನ್ನು ಕೇಳಿ ಸಂತುಷ್ಟನಾದ ಇಂದ್ರ, ‘ಗಿಳಿ, ನೀನು ಸಾಮಾನ್ಯನಲ್ಲ, ಈ ಪರಿಯ ಮೈತ್ರೀಭಾವ ಜ್ಞಾನಿಗಳಿಗೆ ಮಾತ್ರ ಸಾಧ್ಯ. ನಿನಗೆ ಏನು ಬೇಕೋ ಕೇಳು, ವರವನ್ನು ಕೊಡುತ್ತೇನೆ’ ಎಂದ. ಗಿಳಿ, ‘ನನಗೇನೂ ಬೇಡ. ನನ್ನ ಮಿತ್ರನಾದ ಮರಕ್ಕೆ ಪುನಃ ಜೀವ ತುಂಬಲಿ, ಸಿಹಿಯಾದ, ಪಕ್ವವಾದ ಹಣ್ಣುಗಳು ಸುರಿಯಲಿ, ಇದರ ರೆಂಬೆಕೊಂಬೆಗಳು ಹಸಿರಿನಿಂದ ಹರಡಲಿ. ಈ ಮರ ನನ್ನಂತಹ ಸಾವಿರಾರು ಪಕ್ಷಿಗಳಿಗೆ ಮಿತ್ರನಾಗಿ ಸಹಸ್ರ ಕಾಲ ಬಾಳಲಿ’ ಎಂದು ಕೇಳಿತು ಇಂದ್ರ ಗಿಳಿಯ ಮರವನ್ನು ಮನ್ನಿಸಿದ. ಮರುಕ್ಷಣ ಬೃಹತ್ ವೃಕ್ಷ, ಎಲೆ, ಕೊಂಬೆ, ಹೂವು, ಹಣ್ಣುಗಳಿಂದ ನಳನಳಿಸತೊಡಗಿತು. ಮಿತ್ರ ಗಿಳಿಗೆ ಅತ್ಯಂತ ಸಂತೋಷವಾಯಿತು.

ನಿಜವಾದ ಸ್ನೇಹ ಇದು. ತನಗಾಗಿ ಏನನ್ನೂ ಕೇಳದೆ ಸ್ನೇಹಿತನ ಉನ್ನತಿಯನ್ನು ಬಯಸುವುದು ಅತ್ಯಂತ ಅಪರೂಪದ, ಶ್ರೇಷ್ಠ ಗುಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.