ADVERTISEMENT

ಪ್ರಯತ್ನವಿಲ್ಲದ ಕುಡಿಕೆ ಹೊನ್ನು

344

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
   

ಹಿಂದೆ ಬ್ರಹ್ಮದತ್ತ ವಾರಾಣಾಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ನಗರಶ್ರೇಷ್ಠಿಯ ಮಗನಾಗಿ ಹುಟ್ಟಿದ. ಮುಂದೆ ತನ್ನ ತಂದೆಯಿಂದ ವ್ಯವಹಾರವನ್ನೆಲ್ಲ ಚೆನ್ನಾಗಿ ಕಲಿತುಕೊಂಡು, ತಂದೆಯ ಕಾಲಾನಂತರ ತಾನೇ ನಗರ ಶ್ರೇಷ್ಠಿಯಾದ. ಅವನಿಗೆ ಒಬ್ಬ ಮಗ ಜನಿಸಿದ. ಬೋಧಿಸತ್ವ ಬದುಕಿನುದ್ದಕ್ಕೂ ದಾನ ಧರ್ಮಗಳನ್ನು ಮಾಡುತ್ತ ಬಂದು ಮರಣ ಹೊಂದಿದ ನಂತರ ಶಕ್ರ ದೇವರಾಜನಾದ. ಅಷ್ಟು ದಾನ ಧರ್ಮಗಳಿಗೆ ಹಣ ವ್ಯಯಸಿದರೂ ಅವನ ಬಳಿ ಅಪಾರ ಸಂಪತ್ತು ಉಳಿದಿತ್ತು. ನಲವತ್ತು ಕೋಟಿ ಹಣವನ್ನು ಮನೆಯ ನೆಲದಲ್ಲಿಯೇ ಹೂಳಿಡಲಾಗಿತ್ತು. ಮುಂದೆ ಮಗನ ವ್ಯವಹಾರಕ್ಕೆ ಬೇಕಾದೀತು ಎಂಬ ಜಾಗ್ರತೆಯಿಂದ ಇಟ್ಟ ಹಣ ಅದು.

ಆದರೆ ಮಗ ಅಡ್ಡದಾರಿ ಹಿಡಿದ. ನಗರದಲ್ಲಿ ಅಲ್ಲಲ್ಲಿ ಮಂಟಪ ಕಟ್ಟಿಸಿ, ಜನರನ್ನು ಗುಂಪುಗುಂಪಾಗಿ ಕರೆದುಕೊಂಡು ಹೋಗಿ, ಸುರಾಪಾನ ಮಾಡಿ, ಕುಣಿದಾಡಿ ಸಮಯ ವ್ಯರ್ಥ ಮಾಡುತ್ತಿದ್ದ. ಊರಲ್ಲಿದ್ದ ದೊಂಬರು, ಹಾಡುಗಾರರು, ನೃತ್ಯಗಾತಿಯರನ್ನು ಕರೆದು ಅವರಿಗೆ ಸಾವಿರ, ಸಾವಿರ ಹಣ ಕೊಟ್ಟು ಅವರನ್ನು ಕುಡಿತಕ್ಕೆ ಹಚ್ಚಿದ. ಸುರಾಪಾನದ ಚಟದ ಹಿಂದೆಯೇ ಮಾಂಸಾಹಾರದ ಚಟ, ನಂತರ ಹೆಂಗಸರ ಚಟ ಈತನಿಗೆ ಹತ್ತಿಕೊಂಡಿತು. ಆತನಿಗೆ ದಿನಕ್ಕೊಬ್ಬ ಹೊಸ ಹೆಣ್ಣು ಬೇಕು. ಅದಕ್ಕೆ ಎಷ್ಟು ಹಣ ಕೊಟ್ಟರೂ ಆತ ಹಿಂಜರಿಯುತ್ತಿರಲಿಲ್ಲ. ಬೆಳಗಾದ ತಕ್ಷಣ ಊರಿನಲ್ಲಿ ನೃತ್ಯವೆಲ್ಲಿ, ಹಾಡುಗಾರಿಕೆ ಎಲ್ಲಿ ಎಂದು ಕೇಳುತ್ತ ಬೀದಿ ಬೀದಿ ಅಲೆಯುತ್ತಿದ್ದ. ಹೀಗೆ ಕುಳಿತು ತಿಂದರೆ ಕೂಡಿಟ್ಟ ಹಣ ಎಷ್ಟು ದಿನ ಬಂದೀತು? ಕೆಲವೇ ವರ್ಷಗಳಲ್ಲಿ ಎಲ್ಲ ಹಣವನ್ನು ಕಳೆದುಕೊಂಡು ದರಿದ್ರನಾಗಿಬಿಟ್ಟ. ಊಟಕ್ಕೆ ಗತಿಯಿಲ್ಲದೆ ಚಿಂದಿಯುಟ್ಟು ನಗರದಲ್ಲಿ ಅಲೆಯತೊಡಗಿದ. ಈತನ ತಂದೆಯ ಸ್ನೇಹಿತನಾಗಿದ್ದ ಮತ್ತೊಬ್ಬ ಶ್ರೇಷ್ಠಿ ತನ್ನ ಮಿತ್ರನ ಮಗನ ಸ್ಥಿತಿಯನ್ನು ನೋಡಲಾಗದೆ ಅವನನ್ನು ಕರೆದು ಸಾವಿರ ಹಣವನ್ನು ಕೊಟ್ಟು ವ್ಯಾಪಾರಮಾಡು ಎಂದು ಕಳುಹಿಸಿದ. ಈತ ಅದನ್ನು ತನ್ನ ದುವ್ರ್ಯವಹಾರಗಳಲ್ಲಿ ಕಳೆದುಕೊಂಡು ಮತ್ತೆ ಅವನ ಮುಂದೆ ಹೋಗಿ ನಿಂತ. ಈ ಬಾರಿ ಶ್ರೇಷ್ಠಿ ಅವನಿಗೆ ಐದುನೂರು ಹಣ ಕೊಟ್ಟ. ಎರಡು ದಿನಗಳಲ್ಲಿ ಅದೂ ಕರಗಿಹೋಯಿತು. ಮತ್ತೆ ಶ್ರೇಷ್ಠಿಯ ಮುಂದೆ ಕೈ ಚಾಚಿ ನಿಂತ. ಶ್ರೇಷ್ಠಿ ಅವನಿಗೆ ಎರಡು ದಪ್ಪನಾದ ಬಟ್ಟೆಗಳನ್ನು ಹೊದೆಯಲು ಕೊಟ್ಟ. ಈ ಮಗ ಅವನ್ನು ಮಾರಿ ಕುಡಿದು ಬಂದ. ಮತ್ತೆ ಮನೆಯ ಮುಂದೆ ಬಂದು ನಿಂತಾಗ ಶ್ರೇಷ್ಠಿ, ಇವನು ದಾನ ಪಡೆಯಲು ಅನರ್ಹನೆಂದು ಕತ್ತು ಹಿಡಿದು ಹೊರಗೆ ನೂಕಿಸಿಬಿಟ್ಟ.

ಶಕ್ರ-ದೇವರಾಜನಾಗಿದ್ದ ತಂದೆ ಮಗನ ದುರವಸ್ಥೆಯನ್ನು ಕಂಡು ಮರುಗಿ ಭೂಮಿಗೆ ಬಂದು ಅವನಿಗೊಂದು ಮಡಕೆಯನ್ನು ಕೊಟ್ಟು ಹೇಳಿದ, “ಇದು ಸಾಮಾನ್ಯ ಮಡಕೆಯಲ್ಲ. ಕೇಳಿದ್ದನ್ನು ಕೊಡುವ ಕಾಮಧೇನು ಇದು. ಇದು ನಿನ್ನೊಡನೆ ಇರುವ ತನಕ ನಿನಗೆ ದಾರಿದ್ರ್ಯವಿಲ್ಲ. ನೀನು ಬೇಡಿದ್ದನ್ನು ಇದು ನೀಡುತ್ತದೆ. ಆದರೆ ಜಾಗರೂಕವಾಗಿರು. ಕುಡಿತವನ್ನು, ಅನಾಚಾರವನ್ನು ಬಿಟ್ಟು ಸದಾಚಾರಿಯಾಗಿರು”. ಆದರೆ ಮಗನಿಗೆ ಇನ್ನೂ ಸವಲತ್ತು ದೊರೆತಂತಾಯಿತು. ಮತ್ತಷ್ಟು ಕುಡಿದು ದಾರಿಯಲ್ಲಿ ಬರುವಾಗ ಮಡಕೆಯನ್ನು ಮೇಲಕ್ಕೆ ಹಾರಿಸಿ ಹಿಡಿದು ಪ್ರದರ್ಶನಮಾಡುತ್ತಿದ್ದ. ಒಂದು ದಿನ ಹೀಗೆ ಹಾರಿಸುವಾಗ ಕೈ ಜಾರಿ ಮಡಕೆ ನೆಲಕ್ಕೆ ಬಿದ್ದು ಒಡೆದು ಹೋಯಿತು. ಆತ ಮತ್ತೆ ದರಿದ್ರನಾಗಿ ಊರೂರು ತಿರುಗುತ್ತ ಮಳೆ ಬಂದಾಗ ಮತ್ತೊಬ್ಬರ ಮನೆಗೆ ಗೋಡೆಯ ಕೆಳಗೆ ಆಶ್ರಯಪಡೆದಾಗ ಅದು ಕುಸಿದು ಬಿದ್ದು ಸತ್ತು ಹೋದ.

ADVERTISEMENT

ಆಗ ಬೋಧಿಸತ್ವ ಹೇಳಿದ, “ಯಾರು ಏನೇ ಕೊಟ್ಟರೂ ಅದನು ಉಳಿಸಿಕೊಳ್ಳಲು, ಬೆಳೆಸಲು ಶ್ರದ್ಧೆ, ಪರಿಶ್ರಮ, ಸಂಯಮ ಮತ್ತು ಒಳ್ಳೆಯ ನಡತೆ ಬೇಕು” ಸುಭಾಷಿತ ಹೇಳುತ್ತದೆ, “ಪ್ರಯತ್ನವಿಲ್ಲದೆ ಯಾವ ಕಾರ್ಯವೂ ಸಿದ್ಧಿಸುವುದಿಲ್ಲ. ಕಾಡಿನ ರಾಜನಾದ ಸಿಂಹದ ಬಾಯಿಯಲ್ಲಿ ಯಾವ ಪ್ರಾಣಿಯೂ ತಾನಾಗಿಯೇ ಬಂದು ಬೀಳುವುದಿಲ್ಲ. ಅದೂ ಪ್ರಯತ್ನ ಮಾಡಲೇ ಬೇಕು”

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.