ADVERTISEMENT

ಬೆರಗಿನ ಬೆಳಕು: ನೀಗಿದಷ್ಟು ಕಾರ್ಯ

ಡಾ. ಗುರುರಾಜ ಕರಜಗಿ
Published 13 ಮಾರ್ಚ್ 2022, 19:19 IST
Last Updated 13 ಮಾರ್ಚ್ 2022, 19:19 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು? |
ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ||
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ |
ಎಷ್ಟಾದರಷ್ಟೆ ಸರಿ – ಮಂಕುತಿಮ್ಮ || 583 ||

ಪದ-ಅರ್ಥ: ಅಷ್ಟದಿಗ್ಗಜ=(ಎಂಟು ದಿಕ್ಕುಗಳಲ್ಲಿನ ಆನೆಗಳು ಭೂಮಿಯನ್ನು ಹೊತ್ತಿವೆ ಎಂಬ ನಂಬಿಕೆ), ಕಷ್ಟಭಾರವಿದೆಂದು=ಕಷ್ಟ+ಭಾರ+ಇದು+ಎಂದು, ಎಷ್ಟಾದರಷ್ಟೆ=ಎಷ್ಟು+ಆದರೆ+ಅಷ್ಟೆ.

ವಾಚ್ಯಾರ್ಥ: ನೀನು ಜಗತ್ತಿನ ಭಾರವನ್ನು ಹೊತ್ತ ಆನೆಯೇ? ಪ್ರಪಂಚವನ್ನೇ ಹೆಡೆಯ ಮೇಲೆ ಹೊತ್ತ ಆದಿಶೇಷನೆ? ಮಾಡುವ ಕಾರ್ಯ ಕಷ್ಟ, ಭಾರ ಎಂದು ನಿಟ್ಟುಸಿರು ಬಿಡುತ್ತಿದ್ದೀಯಾ. ನಿನ್ನ ಕನಿಕರದ ಅಪೇಕ್ಷೆಯ ಮಾತು ಜಗಕೆ ಬೇಕಿಲ್ಲ. ನಿನ್ನಿಂದ ಎಷ್ಟಾಗುತ್ತದೋ ಅಷ್ಟನ್ನು ಮಾಡು.

ADVERTISEMENT

ವಿವರಣೆ: ಪ್ರಪಂಚದಲ್ಲಿರುವ ನಮಗೆಲ್ಲ ಒಂದು ಭ್ರಮೆ ಇದೆ. ಅದೆಂದರೆ ಎಲ್ಲವನ್ನೂ ನಾನೇ ಮಾಡುತ್ತೇನೆ. ನಾನಿಲ್ಲದಿದ್ದರೆ ಕೆಲಸ ನಡೆದೀತು ಹೇಗೆ? ಎಲ್ಲ ಜವಾಬ್ದಾರಿಯೂ ನನ್ನದೇ. ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಒಂದು ಪುಟ್ಟ ಕಥೆ ಮಾರ್ಮಿಕ. ಒಂದು ಗಾಳಿಪಟ ಆಕಾಶದಲ್ಲಿ ಹಾರುತ್ತಿತ್ತು. ಒಬ್ಬ ಕೇಳಿದ, ‘ಈ ಗಾಳಿಪಟವನ್ನು ಯಾರು ಹಾರಿಸುತ್ತಿದ್ದಾರೆ?’ ಬಾಲಕ ಹೇಳಿದ, ‘ನಾನೇ ಹಾರಿಸುವುದು. ನಾನಿಲ್ಲದಿದ್ದರೆ ಅದು ಹೇಗೆ ಹಾರೀತು?’ ಗಾಳಿ ಹೇಳಿತು, ‘ಇಲ್ಲ ಪಟವನ್ನು ಹಾರಿಸುವುದು ನಾನೇ. ಅದನ್ನು ಇಚ್ಛೆ ಇದ್ದಂತೆ, ಇಚ್ಛೆ ಬಂದ ದಿಕ್ಕಿಗೆ ಹಾರಿಸುತ್ತೇನೆ’. ದಾರ ಹೇಳಿತು, ‘ನಾನಿಲ್ಲದಿದ್ದರೆ ಪಟ ಮೇಲೆ ಏರೀತೇ? ಅದು ಹಾಗೆ ಆಕಾಶದಲ್ಲಿ ನಿಂತೀತೇ?’. ಗಾಳಿಪಟದ ಬಾಲ ಹೇಳಿತು, ‘ನಾನು ಸರಿಯಾಗಿ ತೂಕವನ್ನು ಕಾಯ್ದುಕೊಳ್ಳದಿದ್ದರೆ ಪಟ ನೆಲಕ್ಕೆ ಅಪ್ಪಳಿಸೀತು. ನಾನೇ ಅದನ್ನು ಹಾರಿಸುವುದು’.

ಆಗ ಒಂದು ಆಕಾಶವಾಣಿ ಹೇಳಿತು, ‘ಇವರೆಲ್ಲರೂ ಒಂದು ಭಾಗದ ಸತ್ಯವನ್ನು ಹೇಳುತ್ತಿದ್ದಾರೆ ಮತ್ತು ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಯಾಕೆಂದರೆ ಬಾಲಕ ಏನು ಪ್ರಯತ್ನ ಮಾಡಿದರೂ ಪಟವನ್ನು ಮೇಲಕ್ಕೆ ಹಾರಿಸಲಾರ. ಗಾಳಿಗೆ ತಾನಾಗಿಯೇ ಹಾರಿಸಲು ಬರುವುದಿಲ್ಲ. ಬರೀ ಬಾಲದಿಂದ ಪಟ ಹಾರಲಾರದು. ಕೇವಲ ದಾರದಿಂದ ಏನಾದೀತು? ಅದೇ ಹಾರಲಾರದು. ಆದರೆ ಎಲ್ಲರೂ ಸರಿಯಾಗಿ ಸೇರಿದರೆ ಮಾತ್ರ ಗಾಳಿಪಟವನ್ನು ಹಾರಿಸುವ ಶಕ್ತಿ ಬರುತ್ತದೆ. ಅದನ್ನು ಮರೆತು ಪ್ರತಿಯೊಬ್ಬರೂ ತಮ್ಮಿಂದ ಮಾತ್ರ ಅದು ಸಾಧ್ಯವಾಯಿತು ಎಂಬಂತೆ ಮಾತನಾಡುತ್ತಾರೆ’.

ಬೆಳಕಿನ ವಿಷಯದಲ್ಲಿ ‘ನಾನೇ ಶ್ರೇಷ್ಠ’ ಎನ್ನುವ ಮಾತುಗಳು ದೇವಲೋಕಕ್ಕೂ ಕೇಳಿಸಿದವು. ಇಂದ್ರ ಸಭೆ ಕರೆದು ಯಾರು ತಮ್ಮನ್ನು ಶ್ರೇಷ್ಠರೆಂದು ಭಾವಿಸಿದ್ದಾರೋ ಅವರನ್ನೆಲ್ಲ ಕರೆದ. ಸೂರ್ಯ ಬಂದ, ಚಂದ್ರ, ತಾರೆಗಳು ಬಂದವು. ಭೂಮಿಯಿಂದ ಮಿಂಚು ಹುಳವೂ ಬಂದಿತ್ತು. ಆದರೆ ಪುಟ್ಟ ಹಣತೆ ಮಾತ್ರ ಬಂದಿರಲಿಲ್ಲ. ಇಂದ್ರ ಅದನ್ನು ಕರೆಸಿದ. ನಂತರ ಸೂರ್ಯ ತನ್ನ ಹೆಗ್ಗಳಿಗೆ ಹೇಳಿಕೊಂಡ. ಚಂದ್ರ ಹೇಳಿದ, ‘ರಾತ್ರಿ ಸೂರ್ಯ ಎಲ್ಲಿ? ಬೆಳಕು ನನ್ನದೇ’. ನಕ್ಷತ್ರಗಳೂ ವಾದ ಮಂಡಿಸಿದವು. ಮಿಂಚು ಹುಳ ಕೂಡ ತನ್ನ ಬೆಳಕಿನ ಬಗ್ಗೆ ಹೇಳಿಕೊಂಡಿತು. ಒತ್ತಾಯಿಸಿದ ಮೇಲೆ ಹಣತೆ ನಾಚಿಕೆಯಿಂದ ಹೇಳಿತು, ‘ನಾನು ಶ್ರೇಷ್ಠನೂ ಅಲ್ಲ, ಕನಿಷ್ಠನೂ ಅಲ್ಲ. ನನ್ನ ಕೆಲಸ ಮಾಡುತ್ತೇನೆ. ನನ್ನ ಸ್ವಲ್ಪವೇ ಬೆಳಕನ್ನು ಜನರು ಬೇಡಿದಾಗ ನೀಡುತ್ತೇನೆ. ಅವರು ಬೇಡವೆಂದಾಗ ನಿಲ್ಲಿಸುತ್ತೇನೆ. ದಯವಿಟ್ಟು ನನ್ನನ್ನು ಶ್ರೇಷ್ಠರ ಸಾಲಿನಲ್ಲಿ ಸೇರಿಸಬೇಡಿ’. ಇಡೀ ಸಭೆ ಹಣತೆಯನ್ನೇ ಶ್ರೇಷ್ಠ ಎಂದು ತೀರ್ಮಾನಿಸಿತು. ಕಗ್ಗ ಹೇಳುತ್ತದೆ, ಪ್ರಪಂಚವನ್ನು ತಲೆಯ ಮೇಲೆ ಹೊತ್ತ ಅಷ್ಟದಿಗ್ಗಜಗಳ ಹಾಗೆ, ಆದಿಶೇಷನಂತೆ ಕಷ್ಟ, ಭಾರ ಎನ್ನಬೇಡ. ನಿನ್ನ ಕನಿಕರದ ಅಪೇಕ್ಷೆಯ ಮಾತು ಯಾರಿಗೂ ಬೇಕಿಲ್ಲ. ನಿನ್ನಿಂದ ಎಷ್ಟು ಕೆಲಸ ಸಾಧ್ಯವೋ ಅಷ್ಟನ್ನು ಮಾತ್ರ ಮಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.