ADVERTISEMENT

ವಿಧಿಯ ಪಾಕದ ತಂತ್ರ

ಡಾ. ಗುರುರಾಜ ಕರಜಗಿ
Published 1 ಸೆಪ್ಟೆಂಬರ್ 2019, 19:45 IST
Last Updated 1 ಸೆಪ್ಟೆಂಬರ್ 2019, 19:45 IST
   

ಕರುಮ ಬಂದಿದಿರಹುದು ಮೋಹನದ ರೂಪದಲಿ |
ಕಿರುನಗವು ಕುಡಿನೋಟ ಕೊಂಕುನುಡಿಗಳಲಿ ||
ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ |
ತರಳತೆಯದೇಂ ತಂತ್ರ? – ಮಂಕುತಿಮ್ಮ || 179 ||

ಪದ-ಅರ್ಥ: ಕರುಮ=ಕರ್ಮ, ಬಂದಿದಿರಹುದು=ಬಂದು+ಇದಿರು+ಅಹುದು, ತಳ್ಳರಿಸುತೊಳಗೆ=ತಳ್ಳರಿಸುತ(ಅಪ್ಪಿಕೊಳ್ಳುತ)+ಒಳಗೆ, ಕಿಚ್ಚಿಡುವ=ಬೆಂಕಿಹಚ್ಚುವ, ತರಳತೆ=ಚಂಚಲತೆ
ವಾಚ್ಯಾರ್ಥ: ಆಕರ್ಷಕವಾದ ರೂಪದಲ್ಲಿ ಕರ್ಮ ಬರುತ್ತದೆ. ಅದು ಕಿರುನಗೆಯ, ಕುಡಿನೋಟದ, ಕೊಂಕುನುಡಿಯ ರೀತಿಯಲ್ಲಿ ಬಂದು ನಮ್ಮನ್ನು ಹತ್ತಿರಕ್ಕೆ ಕರೆದು, ದೂರತಳ್ಳಿ, ಅಪ್ಪಿಕೊಳ್ಳುತ್ತಿದ್ದಂತೆ ಒಳಗೆ ಬೆಂಕಿಹಚ್ಚುವ ಈ ಚಪಲತೆ ಮನುಷ್ಯನನ್ನು ಹದಮಾಡುವ ತಂತ್ರ.

ವಿವರಣೆ: ಮನುಷ್ಯನ ಬದುಕನ್ನು ಹದಮಾಡಲು ಸೃಷ್ಟಿ ಬಳಸುವ ತಂತ್ರಗಳು ಅನೇಕ. ಅದು ಬೇರೆ ತಂತ್ರಗಳಿಂದ ಮನುಷ್ಯನ ಮನಸ್ಸನ್ನೆಳೆದು ಕರ್ಮಕ್ಕೆ ಒಡ್ಡುತ್ತದೆ. ಕಠೋರ ತಪಸ್ಸಿನಿಂದ ಭಗವಂತನನ್ನೊಲಿಸಿಕೊಂಡು ಬ್ರಹ್ಮರ್ಷಿಯಾಗಬೇಕೆಂದು ಹಟದಿಂದ ಕುಳಿತ ವಿಶ್ವಾಮಿತ್ರನ ಎದುರಿಗೆ ಬಂದದ್ದು ಅಪ್ರತಿಮ ಸೌಂದರ್ಯದ ಮೇನಕೆಯ ರೂಪ. ತಪಸ್ಸಿಗೆ ವಿರಾಮ. ಆಕೆಯೊಂದಿಗೆ ಸಂಸಾರ ಮತ್ತು ಅದರಿಂದ ಶಕುಂತಲೆಯ ಜನನ; ವಿಶ್ವಾಮಿತ್ರರಿಗೆ ಕರ್ಮ ಎದುರಾದದ್ದು ಮೋಹಕ ರೂಪದಿಂದ.

ADVERTISEMENT

ಆಕೆಗೆ ಇನ್ನೂ ಇಪ್ಪತ್ತೈದು ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ಆಕೆ ಆರು ತಿಂಗಳು ಬಸುರಿಯಾಗಿದ್ದಾಗ ಗಂಡ ಅಪಘಾತದಲ್ಲಿ ತೀರಿ ಹೋದ. ಆಕೆಗೆ ಪ್ರಪಂಚವೇ ಬೇಡವಾಯಿತು. ಹೊಟ್ಟೆಯಲ್ಲಿ ಒಂದು ಜೀವವಿದೆಯಲ್ಲ, ಅದರ ಸಾವಿಗೆ ತಾನು ಕಾರಣವಾಗಬಾರದು ಎಂದು ದು:ಖವನ್ನು ಮಗುವಿನೊಂದಿಗೆ ಮೂರು ತಿಂಗಳು ಹೊತ್ತಳು. ಮಗುವಿನ ಜನನವಾದ ಮೇಲೆ ಅದನ್ನು ತನ್ನ ಅತ್ತೆ-ಮಾವಂದಿರಿಗೆ ಕೊಟ್ಟು ತಾನು ತನ್ನ ಬದುಕನ್ನು ಕೊನೆಗಾಣಿಸಿಕೊಳ್ಳಬೇಕೆಂದು ತೀರ್ಮಾನಿಸಿದಳು. ಮನಸ್ಸು ಸ್ಥಿರವಾಯಿತು. ಮಗು ಹುಟ್ಟಿತು, ಸುಂದರವಾದ ಮಗು. ನರ್ಸ ಮಗುವನ್ನು ತಂದು ತಾಯಿಯ ಮಡಿಲಲ್ಲಿ ಇಟ್ಟರು. ಈಕೆಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಆದರೂ ಕರುಳು ಸೆಳೆಯಿತು. ಮಗುವನ್ನು ಕಂಡಳು. ಅದು ಯಾಕೋ ಕಿರುನಗೆ ಬೀರಿತು. ಆಕೆಯ ಧೃಡ ನಿರ್ಧಾರ ಕರಗಿ ಹೋಯಿತು. ಮಗುವಿಗಾಗಿ ಆಕೆ ಮುಂದೆ ಐವತ್ತು ವರ್ಷ ಕರ್ಮ ಸವೆಸಿದಳು.

ಪ್ರೇಯಸಿಯ ಕುಡಿನೋಟ ತರುಣನನ್ನು ಸೆಳೆದು ಕರ್ಮಕ್ಕೆ ಸೇರಿಸುತ್ತದೆ. ಮಹಾಭಾರತದಲ್ಲಿ ದಾಯಾದಿ ಮತ್ಸರ ಬಲಿದಿತ್ತು. ಆದರೆ ಧರ್ಮರಾಜನ ರಾಜಸೂಯ ಯಾಗದ ಸಂದರ್ಭದಲ್ಲಿ ಎಲ್ಲರೂ ಅದನ್ನು ಮರೆತಂತೆ ಭಾಗವಹಿಸಿದ್ದರು. ಮಯಾಸುರ ನಿರ್ಮಿಸಿದ ಸುಂದರ ಭವನವನ್ನು ನೋಡಲು ದುರ್ಯೋಧನ ಹೋದಾಗ ನೀರಿಲ್ಲವೆಂದು ತಿಳಿದು ಹೊರಟಾಗ ನೀರಲ್ಲಿ ಬಿದ್ದು, ನೀರಿದೆ ಎಂದು ಪಂಚೆಯನ್ನು ಮೇಲೆತ್ತಿ ಹಿಡಿದು ನಡೆದು ನೀರೇ ಇಲ್ಲವೆಂದು ತಿಳಿದು ಪೆಚ್ಚಾದಾಗ ಅದನ್ನು ಕಂಡು ದ್ರೌಪದಿ ನಕ್ಕ ಕೊಂಕುನಗು ದುರ್ಯೋಧನನ ಹೃದಯದಲ್ಲಿ ಸೇಡಿನ ಬೆಂಕಿಯನ್ನು ಹೊತ್ತಿಸಿ ಕುರುಕ್ಷೇತ್ರದ ಮಾರಣ ಹೋಮಕ್ಕೆ ಕಾರಣವಾಯಿತು, ಅವನನ್ನು ದುಷ್ಟ ಕರ್ಮಕ್ಕೆ ನೂಕಿತು.

ಹೀಗೆಯೇ ಸೃಷ್ಟಿ ಅನೇಕ ತಂತ್ರಗಳಿಂದ ಕರೆದು, ತಳ್ಳಿ, ಅಪ್ಪಿಕೊಂಡಂತೆ ಮಾಡಿ, ಅರಿವಾಗದಂತೆ ಬೆಂಕಿ ಹಚ್ಚಿ, ಕರ್ಮದ ಕುಲುಮೆಯಲ್ಲಿ ನಿಮ್ಮ ಬದುಕನ್ನು ಪಾಕಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.