ADVERTISEMENT

ಮಂಕುತಿಮ್ಮನ ಕಗ್ಗ: ನಿರಂತರವಾದ ವಂಶವಾಹಿನಿ

ಡಾ. ಗುರುರಾಜ ಕರಜಗಿ
Published 28 ಸೆಪ್ಟೆಂಬರ್ 2020, 20:15 IST
Last Updated 28 ಸೆಪ್ಟೆಂಬರ್ 2020, 20:15 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   
""

ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ |
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ ||
ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್|
ಅನ್ವಯ ಚಿರಂಜೀವಿ - ಮಂಕುತಿಮ್ಮ || 332 ||

ಪದ-ಅರ್ಥ: ಮೂಲಜ್ಜ=ಮೂಲದ ಹಿರಿಯ, ನಿನ್ನೊಳವತರಿಸಿ=ನಿನ್ನೊಳು+ಅವತರಿಸಿ (ಇಳಿದು ಬಂದು), ಮೊಮ್ಮ=ಮೊಮ್ಮಗ, ಮರಿಮೊಮ್ಮ=ಮರಿಮೊಮ್ಮಗ, ಜೀವಪ್ಪರ್=ಜೀವಿಸಿದ್ದಾರೆ, ಅನ್ವಯ=ವಂಶವಾಹಿನಿ.

ವಾಚ್ಯಾರ್ಥ: ನಿನ್ನಲ್ಲಿ ನಿನ್ನ ಅಜ್ಜ, ಮುತ್ತಜ್ಜ ಮತ್ತೆಲ್ಲ ಮೂಲಪುರುಷರು ಸೇರಿಕೊಂಡಿರುವುದಲ್ಲದೆ ಮುಂದೆ ಹುಟ್ಟುವ ಮಗ, ಮೊಮ್ಮಗ ಮತ್ತು ಮುಂದಿನ ತಲೆಮಾರುಗಳಲ್ಲಿ ಕೂಡ ಅವತರಿಸುತ್ತಾರೆ. ಹೀಗಾಗಿ ವಂಶವಾಹಿನಿ ಚಿರಂಜೀವಿಯಾದದ್ದು.

ADVERTISEMENT
ಗುರುರಾಜ ಕರಜಗಿ

ವಿವರಣೆ: ಈ ಕಗ್ಗ ಸಾಹಿತ್ಯದ ಚೌಪದಿಯಾದರೂ ವಿಜ್ಞಾನದ ವಿದ್ಯಾರ್ಥಿಗಳಿಗೆ ಅನುವಂಶಿಕತೆಯನ್ನು ವಿವರಿಸುವ ಪಾಠವೂ ಆದೀತು. 1940 ರಿಂದ 1950 ರ ವರೆಗಿನ ಜೀವ ವಿಜ್ಞಾನದ ಪ್ರಯೋಗಗಳು ಡಿಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ (ಡಿ.ಎನ್.ಎ) ಅನುವಂಶಿಕತೆಯ ಮಾಹಿತಿಯನ್ನು ಹಿಡಿದಿಟ್ಟಿದೆ ಎಂದು ತೋರಿಸಿಕೊಟ್ಟವು. ಅವು ಮುಂದೆ ತಲೆತಲಾಂತರಕ್ಕೆ ಸಾಗಿ ಬರುತ್ತವೆ.

ಮದುವೆಯನ್ನು ನಿಶ್ಚಿಯಿಸುವಾಗ ಗೋತ್ರವನ್ನು ಕೇಳುತ್ತಾರೆ. ಗೋತ್ರ ಎಂಬ ಶಬ್ದ ಬಂದದ್ದು ಎರಡು ಸಂಸ್ಕೃತದ ಪದಗಳಿಂದ. ‘ಗೋ’ ಎಂದರೆ ಹಸು, ‘ತ್ರಾಹಿ’ ಎಂದರೆ ಕೊಟ್ಟಿಗೆ. ಗೋತ್ರವೆಂದರೆ ಹಸುವಿನ ಕೊಟ್ಟಿಗೆ. ಅದು ಪುರುಷ ತಳಿಯ ವಾಹಕ. ಹೀಗೆಂದರೆ ನಾವೆಲ್ಲ ಒಬ್ಬ ಮೂಲ ಪುರುಷನಿಂದ ಬಂದವರಾಗಿದ್ದೇವೆ. ನಮ್ಮ ಮೂಲ ಪುರುಷ ಯಾರೋ ಋಷಿಯಾಗಿರಬಹುದು. ಅವರಲ್ಲಿ ಸಪ್ತಋಷಿಗಳನ್ನು ಗೋತ್ರದ ಮೂಲ ಪುರುಷರು ಎಂದು ಭಾವಿಸುವುದುಂಟು.

ಸಪ್ತಧಾತು ಸಮಪಿಂಡಂ ಸಮಯೋನಿ ಸಮುದ್ಭವಂ|
ಆತ್ಮಜೀವ ಸಮಾಯುಕ್ತಂ ಸೃಷ್ಟಿಕಾರ್ಯ ನಿರಂತರಂ||

ತಂದೆ, ತಾಯಿಯರಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ ತಾಯಿಯ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದಲೂ ಬಂದ ಪ್ರಾಣ, ಪ್ರಜ್ಞೆ ಆತ್ಮಾಂಶಗಳು ಸಂಯೋಗ ಹೊಂದಿ ಸೃಷ್ಟಿಕಾರ್ಯ ನಿರಂತರವಾಗಿ ನಡೆಯುತ್ತದೆ.

ನಿಸರ್ಗತತ್ವದಲ್ಲಿ ಮೂರು ಚಿಂತನೆಗಳು ಪ್ರಚಾರದಲ್ಲಿವೆ - ಭೌತಿಕ, ಯಾಂತ್ರಿಕ ಹಾಗೂ ಜೈವಿಕ. ಮೊದಲನೆಯದು ಭೌತಿಕ. ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಹುಟ್ಟಿದಾಗ ಒಳ್ಳೆಯವೇ ಆಗಿದ್ದರೂ ಸಾಮಾಜಿಕ, ಸಾಂಸ್ಕೃತಿಕ ಪರಿಸರದಿಂದ ಬದಲಾಗುತ್ತವೆ. ಎರಡನೆಯದು ಯಾಂತ್ರಿಕ. ಮನುಷ್ಯ ಶರೀರ ಪ್ರಕೃತಿಯ ನಿಯಮಗಳಂತೆ ನಡೆಯುವ ವ್ಯವಸ್ಥಿತವಾದ ಯಂತ್ರ. ಇದರ ದೈಹಿಕ ಹಾಗೂ ಮಾನಸಿಕ ವ್ಯವಹಾರಗಳ ಅಧ್ಯಯನ ಸಾಕಷ್ಟು ನಡೆದಿದೆ. ಮೂರನೆಯದು ಜೈವಿಕ. ಇದು ತಲೆತಲಾಂತರದಿಂದ ಬಂದದ್ದು. ನನ್ನ ಎತ್ತರ, ಬಣ್ಣ, ಧ್ವನಿ, ಕೆಲವು ಸ್ವಭಾವಗಳು ಹಿರಿಯರಿಂದ ಬಳುವಳಿಯಾಗಿ ಬಂದವುಗಳು. ಅವುಗಳನ್ನು ಬದಲಾಯಿಸುವಂತಿಲ್ಲ. ಅವುಗಳೊಂದಿಗೆ ಹೊಂದಿಕೊಂಡು ಹೋಗಬೇಕು.

ಈ ಎಲ್ಲ ಚಿಂತನೆಗಳನ್ನು ಕಗ್ಗ ಕೇವಲ ನಾಲ್ಕು ಸಾಲಿನಲ್ಲಿ ಇಟ್ಟಿರುವುದು ಅದ್ಭುತ. ನನ್ನ ಎಲ್ಲ ಹಿರಿಯರು ಮತ್ತು ಮುಂದೆ ಬರುವ ತಲೆಮಾರುಗಳ ಕಿರಿಯರು ಎಲ್ಲರೂ ಒಂದೇ ಬಂಧದಲ್ಲಿ ಬಂದವರು. ಈ ವಂಶವಾಹಿನಿ ಚಿರಂಜೀವಿಯಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.