ADVERTISEMENT

ಬೆರಗಿನ ಬೆಳಕು : ದೈವ ಒಪ್ಪದ ಆತುರ

ಡಾ. ಗುರುರಾಜ ಕರಜಗಿ
Published 14 ಫೆಬ್ರುವರಿ 2023, 19:30 IST
Last Updated 14 ಫೆಬ್ರುವರಿ 2023, 19:30 IST
   

ಆತುರತೆಯಿರದ ಸತತೋದ್ಯೋಗ ಸರ್ವಹಿತ |
ಭೂತದಾವೇಶವಾತುರತೆಯಾತ್ಮಕ್ಕೆ ||
ಕಾತರನು ನಿನಗೆ ಮೂರನೆಯ ಸಹಭಾಗಿ |
ಪ್ರೀತಿನಾಗುವನೇನೋ ? – ಮಂಕುತಿಮ್ಮ || 822

ಪದ-ಅರ್ಥ: ಆತುರತೆಯಿರದ=ಆತುರತೆ+ಇರದ, ಸತತೋದ್ಯೋಗ=ಸತತ+ಉದ್ಯೋಗ, ಭೂತದಾವೇಶವಾತುರತೆಯಾತ್ಮಕ್ಕೆ=ಭೂತದ+ಆವೇಶವು+ಆತುರತೆ+ಆತ್ಮಕ್ಕೆ, ಕಾತುರನು=ಆತುರಕಾರನು.

ವಾಚ್ಯಾರ್ಥ: ಸಮಾಧಾನದ, ಆತುರತೆಯಿಲ್ಲದ ಸತತ ಉದ್ಯೋಗ ಯಾವಾಗಲೂ ಸರ್ವಹಿತವಾಗುತ್ತದೆ. ಆತುರತೆ ಎಂಬುದು ಆತ್ಮಕ್ಕೆ ಭೂತದ ಆವೇಶವಿದ್ದಂತೆ. ಪ್ರತಿಯೊಂದರಲ್ಲೂಆತುರತೆಯನ್ನು ತೋರಿದರೆ ನಿನ್ನ ಜೀವನದ ಮೂರನೆಯ ಸಹಭಾಗಿಯಾದ ದೈವ ಪ್ರೀತನಾಗುವನೇ?
ವಿವರಣೆ: ಇದು ಆತುರದ ಜಗತ್ತು ಎನ್ನಿಸುವುದಿಲ್ಲವೆ? ಎಲ್ಲವೂ ಇನ್‌ಸ್ಟಂಟ್ ಆಗಬೇಕು. ಫಾಸ್ಟ್ಫುಡ್, ಫಾಸ್ಟ್ಟ್ರಾಕ್ ಕೈ ಗಡಿಯಾರಗಳು, ಸ್ಪೀಡೀಬೈಕ್‌ಗಳು, ಒನ್ ಮಿನಿಟ್ ನೂಡಲ್ಸ್, ಹೈ ಸ್ಪೀಡ್ ಇಂಟರನೆಟ್. ಇವೆಲ್ಲ ಏನು ಹೇಳುತ್ತವೆ? ಯಾರಿಗೂ
ನಿಧಾನವಾಗಿ ಬದುಕುವ ಆಸೆ ಇಲ್ಲ. ಎಲ್ಲವೂ ಬೇಗದಲ್ಲೇ ಮುಗಿಯಬೇಕು. ಇಂದಿನ ಜಗತ್ತಿನಲ್ಲಿ ನೀವು ನಿಂತಲ್ಲೇ ಇರಬೇಕಾದರೂ ಓಡಬೇಕಾಗುತ್ತದೆ ಎನ್ನುತ್ತದೆ ಒಂದು ಇಂಗ್ಲೀಷ್ ಸುಭಾಷಿತ. ಆತುರದಿಂದ ತೆಗೆದುಕೊಂಡ ಪ್ರತಿಯೊಂದು ತೀರ್ಮಾನ ಅನಾಹುತಕ್ಕೇ ದಾರಿಯಾಗುತ್ತದೆ. ಭಸ್ಮಾಸುರನ ಆತುರದ ಬೇಡಿಕೆ, ದೌಪದಿಯ ಮಕ್ಕಳನ್ನು ಕೊಲ್ಲುವ ಅಶ್ವತ್ಥಾಮನ ಆತುರದ ತೀರ್ಮಾನ, ಅರ್ಜುನನ ಆತುರದ ಪ್ರತಿಜ್ಞೆ ಇವು ಯಾವವೂ ಒಳ್ಳೆಯದನ್ನು ಮಾಡಲಿಲ್ಲ. ಇದನ್ನೇ ಕಗ್ಗ ಆತ್ಮಕ್ಕೆ ಬಂದ ಭೂತದ ಆವೇಶ ಎನ್ನುತ್ತದೆ. ಅದಕ್ಕೆ ಹಿರಿಯರು, ಯಾರಾದರೂ ತುಂಬ ಅವಸರದಿಂದ ಕೆಲಸ ಮಾಡುತ್ತಿದ್ದರೆ. “ಅವನು ಮೈಯಲ್ಲಿ
ಭೂತವನ್ನು (ದೆವ್ವವನ್ನು) ಅವತರಿಸಿಕೊಂಡಂತೆ ಕೆಲಸ ಮಾಡುತ್ತಾನೆ” ಎನ್ನುತ್ತಾರಲ್ಲವೆ? ಸರ್ವರಿಗೂ ಹಿತವಾಗುವ ಕೆಲಸವನ್ನು ನಿಧಾನವಾಗಿ, ಸತತವಾಗಿ ಮಾಡಬೇಕಾಗುತ್ತದೆ. ಕೊನೆಯ ಎರಡು ಸಾಲುಗಳಲ್ಲಿ ಕಗ್ಗ ಮತ್ತೊಬ್ಬನನ್ನು ತಂದು, ಆತ ಸಂತೋಷಪಡುತ್ತಾನೆಯೇ ಎಂದು ಕೇಳುತ್ತದೆ. ಯಾರು ಈ ಮೂರನೆಯ ಸಹಭಾಗಿ? ಈಗಾಗಲೇ ಹಿಂದೆ ಕಗ್ಗದಲ್ಲಿ ಒಂದು ವಿವರಣೆ ಬಂದಿದೆ. ನಮ್ಮ ಬದುಕಿನ ವ್ಯವಹಾರದಲ್ಲಿ ಮೂರು ಪಾಲುದಾರರಿದ್ದಾರೆ. ಒಂದನೆಯ ಪಾಲುದಾರ ಜೀವ. ಎರಡನೆಯ ಪಾಲುದಾರ, ಜೀವದ ಜೊತೆಗೇ ಸದಾ ಸಂಪರ್ಕದಲ್ಲಿರುವ ಜಗತ್ತು. ಮೂರನೆಯ ಭಾಗಸ್ಥ ದೈವ. ಅವನು ಕಣ್ಣಿಗೆ ಕಾಣಲಾರ. ಆದರೆ ಎಲ್ಲದರಲ್ಲೂ ಅವನ ಪ್ರಭಾವವೇ ಹೆಚ್ಚು. ಕೊನೆಗೆ ಅವನು ಹೇಳಿದಂತೆಯೇ ನಡೆಯುವುದು. ವ್ಯವಹಾರದಲ್ಲೂ ಅವನೇ ಅತ್ಯಂತ ಪ್ರಭಾವಶಾಲಿ ಸಹಭಾಗಿ. ಆತುರದಲ್ಲಿ ಮಾಡಿದ ಕಾರ್ಯ ಕೆಡುತ್ತದೆಂಬುದು ಲೋಕಕ್ಕೇ ವಿದಿತವಾದ ವಿಷಯ. ಹೀಗೆ ಒಬ್ಬ ಸಹಭಾಗಿ ತಿಳಿದೂ ತಪ್ಪು ಮಾಡುವುದನ್ನು ಪ್ರಧಾನ ಸಹಭಾಗಿ ತಾಳಿಕೊಳ್ಳುತ್ತಾನೆಯೇ? ಇದರರ್ಥವೆಂದರೆ ಅವಸರದ ಕಾರ್ಯವನ್ನು ದೈವವೂ ಒಪ್ಪುವುದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.