ADVERTISEMENT

ಬೆರಗಿನ ಬೆಳಕು | ಸರ್ಕಾರ ಮುಳುಗದ ತೆಪ್ಪ

ಡಾ. ಗುರುರಾಜ ಕರಜಗಿ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸರ್ಕಾರ ಹರಿಗೋಲು, ತೆರೆಸುಳಿಗಳತ್ತಿತ್ತ |
ಸುರೆ ಕುಡಿದವರು ಕೆಲರು ಹುಟ್ಟುಹಾಕುವರು ||
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು|
ಉರಳದಿಹುದಚ್ಚರಿಯೊ! – ಮಂಕುತಿಮ್ಮ || 308||

ಪದ-ಅರ್ಥ: ಹರಿಗೋಲು =ತೆಪ್ಪ, ತೆರೆಸುಳಿ
ಗಳತ್ತಿತ್ತ=ತೆರೆಸುಳಿಗಳು+ ಅತ್ತಿತ್ತ, ಉರುಳದಿಹು
ದಚ್ಚರಿಯೊ=ಉರುಳದೆ+ಇಹುದು+ಅಚ್ಚರಿಯೊ.

ವಾಚ್ಯಾರ್ಥ: ಸರ್ಕಾರವೆಂಬುದು ತೆಪ್ಪವಿದ್ದಂತೆ, ಪ್ರವಾಹದಲ್ಲಿ ಎಲ್ಲೆಲ್ಲಿಯೂ ಭಯಂಕರವಾದ ತೆರೆಗಳು, ಸುಳಿಗಳು ಇವೆ. ತೆಪ್ಪಕ್ಕೆ ಹುಟ್ಟು ಹಾಕುವವರು ಹೆಂಡ ಕುಡಿದು ಉನ್ಮತ್ತರಾಗಿದ್ದಾರೆ. ಜನ ಗಾಬರಿಯಿಂದ ಎದ್ದು ಕುಣಿಯುತ್ತಾರೆ. ಈ ತೆಪ್ಪ ಮುಳುಗದೆ ಇರುವುದೇ ಆಶ್ಚರ್ಯ!

ADVERTISEMENT

ವಿವರಣೆ: ಇದು, ಇಂದಿನ ಮಾತ್ರವಲ್ಲ, ಯಾವ ಕಾಲದ ರಾಜಕಾರಣವನ್ನೂ ಅತ್ಯಂತ ಸರಿಯಾಗಿ ವಿವರಿಸುವ ಚೌಪದಿ. ಕಗ್ಗದ ವಿವರಣೆ ಕಣ್ಣಿಗೆ ಕಟ್ಟುವಂತಿದೆ. ಸರ್ಕಾರವೆನ್ನುವುದು ಒಂದು ಹರಿಗೋಲು, ತೆಪ್ಪ. ಅದು ಭದ್ರವಾದ ಹಡಗಲ್ಲ, ಮರದ ನಾವೆಯೂ ಅಲ್ಲ. ಅದೊಂದು ಬಿದಿರಿನ ಬುಟ್ಟಿ. ಒಳಗೆ ನೀರು ಬರದಂತೆ ಚಾಪೆಯನ್ನೊ, ಪ್ಲಾಸ್ಟಿಕ್ ಹಾಳೆಯನ್ನೋ ಹೊದಿಸಿದ್ದಾರೆ. ಅದರಲ್ಲಿ ರಕ್ಷಣೆಗೆ ಯಾವ ವ್ಯವಸ್ಥೆಯೂ ಇಲ್ಲ. ನಿಮಗೆ ನಿಮ್ಮಲ್ಲಿ ಮತ್ತು ದೇವರಲ್ಲಿದ್ದ ನಂಬಿಕೆಯೇ ರಕ್ಷೆ. ಪ್ರವಾಹವಾದರೂ ಶಾಂತವಾಗಿದೆಯೆ? ಇಲ್ಲ. ಎಲ್ಲಿ ನೋಡಿದಲ್ಲಿ ತೆರೆಗಳು, ಸುಳಿಗಳು. ಆಯ್ತು, ಅಂಬಿಗನ ದಕ್ಷತೆಯನ್ನಾದರೂ ನಂಬೋಣವೆಂದರೆ ಆತ ಹೆಂಡ ಕುಡಿದು ಉನ್ಮತ್ತನಾಗಿದ್ದಾನೆ. ಅವನಿಗೆ ತನ್ನ ಜವಾಬ್ದಾರಿಯ ಪರಿವೆಯೇ ಇಲ್ಲ. ಅವನು ಹೇಗೆ ಹುಟ್ಟು ಹಾಕುತ್ತಾನೋ, ಯಾವ ಕಡೆಗೆ ತೆಪ್ಪವನ್ನು ನಡೆಸುತ್ತಾನೆಯೋ ಅವನಿಗೇ ಗೊತ್ತು. ಇದಿಷ್ಟು ಸಾಲದೆಂಬಂತೆ ಬಿರುಗಾಳಿ ಬೀಸತೊಡಗುತ್ತದೆ, ತೆಪ್ಪ ಹೊಯ್ದಾಡುತ್ತದೆ. ಒಳಗೆ ಕುಳಿತಿದ್ದ ಜನವಾದರೂ ಸುಮ್ಮನಿದ್ದಾರೆಯೇ? ಅವರು ಗಾಬರಿಯಿಂದ ಎದ್ದು ಕುಣಿದಾಡುತ್ತಿದ್ದಾರೆ. ಮೊದಲೇ ಬಿರುಗಾಳಿಯಿಂದಾಗಿ ತೆಪ್ಪ ಹೇಗೆಂದರೆ ಹಾಗೆ ಹೊಯ್ದಾಡುತ್ತಿದೆ, ಮತ್ತೆ ಜನ ಕುಣಿದಾಡಿದರೆ ಅದು ನಿಗ್ರಹಕ್ಕೆ ಬರುವುದು ಹೇಗೆ? ನಿಗ್ರಹ ಮಾಡಬೇಕಾದ ಅಂಬಿಗ ತನ್ನ ತಹಬದಿಯಲ್ಲೇ ಇಲ್ಲ. ಇಂಥ ಹರಿಗೋಲು ಇನ್ನು ಮುಳುಗದೆ ಉಳಿದದ್ದೇ ಆಶ್ಚರ್ಯ!

ತೆಪ್ಪ ಎನ್ನುವುದು ಸರ್ಕಾರಕ್ಕೆ ಬಂದು ಪ್ರತಿಮೆ. ಸರ್ಕಾರಗಳೂ ಹಾಗೆಯೇ. ಎಲ್ಲವೂ ಅವ್ಯವಸ್ಥೆ. ರಾಜಕಾರಣದ ಪ್ರವಾಹದಲ್ಲಿ ಕಂಡಲ್ಲಿ ಸುಳಿಗಳು, ಒಳಸುಳಿಗಳು. ಯಾವಾಗ ಯಾರನ್ನು ಎಲ್ಲಿ ಎಳೆದು ಹಾಕುತ್ತವೋ, ಯಾರನ್ನು ಎತ್ತಿ ಮೇಲಕ್ಕೆ ಕೂಡ್ರಿಸುತ್ತವೋ ಹೇಳುವುದೇ ಅಸಾಧ್ಯ, ರಾಜಕೀಯದಲ್ಲಿ ಯಾರೂ ಶಾಶ್ವತ ಸ್ನೇಹಿತರಲ್ಲ, ಶಾಶ್ವತ ವೈರಿಗಳಲ್ಲ. ಅವರೆಲ್ಲ ಸಾಂದರ್ಭಿಕಗಳು ಸ್ವಾರ್ಥಸಾಧನೆಗೆ ಅಧಿಕಾರ ಹಿಡಿದವರು ಮತ್ತಿನಲ್ಲಿದ್ದಾರೆ. ಅದು ಅಧಿಕಾರದ ಮದ, ಹಣದ ಮದ, ಜನರ ಚಪ್ಪಾಳೆಗಳ ಮದ. ಅದು ಕೆಲವೇ ಕಾಲದ್ದು ಎನ್ನುವುದನ್ನು ಮರೆಸುವಷ್ಟು ಪ್ರಬಲವಾದದ್ದು ಈ ಮದ. ಇವುಗಳ ನಡುವೆ ಆಗಾಗ ಕ್ಷಿಪ್ರಕ್ರಾಂತಿಗಳ, ರಾಜಕೀಯದ ತಣಿಯದ ಆಸೆಗಳ, ನೈಸರ್ಗಿಕ ಪ್ರಕೋಪಗಳ ಬಿರುಗಾಳಿ ಏಳುತ್ತದೆ. ಸರಕಾರ ನಿಷ್ಕ್ರೀಯವಾಗುತ್ತದೆ. ಇವರಿಂದ ಎಷ್ಟೊಂದನ್ನು ಅಪೇಕ್ಷಿಸಿದ ಜನರಲ್ಲಿ ಹಾಹಾಕಾರವೇಳುತ್ತದೆ. ಅವರು ಬೊಬ್ಬೆ ಹಾಕುತ್ತಾರೆ. ಅಧಿಕಾರದ ಕಟ್ಟೆಯ ಮೇಲಿರುವವರಿಗೆ ಅದು ಮುಟ್ಟುವುದಿಲ್ಲವೆಂದು ಗೊತ್ತಿದ್ದೂ ಬೊಬ್ಬೆ ಹಾಕುತ್ತಾರೆ, ಅಂತೆಯೇ ಶಾಪ ಹಾಕುತ್ತಾರೆ.

ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಸರ್ಕಾರದ ಬಗ್ಗೆ ಬೇಜಾರಾಗಿ ಹೇಳಿದ್ದರು, ‘ಈ ದರಿದ್ರ ಸರಕಾರ ಎನ್ನುವ ವ್ಯವಸ್ಥೆಗೆ ಶಾಪ ಹಾಕೋಣವೆಂದರೆ ಹೃದಯವಿಲ್ಲ, ಒದೆಯೋಣವೆಂದರೆ ದೇಹವಿಲ್ಲ’. ಆದರೂ ಸರ್ಕಾರಗಳು ನಡೆಯುತ್ತಲೇ ಹೋಗುತ್ತವೆ – ಮುಳುಗದ ತೆಪ್ಪದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.