ADVERTISEMENT

ಅತಿಶಯ ಬುದ್ಧಿಯ ಮನುಷ್ಯ

ಡಾ. ಗುರುರಾಜ ಕರಜಗಿ
Published 25 ಅಕ್ಟೋಬರ್ 2019, 19:31 IST
Last Updated 25 ಅಕ್ಟೋಬರ್ 2019, 19:31 IST

ರಾವಣನ ದಶಶಿರವದೇಂ? ನರನು ಶತಶಿರನು | ಸಾವಿರಾಸ್ಯಗಳನೊಂದರೊಳಣಗಿಸಿಹನು || ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ | ಭೂವ್ಯೋಮಕತಿಶಯನು – ಮಂಕುತಿಮ್ಮ || 202 ||

ಪದ-ಅರ್ಥ: ದಶಶಿರ=ಹತ್ತು ತಲೆಗಳು, ಶತಶಿರ=ನೂರುತಲೆಗಳು, ಸಾವಿರಾಸ್ಯಗಳನೊಂದರೊಳಣಗಿಸಿಹನು=ಸಾವಿರ+ಆಸ್ಯಗಳನ್ನು(ಮುಖಗಳನ್ನು)+ಬಂದರೊಳು+ಅಣಗಿಸಿಹನು(ಅಡಗಿಸಿದ್ದಾನೆ), ಹುಲ್ಲೆ=ಜಿಂಕೆ, ಭೂಮ್ಯೋಮಕತಿಶಯನು=ಭೂ(ಭೂಮಿ)+ವ್ಯೋಮಕ್ಕೆ (ಆಕಾಶಕ್ಕೆ) +ಅತಿಶಯನು

ವಾಚ್ಯಾರ್ಥ: ರಾವಣನ ಹತ್ತು ತಲೆಗಳದೇನು? ಮನುಷ್ಯನಿಗೆ ನೂರು ತಲೆಗಳು, ಸಾವಿರ ಮುಖಗಳನ್ನು ಒಂದರಲ್ಲೇ ಅಡಗಿಸಿ ಇಟ್ಟಿದ್ದಾನೆ. ಹಾವಾಗಿ, ಹುಲಿಯಾಗಿ, ಕಪ್ಪೆ, ಜಿಂಕೆಯಾಗಿ ಭೂಮಿ ಮತ್ತು ಆಕಾಶಗಳಿಗೆ ಅತಿಶಯನಾಗಿದ್ದಾನೆ. ವಿವರಣೆ: ರಾವಣನಿಗೆ ಹತ್ತು ತಲೆಗಳಿದ್ದುವಂತೆ. ಆದರೆ ಮನುಷ್ಯನಿಗೆ ನೂರಾರು ತಲೆಗಳು. ಆದರೆ ಈ ತಲೆಗಳು ಹೊರಗೆ ಕಾಣುವಂಥವಲ್ಲ. ಅವು ಹೊರಗೆ ಕಾಣುವ ಒಂದು ತಲೆಯಲ್ಲೇ ಅಡಗಿ ಕುಳಿತಿವೆ. ಅವೆಲ್ಲ ತರತರಹ ಬುದ್ಧಿಗಳಾಗಿ ಆಗಾಗ ನಡೆಯಲ್ಲಿ ಹೊರಬರುತ್ತವೆ. ನಮ್ಮ ತಲೆಯಲ್ಲಿಯೇ ಮಹಾಭಾರತದ ಎಲ್ಲ ಪಾತ್ರಗಳೂ ಅವಿತು ಕುಳಿತಿವೆ. ಕುರುಕ್ಷೇತ್ರವೂ ಅಲ್ಲಿದೆ. ನಮ್ಮಲ್ಲಿಯೇ ಪಾಂಡವರಿದ್ದಾರೆ, ಕೌರವರೂ ಇದ್ದಾರೆ. ನಮ್ಮೊಳಗಿದ್ದ ದುರ್ಯೋಧನ ಮತ್ತೊಬ್ಬರ ಆಸ್ತಿಯನ್ನು ದೋಚಲು ಹೇಳುತ್ತಾನೆ, ದುಃಶಾಸನ ಪರಸ್ತ್ರೀಯರ ಮೇಲೆ ಕೈ ಹಾಕಲು ಪ್ರೇರೇಪಿಸುತ್ತಾನೆ. ಅಷ್ಟರಲ್ಲಿ ಎಲ್ಲಿಂದಲೋ ವಿಕರ್ಣ ತೂರಿಕೊಂಡು ಬಂದು ಸಜ್ಜನಿಕೆಯ ಮುಖವಾಡವನ್ನು ತೋರಿ ಒಳಗಿನ ಹುಳುಕನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ಕರ್ಣ ಒಳಗಿನ ಕೀಳರಿಮೆಯನ್ನು ಮುಚ್ಚಿಕೊಳ್ಳಲು ದೊಡ್ಡ ದೊಡ್ಡ ಅಹಂಕಾರದ ಮಾತುಗಳನ್ನಾಡುತ್ತಾನೆ. ನಮ್ಮ ತಲೆಯಲ್ಲಿ ಈ ಕೆಟ್ಟವರಷ್ಟೇ ಇಲ್ಲ. ಮೂಲೆಯಲ್ಲಿ ಪಾಂಡವರೂ ಸ್ಥಳ ಮಾಡಿಕೊಂಡು ಕುಳಿತಿದ್ದಾರೆ. ಧರ್ಮರಾಜ ಅನ್ಯಾಯ ಮಾಡಬೇಡ ಎನ್ನುತ್ತಾನೆ, ಭೀಮ ಸಿಟ್ಟಿನಿಂದ ಕುದಿಯುತ್ತಾನೆ. ಅರ್ಜುನನಿಗೆ ಕೃಷ್ಣನಿಲ್ಲದಿದ್ದರೆ ಸ್ವಂತ ತೀರ್ಮಾನ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ನಕುಲ–ಸಹದೇವರು ಮೃದುವಾಗಿ, ರಮಿಸುವಂತೆ ಧನಾತ್ಮಕವಾದ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ನಮ್ಮ ತಲೆಯಲ್ಲಿ ಧರ್ಮ-ಅಧರ್ಮಗಳ, ಸಜ್ಜನಿಕೆ-ದೌರ್ಜನ್ಯಗಳ, ನೀತಿ-ಅನೀತಿಗಳ, ಮಾನವೀಯತೆ-ದಾನವೀಯತೆಗಳ ದ್ವಂದ್ವಗಳ ಅನೇಕ ಧ್ವನಿಗಳು ಕ್ಷಣಕ್ಷಣಕ್ಕೂ ಹೊರಬರುತ್ತವೆ. ನಮ್ಮ ನಡೆಗಳನ್ನು ರೂಪಿಸುತ್ತವೆ. ಈ ಕಗ್ಗ ಹೇಳುವುದು ಇದನ್ನೇ. ಈ ಮನುಷ್ಯ ತನ್ನ ಅವಶ್ಯಕತೆಗಳಂತೆ ಯಾವ ಪ್ರಾಣಿಯೂ ಆಗಬಲ್ಲ. ಅಂದರೆ ಆ ಪ್ರಾಣಿಗಳ ಸ್ವಭಾವವನ್ನು ತೋರಬಲ್ಲ. ಪ್ರಸಂಗ ಬಂದಾಗ ಸೇಡು ತೀರಿಸಿಕೊಳ್ಳಲು ಅಥವಾ ಮತ್ತೊಬ್ಬರಿಗೆ ವಿಷಪ್ರಾಶನ ಮಾಡಿಸಿ ತೊಂದರೆ ಕೊಡಲು ಹಾವಿನಂತೆ ವರ್ತಿಸಬಲ್ಲ. ತನಗಿಂತ ದುರ್ಬಲರನ್ನು ದೀನರನ್ನು ಕಂಡಾಗ ಹುಲಿಯಂತೆ ಅಬ್ಬರಿಸುತ್ತಾನೆ. ತನಗಿಂತ ಬಲಶಾಲಿಗಳು, ಪ್ರಭಾವಶಾಲಿಗಳು ಎದುರು ಬಂದರೆ ವಟಗುಟ್ಟುತ್ತ ಮೂಲೆಯಲ್ಲಿ ಕೂಡ್ರುತ್ತಾನೆ. ಚಂಚಲತೆಯಲ್ಲಿ ಜಿಂಕೆಯಂತೆ ಹಾರಾಡುತ್ತಾನೆ. ಹೀಗೆಂದರೆ, ಅವನು ಹೀಗೆಯೇ ವರ್ತಿಸುತ್ತಾನೆ ಎಂದು ಹೇಳುವುದು ಅಸಾಧ್ಯ. ತನಗೆ ಬೇಕಾದ ಹಾಗೆ ತನ್ನ ಮುಖವನ್ನು ಬದಲಾಯಿಸುತ್ತ ಪ್ರಚಂಡನಾಗಿ ದ್ದಾನೆ. ಇವನಂಥ ಮತ್ತೊಂದು ಅತಿಶಯವಾದ ಬುದ್ಧಿಯುಳ್ಳ ಪ್ರಾಣಿ ಭೂಮಿ ಯಲ್ಲಿ, ಆಕಾಶದಲ್ಲಿ ದೊರೆಯುವುದು ಸಾಧ್ಯವಿಲ್ಲ. ಅವನಿಗೆ ಅವನೇ ಸಾಟಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.