ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಜಯಕಿಂತ ಮಿಗಿಲು ಪೌರುಷತೆ

ಡಾ. ಗುರುರಾಜ ಕರಜಗಿ
Published 29 ಮಾರ್ಚ್ 2022, 19:30 IST
Last Updated 29 ಮಾರ್ಚ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಎನಿತು ನೀಂ ಗೆಲಿದೆಯೆಂದೆನರು ಬಲ್ಲವರೆಂದುಮ್ |
ಎನಿತು ನೀಂ ಪೋರ್ದೆಯೆನಿತನು ಪೊತ್ತೆಯೆನುವರ್ ||
ಗಣನೆ ಸಲುವುದು ತೋರ್ದ ಪೌರುಷಕೆ, ಜಯಕಲ್ಲ |
ದಿನದಿನದ ಗರಡಿಯಿದು – ಮಂಕುತಿಮ್ಮ || 595 ||

ಪದ-ಅರ್ಥ: ಎನಿತು=ಎಷ್ಟು, ಗೆಲಿದೆಯೆಂದೆನರು=ಗೆಲಿದೆ (ಗೆದ್ದೆ) +ಎಂದು +ಎನರು, ಬಲ್ಲವರೆಂದುಮ್ = ಬಲ್ಲವರು (ತಿಳಿದವರು) + ಎಂದುಮ್ (ಎಂದಿಗೂ), ಪೋರ್ದೆ=ಹೋರಾಡಿದೆ, ಪೊತ್ತೆ=ಹೊತ್ತೆ, ಗಣನೆ=ಲೆಕ್ಕ, ತೋರ್ದ=ತೋರಿದ, ಗರಡಿ=ವ್ಯಾಯಾಮ ಮಾಡುವ ಸ್ಥಳ.

ವಾಚ್ಯಾರ್ಥ: ತಿಳಿದವರು ಎಂದಿಗೂ ನೀನು ಎಷ್ಟು ಗೆದ್ದೆ ಎಂದು ಕೇಳುವುದಿಲ್ಲ. ಬದಲಾಗಿ ನೀನು ಎಷ್ಟು ಹೋರಾಡಿದೆ, ಎಷ್ಟು ಜವಾಬ್ದಾರಿಯನ್ನು ಹೊತ್ತೆ ಎಂದು ಕೇಳುತ್ತಾರೆ. ಕೊನೆಗೆ ಜಗತ್ತು ಗಣಿಸುವುದು ನೀನು ತೋರಿದ ಪೌರುಷಕ್ಕೆ, ಪಡೆದ ಜಯಕ್ಕಲ್ಲ. ಇದು ದಿನನಿತ್ಯದ ಗರಡಿ ಕೆಲಸ.

ADVERTISEMENT

ವಿವರಣೆ: ಮೊನ್ನೆ ಅಮೆರಿಕೆದಲ್ಲಿ ಮಕ್ಕಳೊಂದಿಗೆ ‘ಕಾರ‍್ಸ’ (Cars) ಎಂಬ ಅನಿಮೇಶನ್ ಚಲನಚಿತ್ರವನ್ನು ನೋಡಿದೆ. ಅದೊಂದು ಕಾರ್ ರೇಸಿನ ಕಥೆ. ಅದರ ನಾಯಕ ಕಾರು ಲೈಟನಿಂಗ್ ಮ್ಯಾಕ್‌ಕ್ವೀನ್. ಅದೊಂದು ಬಲು ವೇಗವಾಗಿ ಹೋಗುವ ಕಾರು. ಆದ್ದರಿಂದ ಅದಕ್ಕೆ ಜಂಬ, ಅಹಂಕಾರ. ಅನೇಕ ರೇಸುಗಳನ್ನು ಗೆದ್ದ ಅದಕ್ಕೆ ಅತ್ಯಂತ ಪ್ರಮುಖವಾದ ಪಿಸ್ಟನ್ ಕಪ್ ಗೆಲ್ಲುವ ಆಸೆ. ಅದು ಬದುಕಿನ ಪರಮಗುರಿ. ರೇಸ್ ನಡೆಯಿತು. ರೇಸಿನ ಕಾರುಗಳಲ್ಲಿ ಒಂದು ಕುತಂತ್ರಿ ಕಾರು. ಅದರ ಹೆಸರು ಚಿಕ್‌ಹಿಕ್ಸ್. ಇನ್ನೊಂದು ಉತ್ತಮ ರೇಸ್ ಕಾರು, ದಿ ಕಿಂಗ್. ರೇಸ್ ಕೊನೆಯ ಹಂತಕ್ಕೆ ಬಂದಾಗ ಚಿಕ್‌ಹಿಕ್ಸ್ ಕಾರು ದಿ ಕಿಂಗ್ ಕಾರಿನ ಬಳಿಗೆ ಬಂದು ಅದಕ್ಕೆ ಢಿಕ್ಕಿ ಹೊಡೆದು ದೂರ ತಳ್ಳಿ ಬಿಡುತ್ತದೆ. ಎರಡೂ ಕಾರುಗಳು ನುಜ್ಜುನುಜ್ಜಾಗುತ್ತವೆ. ಈಗ ಮ್ಯಾಕ್‌ಕ್ವೀನ್‌ಗೆ ಅತ್ಯಂತ ಸುಲಭದ ಜಯ ಸಾಧ್ಯ, ಅದರ ಮುಂದೆ ಯಾರೂ ಇಲ್ಲ. ಆದರೆ ಮ್ಯಾಕ್‌ಕ್ವೀನ್ ಪಕ್ಕಕ್ಕೆ ಸರಿದು, ಅಲ್ಲಿ ಬಿದ್ದಿದ್ದ. ಕಿಂಗ್ ಕಾರಿನ ಹಿಂದೆ ಹೋಗಿ ಅದನ್ನು ಹಿಂದಿನಿಂದ ನೂಕಿಕೊಂಡು ಕೊನೆಯ ಗೆರೆಯನ್ನು ದಾಟಿಸಿ, ಅದನ್ನು ಚಾಂಪಿಯನ್ನನಾಗಿ ಮಾಡುತ್ತದೆ. ಆಗ ದಿ. ಕಿಂಗ್, ‘ನಿನಗೆ ದೊರೆಯಬಹುದಾದ ಕಪ್ಪನ್ನು ಕಳೆದುಕೊಂಡೆಯಲ್ಲ’ ಎಂದಾಗ ಮ್ಯಾಕ್‌ಕ್ವೀನ್ ಹೇಳುತ್ತದೆ, ‘ನಾನು ಕಪ್ ಸೋತೆ, ಆದರೆ ರೇಸ್ ಗೆದ್ದೆ’. ಕೊನೆಗೆ ಕೆಲವರ್ಷಗಳ ನಂತರ ಜನ ನೆನಪಿಡುವುದು ರೇಸ್ ಗೆದ್ದವನನ್ನಲ್ಲ, ತನ್ನ ಧೀಮಂತಿಕೆಯನ್ನು ಮೆರೆದ ಮ್ಯಾಕ್‌ಕ್ವೀನ್‌ನನ್ನು. ಕಪ್ ಜೊತೆಗೆ ಮ್ಯಾಕ್‌ಕ್ವೀನ್ ಬೇಕಾದಷ್ಟು ಹಣ ಗಳಿಸಬಹುದಾಗಿತ್ತು. ಆದರೆ ಶಾಶ್ವತವಾಗಿಸುವ ಹೆಸರು ಉಳಿಯುತ್ತಿರಲಿಲ್ಲ. ಅದೇ ಕಗ್ಗದ ಮಾತು. ಪ್ರಪಂಚ ನಿಮ್ಮ ಜಯವನ್ನು ನೆನಪಿಡುವುದಿಲ್ಲ, ನೀವು ತೋರಿದ ಧೀಮಂತಿಕೆಯನ್ನು ಪೌರುಷತೆಯನ್ನು ನೆನಪಿಡುತ್ತದೆ.

ಮಹಾತ್ಮಾ ಗಾಂಧೀಜಿ ತೀರಿಕೊಂಡ ದಿನ ಆ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆಗೆ ಹರಡಿ, ಅಮೆರಿಕದ ನ್ಯೂಯಾರ್ಕ್‌ನಲ್ಲಿದ್ದ ವಿಶ್ವಸಂಸ್ಥೆಯನ್ನು ತಲುಪಿತು. ಆಗ ನಡೆದದ್ದು ಪವಾಡ. ವಿಶ್ವಸಂಸ್ಥೆಯ ಕಾರ್ಯದರ್ಶಿ ಕಟ್ಟಡದ ಮೇಲಿದ್ದ ಭಾರತದ ಧ್ವಜವನ್ನು ಗಾಂಧೀಜಿಯ ಗೌರವಕ್ಕಾಗಿ ಅರ್ಧಕ್ಕೆ ಇಳಿಸಿದರು. ಅಷ್ಟೇ ಅಲ್ಲ, ಪ್ರಪಂಚದ ಎಲ್ಲ ದೇಶದ ಧ್ವಜಗಳನ್ನು ಮತ್ತು ವಿಶ್ವಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಇಳಿಸಲು ಆಜ್ಞೆ ಮಾಡಿದರು. ವಿಶ್ವಸಂಸ್ಥೆಯ ಪ್ರಾರಂಭದಿಂದ ಈ ಕ್ಷಣದವರೆಗೆ ಅಂಥದ್ದು ಎಂದೂ ಆಗಿರಲಿಲ್ಲ. ಅದೂ ಅಲ್ಲದೆ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಯ ಗೌರವಕ್ಕೆ ಪ್ರಪಂಚದ ಎಲ್ಲ ದೇಶದ ಧ್ವಜಗಳನ್ನು ಅರ್ಧಕ್ಕಿಳಿಸಿದ್ದು ಅದೇ ಮೊದಲ ಸಲ ಮತ್ತು ಈ ಗಳಿಗೆಯವರೆಗೆ ಕಡೆಯ ಸಲ.

ಕಗ್ಗ ತಿಳಿ ಹೇಳುತ್ತದೆ. ಬಲ್ಲವರು ನೀವು ಎಷ್ಟು ಗಳಿಸಿದಿರಿ ಎಂದು ಕೇಳುವುದಿಲ್ಲ. ಹೇಗೆ ಹೋರಾಡಿದಿರಿ, ಯಾವ ಜವಾಬ್ದಾರಿಗಳನ್ನು ಹೊತ್ತಿರಿ ಎಂದು ಕೇಳುತ್ತಾರೆ. ಜನಮಾನಸದಲ್ಲಿ ಕೊನೆಯವರೆಗೆ ಉಳಿಯುವುದು ನಾವು ತೋರಿದ ಪೌರುಷ, ಪ್ರಯತ್ನ, ಜಯವಲ್ಲ. ಈ ಪ್ರಕ್ರಿಯೆ ಪ್ರತಿದಿನದ ಗರಡಿಯ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.