ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ನಾಯಿಯ ಉಪದೇಶ

ಡಾ. ಗುರುರಾಜ ಕರಜಗಿ
Published 29 ನವೆಂಬರ್ 2022, 19:30 IST
Last Updated 29 ನವೆಂಬರ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ |
ಅನಿತನಿತರೊಳೆ ಬದುಕುತಾಯುವನು ಕಳೆವಾ ||
ಮನದ ಲಘುಸಂಚಾರವೊಂದು ಯೋಗದುಪಾಯ
ಶುನಕೋಪದೇಶವದು – ಮಂಕುತಿಮ್ಮ || 767 ||

ಪದ-ಅರ್ಥ: ಅನಿತನಿತರೊಳೆ=ಅಷ್ಟಿಷ್ಟರಲ್ಲಿ, ಬದುಕುತಾಯವನು=ಬದುಕುತ+ಆಯುವನು(ಆಯುಷ್ಯವನ್ನು), ಲಘುಸಂಚಾರ=ಹಗುರಾದ ಯೋಚನೆ, ಯೋಗದುಪಾಯ=ಯೋಗದ+ಉಪಾಯ, ಶುನಕೋಪದೇಶ=ಶುನಕ(ನಾಯಿ)+ಉಪದೇಶ.
ವಾಚ್ಯಾರ್ಥ: ಒಂದು ಕ್ಷಣದಿಂದ ಮತ್ತೊಂದು ಕ್ಷಣಕ್ಕೆ, ದಿನದಿಂದ ಮತ್ತೊಂದು ದಿನಕ್ಕೆ, ದೊರಕಿದಷ್ಟರಲ್ಲಿ ಬದುಕುತ್ತ, ಆಯುಷ್ಯವನ್ನು ಕಳೆಯುವ ಮನಸ್ಸಿನ ಹಗುರಾದ ಆಲೋಚನೆ ಒಂದು ಯೋಗದ ಉಪಾಯ. ಇದು ನಾಯಿಯಿಂದ ದೊರೆಯುವ ಉಪದೇಶ.
ವಿವರಣೆ: ಆಚಾರ್ಯ ಚಾಣಕ್ಯ ಭಾರವಾಗದ ಬದುಕನ್ನು ನಡೆಸುವುದು ಹೇಗೆ ಎಂಬುದನ್ನು ವಿವರಿಸುತ್ತ ನಾವು ನಾಯಿಯ ಹಾಗೆ ಇರಬೇಕು ಎನ್ನುತ್ತಾರೆ. ನಾಯಿಯ ಉಳಿದ ಗುಣಗಳಾದ ಕೃತಜ್ಞತೆ, ನಂಬಿಕೆ, ಧೈರ್ಯಗಳ ಜೊತೆಗೆ ಮುಖ್ಯವಾದದ್ದು, ನಾಳೆಯನ್ನು ಚಿಂತಿಸದೆ ಬದುಕುವುದು. ಇದು ಸಾಕಿದ ನಾಯಿಯ ಉದಾಹರಣೆಯಲ್ಲ. ಕೆಲವೊಂದು ಸಾಕಿದ ನಾಯಿಗಳಿಗೆ ಎಷ್ಟೋ ಮನುಷ್ಯರಿಗೆ ದೊರಕದ ಸುಖ ಭೋಗಗಳು ದೊರೆಯುತ್ತವೆ. ಇದು ಬೀದಿಯ ನಾಯಿಯ ಜೀವನ. ಅದಕ್ಕೆ ನಾಳೆ ಎನು ಸಿಕ್ಕೀತೋ ತಿಳಿಯದು. ಅದು ಇಂದು, ಈಗ ಏನು ಸಿಕ್ಕಿತೋ ಅದನ್ನೇ ತಿಂದು ಸಂತೋಷದಿಂದ ಬದುಕುತ್ತದೆ. ಅದಕ್ಕೆ ಕೂಡಿಡುವ ಹವ್ಯಾಸವಿಲ್ಲ. ಕಗ್ಗ ಅದೇ ಉದಾಹರಣೆಯನ್ನು ಉಪದೇಶವನ್ನಾಗಿ ಕೊಡುತ್ತದೆ. ಒಂದು ಕ್ಷಣದಿಂದ ಮತ್ತೊಂದು ಕ್ಷಣಕ್ಕೆ, ಒಂದು ದಿನದಿಂದ ಮರುದಿನಕ್ಕೆ ಚಿಂತೆಯಿಲ್ಲದೆ ಬದುಕುವ ನಾಯಿಗೆ, ದೊರಕಿದ್ದಷ್ಟರೊಳಗೆ ಬದುಕುವ ಅನಿವಾರ್ಯತೆ ಮತ್ತು ಮನಸ್ಸಿನ ಸಿದ್ಧತೆ ಇದೆ. ಇಂಥ ಮನಸ್ಸೇ ಬದುಕನ್ನು ಹಗುರಾಗಿಸುವುದು. ನಾಳೆಯ, ಮುಂದಿನ ವರ್ಷದ, ಮುಂದಿನ ತಲೆಮಾರಿನ ಚಿಂತೆ, ಮನುಷ್ಯನನ್ನು ಕಂಗೆಡಿಸಿ, ಕುಗ್ಗಿಸಿ ಬಿಡುತ್ತದೆ. ಸಂತನೊಬ್ಬ ಯಾತ್ರೆಗೆ ಹೊರಟಿದ್ದ. ಅವನನ್ನು ರೈಲುನಿಲ್ದಾಣದಲ್ಲಿ ಕಳುಹಿಸಿಕೊಡಲು ನೂರಾರು ಮಂದಿ ನೆರೆದಿದ್ದರು. ಒಬ್ಬ ಶಿಷ್ಯ ಗುರುವಿನ ದಾರಿ ಖರ್ಚಿಗೆ ಸಾವಿರ ರೂಪಾಯಿಗಳನ್ನು ಕೊಡಹೋದ. ಆಗ ಸಂತ ನಕ್ಕು ಹೇಳಿದ, ‘ಸಂತನಿಗೆ ಹೆಚ್ಚು ಆಸೆ ಇರಬಾರದು. ನಾನು ನಾಡಿದ್ದಿನ ಬಗ್ಗೆ ಚಿಂತೆ ಮಾಡುವುದಿಲ್ಲ. ಅದು ಭಗವಂತನ ಜವಾಬ್ದಾರಿ. ಕೇವಲ ನಾಳೆಗೆಂದು ಹತ್ತು ರೂಪಾಯಿ ಮಾತ್ರ ಇಟ್ಟುಕೊಂಡಿದ್ದೇನೆ’ ಎಂದು ಅದನ್ನು ಹೊರತೆಗೆದು ತೋರಿಸಿದ. ಅಲ್ಲಿ ಒಬ್ಬ ಹುಚ್ಚನಂತಿದ್ದ ವ್ಯಕ್ತಿ ಬಂದು ಕೇಳಿದ, ‘ಸಂತರೇ, ನಾಡಿದ್ದು ಭಗವಂತ ನಿಮ್ಮನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಇದ್ದರೆ, ನಾಳೆಯೂ ಅವನು ನಿಮ್ಮ ಕಾಳಜಿ ಮಾಡಲಾರನೆ? ಅದರ ಅಪನಂಬಿಕೆಯಿಂದ ಹತ್ತು ರೂಪಾಯಿ ಇಟ್ಟುಕೊಂಡಿದ್ದೀರಾ?’ ಸಂತ ಅವನನ್ನೊಮ್ಮೆ ನೋಡಿ, ‘ಹೌದಪ್ಪ, ನನ್ನದು ಆಸೆ ಮತ್ತು ಅಪನಂಬಿಕೆ ಎರಡೂ’ ಎಂದು ಆ ಹತ್ತು ರೂಪಾಯಿಯನ್ನು ಅವನ ಕೈಯಲ್ಲಿ ಹಾಕಿ, ಕಾಲುಮುಟ್ಟಿ ನಮಸ್ಕರಿಸಿದ. ನಾಳಿನ ಚಿಂತೆ ಇಲ್ಲದೆ, ಇಂದು ದೊರೆತದ್ದರಲ್ಲಿ ತೃಪ್ತಿಯಿಂದ ಬದುಕುವುದನ್ನು ಕಗ್ಗ ‘ಲಘು ಸಂಚಾರ’ ಎಂದು ಕರೆಯುತ್ತದೆ. ಇದು ನಮಗೆ ನಾಯಿಯಿಂದ ದೊರೆಯುವ ಉಪದೇಶ. ಮನದ ಕಣ್ಣು ತೆರೆದು ನೋಡುವವನಿಗೆ ಪ್ರತಿಯೊಂದು ವಸ್ತು, ಪ್ರತಿಯೊಂದು ಜೀವ ಗುರುವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT