ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಸಹಜವಾಗಿ ಅರಳಿದ ಬಾಳು

ಡಾ. ಗುರುರಾಜ ಕರಜಗಿ
Published 19 ಮಾರ್ಚ್ 2023, 19:30 IST
Last Updated 19 ಮಾರ್ಚ್ 2023, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪೆರತೊಂದು ಬಾಳ ನೀನಾಳ್ಪ ಸಾಹಸವೇಕೆ? |

ಹೊರೆ ಸಾಲದೆ ನಿನಗೆ, ಪೆರ‍್ಗೆ ಹೊಣೆವೋಗೆ ? ||

ಮರದಿ ನನೆ ನೈಜದಿಂದರಳೆ ಸೊಗವೆಲ್ರ‍್ಗೆ |
ಸೆರೆಮನೆಯ ಸೇಮವೇಂ – ಮಂಕುತಿಮ್ಮ || 845

ADVERTISEMENT

ಪದ-ಅರ್ಥ: ಪೆರತೊಂದು=ಪೆರತು(ಪರರ)+ಒಂದು, ನೀನಾಳ್ಪ=ನೀನು+ಆಳ್ಪ(ಆಳುವ), ಪೆರ‍್ಗೆ=ಪರರಿಗೆ, ನನೆ=ಮೊಗ್ಗು, ನೈಜದಿಂದರಳೆ=ನೈಜದಿಂದ(ಸಹಜವಾಗಿ)+ಅರಳೆ, ಸೊಗವೆಲ್ರ‍್ಗೆ=ಸೊಗ(ಸಂತೋಷ) +ಎಲ್ರ‍್ಗೆ(ಎಲ್ಲರಿಗೂ), ಸೇಮವೇಂ=ಕ್ಷೇಮವೇ.

ವಾಚ್ಯಾರ್ಥ: ಮತ್ತೊಂದು ಬಾಳನ್ನು ನೀನು ಆಳಬೇಕೆಂಬ ಸಾಹಸವೇಕೆ? ಮತ್ತೊಬ್ಬರ ಜವಾಬ್ದಾರಿಯನ್ನು ಹೊರಬೇಕೆಂದಿರುವ ನಿನಗೆ ನಿನ್ನ ಹೊರೆಯೇ ಸಾಲದೆ? ಮರದಲ್ಲಿ ಮೊಗ್ಗು ಸಹಜವಾಗಿ ಅರಳಿದಾಗಲೇ ಎಲ್ಲರಿಗೂ ಸಂತೋಷ. ಸೆರೆಮನೆಯ ವಾಸ ಕ್ಷೇಮವೇ?

ವಿವರಣೆ: ನನ್ನ ಪರಿಚಯದ ಹಿರಿಯರೊಬ್ಬರು ತಮ್ಮ ಮನೆಯ ಎಲ್ಲರನ್ನೂ ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಅವರ ಮಗ ನನ್ನೊಡನೆ ಕೆಲಸ ಮಾಡುತ್ತಿದ್ದ. ಅವನಿಗೆ ಯಾವ ಕೆಲಸ ಮಾಡಲೂ ಭಯ, ಹಿಂಜರಿಕೆ. ಪ್ರತಿಯೊಂದಕ್ಕೂ ಉಳಿದವರನ್ನು ಕೇಳುತ್ತಿದ್ದ. ಒಂದು ದಿನ ನನ್ನೆಡೆಗೆ ಬಂದು ಕೇಳಿದ, “ಸರ್, ಇವತ್ತು ಸ್ವಲ್ಪ ಬೇಗನೇ ಮನೆಗೆ ಹೋಗಲೇ?”. ಅವನಿಗೇನಾದರೂ ತೊಂದರೆ ಇದ್ದೀತೆಂದು ಭಾವಿಸಿ ಕೇಳಿದೆ, “ಪರವಾಗಿಲ್ಲ ಹೋಗು. ಏನಾದರೂ ತೊಂದರೆ ಇದೆಯೇ?” ಆತ, “ಇಲ್ಲ ಸರ್, ಇಂದು ಮಧ್ಯಾನ್ಹ ಅಮ್ಮ ಬಿಡುವಾಗಿದ್ದಾರೆ. ಅವರನ್ನು ಕರೆದುಕೊಂಡು ಹೋಗಿ ನನಗೆ ಎರಡು ಶರ್ಟ ತರಬೇಕು” ಎಂದ. “ಶರ್ಟ ತರುವುದು ಸರಿ. ಆದರೆ ಅದಕ್ಕೆ ಅಮ್ಮ ಏಕೆ ಬೇಕು? ನಿನಗೇ ಆರಿಸಲು ಬರುವುದಿಲ್ಲವೇ?” ಎಂದು ಕೇಳಿದೆ. ಆತ ಗಲಿಬಿಲಿಗೊಂಡ. “ಸರ್, ನನಗೆ ಬಟ್ಟೆಯ ಗುಣಮಟ್ಟ ಮತ್ತು ಬಣ್ಣ ಸರಿಯಾಗಿ ತಿಳಿಯುವುದಿಲ್ಲ. ಅಮ್ಮ ಆರಿಸುತ್ತಾರೆ, ಅಪ್ಪ ಕೊನೆಗೆ ತೀರ್ಮಾನ ಕೊಡುತ್ತಾರೆ” ಎಂದು ಹೇಳಿ ಪೆಚ್ಚುಮುಖ ಹಾಕಿಕೊಂಡ. ಇದು ಇಪ್ಪತ್ತೆಂಟು ವರ್ಷದ ತರುಣನ ಸ್ಥಿತಿ. ಅವನ ಬದುಕಿನ ಸರ್ವ ಜವಾಬ್ದಾರಿಯನ್ನು ತಂದೆಗೆ ಒಪ್ಪಿಸಿ ಕುಳಿತಿದ್ದಾನೆ. ಅವನು ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾರ. ಇದೇ ರೀತಿ ಅನೇಕ ಜನ ಮತ್ತೊಬ್ಬರ ಬದುಕನ್ನು ಸಂಪೂರ್ಣವಾಗಿ ಕೈಗೆ ತೆಗೆದುಕೊಂಡಿರುತ್ತಾರೆ. ಅವರಿಗೆ ಮತ್ತೊಬ್ಬರನ್ನು ಆಳುವ, ನಿಯಂತ್ರಿಸುವ ಬಯಕೆ. ಅಂಥವರ ಬಗ್ಗೆ ಈ ಕಗ್ಗ ತಿಳಿಹೇಳುತ್ತದೆ. ಮತ್ತೊಬ್ಬರ ಬಾಳನ್ನು ಆಳುವ ಸಾಹವೇಕೆ? ನಮ್ಮ ಬಾಳಿನ ಹೊರೆಯೇ ಸಾಕಷ್ಟಿಲ್ಲವೆ? ಬಾಳುವುದು ಎಂದರೆ ಬೆಳೆಯುವುದು. ಬೆಳೆಯುವುದು ಅತ್ಯಂತ ಸ್ವಾಭಾವಿಕ ಕ್ರಿಯೆ. ಈ ಬೆಳವಣಿಗೆಯ ಆಧಾರ ಅನುಭವ. ಒಂದು ಜೀವದ ಅನುಭವ ಅದರದೇ ಆಗಿರಬೇಕು. ಮತ್ತೊಬ್ಬರ ಅನುಭವ ನನ್ನದಾಗಲು ಸಾಧ್ಯವಿಲ್ಲ. ಅದು ಸಹಜವಲ್ಲ. ಅನುಭವವೊಂದೇ ಸತ್ಯವಾಗಿ ಉಳಿಯುತ್ತದೆ. ಉಳಿದೆಲ್ಲ ನಮ್ಮ ಪಾಲಿಗೆ ಮಿಥ್ಯೆ. ಮರದಲ್ಲಿಯ ಮೊಗ್ಗು ತಾನೇ ಮರದ ಸಾರ ಸರ್ವಸ್ವವನ್ನು ಹೀರಿಕೊಂಡಾಗ ನೈಜವಾಗಿ, ಸಹಜವಾಗಿ ಅರಳಿ ಸಂತೋಷಕೊಡುತ್ತದೆ. ಹೊರಗಿನಿಂದ ಸಿಂಪಡಿಸಿದ ಸಾರ ಅದನ್ನು ಅರಳಿಸಲಾರದು. ಸೆರೆಮನೆಯಲ್ಲಿ ಭದ್ರತೆ ಇದೆ, ಊಟದ, ವ್ಯವಸ್ಥೆಯ ಚಿಂತೆಯಿಲ್ಲ, ಆದರೆ ಅದು ಮುದ ಕೊಡಲಾರದು. ಆದ್ದರಿಂದ ಪ್ರತಿಯೊಂದು ಜೀವ ಮತ್ತೊಂದನ್ನು ನಿಯಂತ್ರಿಸದೆ, ತನ್ನ ಅನುಭವದ ಬೆಳಕಿನಲ್ಲಿ ಬಾಳನ್ನು ಅರಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.