ADVERTISEMENT

ಬೆರಗಿನ ಬೆಳಕು: ಧೀರರ ಹೋರಾಟ

ಬೆರಗಿನ ಬೆಳಕು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 19:02 IST
Last Updated 28 ಫೆಬ್ರುವರಿ 2022, 19:02 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ವವ ಮೆರಸು – ಮಂಕುತಿಮ್ಮ || 573 ||

ಪದ-ಅರ್ಥ: ಬೀಳ್ವನ್ನವೊಬ್ಬಂಟಿಯಾದೊಡಂ=ಬೀಳ್ವನ್ನ(ಬೀಳುವಾಗ)+ಒಬ್ಬಂಟಿಯಾದೊಡಂ(ಒಬ್ಬಂಟಿಯಾದರೂ), ಧೀರಪಥವನೆ=ಧೀರತನದ ದಾರಿಯನ್ನೇ, ಬೆದಕು=ಹುಡುಕು, ಹೋರಿ=ಹೋರಾಡಿ.

ವಾಚ್ಯಾರ್ಥ: ಹೋರಾಡುತ್ತ ಬೀಳುವಾಗ ಒಬ್ಬಂಟಿಯಾದರೂ ಎಲ್ಲ ಸಮಯದಲ್ಲೂ, ಧೀರತನದ ದಾರಿಯನ್ನೇ ಹಿಡಿ. ದೂರದಲ್ಲಿ ಕುಳಿತು ಗೊಣಗುತ್ತ ಬದುಕುವ ಬಾಳಿಗೇನು ಬೆಲೆ? ಹೋರಾಡಿ ನಿನ್ನ ಸತ್ವವನ್ನು ಮೆರೆಸು.

ADVERTISEMENT

ವಿವರಣೆ: ತಿಲಕ ಮಾಂಜಿ ಬಿಹಾರದ ಸುಲ್ತಾನಗಂಜ್‌ನ ತಿಲಕಪುರ ಆದಿವಾಸಿ ಸಮುದಾಯದಲ್ಲಿ ಹುಟ್ಟಿದ ಹುಡುಗ. ಮಹಾ ದೇಶಪ್ರೇಮಿಯಾಗಿ ಬೆಳೆದ. ಬ್ರಿಟಿಶರು ಆದಿವಾಸಿಗಳ ಮೇಲೆ ಮಾಡುವ ಅತ್ಯಾಚಾರಗಳನ್ನು ಕಂಡು ಕುದಿದು ಹೋದವ. ಕೆಲವು ಜಮೀನ್ದಾರರು ಬ್ರಿಟಿಶರ ಎಂಜಲಿಗೆ ಕೈಚಾಚಿ ಆದಿವಾಸಿಗಳಿಗೆ ಅನ್ಯಾಯ ಮಾಡುವುದನ್ನು ಕಂಡಿದ್ದ. ಕೇವಲ ಕೈಯಲ್ಲಿ ಒಂದು ಬಿಲ್ಲು, ಬಾಣಗಳನ್ನು ಹಿಡಿದು ಬ್ರಿಟಿಶರ ಆಧುನಿಕ ಶಸ್ತ್ರಾಸ್ತ್ರಗಳನ್ನು ಎದುರಿಸುವ ಧೈರ್ಯ ಮಾಡಿದವ. ಒಂದು ದಿನ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಹಬ್ಬ ನಡೆದಿತ್ತು. ಅಲ್ಲಿ ತಿಲಕ ಮಾಂಜಿ ಬಂದಿರುತ್ತಾನೆಂದು ತಿಳಿದು ಬ್ರಿಟಿಶ್ ಅಧಿಕಾರಿ ಆಗಸ್ಟಸ್ ಕ್ಲೀವ್‌ಲ್ಯಾಂಡ್ ತನ್ನ ದೊಡ್ಡ ಸೈನ್ಯದೊಂದಿಗೆ ಬಂದು ಏಕಾಏಕಿ ದಾಳಿ ಮಾಡಿ ನೂರಾರು ಆದಿವಾಸಿಗಳನ್ನು, ಅದರಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಕೊಂದುಹಾಕುತ್ತಾನೆ. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತಿಲಕ ಮಾಂಜಿ ಒಬ್ಬನೇ ಈಚಲು ಮರದ ಮೇಲೆ ತನ್ನ ಬಿಲ್ಲು ಬಾಣಗಳೊಂದಿಗೆ ಕುಳಿತು ಬ್ರಿಟಿಶ್ ಸೈನ್ಯದ ದಾರಿ ಕಾಯುತ್ತಾನೆ. ಒಂದೆಡೆಗೆ ನೂರಾರು ಸಶಸ್ತ್ರ ಬ್ರಿಟಿಶ್ ಸೈನಿಕರು, ಮತ್ತೊಂದೆಡೆಗೆ ಒಬ್ಬಂಟಿ ತಿಲಕ ಮಾಂಜಿ. ಆತ ಮರದ ಮೇಲೆ ಕುಳಿತು ಬಿಲ್ಲಿಗೆ ಬಾಣವನ್ನು ಏರಿಸಿ ಕ್ಲೀವ್‌ಲ್ಯಾಂಡ್ ಬರುವುದನ್ನೇ ಕಾಯುತ್ತ, ಆತ ಮರದ ಹತ್ತಿರ ಬಂದಾಗ ಎಷ್ಟು ಗುರಿಯಿಂದ, ವೇಗವಾಗಿ ಬಾಣ ಬಿಟ್ಟನೆಂದರೆ, ಬಾಣ ಯಾರ ಕಣ್ಣಿಗೂ ಕಾಣದೆ ಕ್ಲೀವ್‌ಲ್ಯಾಂಡ್‌ನ ಎದೆಯನ್ನು ಸೀಳಿತ್ತು. ತಾವು ನೂರಾರು ಜನರಿಂದ ಸುತ್ತುವರಿದಿರಬೇಕೆಂದು ಇಡೀ ಸೈನ್ಯ ಗಾಬರಿಯಿಂದ ಓಡಿ ಹೋಯಿತು. ಮುಂದೆ ಅಯರ್‌ಕುಟ್ ಎಂಬ ಮತ್ತೊಬ್ಬ ಬ್ರಿಟಿಶ್ ಅಧಿಕಾರಿ ದ್ವೇಷದಿಂದ ಸಿಕ್ಕ ಸಿಕ್ಕ ಆದಿವಾಸಿಗಳನ್ನು ಕೊಲ್ಲುವುದನ್ನು ಕಂಡು, ಸಾವಿರ ಸೈನಿಕರ ಎದುರಿಗೆ ತಿಲಕ ಮಾಂಜಿ ಬಂದ. ಅವನನ್ನು ಹಿಡಿದು ಕಾಲುಗಳನ್ನು ನಾಲ್ಕು ಕುದುರೆಗಳಿಗೆ ಕಟ್ಟಿ ಹತ್ತಾರು ಮೈಲಿ ನೆಲದಲ್ಲಿ ದರದರನೆ ಎಳೆದಾಡುತ್ತಾರೆ. ಅವನ ದೇಹ ಇಂಚಿಂಚೂ ಹರಿದು ಹೋಗಿತ್ತು. ಆತ, ‘ನೀವು ಈ ದೇಹವನ್ನು ಕೊಲ್ಲಬಹುದೇ ವಿನಃ ಸ್ವಾತಂತ್ರ್ಯ ಹೋರಾಟಗಾರನನ್ನಲ್ಲ’ ಎಂದು ನಗುನಗುತ್ತ ನೇಣು ಹಗ್ಗಕ್ಕೆ ಮುತ್ತು ಕೊಟ್ಟು ವೀರಮರಣವನ್ನು ಪಡೆಯುತ್ತಾನೆ.

ತಾನು ಏಕಾಂಗಿ ಎಂದು ಮಾಂಜಿ ಹೆದರಿದನೆ? ಬದುಕಬೇಕೆಂದು ವೈರಿಗಳ ಜೊತೆಗೆ ಶಾಮೀಲಾದನೆ? ಹಾಗೆ ಮಾಡಿಲ್ಲವಾದ್ದರಿಂದ ಅನೇಕ ಭಾರತೀಯರ ಹೃದಯಗಳಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಕಗ್ಗ ಈ ಮಾತನ್ನು ಮನಮುಟ್ಟುವಂತೆ ಹೇಳುತ್ತದೆ. ನೀನು ಏಕಾಂಗಿಯಾಗಿ, ಸೋಲುತ್ತೇನೆ ಎಂದು ಖಚಿತವಾದರೂ ಹೋರಾಡು. ಹೀಗೆ ಹೋರಾಡುವಾಗ ಸದಾಕಾಲ ಧೀರರ ಮಾರ್ಗವನ್ನೇ ಆಯ್ದುಕೋ. ಅದನ್ನು ಬಿಟ್ಟು, ದೂರದಲ್ಲಿ ಯಾವಾಗಲೂ, ಏನಾದರೂ ಗೊಣಗುತ್ತ ಕುಳಿತರೆ, ಆ ಬಾಳಿಗೆ ಏನು ಬೆಲೆ? ಬದುಕಿನ ಸತ್ವ ಇರುವುದೇ ಹೀಗೆ ಒಂದು ಧ್ಯೇಯಕ್ಕೋಸ್ಕರ, ನ್ಯಾಯಕ್ಕೋಸ್ಕರ ಹೋರಾಡುವಲ್ಲಿ, ಅದು ಸತ್ವಯುತವಾದ ಬದುಕು, ಶಾಶ್ವತವಾಗುವ ಬದುಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.