ADVERTISEMENT

ಬೆರಗಿನ ಬೆಳಕು: ಸಾರ್ಥಕ ಬದುಕಿನ ರೀತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 23:30 IST
Last Updated 16 ಅಕ್ಟೋಬರ್ 2022, 23:30 IST
   

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |

ಆಯಸಂಬಡಿಸದವೊಲಂತರಾತ್ಮನನು ||
ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |
ಆಯುವನು ಸಾಗಿತೆಲೊ – ಮಂಕುತಿಮ್ಮ || 736 ||

ಪದ-ಅರ್ಥ: ಚರಿಸುತ್ತ=ಮಾಡುತ್ತ, ಮಾನಸವ=ಮನಸ್ಸನ್ನು, ಸಯ್ತಿಡುತ=ಸಮಾಧಾನಗೊಳಿಸುತ್ತ, ಆಯಸಂಬಡಿಸದವೊಲಂತರಾತ್ಮನನು= ಆಯಸಂ ಬಡಿಸದವೊಲ್ (ಆಯಾಸಗೊಳಿಸದಂತೆ)+ ಆತ್ಮನನು , ಆಯುವನು=ಆಯುಷ್ಯವನ್ನು
ವಾಚ್ಯಾರ್ಥ: ದೊರೆತ ಕಾರ್ಯವನ್ನು ಮಾಡುತ್ತ, ಮನಸ್ಸನ್ನು ಸಮಾಧಾನವಾಗಿಟ್ಟುಕೊಂಡು, ಆತ್ಮ ವನ್ನು ಆಯಾಸಗೊಳಿಸದೆ, ಜಗತ್ತಿನಮಾಯೆಯೊಡನೆ ಆಟ ವಾಡುತ್ತ, ಭಗವಂತನನ್ನು ಭಜಿಸುತ್ತ, ನಿನ್ನ ಆಯುಷ್ಯವನ್ನು ಸಾಗಿಸು.

ADVERTISEMENT

ವಿವರಣೆ: ಹುಟ್ಟಿದ ಮೇಲೆ ಸಾಯುವ ತನಕ ಬದುಕಲೇಬೇಕು. ಹೇಗೆ ಬದುಕಬೇಕು ಎನ್ನುವುದನ್ನು ಈ ಕಗ್ಗ ಸೂತ್ರರೂಪವಾಗಿ ಹೇಳುತ್ತದೆ. ನಮ್ಮ ಯೋಗ್ಯತೆಗೆ ತಕ್ಕಂತೆ, ಅಂದಿನ ಪರಿಸ್ಥಿತಿಗೆ ಅನುಗುಣವಾಗಿ, ದೈವ ಬಯಸಿದಂತೆ ದೊರೆತ ಕಾರ್ಯವನ್ನು ಶ್ರದ್ಧೆಯಿಂದ ಮಾಡಬೇಕು. ಕೊರಗುತ್ತ, ‘ಅಯ್ಯೋ ಇದೇನು ಕೆಲಸ’ ಎಂದು ಮಾಡುವುದು ಕೆಲಸಕ್ಕೆ ಮಾಡಿದ ಅಪಮಾನ. ಯಾವ ಕಾರ್ಯವೂ ಕನಿಷ್ಠವಲ್ಲ. ಹೀಗೆ ಕಾರ್ಯ ಮಾಡುವಾಗ ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳಬೇಕು. ಮನಸ್ಸು ಸ್ಥಿಮಿತದಲ್ಲಿಲ್ಲದಾಗ ಕಾರ್ಯ ಸರಿಯಾಗಿ ಆಗಲಾರದು. ಮತ್ತು ಕಾರ್ಯದಲ್ಲಿ ಶ್ರದ್ಧೆ ಇಲ್ಲದಾಗ ಮನಸ್ಸು ಕದಡಿ ಹೋಗುತ್ತದೆ. ಆದ್ದರಿಂದ ಮನಸ್ಸಿನ ಹದವನ್ನು ಸದಾಕಾಲ ಕಾಪಾಡಿಕೊಳ್ಳಬೇಕು. ಕಗ್ಗ ಹೇಳುತ್ತದೆ, “ಅಂತರಾತ್ಮನನ್ನು ಆಯಾಸಗೊಳಿಸದಂತೆ” ಇರಬೇಕು. ಅಂತರಾತ್ಮನಿಗೆ ಆಯಾಸವೆಂದರೇನು? ಅಂತರಾತ್ಮನಿಗೆ ಆಯಾಸವಾಗುತ್ತದೆಯೇ? ಯಾವ ಕಾರ್ಯದಿಂದ ಆಯಾಸವಾದೀತು? ನ್ಯಾಯವಾದ, ಪ್ರಾಮಾಣಿಕವಾದ, ದೇಶಪ್ರೇಮದ ಕೆಲಸ ಮಾಡಿದಾಗ ಆತ್ಮತೃಪ್ತಿಯಾಯಿತು ಎನ್ನುತ್ತೇವೆ. ಅಂಥ ವ್ಯಕ್ತಿ, ಯಾರೇ ಆಗಲಿ ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬಲ್ಲ, ಯಾಕೆಂದರೆ ಆತ್ಮಪ್ರಜ್ಞೆ ನಿಷ್ಕಳಂಕವಾಗಿದೆ. ಆದರೆ ಮತ್ತೊಬ್ಬರಿಗೆ ಮೋಸ ಮಾಡಿದಾಗ, ಅನ್ಯಾಯದಿಂದ ಹಣ ಸಂಪಾದಿಸಿದಾಗ, ದೇಶ ದ್ರೋಹ ಮಾಡಿದಾಗ, ಅವನ ಆತ್ಮವೇ ಅಪರಾಧಿಭಾವದಿಂದ ಕುದಿದು ಹೋಗುತ್ತದೆ, ತಳಮಳಿಸುತ್ತದೆ.

ಅದೇ ಅಂತರಾತ್ಮನಿಗಾಗುವ ಆಯಾಸ. ಅಂತರಾತ್ಮ ಆಯಾಸಪಡದೆ ಇರಬೇಕಾದರೆ ಅನ್ಯಾಯವನ್ನು ಚಿಂತಿಸದ, ದ್ರೋಹಕ್ಕೆ ಮನ ನೀಡದ, ಪರರ ದುಃಖಕ್ಕೆ ಕಾರಣವಾಗದ ನಡೆ ನಮ್ಮದಾಗಬೇಕು. ಮಾಯೆಯೊಡನೆ ಆಡುವುದೆಂದರೇನು? ಸರಿ ತಪ್ಪುಗಳನ್ನು ಪರಾಮರ್ಶಿಸದೆ ನಾವು ಪ್ರಪಂಚದ ಮಾಯೆಯ ಭ್ರಮೆಯಲ್ಲೇ ಬದುಕುತ್ತೇವೆ. ಶಾಶ್ವತವಲ್ಲದಜಗತ್ತಿನಲ್ಲಿ ಸ್ವಾರ್ಥಪರತೆಯಿಂದ ಮಾಡಬಾರದ್ದನ್ನುಮಾಡುತ್ತೇವೆ. ನಂತರ ಒದ್ದಾಡುತ್ತೇವೆ. ಬುದ್ಧಿವಂತರಾದವರುಬದುಕಿನ ಪ್ರತಿಯೊಂದು ನಡೆಯೂ ಮಾಯೆಯೆಂದು ತಿಳಿದೂ ಅದರಲ್ಲಿ ನಿರ್ವಂಚನೆಯಿಂದ ಭಾಗವಹಿಸುತ್ತಾರೆ. ಈಮಾಯೆಯನ್ನು ಸೃಷ್ಟಿಸಿದ ಭಗವಂತನನ್ನು ಸದಾಕಾಲಧ್ಯಾನಿಸುತ್ತ ತನ್ನ ಆಯುಷ್ಯವನ್ನು ಕಳೆಯುತ್ತಾರೆ. ಈ ಐದು ರೀತಿಗಳನ್ನು ನೆನಪಿನಲ್ಲಿಟ್ಟು ಬದುಕು ಸಾಗಿಸಿದರೆ ಅದು ಖಂಡಿತವಾಗಿ ಸಾರ್ಥಕ ಬದುಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.