ADVERTISEMENT

ಬೆರಗಿನ ಬೆಳಕು: ಜೀವ-ದೈವಗಳಿಂದ ಲಾವಣ್ಯ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 21:45 IST
Last Updated 1 ನವೆಂಬರ್ 2021, 21:45 IST
ಬೆರಗಿನ ಬೆಳಕು: ಗುರುರಾಜ ಕರಜಗಿ
ಬೆರಗಿನ ಬೆಳಕು: ಗುರುರಾಜ ಕರಜಗಿ    

ಜೀವಿ ಬೇಡದಿರೆ ದೈವವನು ಕೇಳುವವರಾರು?|
ದೈವಗುಟ್ಟಿರಿಸದಿರೆ ಜೀವಿಯರಸುವುದೇಂ?||
ಜೀವ ದೈವಂಗಳ ಪರಸ್ಪರಾನ್ವೇಷಣೆಯೆ|
ಲಾವಣ್ಯ ಸೃಷ್ಟಿಯಲಿ - ಮಂಕುತಿಮ್ಮ ||488||‌

ಪದ-ಅರ್ಥ: ಗುಟ್ಟಿರಿಸದಿರೆ= ಗುಟ್ಟು+ ಇರಿಸದಿರೆ (ಇರಿಸದಿದ್ದರೆ), ಜೀವಿಯರಸುವುದೇಂ= ಜೀವಿ+ ಅರಸುವುದು+ ಏಂ (ಏನನ್ನು), ಪರಸ್ಪರಾನ್ವೇಷಣೆಯೆ = ಪರಸ್ಪರ+ ಅನ್ವೇಷಣೆಯೆ

ವಾಚ್ಯಾರ್ಥ: ಜೀವಿಯೇ ಬೇಡದಿದ್ದರೆ ದೈವವನ್ನು ಯಾರು ಕೇಳುತ್ತಾರೆ? ದೈವವೊಂದು ಗುಟ್ಟಿನಂತೆ ಇರದಿದ್ದರೆ ಜೀವಿ ಹುಡುಕಾಡುವುದು ಏನನ್ನು? ಹೀಗೆ ಜೀವ ಮತ್ತು ದೈವಗಳ ಪರಸ್ಪರ ಹುಡುಕಾಟವೇ ಜಗತ್ತಿನಲ್ಲಿ ಸುಂದರತೆಯನ್ನು ತಂದದ್ದು.

ADVERTISEMENT

ವಿವರಣೆ: ಗಾಜಿಗೆ ಹೆಚ್ಚು ಬೆಲೆ ಇಲ್ಲ, ಯಾಕೆಂದರೆ ಅದು ಎಲ್ಲೆಡೆಯೂ, ಸುಲಭವಾಗಿ ಸಿಗುವಂಥದ್ದು. ಆದರೆ ಅದರಂತೆಯೇ ಮೇಲ್ನೋಟಕ್ಕೆ ಕಾಣುವ ವಜ್ರಕ್ಕೆ ತುಂಬ ಬೆಲೆ. ಯಾಕೆಂದರೆ ಅದು ಸುಲಭವಾಗಿ ದೊರೆಯಲಾರದು, ಅದನ್ನು ಪಡೆಯಲು ಅದಕ್ಕೆ ನೆಲವನ್ನು ಬಗೆದು ಪರಿಶ್ರಮಿಸಬೇಕು. ಹೀಗೆಂದರೆ, ಯಾವುದು ಸುಲಭವಲ್ಲವೋ, ನಮ್ಮ ಸಾಮಾನ್ಯ ಮಿತಿಗಳನ್ನು ಮೀರಿದ್ದೋ, ಹೆಚ್ಚು ಕಾಲ ಬಾಳುವಂಥದ್ದೋ, ಅದಕ್ಕೆ ಹೆಚ್ಚಿನ ಬೆಲೆ. ಅದನ್ನು ಪಡೆಯುವುದಕ್ಕೆ ತುಡಿತ. ಮಿತಕಾಲ ಬದುಕುವ ಮನುಷ್ಯನಿಗೆ ಅಮಿತವಾದದ್ದರೆಡೆಗೆ ಆಸಕ್ತಿ. ಮೃತ್ಯುವಿನ ಭಯವಿರುವ ಜೀವಿಗೆ, ಮೃತ್ಯುಂಜಯನ ಧ್ಯಾನ. ಹೀಗೆ ಭಯಜನ್ಯವಾಗಿ ಬಂದ ಚಿಂತನೆಯ ರೂಪ, ದೇವರು ಎಂಬ ಕಲ್ಪನೆ. ಬದುಕಿನ ಕಷ್ಟಗಳಲ್ಲಿ ಬೆಂದ ಜೀವಿ, ತಾನು ಕಲ್ಪಿಸಿಕೊಂಡ ಪರಮಶಕ್ತಿ ಕಾಪಾಡೀತು ಎಂಬ ನಂಬಿಕೆಯಿಂದ ಮೊಗವೆತ್ತಿ, ಕೈಚಾಚಿ ಬೇಡುತ್ತಾನೆ. ಹಾಗೆ ಬೇಡುವುದರಿಂದ ದೈವಕ್ಕೊಂದು ಬೆಲೆ. ಯಾರೂ ಬೇಡದೆ ಹೋದರೆ ದೈವವನ್ನು ಕೇಳುವವರಾರು? ಗಿರಾಕಿ ಇದ್ದರೆ ವ್ಯಾಪಾರ, ವ್ಯಾಪಾರಿ. ಗಿರಾಕಿಗಳೇ ಇಲ್ಲದಿದ್ದರೆ ವ್ಯಾಪಾರಿಗೇನು ಕೆಲಸ? ಇದು ಒಂದು ವಾದ. ದೇವರು ನಮ್ಮ ಮುಂದೆಯೇ ಸದಾಕಾಲ ಓಡಾಡಿಕೊಂಡಿದ್ದರೆ ಅವನನ್ನು ಹುಡುಕಲು ಪ್ರಯತ್ನ ಮಾಡಬೇಕೇ? ಅವನು ಕಣ್ಣಿಗೆ ಕಾಣದಂತೆ, ಮರೆಯಾಗಿರುವುದರಿಂದಲೇ ಜೀವಿ, ಅವನನ್ನು ಹುಡುಕಲು ಒದ್ದಾಡುವುದು. ಹೀಗೆ ಜೀವ, ದೈವಗಳು ಅನ್ಯೋನ್ಯಾಶ್ರಯಗಳು. ಒಂದಿಲ್ಲದೆ ಮತ್ತೊಂದಿಲ್ಲ. ದೈವಕ್ಕೂ ಜೀವಿ ಬೇಕು, ಯಾಕೆಂದರೆ ಅದು ಮೂಲತಃ ಜೀವಿಯ ಕಲ್ಪನೆಯೆ. ಈ ಪರಸ್ಪರ ಅನ್ವೇಷಣೆಯಿಂದ ಪ್ರಪಂಚಕ್ಕಾದದ್ದೇನು? ದೇವತೆಗಳು ಇದ್ದಾರೆ ಮತ್ತು ನಮ್ಮನ್ನು ಕಾಪಾಡುತ್ತಾರೆ ಎಂಬ ನಂಬಿಕೆಯೇ ವೇದ ವಾಙ್ಮಯದ ಸೃಷ್ಟಿಗೆ ಕಾರಣವಾಯಿತು. ಅದೊಂದು ಅಪರೂಪದ ಸಾಹಿತ್ಯ ಸೃಷ್ಟಿ, ಜ್ಞಾನದ ಮೂಲ. ಅತ್ಯಂತ ವಿಸ್ತøತವಾದ, ರಮ್ಯವಾದ ಸಾಹಿತ್ಯ ಸೃಷ್ಟಿಯ ಮೂಲವೂ ಈ ಚಿಂತನೆಯೆ. ಬ್ರಹ್ಮಸೂತ್ರಗಳು, ಪುರಾಣಗಳು, ಭಾಗವತ, ರಾಮಾಯಣ, ಮಹಾಭಾರತಗಳು, ಬೈಬಲ್, ಕುರಾನ್, ಗ್ರಂಥಸಾಹಿಬ್ ಇವೆಲ್ಲ ರಚನೆಯಾದದ್ದು ಜೀವ-ದೈವಗಳ ಅನ್ವೇಷಣೆಯ ಫಲವಾಗಿ. ದೇವರ ಕಲ್ಪನೆ ಎಂತಹ ಅದ್ಭುತವಾದ ಸಂಗೀತವನ್ನು, ನೃತ್ಯವನ್ನು ನಾಟಕಗಳನ್ನು ರಚಿಸುವುದಕ್ಕೆ ಕಾರಣವಾಗಿದೆ. ದೇವಸ್ಥಾನದ ರಚನೆ ಎಂತೆಂತಹ ಸರ್ವಶ್ರೇಷ್ಠ ವಿಗ್ರಹಗಳನ್ನು, ವಿಶೇಷವಾದ ಶಿಲ್ಪಶಾಸ್ತ್ರವನ್ನು ನಿರ್ಮಾಣ ಮಾಡಿದೆ. ಅರ್ಚಕರು ಪೂಜೆಯಿಂದ ಭಗವಂತನನ್ನು ಅರ್ಚಿಸಿದರೆ, ಶಿಲ್ಪಿ ತನ್ನ ಕಲೆಯಿಂದ ಪೂಜಿಸಿದ್ದಾನೆ. ಅಸಂಖ್ಯಾತ ಚಿತ್ರಗಳು, ಭಜನೆಗಳು, ಧ್ಯಾನಗಳು, ತೀರ್ಥಯಾತ್ರೆಗಳು ಇವೆಲ್ಲ ಸೇರಿ ಪ್ರಪಂಚದಲ್ಲಿ ಲಾವಣ್ಯವನ್ನು, ಸುಂದರತೆಯನ್ನು ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.