ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಮೌನರಸವೆಂಬ ಅದ್ಭುತ

ಡಾ. ಗುರುರಾಜ ಕರಜಗಿ
Published 29 ಸೆಪ್ಟೆಂಬರ್ 2021, 15:28 IST
Last Updated 29 ಸೆಪ್ಟೆಂಬರ್ 2021, 15:28 IST
   

ವ್ಯಸನಕಾರಣವೊಂದು ಹಸನಕಾರಣವೊಂದು |
ರಸಗಳೀಯೆರಡಕಿಂತಾಳವಿನ್ನೊಂದು ||
ಭೃಶ ವಿಶ್ವಜೀವಿತಗಭೀರತೆಯ ದರ್ಶನದ |
ರಸವದದ್ಭುತಮೌನ – ಮಂಕುತಿಮ್ಮ || 466 ||

ಪದ-ಅರ್ಥ: ಹಸನ= ಸಂತೋಷ, ರಸಗಳೀಯೆರಡಕಿಂತಾಳ= ರಸಗಳು+ ಈ+ ಎರಡಕಿಂತ+ ಆಳ, ಭೃಶ= ವಿಚಿತ್ರ, ಗಭೀರತೆ= ಗಂಭೀರತೆ, ರಸವದ್ಭುತಮೌನ= ರಸವು+ ಅದು+ ಅದ್ಭುತ+ ಮೌನ.

ವಾಚ್ಯಾರ್ಥ: ವ್ಯಸನಕ್ಕೊಂದು, ಸಂತೋಷಕ್ಕೊಂದು ರಸಗಳಿವೆ. ಅವೆರಡಕ್ಕಿಂತ ಆಳವಾದದ್ದು ಮತ್ತೊಂದಿದೆ. ಅದು ಈ ವಿಚಿತ್ರವಾದ ಪ್ರಪಂಚದ ಅನನ್ಯ ಗಂಭೀರತೆಯನ್ನು ಕಂಡಾಗ ಹುಟ್ಟುವಂಥದ್ದು. ಅದು ಮೌನ. ಯಾಕೆಂದರೆ ಆ ರಸ ಯಾವ ಮಾತಿಗೂ ಸಿಲುಕುವಂಥದ್ದಲ್ಲ.

ADVERTISEMENT

ವಿವರಣೆ: ರಸಸಿದ್ಧಾಂತವು, ಜಾಗತಿಕ ಸಾಂಸ್ಕೃತಿಕ ಪರಂಪರೆಗೆ ಭಾರತದ ವಿಶಿಷ್ಟವೂ ಮಹತ್ವಪೂರ್ಣವೂ ಆದ ಕೊಡುಗೆ. ನಾವು ಈಗ ತಿಳಿದಂತೆ ನವರಸಗಳಿದ್ದರೂ ಸ್ಥೂಲವಾಗಿ ಅವುಗಳನ್ನು ಎರಡೇ ಭಾಗಗಳಾಗಿ ನೋಡಬಹುದು. ನಮಗೆ ವ್ಯಸನ ತರುವ, ದುಃಖ ತರುವ ರಸಗಳು ಮತ್ತು ಸಂತೋಷವನ್ನು ನೀಡುವ ರಸಗಳು. ಶೃಂಗಾರ, ಹಾಸ್ಯ, ವೀರ, ಅದ್ಭುತ ಮತ್ತು ಶಾಂತರಸಗಳು ಮನಸ್ಸಿಗೆ ಮುದ ಸಂತೋಷ ನೀಡಿದರೆ, ಕರುಣ, ರೌದ್ರ, ಭಯಾನಕ, ಭೀಭತ್ಸಗಳು ಮನಸ್ಸಿಗೆ ತಳಮಳವನ್ನು, ಕೊರಗನ್ನು ತರುತ್ತವೆ. ಈ ಎರಡು ರಸಗಳಿಗಿಂತ ಆಳದಲ್ಲಿರುವ ರಸ ಮತ್ತೊಂದಿದೆ. ಅದು ಮೌನ. ಮೌನವೆಂದರೆ ಮಾತನಾಡದೆ ಇರುವುದಲ್ಲ. ಮಾತನಾಡದೆ ಸುಮ್ಮನಿದ್ದಾಗಲೂ ತಲೆಯಲ್ಲಿ ವಿಚಾರಗಳ ಕಾರ್ಖಾನೆ ನಡೆಯುತ್ತಲೇ ಇರುತ್ತದೆ. ಮೌನವೆನ್ನುವುದು ಮನಸ್ಸಿನಲ್ಲಿ ಆಲೋಚನೆಗಳೇ ಇಲ್ಲದ ಕ್ಷಣ. ಅದೊಂದು ಧ್ಯಾನಸ್ಥ ಸ್ಥಿತಿ. ಅಲ್ಲಿ ಸಂತೋಷವಿಲ್ಲ, ದುಃಖವಿಲ್ಲ, ಯಾವುದೇ ಯೋಚನೆಯ ತಾಕಲಾಟಗಳಿಲ್ಲ. ಯಾಕೆಂದರೆ ಅಲ್ಲಿ ಇಂದ್ರಿಯಗಳಿಗೆ ಕೆಲಸವಿಲ್ಲ. ಇಂದ್ರಿಯಗಳಿಂದಲೇ ನಮಗೆ ಸುಖದ, ದುಃಖದ ಅನುಭವವಾಗುವುದು. ಭಗವದ್ಗೀತೆಯಲ್ಲಿ ಮೌನವನ್ನು ತಪಸ್ಸು ಎಂದು ಕರೆಯಲಾಗಿದೆ.

ಮನಃಪ್ರಸಾದ: ಸೌಮ್ಯತ್ಪಂ ಮೌನಂ ಆತ್ಮವಿನಿಗ್ರಹಃ |
ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ||

ಮೌನ ಆತ್ಮದಲ್ಲಿ ಸ್ಫರಿಸುವ ರಸ. ಅದಕ್ಕೆ ಇಂದ್ರಿಯಗಳ ಅವಶ್ಯಕತೆಯಿಲ್ಲ. ಹತ್ತನೆಯ ಅಧ್ಯಾಯದಲ್ಲಿ ‘ಮೌನಂ ಚೈವಾಸ್ಮಿ ಗುಹ್ಯಾನಾಂ’ ಎನ್ನುತ್ತಾನೆ ಕೃಷ್ಣ. ಅಂದರೆ ‘ಅತ್ಯಂತ ಗೂಢವಾದದ್ದರಲ್ಲಿ ಮೌನ ನಾನು’. ಯಾವುದು ಗೂಢ? ಯಾವುದು ದೇಹ ಮತ್ತು ಮನಸ್ಸುಗಳಿಗೆ ಸಿಕ್ಕದೊ ಅದು ಗೂಢ, ಅನೂಹ್ಯ. ಕಲ್ಪನಾತೀತವಾದದ್ದನ್ನು ಒಮ್ಮೆಲೆ ಎದುರಿಸಿದಾಗ, ಎಂದೆಂದೂ ಚಿಂತಿಸಿದ ವಿಷಯ ಧುತ್ತನೆ ಮುಂದೆ ಸಾಕ್ಷಾತ್ಕಾರವಾದಾಗ ಮನಸ್ಸು ಏನನ್ನು ಹೇಳಲೂ ಅಸಮರ್ಥವಾಗುತ್ತದೆ. ಆಗ ‘I become numb’ ಎಂತಲೋ ‘I was blinded’ ಎಂತಲೋ ಎನ್ನುವುದುಂಟು. ಅದನ್ನು ವರ್ಣಿಸಲು ಆಗ ಭಾಷೆ ಸಾಲುವುದಿಲ್ಲ. ಸುನಾಮಿಯ ನೂರು ಅಡಿ ಎತ್ತರದ ಸಮುದ್ರದ ತೆರೆಗಳ ಗೋಡೆಯನ್ನು ಮೊದಲು ಕಂಡವನಿಗೆ ಏನಾಗಿರಬೇಕು? ಬೆಟ್ಟದ ಮೇಲೆ ನಿಂತಾಗ ಇದ್ದಕಿದ್ದಂತೆ ಪಕ್ಕದಲ್ಲೇ ಲಾವಾರಸದ ಕಾರಂಜಿ ಪುಟಿದರೆ ಮಾತು ಬಂದೀತೇ? ಬಹುಶಃ ತಾನು ಸ್ನೇಹಿತನೆಂದೇ ಬಗೆದ ಕೃಷ್ಣನ ವಿಶ್ವರೂಪವನ್ನು ನೋಡಿದಾಗ ಅರ್ಜುನನಿಗೆ ಹೀಗೆಯೇ ಅನ್ನಿಸಿರಬೇಕಲ್ಲವೇ? ಹೀಗೆ ಈ ವಿಚಿತ್ರ ಪ್ರಪಂಚದ ಜೀವಿತದಲ್ಲಿ ಎದುರಾದ ಗಂಭೀರತೆಯನ್ನು ಕಂಡಾಗ ಅದನ್ನು ವಿವರಿಸಲರಿಯದೆ ಮನಸ್ಸು ಮೌನಕ್ಕೆ ಜಾರುತ್ತದೆ. ಈ ಮೌನದ ರಸ, ಸಂತೋಷದ, ದುಃಖದ ರಸಗಳನ್ನು ಮೀರಿಸಿದ್ದು ಮತ್ತು ಅವುಗಳಿಗಿಂತ ಆಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.