ADVERTISEMENT

ಬೆರಗಿನ ಬೆಳಕು: ಮುಕ್ತಿಬೀಜ

ಡಾ. ಗುರುರಾಜ ಕರಜಗಿ
Published 9 ಜನವರಿ 2023, 19:31 IST
Last Updated 9 ಜನವರಿ 2023, 19:31 IST
   

ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು |
ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ
ಪರಮತತ್ವ್ತ ಜ್ಞಾನಿಯೊಡರಿಸುವ ಕರುಮಗಳು |
ಮರುಬೆಳೆಗೆ ಬಿತ್ತಲ್ಲ – ಮಂಕುತಿಮ್ಮ || 796 ||

ಪದ-ಅರ್ಥ: ತಿರಿಯೊಪ್ಪಿದೊಡೆ=ತಿರೆಯ(ಭೂಮಿಯ)+ಅಪ್ಪಿದೊಡೆ(ಅಪ್ಪಿದಾಗ), ಹುರಿದೊಡದು=ಹುರಿದೊಡೆ+ಅದು, ಮೊಳೆಯದರಳಹುದು=ಮೊಳೆಯದೆ+ಅರಳು+ಅಹುದು, ಬಾಯ್ಸವಿಗೆ=ಬಾಯಿಸವಿಗೆ, ಪರಮತತ್ವ್ತಜ್ಞಾನಿಯೊಡರಿಸುವ=ಪರಮ+ತತ್ವಜ್ಞಾನಿ+ಒಡರಿಸಂವ(ಮಾಡುವ), ಕರುಮಗಳು=ಕರ್ಮಗಳು, ಮರುಬೆಳೆಗೆ=ಮತ್ತೊಂದು ಬೆಳೆಗೆ, ಬಿತ್ತಲ್ಲ=ಬೀಜವಲ್ಲ.

ವಾಚ್ಯಾರ್ಥ: ಸರಿಯಾದ ಸಮಯಕ್ಕೆ ಹದವಾದ ಕಾಳು ಭೂಮಿಯಲ್ಲಿ ಬಿದ್ದರೆ ಮೊಳೆಯುತ್ತದೆ. ಆದರೆ ಬೀಜವನ್ನು ಹುರಿದರೆ ಅದು ಮೊಳೆಯದೆ ಬಾಯಿಸವಿಗೆ ಅರಳಾಗುತ್ತದೆ. ಅದನ್ನು ಮತ್ತೊಂದು ಬೆಳೆಗೆ ಬೀಜವಾಗಿ ಬಳಸಲು ಸಾಧ್ಯವಿಲ್ಲ. ಪರಮತತ್ವ್ತಜ್ಞಾನಿಯ ಕರ್ಮಗಳು ಅಂತೆ ಮರುಜನ್ಮಕ್ಕಲ್ಲ.

ವಿವರಣೆ: ಕಗ್ಗ ಒಂದು ಸುಂದರವಾದ ರೂಪಕದೊಂದಿಗೆ, ಅಧ್ಯಾತ್ಮಿಕ ಸತ್ಯಕ್ಕೆ ನೆಗೆಯುತ್ತದೆ. ಒಂದು ಸರಿಯಾಗಿ ಹದವಾದ ಕಾಳು, ಸರಿಯಾದ ಸಮಯದಲ್ಲಿ, ಸಿದ್ಧವಾದ ಮಣ್ಣಿನಲ್ಲಿ ಬಿದ್ದಾಗ, ಮೊಳಕೆಯೊಡೆಯುತ್ತದೆ. ಆದರೆ ಆ ಬೀಜವನ್ನು ಹುರಿದರೆ, ನಂತರ ಮಣ್ಣಿನಲ್ಲಿ ಹಾಕಿದರೆ ಅದು ಮೊಳೆಯಲಾರದು. ಆದರೆ ಅದು ಹುರಿದಾಗ ಕೇವಲ ಅರಳಾಗಿ ಬಾಯಿಸವಿಗೆ ವಸ್ತುವಾಗುತ್ತದೆ. ಹುರಿದಾಗ ಅದು ಮತ್ತೊಮ್ಮೆ ಮೊಳೆಯುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದು ಮತ್ತೊಮ್ಮೆ ಬೆಳೆಯಾಗಲು ಸಾಧ್ಯವಿಲ್ಲ. ಅದನ್ನೇ ಕಗ್ಗ “ಮರುಬೆಳೆಗೆ ಬಿತ್ತಲ್ಲ” ಎನ್ನುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕಗ್ಗ ಈ ಉದಾಹರಣೆಯನ್ನು ಮುಂದಿಟ್ಟುಕೊಂಡು ನಿಷ್ಕಾಮ ಕರ್ಮದ ಬಗ್ಗೆ ತಿಳಿಹೇಳುತ್ತದೆ. ಯಾವೊಬ್ಬ ವ್ಯಕ್ತಿಯೂ ಒಂದು ಕ್ಷಣವೂ ಕ್ರಿಯಾಶೂನ್ಯವಾಗಿ ಇರಲಾರ. ಕರ್ಮದಲ್ಲೂ ಎರಡು ಬಗೆ ಒಂದು ಕಾಮಕರ್ಮ, ಎರಡನೆಯದು ನಿಷ್ಕಾಮ ಕರ್ಮ. ದೇವತಾಸಮರ್ಪಣೆ ಇಲ್ಲದೇ, ಯಜ್ಞ ಬುದ್ಧಿಯಿಂದಲ್ಲದೆ ಮಾಡಿದ ಕರ್ಮ, ನಮ್ಮನ್ನು ಈ ಲೋಕಕ್ಕೆ ಬಿಗಿಯುತ್ತದೆ.

“ಯಜ್ಞಾರ್ಥಾತ್ಕರ್ಮಣೋವ್ಯತ್ರ ಲೋಕೋಯಂ ಕರ್ಮಬಂಧನ:|” ಎನ್ನುತ್ತದೆ ಭಗವದ್ಗೀತೆ. ಇದು ಹದವಾದ ಕಾಳು ನೆಲಕ್ಕೆ ಬಿದ್ದಂತೆ. ಅದರಿಂದ ಬೆಳೆ, ಬೆಳೆಯಿಂದ ಬೀಜ, ಮತ್ತೆ ಬೀಜದಿಂದ ಬೆಳೆ ಹೀಗೆ ಚಕ್ರ ಸುತ್ತುತ್ತಲೇ ಇರುತ್ತದೆ. ಕಾಮಫಲ ಮನುಷ್ಯರನ್ನು ಜನ್ಮಜನ್ಮಾಂತರಕ್ಕೆ ಭೂಮಿಯಲ್ಲಿ ಬಂಧಿಸಿ ಇಡುತ್ತದೆ. ಯಾರು ಈಶ್ವರಾರ್ಪಣ ಭಾವದಿಂದ ಕರ್ಮವನ್ನು ಮಾಡುತ್ತ, ಫಲಾಸಕ್ತಿಯಿಂದ ಮುಕ್ತನಾಗುತ್ತಾನೋ ಅವನೇ ಪರಮತತ್ವಜ್ಞಾನಿ. ಅವನು ಮಾಡುವ ಕರ್ಮವೆಲ್ಲ ನಿಷ್ಕಾಮ ಕರ್ಮ. ಶ್ರೀ ರಮಣ ಮಹರ್ಷಿಗಳು ಹೇಳಿದರು, ಈಶ್ವರಾರ್ಪಿತಂನೇಚ್ಛಯಾಕೃತಂ ಚಿತ್ತಶೋಧಕ ಮುಕ್ತಿಸಾಧಕಂ “ಭಗವದರ್ಪಣ ಬುದ್ಧಿಯಿಂದ, ಸ್ವಇಚ್ಛೆಯನ್ನು ತೊರೆದು ಮಾಡಿದ ಕರ್ಮ ಚಿತ್ತ ಶೋಧಕವಾಗುವುದರೊಂದಿಗೆ ಮುಕ್ತಿಸಾಧಕವಾಗುತ್ತದೆ”. ಮುಕ್ತಿಯೆಂದರೆ ಪುನರ್ಜನ್ಮವಿಲ್ಲ. ಇದು ಮತ್ತೊಂದು ಬೆಳೆಗೆ ಸಾಧ್ಯವಾಗದ ಬೀಜ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.