ADVERTISEMENT

ಗುರುರಾಜ ಕರಜಗಿ ಅಂಕಣ| ಅಂತ:ಕರಣದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:30 IST
Last Updated 10 ಫೆಬ್ರುವರಿ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಮಿಥಿಲೆಯ ದಕ್ಷಿಣ ನಿಗಮಕ್ಕೆ ಸೇರಿದ ಒಬ್ಬ ಹಳ್ಳಿಯ ಹೆಣ್ಣುಮಗಳು ತನ್ನ ಪುಟ್ಟ ಮಗನನ್ನು ಕರೆದುಕೊಂಡು ಮಹೋಷಧಕುಮಾರ ಕಟ್ಟಿಸಿದ ಪುಷ್ಕರಿಣಿಯಲ್ಲಿ ಸ್ನಾನಕ್ಕೆ ಬಂದಳು. ತನ್ನ ಐದು ತಿಂಗಳ ಮಗುವಿನ ಮುಖ ತೊಳೆದು, ಮೈ ಒರೆಸಿ, ಬೇರೆ ಬಟ್ಟೆಗಳನ್ನು ಹಾಕಿ ಪುಷ್ಕರಿಣಿಯ ದಂಡೆಯ ಮೇಲೆ ಮಲಗಿಸಿದಳು. ಇನ್ನು ತಾನೂ ಸ್ನಾನ ಮಾಡಬೇಕೆಂದು ನೀರಿಗೆ ಇಳಿದಳು. ಅದೇ ಸಮಯದಲ್ಲಿ ಯಕ್ಷಿಯೊಬ್ಬಳು ಮಲಗಿದ್ದ ಮಗುವನ್ನು ನೋಡಿದಳು. ಅದನ್ನು ತಿನ್ನಬೇಕೆಂಬ ಆಸೆಯಾಯಿತು. ಅದಕ್ಕಾಗಿ ತನ್ನ ವೇಷಮರೆಸಿಕೊಂಡು ಸುಂದರಳಾದ ತರುಣಿಯ ರೂಪದಲ್ಲಿ ಮುಂದೆ ಬಂದಳು. ನೀರಿನಲ್ಲಿದ್ದ ತಾಯಿಯನ್ನು ಕೇಳಿದಳು, ‘ಅಮ್ಮಾ ಇದು ನಿನ್ನ ಮಗುವೇ?’. ಆಕೆ ಹೌದು ಎಂದು ಗೋಣು ಅಲ್ಲಾಡಿಸಿದಳು. ‘ಮಗುವಿಗೆ ಎಷ್ಟು ತಿಂಗಳು?’ ‘ಐದು ತಿಂಗಳು’ ಎಂದಳು ಹಳ್ಳಿಯ ಹೆಂಗಸು. ಆಗ ಯಕ್ಷಿ ಕೇಳಿದಳು, ‘ಅಮ್ಮಾ ನಿಮ್ಮ ಮಗು ಇಷ್ಟು ಸುಂದರವಾಗಿದೆ. ಅದಕ್ಕೆ ನಾನು ಹಾಲು ಕುಡಿಸಲೇ?’. ಹೆಂಗಸು, ‘ನೀವೇಕೆ ನನ್ನ ಮಗುವಿಗೆ ಹಾಲು ಕುಡಿಸುತ್ತೀರಿ?’ ಎಂದು ಪ್ರಶ್ನೆ ಮಾಡಿದಳು. ತಕ್ಷಣವೇ ಯಕ್ಷಿ ಕಣ್ಣಲ್ಲಿ ನೀರು ತುಂದುಕೊಂಡು, ‘ಅಮ್ಮಾ, ನಾನು ದುರ್ದೈವಿ. ನನ್ನ ಮೂರು ತಿಂಗಳ ಮಗುವನ್ನು ಕಳೆದುಕೊಂಡಿದ್ದೇನೆ. ಅದಕ್ಕೇ ಪುಟ್ಟ ಮಕ್ಕಳನ್ನು ಕಂಡರೆ ಪ್ರೀತಿ. ಅದಲ್ಲದೆ ಹಾಲೂಡುವ ಮಗುವನ್ನು ಕಳೆದುಕೊಂಡದ್ದರಿಂದ ನನ್ನ ಮೊಲೆಗಳು ಹಾಲಿನಿಂದ ತುಂಬಿ ಬಿಗಿಯುತ್ತಿವೆ. ಮಕ್ಕಳಿಗೆ ಹಾಲು ಕುಡಿಸದಿದ್ದರೆ ಬಹಳ ತೊಂದರೆಯಾಗುತ್ತದೆ’ ಎಂದಳು. ಆಕೆಯ ಮಾತನ್ನು ನಂಬಿ ಹಳ್ಳಿಯ ಹೆಂಗಸು ಮಗುವಿಗೆ ಹಾಲೂಡಿಸಲು ಅನುಮತಿ ನೀಡಿದಳು.

ಯಕ್ಷಿ ಮಗುವನ್ನೆತ್ತಿಕೊಂಡು ಹಾಲೂಡುವಂತೆ ನಟಿಸುತ್ತ ಸೆರಗಿನಿಂದ ಅದನ್ನು ಮುಚ್ಚಿಕೊಂಡು ಓಡತೊಡಗಿದಳು. ಹಳ್ಳಿಯ ಹೆಂಗಸು ಗಾಬರಿಯಾಗಿ ಕೂಗುತ್ತ ಅವಳ ಬೆನ್ನು ಹತ್ತಿದಳು. ‘ಅಯ್ಯೋ, ಅಯ್ಯೋ, ಆಕೆಯನ್ನು ಹಿಡಿಯಿರಿ. ಆಕೆ ನನ್ನ ಮಗುವನ್ನು ಕದ್ದುಕೊಂಡು ಹೋಗುತ್ತಿದ್ದಾಳೆ’ ಎಂದು ಚೀರಾಡುತ್ತಿದ್ದಳು. ಕೊನೆಗೆ ತಾನೇ ಯಕ್ಷಿಯನ್ನು ತಡೆದು ನಿಲ್ಲಿಸಿ, ‘ನನ್ನ ಮಗುವನ್ನು ಕೊಡು’ ಎಂದು ಕಿತ್ತುಕೊಳ್ಳಲು ನೋಡಿದಳು. ಆದರೆ ಯಕ್ಷಿ, ‘ಇದು ನನ್ನ ಮಗು, ನಿನಗೇಕೆ ಕೊಡಲಿ?’ ಎಂದು ಮರಳಿ ಪ್ರಶ್ನೆ ಮಾಡಿದಳು. ಇಬ್ಬರೂ ಮಗು ತನ್ನದು, ತನ್ನದು ಎಂದು ಕೂಗಾಡತೊಡಗಿದರು.

ಸುತ್ತಲೂ ನೆರೆದಿದ್ದ ಜನಕ್ಕೆ ಯಾರು ಸತ್ಯ ಹೇಳುತ್ತಾರೆ ಎಂಬುದು ತಿಳಿಯಲಿಲ್ಲ. ಯಾರೋ ಹೋಗಿ ಮಹೋಷಧಕುಮಾರನನ್ನು ಕರೆದು ತಂದರು. ಆತ ಬಂದು ಏನು ತಕರಾರು ಎಂದು ಕೇಳಿದ. ಇಬ್ಬರೂ ಹೆಂಗಸರು ಮಗು ತಮ್ಮದೆಂದೇ ವಾದ ಮಾಡಿದರು. ಆಗ ಕುಮಾರ, ‘ನೀವಿಬ್ಬರೂ ನನ್ನ ತೀರ್ಮಾನವನ್ನು ಒಪ್ಪುತ್ತೀರಾ? ನಾನು ಹೇಳಿದ ಕೆಲಸವನ್ನು ಮಾಡುತ್ತೀರಾ?’ ಎಂದು ಕೇಳಿದ. ಇಬ್ಬರೂ ಒಪ್ಪಿದರು. ಆಗ ಕುಮಾರ ನೆಲದ ಮೇಲೆ ಒಂದು ಗೆರೆಯನ್ನು ಎಳೆದು, ಗೆರೆಯ ಮೇಲೆ ಅಡ್ಡಲಾಗಿ ಮಗುವನ್ನು ಅಂಗಾತ್ತಾಗಿ ಮಲಗಿಸಿದ. ನಂತರ ಇಬ್ಬರೂ ಹೆಂಗಸರಿಗೆ ವಿರುದ್ಧ ದಿಕ್ಕಿಗೆ ನಿಂತು ಒಬ್ಬಳು ಮಗುವಿನ ಕೈಗಳನ್ನು ಹಾಗೂ ಇನ್ನೊಬ್ಬಳು ಮಗುವಿನ ಕಾಲುಗಳನ್ನು ಹಿಡಿದು ಎಳೆಯಬೇಕು. ಯಾರು ಮಗುವನ್ನು ಎಳೆದುಕೊಂಡು ಹೋಗುವರೋ, ಮಗು ಅವರದೇ ಎಂದು ಹೇಳಿದ. ಇಬ್ಬರೂ ಮಗುವನ್ನು ಎಳೆಯತೊಡಗಿದರು. ಮಗು ನೋವಿನಿಂದ ಅಳತೊಡಗಿತು. ತಾಯಿಯ ಎದೆ ಒಡೆದೇ ಹೋಯಿತು. ಆಕೆ ಮಗುವನ್ನು ಬಿಟ್ಟು ದೂರ ನಿಂತು ಅಳತೊಡಗಿದಳು. ಯಕ್ಷಿ ಮಗುವನ್ನೆತ್ತಿ ಕುಣಿದಾಡಿದಳು. ಕುಮಾರ ಆಕೆಯ ಬಳಿಗೆ ಹೋಗಿ ಮಗುವನ್ನು ಕಿತ್ತುಕೊಂಡು ಬಡಹೆಂಗಸಿಗೆ ಕೊಟ್ಟು ಹೇಳಿದ, ‘ಮಗುವಿಗೆ ನೋವಾದೀತೆಂದು ತಾಯಿ ಕೈ ಬಿಟ್ಟಳು. ಆ ಅಂತ:ಕರಣವೇ ಮಾತೃತ್ವದ ಲಕ್ಷಣ’. ಯಕ್ಷಿಗೆ ಧರ್ಮಬೋಧೆ ಮಾಡಿ ಪಂಚಶೀಲಗಳಲ್ಲಿ ಪ್ರತಿಷ್ಠಾಪಿಸಿದ. ನಿಜವಾದ ತಾಯಿ ಸಂಭ್ರಮದಿಂದ ಮಗುವನ್ನೆತ್ತಿಕೊಂಡು ನಡೆದಳು.

ADVERTISEMENT

ಮಹೋಷಧಕುಮಾರನ ನ್ಯಾಯನಿರ್ಣಯದ ರೀತಿಯನ್ನು ಎಲ್ಲರೂ ಮೆಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.