ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ತಂದೆಯ ದರ್ಶನ

ಡಾ. ಗುರುರಾಜ ಕರಜಗಿ
Published 14 ಸೆಪ್ಟೆಂಬರ್ 2021, 19:30 IST
Last Updated 14 ಸೆಪ್ಟೆಂಬರ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಜಾಲಿಕುಮಾರ ಮುಚಲಿಂದ ಸರೋವರದ ದಂಡೆಯ ಮೇಲೆ ಡೇರೆ ಹಾಕಿಸಿದ. ಹದಿನಾಲ್ಕು ಸಾವಿರ ರಥಗಳನ್ನು ಬಂದ ದಾರಿಯ ಮೇಲೆ ನಿಲ್ಲಿಸಿ, ಆಶ್ರಮದ ಕಡೆಗೆ ಸಿಂಹ, ಹುಲಿ, ಗೆಂಡೆ ಮೃಗಗಳು ಬರುವ ದಾರಿಯಲ್ಲಿ ಕಾವಲು ಕೂಡಿಸಿದ. ಇಷ್ಟೊಂದು ದೊಡ್ಡ ಸೈನ್ಯ ಬಂದ ಮೇಲೆ ಸದ್ದಾಗದೆ ಇರುತ್ತದೆಯೇ? ಕೋಲಾಹಲವಾದಂತಾಯಿತು. ಇದನ್ನು ಕೇಳಿದ ವೆಸ್ಸಂತರ ಬೋಧಿಸತ್ವ ಚಿಂತೆಗೆ ಒಳಗಾದ. ಯಾರೋ ಶತ್ರುವೊಬ್ಬ ತನ್ನ ತಂದೆಯನ್ನು ಕೊಂದು, ಈಗ ತನ್ನನ್ನು ಕೊಲ್ಲಲು ಬಂದಿರಬಹುದೇ ಎಂಬ ಯೋಚನೆ ಬಂದಿತು.

ಆತ ಮಾದ್ರಿದೇವಿಯನ್ನು ಕರೆದುಕೊಂಡು ಪರ್ವತವನ್ನೇರಿದ. ಅಲ್ಲಿಂದ ಸೇನೆ ಕಾಣುತ್ತಿತ್ತು. ಆತ ಹೇಳಿದ, ‘ಮಾದ್ರಿ, ನೋಡು ಎಂಥ ಅನಾಹುತದ ದೃಶ್ಯ. ಅದೆಂಥ ಶಬ್ದ! ಶ್ರೇಷ್ಠ ಕುದುರೆಗಳು ಕೆನೆಯುತ್ತಿವೆ, ಧ್ವಜಗಳು ಹಾರಾಡುತ್ತಿವೆ. ಈ ಸೈನಿಕರು, ಕಾಡಿನಲ್ಲಿ ಬೇಟೆಗಾರರು ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ತಮ್ಮ ಈಟಿಗೆ ಸಿಕ್ಕಿಸಿಕೊಂಡು ಮುಂದೆ ಪ್ರಪಾತದಲ್ಲಿ ಬೀಳಿಸುವಂತೆ, ನಮ್ಮನ್ನು ತಮ್ಮ ತೀಕ್ಷ್ಣ ಆಯುಧಗಳಿಂದ ಚುಚ್ಚಿ ಚುಚ್ಚಿ ಕೊಲ್ಲುವರು. ನಿರ್ದೋಷಿಗಳಾದ ನಮ್ಮನ್ನು ಹಿಂದೊಮ್ಮೆ ದೇಶದಿಂದ ಹೊರಗೆ ಹಾಕಿ ಕಾಡಿಗೆ ಕಳುಹಿಸಿದಂತೆ, ಮತ್ತೆ ನಾವು ಯಾವುದೇ ತಪ್ಪು ಮಾಡದಿದ್ದರೂ ಶತ್ರುಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದೇವೆ’. ಮಾದ್ರಿದೇವಿ ಕೂಡ ಸೈನ್ಯವನ್ನು ನೋಡುತ್ತಿದ್ದಳು. ಆಕೆ, ‘ದೇವಾ, ನನಗೇನೋ ಆ ಸೇನೆ ನಮ್ಮ ದೇಶದ್ದೇ ಎನ್ನಿಸುತ್ತಿದೆ. ಅವರು ವೈರಿಗಳಾಗಿದ್ದರೆ ತಕ್ಷಣ ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದರು. ಬೆಂಕಿ ನೀರಿಗೆ ಹಾನಿಯನ್ನುಂಟು ಮಾಡಲಾರದು. ಅಂತೆಯೇ ಈ ಸೈನ್ಯ ನಮ್ಮನ್ನು ಏನೂ ಮಾಡಲಾರದು. ಹೀಗೆ ಧನಾತ್ಮಕವಾಗಿ ಯೋಚಿಸು. ಇದರಿಂದ ಕಲ್ಯಾಣವಾಗುತ್ತದೆ’ ಎಂದಳು.

ಬೋಧಿಸತ್ವ ಕೊಂಚ ಸಮಯದ ನಂತರ ತನ್ನ ಭಾವನೆಗಳ ಮೇಲೆ ಹತೋಟಿಯನ್ನು ಹೊಂದಿದಾಗ ಮಾದ್ರಿಯೊಂದಿಗೆ ಪರ್ವತದಿಂದ ಕೆಳಗಿಳಿದು ಬಂದು ಪರ್ಣಕುಟಿಯ ಬಾಗಿಲಲ್ಲಿ ಕುಳಿತ.

ADVERTISEMENT

ಇತ್ತ ಸಂಜಯ ಮಹಾರಾಜ ತನ್ನ ರಾಣಿ ಪುಸತಿದೇವಿಗೆ ಹೇಳಿದ, ‘ಭದ್ರೆ, ನಾವೆಲ್ಲರೂ ಒಟ್ಟಿಗೇ ಹೋಗುವುದು ಬೇಡ. ಮೊದಲು ನಾನು ಹೋಗುತ್ತೇನೆ, ಮಗ ವೆಸ್ಸಂತರನ ದುಃಖವನ್ನು ಶಮನ ಮಾಡಲು ನೋಡುತ್ತೇನೆ. ಸ್ವಲ್ಪ ಹೊತ್ತಿನ ಮೇಲೆ ನೀನು ಎಲ್ಲರನ್ನು ಜೊತೆಗೆ ಕರೆದುಕೊಂಡು ಬಾ. ನಂತರ ಕೆಲ ಸಮಯದ ನಂತರ ಮಕ್ಕಳು ಜಾಲಿಕುಮಾರ ಮತ್ತು ಕೃಷ್ಣಾಜಿನರು ಬರಲಿ’ ಹೀಗೆ ಹೇಳಿ ಆಶ್ರಮದ ಕಡೆಗೆ ಆನೆಯ ಮೇಲೆ ನಡೆದ. ಆಶ್ರಮದ ಬಾಗಿಲಲ್ಲಿ ಆನೆಯನ್ನು ನಿಲ್ಲಿಸಿ ಅದರ ಮೇಲಿಂದಿಳಿದು ಮಗನಿದ್ದ ಸ್ಥಳಕ್ಕೆ ಬಂದ. ಶಲ್ಯವನ್ನು ಒಂದು ಹೆಗಲ ಮೇಲೆ ಹಾಕಿಕೊಂಡು, ಅಮಾತ್ಯರನ್ನು ಜೊತೆ ಮಾಡಿಕೊಂಡು, ಸೇವಕರಿಂದ ಮಗನ ಮೇಲೆ ಹಣದ ಮಳೆ ಸುರಿಸಿದ. ಆದರೆ ಮಗ ವೆಸ್ಸಂತರ ಬೋಧಿಸತ್ವ ಏಕಾಗ್ರಚಿತ್ತದಿಂದ, ನಿರ್ಭಯಿಯಾಗಿ, ಧ್ಯಾನದಲ್ಲಿ ಸುಂದರ ವಿಗ್ರಹದಂತೆ ಕುಳಿತಿದ್ದ. ಹಣ ಮಳೆಯಾದೊಡನೆ ನಿಧಾನವಾಗಿ ಕಣ್ಣು ತೆರೆದು ತಂದೆಯನ್ನು ಕಂಡ. ಮಾದ್ರಿಯೆಡೆಗೆ ನೋಡಿದ. ಇಬ್ಬರೂ ಮುಂದೆ ಬಂದು, ‘ದೇವ, ತಮ್ಮ ಚರಣಗಳಿಗೆ ಬಹಳ ಗೌರವದಿಂದ ವಂದಿಸುತ್ತೇವೆ’ ಎಂದು ಇಬ್ಬರೂ ಸಂಜಯ ಮಹಾರಾಜನ ಚರಣಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.