ADVERTISEMENT

ಮಂಕುತಿಮ್ಮನ ಕಗ್ಗ | ಆತ್ಮದ ಸಹಜಗುಣ - ಸಂತೋಷ

ಡಾ. ಗುರುರಾಜ ಕರಜಗಿ
Published 26 ಮಾರ್ಚ್ 2020, 19:45 IST
Last Updated 26 ಮಾರ್ಚ್ 2020, 19:45 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು ? |

ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||
ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |
ಸಾಜ ಸೊಗವಾತ್ಮಂಗೆ – ಮಂಕುತಿಮ್ಮ || 268 ||

ಪದ-ಅರ್ಥ: ಸೊಗವಡಲು = ಸಂತೋಷಪಡಲು, ಚಾಚುತಿಹುದಾತ್ಮ = ಚಾಚುತಿಹುದು+ಆತ್ಮ, ಬಾಚಿಕೊಳಲಮೃತಕಣಗಳನ್ನೆಲ್ಲ = ಬಾಚಿಕೊಳ್ಳಲು+ಅಮೃತಕಣಗಳನ್ನೆಲ್ಲ, ಸಾಜ=ಸಹಜ, ಸೊಗವಾತ್ಮಂಗೆ = ಸೊಗವು(ಸಂತೋಷ) + ಆತ್ಮಂಗೆ.

ADVERTISEMENT

ವಾಚ್ಯಾರ್ಥ: ಬದುಕಿನಲ್ಲಿ ಸಂತೋಷಪಡುವುದಕ್ಕೆ ನಿನಗೆ ನಾಚಿಕೆಯೇಕೆ? ಜಗತ್ತಿನಲ್ಲಿಯ ಎಲ್ಲ ಶ್ರೇಷ್ಠ, ಅಮೃತಕಣಗಳನ್ನು ಬಾಚಿ ತನ್ನೆಡೆಗೆ ಸೆಳೆದುಕೊಳ್ಳಲು ಆತ್ಮ ತನ್ನ ನಾಲಗೆಯನ್ನು ದೆಸೆದೆಸೆಗೆ ಚಾಚುತ್ತದೆ. ಆತ್ಮನಿಗೆ ಈ ಸಂತೋಷ ಸಹಜವಾದದ್ದು.

ವಿವರಣೆ: ಬದುಕು ಎಂಬುದು ಬಹುದೊಡ್ಡ ಸಂಗತಿ. ಅದು ಅತ್ಯಂತ ಪವಿತ್ರವಾದದ್ದು ಮತ್ತು ಗೌರವಕ್ಕೆ ಅರ್ಹವಾದದ್ದು. ಇಂತಹ ಬದುಕಿಗೆ ಸಂತೋಷ ಬೇಡವೇ? ಸುಂದರವಾದ ಬದುಕಿಗೆ ಸಂತೋಷವೇ ಆಧಾರ. ಆ ಸಂತೋಷಪಡುವುದಕ್ಕೆ ನಾಚಿಕೆಯೇಕೆ? ಈ ಬದುಕು ಒಂದು ಮರ ಇದ್ದಂತೆ. ಅದು ಪ್ರತಿಕ್ಷಣ ನಿಸರ್ಗದೊಂದಿಗೆ ಸಂಭಾಷಿಸುತ್ತ ಬೆಳೆಯುತ್ತದೆ. ಪ್ರತಿದಿನ ಒಂದಿಷ್ಟು ಉದ್ದವಾಗುತ್ತದೆ, ಹೊಸಕೊಂಬೆಗಳು ಬೆಳೆಯುತ್ತವೆ. ಹಳೆ ಎಲೆ ಉದುರುತ್ತವೆ, ಮರು ತಿಂಗಳೇ ಮತ್ತೆ ಹೊಸ ಚಿಗುರು, ಹೊಸ ಮೊಗ್ಗು ಮರದಲ್ಲಿ ಉಕ್ಕುತ್ತವೆ. ನಮ್ಮ ಜೀವನದಲ್ಲಿ ಸಾಕಷ್ಟು ಹಳಸಲು, ಮಾಸಲು ಸಂಗ್ರಹವಾಗಿದೆ. ಅದು ಹೊರಗೆ ಹೋಗಬೇಕು, ಹೊಸ ಕಾಂತಿ, ಸಂಭ್ರಮ ತುಂಬಬೇಕು. ಅದು ನವಜೀವನ.

ಅಗ್ಗದ ವೈರಾಗ್ಯವನ್ನೇ ನಂಬಿಕೊಂಡು ಬದುಕಿನಲ್ಲಿ ಸೊಗಸನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ಬದುಕಿನಲ್ಲೇನಿದೆ, ಇದೊಂದು ನೀರ ಮೇಲಿನ ಗುಳ್ಳೆ. ನಮ್ಮ ಕೈಯಲ್ಲಿ ಏನೂ ಇಲ್ಲ, ಎಲ್ಲ ಭಗವಂತನ ಇಚ್ಛೆ. ಈಗ ಆಗುತ್ತಿರುವುದೆಲ್ಲ ಪೂರ್ವಾರ್ಜಿತದ ಕರ್ಮ. ಅದನ್ನು ಹಲ್ಲುಕಚ್ಚಿ ಅನುಭವಿಸಬೆಕು, ಪ್ರಯತ್ನ ಮಾಡಿ ಫಲವಿಲ್ಲ. ಹೀಗೆ ನಮ್ಮ ಪ್ರಲಾಪ ಹರಿಯುತ್ತಿದೆ ಇದು ವೈರಾಗ್ಯವಲ್ಲ, ಹೇಡಿತನ. ಪ್ರಪಂಚದಲ್ಲಿ ಅದೆಷ್ಟು ಸೊಗಸಿದೆ, ಸಂತೋಷವಿದೆ! ಅದನ್ನು ನಮ್ಮ ಜೀವನದಲ್ಲಿ ತುಂಬಿಕೊಳ್ಳಬೇಡವೇ? ಅದಕ್ಕೇ ನಮ್ಮ ಆತ್ಮ ಈ ಪ್ರಪಂಚದಲ್ಲಿ ಎಲ್ಲೆಲ್ಲಿಯೂ ಹರಡಿರುವ ಸುಂದರವಾದ, ಸಂತೋಷದ ಅಮೃತಕಣಗಳನ್ನು ಹುಡುಕಿಕೊಂಡು ದೆಸೆದೆಸೆಗೆ ಹೋಗುತ್ತದೆ. ನಮ್ಮ ಮನಸ್ಸಿನ ಮೂಲಕ ಪ್ರಪಂಚದ ಬೇರೆ ಬೇರೆ ಭಾಗಗಳ ಸುಂದರ ದೃಶ್ಯಗಳನ್ನು ನೋಡಬಯಸುತ್ತದೆ, ಅತ್ಯದ್ಭುತ ಪ್ರಸಂಗಗಳನ್ನು ಕೇಳಬಯಸುತ್ತದೆ, ಶ್ರೇಷ್ಠ ಸಾಹಿತ್ಯಾಕೃತಿಗಳನ್ನು ಓದಬಯಸುತ್ತದೆ, ಕೋಮಲವಾದ ವಸ್ತುಗಳನ್ನು ಮುಟ್ಟಬಯಸುತ್ತದೆ. ಹೀಗೆ ನೋಡಿ, ಕೇಳಿ, ಓದಿ, ಮುಟ್ಟಿ ನಮಗೆ ದೊರಕಿದ್ದು ಸುಖ. ಇವುಗಳ ಅನುಭವ ನಮ್ಮ ಹೃದಯದಲ್ಲಿ, ಮನಸ್ಸಿನಲ್ಲಿ ಧ್ವನಿಸಿದ್ದು ಶಾಂತಿ.

ಈ ಸುಖ-ಶಾಂತಿಗಳು ನಮ್ಮ ಬದುಕನ್ನು ಸಹ್ಯವಾಗಿಸುತ್ತವೆ, ಅನಿವಾರ್ಯವಾದ ಕಷ್ಟ, ದು:ಖಗಳಿಂದ ನಮ್ಮನ್ನು ಕೆಲಕಾಲವಾದರೂ ರಕ್ಷಿಸುತ್ತವೆ, ಮುಂದೆ ಬದುಕನ್ನು ಎದುರಿಸಲು ಪ್ರೇರಣೆಯನ್ನೀಯುತ್ತವೆ. ಸಂತೋಷವೇ ಆತ್ಮದ ಸಹಜಗುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.