ADVERTISEMENT

ಬುದ್ಧನ ಜಾತಕ ಕಥೆಗಳು | ಕೋಪದಲ್ಲಿ ಮಾಡಿದ ತೀರ್ಮಾನ

ಡಾ. ಗುರುರಾಜ ಕರಜಗಿ
Published 27 ಮಾರ್ಚ್ 2020, 17:24 IST
Last Updated 27 ಮಾರ್ಚ್ 2020, 17:24 IST
ಗೌತಮ ಬುದ್ಧ
ಗೌತಮ ಬುದ್ಧ   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿ, ಶ್ರೇಷ್ಠ ಶಿಕ್ಷಣವನ್ನು ಪಡೆದು, ರಾಜಕುಮಾರನಾಗಿ ದೇಶವನ್ನು ಸುತ್ತಿ, ಅನುಭವ ಪಡೆದು, ತಂದೆಯ ಮರಣಾನಂತರ ತಾನೇ ರಾಜನಾದ. ದಾನಗಳನ್ನು ಮಾಡಿ, ಧರ್ಮದಿಂದ ರಾಜ್ಯವನ್ನು ನಡೆಸಿ ದೊಡ್ಡ ಹೆಸರು ಸಂಪಾದಿಸಿದ.

ಅವನ ತೋಟದಲ್ಲಿ ಒಬ್ಬ ಮಾಲಿ ಇದ್ದ. ಅವನ ಹೆಸರು ಸುಮಂಗಲ. ಆತ ತುಂಬ ಪ್ರಾಮಾಣಿಕನಾದ ವ್ಯಕ್ತಿ. ಒಮ್ಮೆ ಒಬ್ಬ ಪ್ರತ್ಯೇಕ ಬುದ್ಧ ಹಿಮಾಲಯ ಪರ್ವತದಿಂದ ಹೊರಟು ದೇಶವನ್ನು ಸುತ್ತುತ್ತ ವಾರಾಣಸಿಗೆ ಬಂದ. ಅವನು ನಗರದಲ್ಲಿ ಭಿಕ್ಷಾಟನೆಗೆ ಬಂದದ್ದನ್ನು ತಿಳಿದ ಬೋಧಿಸತ್ವ ಅವನನ್ನು ಅರಮನೆಗೆ ಕರೆದೊಯ್ದು ಸಕಲ ಸನ್ಮಾನಗಳನ್ನು ಮಾಡಿ ಭೋಜನವನ್ನು ತಾನೇ ಬಡಿಸಿ ಗೌರವ ತೋರಿಸಿದ. ನಂತರ ಪ್ರತ್ಯೇಕ ಬುದ್ಧನ ವಸತಿಗೆ ರಾಜೋದ್ಯಾನದಲ್ಲಿ ಉಚಿತ ವ್ಯವಸ್ಥೆ ಮಾಡಿದ. ಅವನ ಸೇವೆಗೆಂದು ಸುಮಂಗಲ ಮಾಲಿಯನ್ನು ನೇಮಿಸಿದ. ಸುಮಂಗಲ ಸನ್ಯಾಸಿಯ ಸೇವೆಯನ್ನು ಅತ್ಯಂತ ಶ್ರದ್ಧೆ, ಗೌರವಗಳಿಂದ ಮಾಡಿದ.

ಗುರುರಾಜ ಕರಜಗಿ

ಒಂದೆರಡು ತಿಂಗಳುಗಳ ನಂತರ ಒಂದು ದಿನ ಪ್ರತ್ಯೇಕ ಬುದ್ಧ ಸುಮಂಗಲನನ್ನು ಕರೆದು ಹೇಳಿದ, ‘ನಾನು ಕೆಲವು ದಿನಗಳ ಮಟ್ಟಿಗೆ ಇಂಥ ಊರಿಗೆ ಹೋಗುತ್ತೇನೆ. ಈ ವಿಷಯವನ್ನು ರಾಜರಿಗೆ ತಿಳಿಸಿಬಿಡು. ನಾನು ಮರಳಿ ಬಂದ ಮೇಲೆ ನೀನು ಬರುವೆಯಂತೆ’, ಆಗಲಿ ಎಂದು ಸುಮಂಗಲ, ಪ್ರತ್ಯೇಕ ಬುದ್ಧ ಹೊರಟುಹೋದ ಮೇಲೆ ತಾನೂ ತನ್ನ ಮನೆಗೆ ಹೋದ. ಒಂದು ದಿನ ಸಂಜೆಯ ಕಾಲಕ್ಕೆ ಪ್ರತ್ಯೇಕ ಬುದ್ಧ ಮರಳಿ ಬಂದ. ಅವನು ಬರುವ ವಿಷಯ ಸುಮಂಗಲನಿಗೆ ತಿಳಿಯದಿದ್ದುದರಿಂದ ಅವನು ಅಲ್ಲಿರಲಿಲ್ಲ. ಪ್ರತ್ಯೇಕ ಬುದ್ಧ ತನ್ನ ಚೀವರ, ಪಾತ್ರೆಗಳನ್ನು ವಾಸಸ್ಥಾನದ ಮುಂದಿರಿಸಿ ಹತ್ತಿರದಲ್ಲೇ ಇದ್ದ ಕಾಡಿನಲ್ಲಿ ತಿರುಗಾಡಲು ಹೊರಟ.

ADVERTISEMENT

ಅಂದು ಸುಮಂಗಲನ ಮನೆಗೆ ನೆಂಟರು ಬಂದಿದ್ದರಿಂದ ಅಡುಗೆಗಾಗಿ ಒಂದು ಜಿಂಕೆಯನ್ನು ಹೊಡೆದು ತರಬೇಕೆಂದು ತನ್ನ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಕಾಡಿಗೆ ಹೋದ. ಮಬ್ಬುಕತ್ತಲೆಯಲ್ಲಿ ಹೋಗುತ್ತಿರುವಾಗ ಒಂದು ಜಿಂಕೆ ಹೋದಂತೆನಿಸಿ ಬಾಣ ಬಿಟ್ಟ. ಅದು ಸರಿಯಾಗಿ ತಿರುಗಾಡುತ್ತಿದ್ದ ಪ್ರತ್ಯೇಕ ಬುದ್ಧನ ಕತ್ತಿಗೆ ನೆಟ್ಟಿತು. ಆತ ಕಿರಿಚಿಕೊಂಡು ಕೆಳಗೆ ಬಿದ್ದ. ಗಾಬರಿಯಿಂದ ಓಡಿ ಅಲ್ಲಿಗೆ ಹೋದ ಸುಮಂಗಲ ಪ್ರತ್ಯೇಕ ಬುದ್ಧನನ್ನು ಕಂಡು ಕಂಗಾಲಾದ. ‘ಅಯ್ಯೋ, ತಾವು ಎಂಬುದು ತಿಳಿಯಲಿಲ್ಲ, ಅಪರಾಧವಾಯಿತು ಎಂದು ಗೋಳಾಡಿದ. ನಿಧಾನವಾಗಿ ಬಾಣವನ್ನು ಕಿತ್ತು ತೆಗೆದೊಡನೆ ಪ್ರತ್ಯೇಕ ಬುದ್ಧ ಪ್ರಾಣತ್ಯಾಗ ಮಾಡಿದ. ಈ ವಿಷಯ ರಾಜನಿಗೆ ಗೊತ್ತಾದರೆ ತನ್ನನ್ನು ನೇಣಿಗೆ ಹಾಕಿಬಿಡುತ್ತಾನೆಂದುಕೊಂಡು ಸುಮಂಗಲ ತನ್ನ ಹೆಂಡತಿ ಮಕ್ಕಳೊಡನೆ ದೇಶಬಿಟ್ಟು ಓಡಿ ಹೋದ. ಪ್ರತ್ಯೇಕ ಬುದ್ಧ ಸತ್ತ ಸುದ್ದಿ ದೇಶದೆಲ್ಲೆಡೆ ಹಬ್ಬಿತು. ರಾಜ ದೇಹಕ್ಕೆ ಸಮರ್ಪಕವಾದ ಸಂಸ್ಕಾರಗಳನ್ನು ಮಾಡಿಸಿದ.

ಒಂದು ವರ್ಷ ಕಳೆದ ಮೇಲೆ ಸುಮಂಗಲ ಒಬ್ಬ ಅಮಾತ್ಯರನ್ನು ಕಂಡು ರಾಜನಿಗೆ ತನ್ನ ಮೇಲೆ ಕೋಪ ಇನ್ನೂ ಇದೆಯಾ ಎಂದು ವಿಚಾರಿಸಿದ. ಆತ ರಾಜನ ಮುಂದೆ ಸುಮಂಗಲನ ಬಗ್ಗೆ ಹೇಳಿದಾಗ ಯಾವ ಮಾತನ್ನೂ ಆಡದೆ ರಾಜ ಹೋಗಿಬಿಟ್ಟ. ಮರುವರ್ಷವೂ ರಾಜನ ಪ್ರತಿಕ್ರಿಯೆ ಅಷ್ಟು ಚೆನ್ನಾಗಿರಲಿಲ್ಲ. ಮಾರನೇ ವರ್ಷ ರಾಜನ ಮನಸ್ಸು ಮೃದುವಾಗಿತ್ತು. ಆಗ ಸುಮಂಗಲ ಮರಳಿ ಬಂದು ನಡೆದದ್ದನ್ನು ರಾಜನಿಗೆ ಹೇಳಿ ಕ್ಷಮೆ ಕೇಳಿದ. ರಾಜ ಎಲ್ಲವನ್ನು ಕೇಳಿ, ಆದದ್ದಾಯಿತು, ಮರಳಿ ಕೆಲಸಕ್ಕೆ ಬಾ ಎಂದು ಕರೆದು ನೇಮಿಸಿಕೊಂಡ. ಅಮಾತ್ಯ ಕೇಳಿದ, ‘ರಾಜ, ಮೊದಲ ಸಲ ಸುಮಂಗಲನ ಬಗ್ಗೆ ಹೇಳಿದಾಗ ನೀವು ಏನೂ ಹೇಳದೆ ಈಗ ಪುರಸ್ಕರಿಸುತ್ತೀರಲ್ಲ, ಯಾಕೆ?’. ರಾಜ ಹೇಳಿದ, ‘ನಾಯಕನಾದವನು ಎಂದಿಗೂ ಕೋಪದಲ್ಲಿ ತೀರ್ಮಾನ ತೆಗೆದುಕೊಳ್ಳಬಾರದು ಮತ್ತು ಮಾತನಾಡಬಾರದು. ಅದು ತಪ್ಪು ನಿರ್ಧಾರವೇ ಆಗುತ್ತದೆ. ಮನಸ್ಸು ಸ್ಥಿಮಿತದಲ್ಲಿದ್ದಾಗ ಮಾತ್ರ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಬೇಕು’.

ಎರಡೂವರೆ ಸಾವಿರ ವರ್ಷಗಳ ಹಿಂದೆ ಬೋಧಿಸತ್ವ ಹೇಳಿದ ಮಾತು ಇಂದಿನ ನಾಯಕರಿಗೆ ಹೆಚ್ಚು ಪ್ರಸ್ತುತ. ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.