ADVERTISEMENT

ಬೆರಗಿನ ಬೆಳಕು: ಪ್ರಾಣಿಗಳಿಂದ ಪ್ರೀತಿಯ ಮಾರ್ದನಿ

ಡಾ. ಗುರುರಾಜ ಕರಜಗಿ
Published 8 ಜೂನ್ 2021, 19:07 IST
Last Updated 8 ಜೂನ್ 2021, 19:07 IST
ಡಿವಿಜಿ–ಸಾಂದರ್ಭಿಕ ಚಿತ್ರ
ಡಿವಿಜಿ–ಸಾಂದರ್ಭಿಕ ಚಿತ್ರ   

ಮನುಜರೂಪದಿನಾದರವನು ಪಡೆಯದ ಹೃದಯ |

ವನುರಾಗವನು ಬಿಡಾಲಕೊ ಶುಕಕೊ ಕಪಿಗೋ ||

ಶುನಕಗೊ ಸುರಿದದರ ಮಾರ್ದನಿಯನಾಲಿಪುದು |

ADVERTISEMENT

ತಣಿವು ಜೀವಸ್ಪರದೆ – ಮಂಕುತಿಮ್ಮ || 426 ||

ಪದ-ಅರ್ಥ: ಮನುಜರೂಪದಿನಾದರವನು=ಮನುಜರೂಪದಿಂ(ಮನುಷ್ಯರೂಪ ದಿಂದ)+ಆದರವನು, ಬಿಡಾಲ=ಬೆಕ್ಕು, ಶುಕ=ಗಿಳಿ, ಶುನಕ=ನಾಯಿ, ಸುರಿದದರ=ಸುರಿದು+ಅದರ, ಮಾರ್ದನಿಯನಾಲಿಪುದು=ಮಾರ್ದನಿಯನು(ಮರುದನಿಯನ್ನು)+ಆಲಿಪುದು, ತಣಿವು=ಸಾಂತ್ವನ, ಜೀವಸ್ಪರದೆ=ಜೀವ+ಸ್ಪರದೆ(ಸ್ವರದಿಂದ)

ವಾಚ್ಯಾರ್ಥ: ಮನುಷ್ಯರಿಂದ ಆದರವನ್ನು ಪಡೆಯದ ಹೃದಯ, ಆ ಅನುರಾಗವನ್ನು, ಬೆಕ್ಕಿಗೋ, ಗಿಳಿಗೋ, ಕೋತಿಗೋ, ನಾಯಿಗೋ ತೋರಿ ಅದರಿಂದ ಸ್ಪಂದನೆಯನ್ನು ಪಡೆಯುವುದು. ಆ ಮತ್ತೊಂದು ಜೀವಸ್ಪರದಿಂದ ಮನಸಿಗೆ ಹಿತ, ಸಾಂತ್ವನ.

ವಿವರಣೆ: ನಾವು ಇಂದು ಪ್ರಪಂಚದಲ್ಲಿ ಅನೇಕ ಪ್ರಾಣಿಪ್ರೇಮಿಗಳನ್ನು ಕಂಡಿದ್ದೇವೆ, ಅದರ ಬಗ್ಗೆ ಓದಿದ್ದೇವೆ. ನಾಯಿಗಳ, ಕುದುರೆಗಳ ಪ್ರಾಮಾಣಿಕತೆ, ಬೆಕ್ಕು ಮತ್ತು ಗಿಳಿಗಳ ಬುದ್ಧಿವಂತಿಕೆಯ ಬಗ್ಗೆ ರೋಚಕವಾದ ಕಥೆಗಳನ್ನು ಓದಿದ್ದೇವೆ. ಮನೆಯಲ್ಲಿ ಸಾಕು ಪ್ರಾಣಿಗಳನ್ನು ಇಟ್ಟುಕೊಂಡವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಲವರು ತಮ್ಮ ಗೃಹಗಳಲ್ಲಿ ಸಾಕಿದ ನಾಯಿ ಬೆಕ್ಕುಗಳಿಗೆ ನೀಡುತ್ತಿರುವ ಸೌಕರ್ಯಗಳನ್ನು ನೋಡಿದರೆ, ಅವುಗಳನ್ನು ಮುದ್ದುಮಾಡುವ ಬಗೆಯನ್ನು ಕೇಳಿದಾಗ, ನಾನು ಮನುಷ್ಯನೇಕೆ ಆದೆ, ಆ ಪ್ರಾಣಿಯೇ ಆಗಿದ್ದರೆ ಚೆನ್ನಾಗಿತ್ತಲ್ಲ ಎನ್ನಿಸುತ್ತದೆ ಎಂದೊಬ್ಬ ಕವಿ ಪದ್ಯವನ್ನೇ ಬರೆದಿದ್ದರು.

ನಾನು ಅಮೆರಿಕದಲ್ಲಿ ಒಬ್ಬರ ಮನೆಗೆ ಹೋದಾಗ ಒಂದು ಭಾರೀ ಗಾತ್ರದ ನಾಯಿ ಓಡಿಬಂತು. ನನ್ನೆದೆ ಬಿರಿಯಿತು. ಅದರ ಹಿಂದೆಯೇ ಅದರ ಯಜಮಾನ ಓಡಿಬಂದ, ನಾಯಿಯನ್ನು ಹಿಡಿಯಲಲ್ಲ, ನನಗೆ ಧೈರ್ಯ ನೀಡುವುದಕ್ಕೆ. ‘ಸಾರ್, ಅವನೇನೂ ಮಾಡುವುದಿಲ್ಲ’ ಎಂದ. ನಾನು, ‘ಹೌದಪ್ಪ, ನಿನಗೆ ಗೊತ್ತು, ಅದೇನೂ ಮಾಡುವುದಿಲ್ಲವೆಂದು. ಆದರೆ ನನಗೆ ಗೊತ್ತಿರಲಿಲ್ಲವಲ್ಲ? ಇನ್ನೊಂದು ಕ್ಷಣವಾಗಿದ್ದರೆ ನನಗೆ ಹೃದಯಾಘಾತವೇ ಆಗುತ್ತಿತ್ತು’ ಎಂದೆ. ಮನೆಯಲ್ಲಿ ಅದು ಹೋಗಿ ಹಾಸಿಗೆಯ ಮೇಲೆ ಮಲಗಿತು. ನಾನು ‘ಅದರ ಹೆಸರೇನು?’ ‘ಸಾರ್, ಅದು, ಇದು ಅನ್ನಬೇಡಿ, ಅವನು ನನ್ನ ಮಗ ಇದ್ದ ಹಾಗೆ. ಅವನ ಹೆಸರು ನಾರಾಯಣ. ಇಲ್ಲಿ ಅಮೆರಿಕದ ಜನಕ್ಕೆ ಅನುಕೂಲವಾಗಲಿ ಎಂದು ‘ನಾನ್’ ಎನ್ನುತ್ತೇವೆ’ ಎಂದನಾತ. ನಾರಾಯಣ ಹೆಸರು ಸಾರ್ಥಕವಾಯಿತು! ಅವರ ಪರಿವಾರದವರೆಲ್ಲ ಆ ನಾಯಿಯೊಂದಿಗೆ ಮಾಡಿಕೊಂಡಿದ್ದ ಅವಿನಾ ಸಂಬಂಧ ಮನಸ್ಸು ತುಂಬಿತು.

ಯಾಕೆ ಮನುಷ್ಯರು ಹೀಗೆ ಪ್ರಾಣಿಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ? ಒಂದು ರೀತಿಯಲ್ಲಿ ಅದು ಋಣಸಂದಾಯ. ಕೃಷಿಯಲ್ಲಿ, ಮನೆ ಕಾಯುವುದರಲ್ಲಿ, ಮನೆಯಲ್ಲಿ ಇಲಿಗಳ ನಾಶಕ್ಕಾಗಿ ಪ್ರಾಣಿಗಳು ನೀಡಿದ ಸಹಕಾರ ಒಂದು ಕಾರಣವಾದರೆ, ಮೂಕಪ್ರಾಣಿಗಳು ತಮ್ಮ ಜೊತೆಗೆ ಅತ್ಯಂತ ಆಪ್ತವಾದ ಭಾವನೆಗಳನ್ನು ತಮ್ಮ ಚರ್ಯೆಯಿಂದ ಅಭಿವ್ಯಕ್ತಗೊಳಿಸುತ್ತವೆಂಬುದು ಮತ್ತೊಂದು ಕಾರಣ. ಈ ಪ್ರಾಣಿಗಳು ದ್ರೋಹಮಾಡುವುದಿಲ್ಲ, ತಮ್ಮನ್ನು ಆಪತ್ತಿನಲ್ಲಿ ತೊರೆದು ಹೋಗುವುದಿಲ್ಲ, ಹಣಕ್ಕಾಗಿ ಮೋಸಮಾಡುವುದಿಲ್ಲ. ಹೀಗೆ ನಮ್ಮ ಧ್ವನಿಗೆ ಅವುಗಳಿಂದ ಮಾರ್ದನಿಯನ್ನು ಪಡೆದು ಆ ಜೀವಸ್ವರದಿಂದ ಬದುಕಿಗೊಂದು ತಂಪನ್ನು ಪಡೆಯುತ್ತಾರೆ ಜನ. ಮನುಷ್ಯರಿಂದ ಆದರವನ್ನು ಪಡೆಯದವರು ಮಾತ್ರ ಪ್ರಾಣಿಪ್ರಿಯರಾಗುತ್ತಾರೆಂದಲ್ಲ, ಮನುಷ್ಯರಿಂದಲ್ಲದೇ ಪ್ರಾಣಿಗಳಿಂದಲೂ ಪ್ರೇಮವನ್ನು ಅಪೇಕ್ಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.