ADVERTISEMENT

ಬೆರಗಿನ ಬೆಳಕು: ತ್ರಿಕರಣ ಸಂಪತ್ತು

ಡಾ. ಗುರುರಾಜ ಕರಜಗಿ
Published 16 ಡಿಸೆಂಬರ್ 2021, 19:50 IST
Last Updated 16 ಡಿಸೆಂಬರ್ 2021, 19:50 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವೇದ ಲೋಕಾಚಾರ ನಿನ್ನಾನುಭವದ ಯುಕ್ತಿ |
ಶೋಧಿಸೀ ಮೂರನುಂ ಸಂವಾದಗೊಳಿಸು ||
ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು |
ಹಾದಿ ಬೆಳಕದು ನಿನಗೆ – ಮಂಕುತಿಮ್ಮ || 521 ||

ಪದ-ಅರ್ಥ: ಲೋಕಾಚಾರ=ಲೋಕದ ನಡವಳಿಕೆ, ಶೋಧಿಸಿ=ಪರೀಕ್ಷಿಸಿ, ಸಂವಾದಗೊಳಿಸು=ಸಮನ್ವಯಗೊಳಿಸು, ಸಾಧಿತಜ್ಞಾನ=ತಿಳಿದು ಅರಗಿಸಿಕೊಂಡ ಜ್ಞಾನ.

ವಾಚ್ಯಾರ್ಥ: ಆರ್ಷೇಯ ಜ್ಞಾನ, ಲೋಕದ ನಡವಳಿಕೆ ಮತ್ತು ನಮ್ಮ ಅನುಭವಕ್ಕೆ ದಕ್ಕಿದ ಯುಕ್ತಿ, ಈ ಮೂರನ್ನು ಪರೀಕ್ಷಿಸಿ, ಸಮನ್ವಯಗೊಳಿಸಿದಾಗ ದೊರಕುವ ಜ್ಞಾನವೇ ಮನುಷ್ಯರಿಗೆ ಸಾಧಿತವಾದ ಜ್ಞಾನ. ಅದು ನಮಗೆ ದಾರಿದೀಪ.

ADVERTISEMENT

ವಿವರಣೆ: ಧರ್ಮವೆಂದರೆ ಧರಿಸುವುದು. ಯಾವುದು ಜೀವನವನ್ನು ಧರಿಸಿದೆಯೋ, ಪೋಷಿಸುತ್ತದೆಯೋ ಅದು ಧರ್ಮ. ಪ್ರಪಂಚ ವ್ಯವಹಾರದಲ್ಲಿ, ಪ್ರಪಂಚದ ಮೂಲವನ್ನು ನೆನಪಿನಲ್ಲಿಟ್ಟುಕೊಂಡು ಸಂತೋಷದಿಂದ ಬದುಕುವ ವಿಧಾನವೇ ಧರ್ಮ. ಈ ಧರ್ಮಕ್ಕೆ ಮೂರು ಮುಖಗಳು.

ಒಂದನೆಯದು ಶ್ರೇಯೋದರ್ಶಿಯಾದ ತತ್ವಶಾಸ್ತ್ರ, ಎರಡನೆಯದು ಲೌಕಿಕ ಪ್ರಗತಿಗೆ ಅವಶ್ಯವಾದ ವಿಜ್ಞಾನ ಹಾಗೂ ಸಾಮಾಜಿಕ ತಿಳಿವಳಿಕೆ, ಮೂರನೆಯದು ವ್ಯವಹಾರಕ್ಕೆ ಬೇಕಾದ ಯಕ್ತಿಗಳು. ಈ ಮೂರೂ ವಿಷಯಗಳ ಸಮರ್ಪಕ ಸೇರುವಿಕೆಯೇ ಸಂಸ್ಕೃತಿ. ಲೋಕದಲ್ಲಿ ವಿವೇಕ ಮತ್ತು ಭಗವದಿಚ್ಛೆಯೂ ಪ್ರಬಲಿಸುವಂತೆ ಮಾಡುವುದೇ ಸಂಸ್ಕೃತಿ.

ಈ ಸಂಸ್ಕೃತಿಯ ಮೂಲಸ್ಥಾನಗಳು ಒಂದೆರಡಲ್ಲ, ನೂರಾರು. ಡಿ.ವಿ.ಜಿ ಯವರು ಮತ್ತೊಂದೆಡೆಗೆ ಅವುಗಳನ್ನು ವಿವರಿಸುತ್ತಾರೆ. ನೂರಾರು ಸ್ಥಾನಗಳನ್ನು ಸ್ಥೂಲವಾಗಿ ಕೆಲವು ಮುಖ್ಯವಾದ ಗಣಗಳಲ್ಲಿ ವಿಭಾಗಿಸಬಹುದು.

1.ವೇದಪುರಾಣ ಮತ್ತು ದೇವತಾ ಮತಧರ್ಮಗಳು, ಪೂಜೆ, ಧ್ಯಾನಗಳು, ಆಚಾರ ನಿಯಮಗಳು ಇದರಲ್ಲಿ ಸೇರುತ್ತವೆ.

2.ಸಾಹಿತ್ಯ ಮತ್ತು ಇತರ ಕಲೆಗಳು. ಇವುಗಳಲ್ಲಿ ಕಾವ್ಯ, ನಾಟಕ, ಸಂಗೀತ, ಶಿಲ್ಪ, ನರ್ತನ ಮೊದಲಾದ ಹೃದಯಾನುಭವ ಕರಣಗಳು ಸೇರುತ್ತವೆ.

3.ವಿಜ್ಞಾನದ ಅನ್ವೇಷಣೆಗಳು

4.ದೇಶ ವಿದೇಶಗಳ ಚರಿತ್ರೆಗಳು

5.ಬದುಕಿನ ಸಾಧ್ಯತೆಗಳನ್ನು ತಲುಪಲು ಬೇಕಾಗುವ ಯುಕ್ತಿಗಳು, ಅನುಭವಗಳು.

ಹೀಗೆ ಇವೆಲ್ಲ ಸೇರಿ ಮನಸ್ಸಿಗೆ ಮತ್ತು ಬುದ್ಧಿಗೆ ಸಂಸ್ಕಾರ ನೀಡುತ್ತವೆ.

ಇದನ್ನು ಕಗ್ಗ ಮನಮುಟ್ಟುವಂತೆ ಹೇಳುತ್ತದೆ. ನಮ್ಮ ಬದುಕಿನ ಬೆಳಕನ್ನು ಕಾಣಲು ಅಪೌರುಷೇಯವೆಂದು ಕರೆಸಿಕೊಳ್ಳುವ ವೇದದ ಜ್ಞಾನ, ಲೋಕಾಚಾರ, ಎಂದರೆ ಬದುಕಿನಲ್ಲಿ ಬೇಕಾದ ನಡವಳಿಕೆಗಳು, ಇತಿಹಾಸದ ಪಾಠಗಳೊಂದಿಗೆ ನಮ್ಮ ಅನುಭವ ಮತ್ತು ಯುಕ್ತಿಗಳು ಇವುಗಳ ಸಾಮರಸ್ಯದಿಂದ ದೊರೆಯುವುದು ಸಾಧಿತಜ್ಞಾನ. ಇದನ್ನು ಪ್ರತಿಯೊಬ್ಬ ಮನುಷ್ಯ ಪರೀಕ್ಷಿಸಿ, ಶೋಧಿಸಿ ಗಳಿಸಬೇಕು. ಅದು ಅವನಿಗೆ ಪ್ರಮಾಣವಾಗಿರುವಂಥದ್ದು.

ಈ ಸಾಧಿತವಾದ ಜ್ಞಾನವೇ ತ್ರಿಕರಣ ಸಂಪತ್ತು. ಇದೇ ಮನುಷ್ಯನಿಗೆ ದಾರಿ ತೋರಿ ಮುನ್ನಡೆಸುತ್ತದೆ. ಇದನ್ನು ಪಡೆಯುವುದೇ ಒಂದು ಮಹತ್ತರ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.