ADVERTISEMENT

ಬೆರಗಿನ ಬೆಳಕು | ದಕ್ಕಿದ್ದೆಷ್ಟು?

ಡಾ. ಗುರುರಾಜ ಕರಜಗಿ
Published 13 ನವೆಂಬರ್ 2022, 20:15 IST
Last Updated 13 ನವೆಂಬರ್ 2022, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ
ಸತತ ಸಂಧಾನದಲಿ ಪರಮಾರ್ಥವಿರಲಿ ||
ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? |
ಭೃತಿಯೆಷ್ಟು ವೆಚ್ಚಕ್ಕೆ – ಮಂಕುತಿಮ್ಮ || 755 ||

ಪದ-ಅರ್ಥ: ಮತಿಗರ್ಥವಾದೊಡೇಂ=ಮತಿಗೆ(ಬುದ್ಧಿಗೆ)+ಅರ್ಥವು+ಆದೊಡೇಂ(ಆದರೇನು), ಸ್ಮತಿಯೊಳದು=ಸ್ಮತಿಯೊಳು(ನೆನಪಿನಲ್ಲಿ)+ಅದು,ಭೃತಿಯೆಷ್ಟು=ಕೂಲಿ ಎಷ್ಟು, ಸಂಪಾದನೆ ಎಷ್ಟು.

ವಾಚ್ಯಾರ್ಥ: ಬುದ್ಧಿಗೆ ಎಷ್ಟು ಹೊಳೆದರೇನು? ಅದು ಅಂತರಂಗದಲ್ಲಿ ಆಳವಾಗಿ ನೆನಪಿನಲ್ಲಿರಲಿ. ಸದಾಕಾಲದ ಕರ್ತವ್ಯದಲ್ಲಿ ಪರಮಾರ್ಥ ಚಿಂತನೆ ಇರಲಿ. ಎಷ್ಟು ಕೋಟಿ ಲೆಕ್ಕವ ಬಾಯಿಯಲ್ಲಿ ಹೇಳಿದರೇನು, ಖರ್ಚಿಗೆ ಆಗುವಷ್ಟು ಸಂಭಾವನೆ ಇದೆಯೆ?

ADVERTISEMENT

ವಿವರಣೆ: ದೇಶದ ಬಜೆಟ್ ಸಿದ್ಧವಾಗುತ್ತಿತ್ತು. ಆಗ ಹಣಕಾಸುಮಂತ್ರಿಗಳು ಇಲಾಖೆಯ ಅಧಿಕಾರಿಗಳೊಂದಿಗೆ ಹಣದಹಂಚಿಕೆಯ ಬಗ್ಗೆ ಮಾತನಾಡುತ್ತಿದ್ದರು. ಯಾವ ಖಾತೆಗೆ, ಎಷ್ಟುಹಣವನ್ನು ಮೀಸಲಾಗಿಡಬೇಕು ಎಂಬುದರ ಚಿಂತನೆನಡೆಯುತ್ತಿತ್ತು. ಶಿಕ್ಷಣ ವಿಭಾಗಕ್ಕೆ ಹೆಚ್ಚು ಹಣ ನೀಡಬೇಕೆಂದುಕಾರ್ಯದರ್ಶಿಗಳು ಒತ್ತಾಯದ ಬೇಡಿಕೆ ಸಲ್ಲಿಸುತ್ತಿದ್ದರು.ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿ. ಇಲಾಖೆಯ ಅಭಿವೃದ್ಧಿಗಾಗಿ,ಕೊಸರಾಡಿ, ಚೌಕಾಶಿ ಮಾಡಿ ಹೆಚ್ಚು ಹಣ ಪಡೆದುಕೊಂಡರು. ಮನೆಗೆ ಬಂದು ಹೆಂಡತಿಗೆ ಸಂತೋಷದಿಂದ ಹೇಳಿದರು, “ಅಂತೂ ನಮ್ಮಇಲಾಖೆಗೆ ಮತ್ತೆ ಹನ್ನೊಂದು ಸಾವಿರ ಕೋಟಿ ಹೆಚ್ಚು ಹಣದೊರಕುತ್ತದೆ”. ಮನೆಯಾಕೆ ಹೇಳಿದಳು, “ಹೌದು, ನಿಮ್ಮಇಲಾಖೆಗೆ ಅಷ್ಟು ಸಾವಿರ ಕೋಟಿ ಬಂತೇನೋ ಸರಿ, ಆದರೆ ನಾವುಮನೆಯ ಸಾಲದ ಕಂತನ್ನು ಮೂರು ತಿಂಗಳಿಂದಕಟ್ಟಿಲ್ಲವೆಂದು ನೋಟೀಸ್ ಬಂದಿದೆ. ಅದಕ್ಕೆ ಏನು ಮಾಡುವುದುಚಿಂತೆಯಾಗಿದೆ”. ಅದು ವಾಸ್ತವ.

ಸಾವಿರ ಕೋಟಿಗಳ ಆದಾಯದ ಬಗ್ಗೆ ಮಾತನಾಡಿದ ವ್ಯಕ್ತಿಗೆ ಮನೆಯ ಸಾಲದ ಕಂತು ಕಟ್ಟಲಾಗದ ಪರಿಸ್ಥಿತಿ. ಇಲಾಖೆಯ ಖರ್ಚಿಗಾಗಿ ಸಾವಿರಾರು ಕೋಟಿಗಳನ್ನುಬಳಸುವ ವ್ಯಕ್ತಿಗೆ ತನ್ನ ಪುಟ್ಟ ವೈಯಕ್ತಿಕ ಸಾಲದ ಹೊರೆ ಹೊರಲಾಗದು. ಅಂದರೆ, ಕೋಟಿ ಕೋಟಿ ಧನದ ನಡುವೆಯೇಇದ್ದವನಿಗೆ ಸ್ವತ: ದಕ್ಕಿದ್ದು ಬಹಳ ಅಲ್ಪ.ಇದನ್ನು ಕಗ್ಗ ಹೇಳುತ್ತದೆ, ಬಾಯಿಯಿಂದ ಎಷ್ಟು ದೊಡ್ಡಮೊತ್ತವನ್ನು ಹೇಳಿದರೇನು ಫಲ, ನಿನಗೆ ದಕ್ಕಿದ್ದು ಎಷ್ಟು? ಇದೇ ವಿಷಯವನ್ನು ಅದು ಅಧ್ಯಾತ್ಮಿಕ ತಿಳುವಳಿಕೆಗೂಹೋಲಿಸುತ್ತದೆ. ಎಷ್ಟು ಓದಿದರೆ, ಎಷ್ಟು ವಿಷಯವನ್ನು ಬುದ್ಧಿಚಮತ್ಕಾರಗಳಿಂದ ತಿಳಿದುಕೊಂಡು, ಅದನ್ನು ಆಂತರ್ಯದಲ್ಲಿ ಇಳಿಸಿಕೊಳ್ಳದಿದ್ದರೆ ಫಲವೇನು? ಅದು ಸಮುದ್ರದತಳದಲ್ಲಿರುವ ಬೆಣಚುಕಲ್ಲಿನಂತೆ, ಆ ಕಲ್ಲು ಶತಮಾನಗಳಿಂದ ನೀರಿನಲ್ಲಿಯೇ ಮುಳುಗಿದೆ, ನೀರಿನ ಅಲೆಗಳಿಂದ ಉಜ್ಜಿ, ಉಜ್ಜಿ, ನುಣುಪಾಗಿದೆ. ಆದರೆ ಅದನ್ನು ಒಡೆದು ನೋಡಿದರೆ ನೀರಿನಒಂದಂಶವೂ ಇಲ್ಲ!ಆದ್ದರಿಂದ ಪ್ರತಿನಿತ್ಯದ ವ್ಯವಹಾರಗಳಲ್ಲಿ, ಕರ್ತವ್ಯಗಳಲ್ಲಿಪರಮಾರ್ಥವಿರಲಿ, ಬ್ರಹ್ಮವಸ್ತುವಿನ ಚಿಂತನೆ ಇರಲಿ. ಸಕಲಶಾಸ್ತ್ರಗಳನ್ನುಓದಿ ಮಸ್ತಕದಲ್ಲಿ ತುಂಬಿಕೊಂಡದ್ದು,ಮನದೊಳಗೆ, ನಡೆಯೊಳಗೆ ಇಳಿಯದಿದ್ದರೆ, ಕೋಟಿ ಹಣದ ಬಗ್ಗೆ ಮಾತನಾಡುವ ವ್ಯಕ್ತಿ, ಖರ್ಚಿಗೆ ಹಣವಿಲ್ಲದಂತೆ ಒದ್ದಾಡಿದಸ್ಥಿತಿಯೇ ಹೌದು. ನಾವು ಪರವಸ್ತುವಿನ ಬಗ್ಗೆ ಎಷ್ಟುಅನುಸಂಧಾನ ಮಾಡುತ್ತೇವೋ ಅಷ್ಟೇ ನಮಗೆ ದಕ್ಕುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.