ADVERTISEMENT

ಬೆರಗಿನ ಬೆಳಕು | ಅಂಕೆಮೀರಿದ ಸತ್ವ

ಡಾ. ಗುರುರಾಜ ಕರಜಗಿ
Published 30 ಮೇ 2023, 21:36 IST
Last Updated 30 ಮೇ 2023, 21:36 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಸಂಕೇತಭಾವಮಯ ಲೋಕಜೀವನದ ನಯ |
ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ||
ದಂಕಿತAಗಳು ಪದ ಪದಾರ್ಥ ಸಂಬಂಧಗಳು |
ಅಂಕೆ ಮೀರ್ದುದು ಸತ್ತ್ವಂ – ಮಂಕುತಿಮ್ಮ || 895 ||

ಪದ-ಅರ್ಥ: ಹೇತು=ಕಾರಣ, ಲಕ್ಷಣದಿಂದಂಕಿತಂಗಳು=ಲಕ್ಷಣದಿಂದ+ಅಂಕಿತಂಗಳು (ಅಂಕಿತಗಳು), ಅಂಕೆ=ಮೇರೆ, ಗಡಿ, ಮೀರ್ದುದು=ಮೀರಿದುದು.

ವಾಚ್ಯಾರ್ಥ: ಲೋಕ ಜೀವನದ ವ್ಯವಹಾರ ನಡೆಯುವುದೇ ಭಾವಗಳಿಂದ ಮತ್ತು ಸಂಕೇತಗಳಿಂದ, ಸಂಖ್ಯೆ, ಗುಣ, ಕಾರಣ ಮತ್ತು ಕಾರ್ಯದ ಲಕ್ಷಣದಿಂದ ವಸ್ತುಗಳ ಗುರುತು ಮತ್ತು ಸಂಬಂಧ. ಆದರೆ ಪರಸತ್ವ ಇವೆಲ್ಲವುಗಳನ್ನು ಮೀರಿದ್ದು.

ADVERTISEMENT

ವಿವರಣೆ: ನಮ್ಮ ಲೋಕ ಜೀವನದ ಎಲ್ಲ ವ್ಯವಹಾರಗಳು ಕೇವಲ ಸಂಕೇತ ಮತ್ತು ಭಾವಗಳಲ್ಲಿಯೇ ನಡೆಯುತ್ತವೆ. ನಮ್ಮಲ್ಲಿ ಎಲ್ಲವೂ ಸಂಕೇತವೇ. ಪ್ರತಿಯೊಬ್ಬ ವ್ಯಕ್ತಿಗೆ ಒಂದು ಹೆಸರಿದೆ. ಅದು ಆ ದೇಹಕ್ಕೆ ಒಂದು ಸಂಕೇತ. ಆ ಸಂಕೇತದಿಂದಲೇ ದೇಹ ಸದಾಕಾಲ ನೆನಪಿನಲ್ಲಿರುವುದು. ಯಾರಿಗೂ ಹೆಸರೇ ಇಲ್ಲದಿದ್ದರೆ ಜನರನ್ನು ನೆನಪಿನಲ್ಲಿಡುವುದು, ಗುರುತಿಸುವುದು ಸಾಧ್ಯವಿತ್ತೇ? ಇದು ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಸುತ್ತಮುತ್ತಲಿರುವ ಪ್ರತಿಯೊಂದು ವಸ್ತುವಿಗೂ ಒಂದು ಹೆಸರಿದೆ. ಪುಸ್ತಕ ಎಂದೊಡನೆ ಚಿತ್ರವೊಂದು ಮನದಲ್ಲಿ ಮೂಡುತ್ತದೆ. ಅದೇ ರೀತಿ, ಮೇಜು, ಕುರ್ಚಿ, ನಕ್ಷತ್ರ, ಸೂರ್ಯ, ಆಕಾಶ ಎಂದಾಗ ಒಂದೊಂದು ಚಿತ್ರಗಳು ಕಣ್ಣಮುಂದೆ ಬರುತ್ತವೆ.

ಹೀಗೆ ಸಂಕೇತಗಳ ಮೂಲಕವೇ ನಮ್ಮ ವಸ್ತು ಪರಿಚಯ.ಸಂಕೇತ ಸರಿ ಇಲ್ಲದಾಗ ಅರ್ಥವೇ ಸ್ಪಷ್ಟವಾಗುವುದಿಲ್ಲ. ಉದಾಹರಣೆಗೆ, “ಮೊನ್ನೆ ಅವರು ಬಂದು ಇವರನ್ನು ಬೆಟ್ಟಿಯಾಗಿ ಅವರ ಮನೆಯಲ್ಲಿ ನಡೆಯುವ ಅದರ ಬಗ್ಗೆ ಹೇಳಿ ಹೋದರು” ಎಂದರೆ ಏನರ್ಥವಾದೀತು? ಅದರ ಬದಲಿಗೆ, “ಮೊನ್ನೆ ರಾಮಣ್ಣ ಬಂದು ಭೀಮಣ್ಣನನ್ನು ಭೆಟ್ಟಿಯಾಗಿ ರಾಮಣ್ಣನ ಮನೆಯಲ್ಲಿ ನಡೆಯುವ ಮದುವೆಯ ಬಗ್ಗೆ ಹೇಳಿ ಹೋದರು” ಎಂದಾಗ ವಿಷಯ ತಿಳಿಯಾಗುತ್ತದೆ. ಇಲ್ಲಿ ರಾಮಣ್ಣ ಮತ್ತು ಭೀಮಣ್ಣ ಇಬ್ಬರು ವ್ಯಕ್ತಿಗಳ ಸಂಕೇತ. ಮದುವೆಯೂ ಒಂದು ಕಾರ್ಯದ ಸಂಕೇತ. “ನಾಳೆ ಮನೆಯಲ್ಲಿ ದೀಪಾವಳಿ ಹಬ್ಬ.

ಅದಕ್ಕಾಗಿ ಅಂಗಡಿಯಲ್ಲಿ ಬಂದಿದ್ದ ಸೊಗಸಾದ ತರಕಾರಿಯನ್ನು ಐವತ್ತು ರೂಪಾಯಿಗೆ ಒಂದು ಕಿಲೋದಂತೆ ಹತ್ತು ಕಿಲೋ ತಂದೆ”. ಈ ವಾಕ್ಯದಲ್ಲಿ ದೀಪಾವಳಿ ಹಬ್ಬವೆಂಬುದು ಕಾರ್ಯದ ಸಂಕೇತ. ಸೊಗಸಾದ ತರಕಾರಿ ಎನ್ನುವುದು ಗುಣದ ಸಂಕೇತ. ಐವತ್ತು ರೂಪಾಯಿಗೆ ಒಂದು ಕಿಲೋ ಎನ್ನುವುದು ಬೆಲೆಯ ಸಂಕೇತ. ಹಬ್ಬದ ಕಾರಣಕ್ಕಾಗಿ ಹೆಚ್ಚಿನ ತರಕಾರಿ ಎನ್ನುವುದು, ಕಾರಣ ಮತ್ತು ಕಾರ್ಯಗಳ ಸಂಬಂಧ. ಕಗ್ಗ ಹೇಳುತ್ತದೆ ನಮ್ಮ ಜಗತ್ತಿನ ವ್ಯವಹಾರವೆಲ್ಲ ಈ ಸಂಕೇತಗಳಿಂದಲೇ ನಡೆಯುತ್ತದೆ. ಈ ಸಂಕೇತಗಳು ಸಂಖ್ಯೆಯಾಗಿರಬಹುದು, ವಸ್ತುವಿನ ಗುಣವಾಗಿರಬಹುದು. ಕಾರಣವಾಗಿರಬಹುದು. ಈ ಲಕ್ಷಣಗಳಿಂದ ವಸ್ತುಗಳ ನಡುವಿನ ಸಂಬಂಧ. ನಾವು ಬಳಸುವ ಭಾಷೆ ಕೂಡ ನಮ್ಮ ಭಾವನೆಗಳ ಸಂಕೇತವೇ. ಎಲ್ಲವನ್ನೂ ಈ ಸಂಕೇತಗಳಿಂದ ವಿವರಿಸುವುದು ಸಾಧ್ಯವಿದ್ದರೂ ಪರಸತ್ವವನ್ನು ಇವುಗಳಿಂದ ತಿಳಿಯುವುದು, ತಿಳಿಸುವುದು ಸಾಧ್ಯವಿಲ್ಲ. ಯಾಕೆಂದರೆ ಪರಸತ್ವ ಇಂದ್ರಿಯಗಳಿಗೆ ಅತೀತವಾದದ್ದು, ಭಾಷೆ, ಭಾವನೆಗಳ ಪ್ರಪಂಚವನ್ನು ದಾಟಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.