ADVERTISEMENT

ಬೆರಗಿನ ಬೆಳಕು: ಹಸ್ತ ಮುದ್ರೆಯ ಅರ್ಥ-ಅನರ್ಥ

ಡಾ. ಗುರುರಾಜ ಕರಜಗಿ
Published 24 ಮೇ 2021, 21:15 IST
Last Updated 24 ಮೇ 2021, 21:15 IST
   

ರಾಣಿ ನಂದಾದೇವಿಯ ಮಾತು ಕೇಳಿ ಪರಿವ್ರಾಜಿಕೆ ಭೇರಿ ಚಿಂತಿಸಿದಳು. ಎಲ್ಲರೂ ಮಹೋಷಧಕುಮಾರ ಬುದ್ಧಿವಂತ ಎನ್ನುತ್ತಾರೆ. ಅದರೆ ರಾಣಿಗೆ ಅವನ ಬುದ್ಧಿವಂತಿಕೆಯ ಬಗ್ಗೆ ಸಂಶಯವಿದೆ. ಅವನನ್ನು ಪರೀಕ್ಷಿಸಲು ಹೇಳಿದ್ದಾಳೆ. ಇರಲಿ, ಅವನು ಎಷ್ಟು ಬುದ್ಧಿವಂತ ಎಂಬುದನ್ನು ಪರೀಕ್ಷಿಸುತ್ತೇನೆ ಎಂದು ತೀರ್ಮಾನಿಸಿದಳು.

ಮರುದಿನ ಪರಿವ್ರಾಜಿಕೆ ಊಟ ಮಾಡಿ ಹೊರಗೆ ಬರುತ್ತಿರುವಾಗ ಬೋಧಿಸತ್ವ ಮಹೋಷಧಕುಮಾರ ರಾಜನ ಸೇವೆಗೆ ಅರಮನೆಗೆ ಬರುತ್ತಿರುವುದನ್ನು ಕಂಡಳು. ಅವನನ್ನು ಮೊಗಸಾಲೆಯಲ್ಲಿ ಕಂಡು ನಿಂತಳು. ಈತನಿಗೆ ಹಸ್ತಮುದ್ರಾ ಶಾಸ್ತ್ರ ತಿಳಿದಿದೆಯೇ ಎಂದು ಪರೀಕ್ಷಿಸುತ್ತೇನೆ ಎಂದು ಹಸ್ತಮುದ್ರೆಯಿಂದ ಪ್ರಶ್ನೆಯನ್ನು ಕೇಳುತ್ತ ಕೈ ಚಾಚಿದಳು. ಆಕೆಯ ಮುದ್ರೆಯಲ್ಲಿ, ‘ಪಂಡಿತ, ರಾಜ ನಿನ್ನನ್ನು ಬೇರೆ ದೇಶದಿಂದ ಕರೆಸಿಕೊಂಡು ಸೇವೆ ತೆಗೆದುಕೊಳ್ಳುತ್ತಿದ್ದಾನೆ. ನಿಮಗೆ ಸಕಲ ಸ್ವಾತಂತ್ರ್ಯವನ್ನು, ಸಾಕಷ್ಟು ಹಣವನ್ನು ಕೊಟ್ಟಿದ್ದಾನೆ ತಾನೇ?’ ಎಂಬ ಪ್ರಶ್ನೆ ಇತ್ತು. ಮುದ್ರಾಶಾಸ್ತ್ರವನ್ನು ಚೆನ್ನಾಗಿ ಬಲ್ಲ ಕುಮಾರ, ತಾನೂ ಆಕೆಗೆ ಆ ಶಾಸ್ತ್ರದಲ್ಲೇ ಉತ್ತರಕೊಡುತ್ತೇನೆ ಎಂದುಕೊಂಡು ತನ್ನ ಕೈ ಚಾಚಿ ಮುಷ್ಠಿಯನ್ನು ಬಿಗಿದ. ಅದರ ಅರ್ಥ, ‘ತಾಯಿ, ನನ್ನಿಂದ ಮಾತು ತೆಗೆದುಕೊಂಡು, ನನ್ನನ್ನು ಕರೆಯಿಸಿಕೊಂಡು, ಈಗ ರಾಜ ತನ್ನ ಮುಷ್ಠಿಯನ್ನು ಬಿಗಿ ಹಿಡಿದು ಅಧಿಕಾರವನ್ನು, ಹಣವನ್ನು ಕೊಡದೆ ಜಿಪುಣತನ ತೋರುತ್ತಿದ್ದಾನೆ’.

ಅವರ ಮಾತನ್ನು ತಿಳಿದು ಆಕೆ ತನ್ನ ಎರಡೂ ಕೈಗಳನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡಳು. ಅದರ ಅರ್ಥ, ‘ಪಂಡಿತ, ನಿನಗೆ ಈ ಕೆಲಸ ತುಂಬ ಕಷ್ಟವಾಗುತ್ತಿದ್ದರೆ, ನನ್ನ ಹಾಗೆ ನೀನೂ ಏಕೆ ಪರಿವ್ರಜಿತನಾಗಬಾರದು?’ ಅದನ್ನು ಅರ್ಥಮಾಡಿಕೊಂಡ ಕುಮಾರ, ತನ್ನ ಹೊಟ್ಟೆಯನ್ನು ಸವರಿಕೊಂಡ. ಆ ಮುದ್ರೆಯ ಅರ್ಥ. ‘ತಾಯಿ, ನಾನು ಅನೇಕರ ಪಾಲನೆ-ಪೋಷಣೆ ಮಾಡಬೇಕಿದೆ. ನನಗೊಂದು ಪರಿವಾರದ ಜವಾಬ್ದಾರಿ ಇದೆ. ಆದ್ದರಿಂದ ಪರಿವ್ರಜಿತನಾಗಲಾರೆ’. ಆಕೆ ಅದನ್ನು ನೋಡಿ ನಕ್ಕಳು. ನಂತರ ತನ್ನ ನಿವಾಸಕ್ಕೆ ಹೊರಟು ಹೋದಳು. ಬೋಧಿಸತ್ವ ಕುಮಾರನೂ ಆಕೆಗೆ ನಮಸ್ಕರಿಸಿ ಅರಮನೆಗೆ ಬಂದ.

ADVERTISEMENT

ನಂದಾದೇವಿಯಿಂದ ನೇಮಿಸಲ್ಪಟ್ಟ ರಾಜಪ್ರಿಯ ಸ್ತ್ರೀಯರು ಇವರಿಬ್ಬರೂ ಮಾಡಿದ ಚರ್ಯೆಗಳನ್ನು ಗಮನಿಸಿದ್ದರು. ಅವರು ಆ ಚರ್ಯೆಗಳನ್ನು ತಮಗೆ ತಿಳಿದಂತೆ ಅರ್ಥೈಸಿಕೊಂಡು ರಾಜನ ಬಳಿಗೆ ಬಂದು ಚಾಡಿ ಹೇಳಿದರು. ‘ಪ್ರಭೂ, ಮಹೋಷಧಕುಮಾರ ಆ ಪರಿವ್ರಾಜಿಕೆಯೊಂದಿಗೆ ಸೇರಿಕೊಂಡು ನಿಮ್ಮ ರಾಜ್ಯವನ್ನು ಕಿತ್ತುಕೊಳ್ಳಲು ಹೊಂಚು ಹಾಕಿದ್ದಾನೆ. ಆತ ನಿಮ್ಮ ಮೊದಲ ಶತ್ರು. ಅವನನ್ನು ಬೇಗನೇ ನಿವಾರಿಸಬೇಕು’. ‘ಹಾಗಾದರೆ ನೀವು ಕಂಡದ್ದು, ಕೇಳಿದ್ದು ಏನು?’ ಕೇಳಿದ ರಾಜ. ಅವರು ತಾವು ಕಂಡದ್ದನ್ನು ತಮಗೆ ತಿಳಿದಂತೆ ಹೇಳಿದರು. ಅವರ ಮಾತುಗಳನ್ನು ಕೇಳಿದ ರಾಜನಿಗೆ ಎರಡು ಭಾವನೆಗಳು ಕಾಡಿದವು. ಬಹುಶ: ಈ ಸ್ತ್ರೀಯರು ಹೇಳಿರುವುದರಲ್ಲಿ ಸತ್ಯವಿರಬೇಕು ಎಂದು ಒಮ್ಮೆ ಎನ್ನಿಸಿದರೆ ಮತ್ತೊಮ್ಮೆ ಇಷ್ಟು ರಾಜನಿಷ್ಠೆಯ ಮಹೋಷಧಕುಮಾರ ಹಾಗೆ ಮಾಡಲಾರ ಎನ್ನಿಸಿತು. ಆಗಲಿ, ಮರುದಿನ ಇದನ್ನು ಒರೆಗೆ ಹಚ್ಚಬೇಕೆಂದು ತೀರ್ಮಾನಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.