ADVERTISEMENT

ಬೆರಗಿನ ಬೆಳಕು: ಅಮಾತ್ಯರ ರಹಸ್ಯಗಳು

ಡಾ. ಗುರುರಾಜ ಕರಜಗಿ
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಂತೋಷಗೊಂಡ ನಾಲ್ವರು ಅಮಾತ್ಯರು ಅರಮನೆಯ ತೋಟಕ್ಕೆ ಹೊರಟರು. ಅವರ ಮುಖಭಾವವನ್ನು ಗಮನಿಸಿದ ಮಹೋಷಧಕುಮಾರ ಅವರು ಯಾವುದೋ ಅಪಾಯಕಾರಿ ಯೋಜನೆ ಮಾಡಲಿದ್ದಾರೆಂದು ತಿಳಿದು ಅವರಿಗೆ ತಿಳಿಯದಂತೆ ಅವರ ಹಿಂದೆಯೇ ಹೋಗಿ ಅವರು ಕುಳಿತ ಜಾಗದ ಹತ್ತಿರವೇ ಅಡಗಿ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಂಡ. ಸೆನೆಕ ಹೇಳಿದ, ‘ನಿಮಗೆ ಇಂಥ ಒಬ್ಬ ವೇಶ್ಯೆ ನಗರದಲ್ಲಿದ್ದದ್ದು ತಿಳಿದಿರಬೇಕು. ನಾನು ಆಕೆಯ ಸಂಗ ಮಾಡಿದೆ. ನಂತರ ಆಕೆ ಎಲ್ಲಿ ಬೇರೆಯವರಿಗೆ ಅದನ್ನು ಹೇಳಿಬಿಡುತ್ತಾಳೋ ಎಂದು ಆಕೆಯನ್ನು, ನನ್ನ ಸ್ನೇಹಿತನೊಂದಿಗೆ ಸೇರಿ ಕೊಂದುಬಿಟ್ಟೆ. ಅವಳ ಆಭರಣ, ಬಟ್ಟೆಗಳನ್ನು ಅವನ ಮನೆಯ ಅಟ್ಟದ ಮೇಲೆಯೇ ಇಟ್ಟಿದ್ದೇನೆ. ನನ್ನ ಮಿತ್ರ ಇಂದಿಗೂ ಅದರ ಬಗ್ಗೆ ಬಾಯಿಬಿಟ್ಟಿಲ್ಲ. ಅದಕ್ಕೇ ಮಿತ್ರನಲ್ಲಿ ರಹಸ್ಯ ಹೇಳಬಹುದು ಎಂದಿದ್ದೆ’.

ಪುಕ್ಕುಸ ಹೇಳಿದ, ‘ನನ್ನ ತೊಡೆಯಲ್ಲಿ ಕುಷ್ಠರೋಗವಿದೆ. ಅದು ರಾಜನಿಗೆ ತಿಳಿದರೆ ನನ್ನನ್ನು ಹೊರಗೆ ಹಾಕಿಬಿಡುತ್ತಾನೆ. ನನ್ನ ತಮ್ಮನೇ ದಿನಾಲು ಅದಕ್ಕೆ ಔಷಧಿ ಹಾಕುತ್ತಾನೆ. ಇದು ಯಾರಿಗೂ ಗೊತ್ತಿಲ್ಲ. ಅದಕ್ಕಾಗಿಯೇ ತಮ್ಮನಿಗೆ ರಹಸ್ಯವನ್ನು ಹೇಳಬಹುದು ಎಂದು ಹೇಳಿದೆ’. ಕಾವಿಂದನೂ ತನ್ನ ರಹಸ್ಯ ಹೇಳಿದ, ‘ಕೃಷ್ಣ ಪಕ್ಷದ ಉಪೋಸಥದ ದಿನ ನರದೇವ ಎಂಬ ಯಕ್ಷ ನನ್ನ ತಲೆಯ ಮೇಲೆ ಬರುತ್ತಾನೆ. ಆಗ ನಾನು ಹುಚ್ಚು ನಾಯಿಯ ತರಹ ಕಿರುಚುತ್ತೇನೆ. ನನ್ನ ಮಗ ಆ ಸಮಯದಲ್ಲಿ ನನ್ನ ಕೈಕಾಲು ಕಟ್ಟಿ ಕೋಣೆಯಲ್ಲಿಡುತ್ತಾನೆ. ನನ್ನ ಕಿರುಚಾಟ ಹೊರಗೆ ಕೇಳದಂತೆ ಜೋರಾಗಿ ಸಂಗೀತ, ನೃತ್ಯ, ಏರ್ಪಡಿಸಿ ನನ್ನ ಮಾನವನ್ನು ಕಾಪಾಡುತ್ತಾನೆ. ಅದಕ್ಕೇ ಮಗನಿಗೆ ರಹಸ್ಯ ಹೇಳಬಹುದು ಎಂದು ತಿಳಿಸಿದೆ’. ದಾವಿಂದ ತನ್ನ ರಹಸ್ಯವನ್ನು ಹೇಳಿದ, ‘ಒಂದು ದಿನ ಅರಮನೆಯ ವಜ್ರಾಗಾರಕ್ಕೆ ಹೋದಾಗ ಇಂದ್ರ ಈ ರಾಜನ ಮುತ್ತಾತನಿಗೆ
ಕೊಟ್ಟ ಶ್ರೀಯುಳ್ಳ ಮಂಗಲಮಣಿಯನ್ನು ಕದ್ದುತಂದೆ. ಅದನ್ನು ನನ್ನ ತಾಯಿಗೆ ಕೊಟ್ಟೆ. ಆಕೆ ವಿಶೇಷ ಸಂದರ್ಭಗಳಲ್ಲಿ ನನಗೆ ಕೊಡುತ್ತಾಳೆ. ಅದರಿಂದಾಗಿಯೇ ನನ್ನಲ್ಲಿ ಯಾವ ಜ್ಞಾನವಿಲ್ಲದಿದ್ದರೂ ರಾಜ ನನಗೆ ಮನ್ನಣೆ ಕೊಡುತ್ತಾನೆ. ನನ್ನ ತಾಯಿ ರಹಸ್ಯವನ್ನು ಕಾಪಾಡಿದ್ದರಿಂದ ತಾಯಿಗೆ ಅತ್ಯಂತ ರಹಸ್ಯವನ್ನು ಹೇಳಬಹುದು ಎಂದೆ’. ಈಗ ಎಲ್ಲರ ರಹಸ್ಯವೂ ಕುಮಾರನಿಗೆ ತಿಳಿದುಬಿಟ್ಟಿತು.

ಅಂದು ರಾತ್ರಿ ರಾಜ ಹಾಸಿಗೆಯಮೇಲೆ ಕುಳಿತು ಚಿಂತಿಸಿದ. ಕಳೆದ ಏಳು ವರ್ಷಗಳಿಂದ ಕುಮಾರ ನನಗೆ ಯಾವ ಅನ್ಯಾಯವನ್ನು ಮಾಡಿಲ್ಲ. ಮಗನಂತೆಯೇ ಇದ್ದಾನೆ. ನಾನು ಆವೇಗದಲ್ಲಿ ಅವನನ್ನು ಕೊಂದುಬಿಡಿ ಎಂದು ಹೇಳಿ ಸೆನೆಕನಿಗೆ ಖಡ್ಗ ಕೊಟ್ಟು ತಪ್ಪು ಮಾಡಿದೆನೇ ಎಂದು ವಿಚಾರ ಮಾಡಿ ಗಾಬರಿಯಾದ. ಅದನ್ನು ಕಂಡು ರಾಣಿ ಬೌದುಂಬರಾದೇವಿ ಕಾರಣ ಕೇಳಿದಾಗ ಆತ ಈ ರಹಸ್ಯವನ್ನು ತಿಳಿಸಿದ. ಆಕೆಗೆ ಈ ಮಾತು ಕೇಳಿ ಬಹಳ ಸಂಕಟವಾಯಿತು. ತನ್ನ ಪ್ರೀತಿಯ ತಮ್ಮನಾದ ಮಹೋಷಧಕುಮಾರನಿಗೆ ಬಂದ ಆಪತ್ತನ್ನು ಪರಿಹರಿಸುವುದು ಹೇಗೆಎಂದುಕೊಂಡು ರಾಜನಿಗೆ ಹೇಳಿದಳು,‘ಸ್ವಾಮಿ, ನೀವೇ ಆ ಕುಮಾರನನ್ನು ಕರೆದು ಐಶ್ವರ್ಯಕೊಟ್ಟಿರಿ, ಸೇನಾಪತಿಯನ್ನಾಗಿ ಮಾಡಿದಿರಿ. ಅವನ ಬುದ್ಧಿಯಿಂದ, ಶಕ್ತಿಯಿಂದ ರಾಜ್ಯ ಸುಭಿಕ್ಷವಾಗಿದೆ, ಭದ್ರವಾಗಿದೆ. ಈಗ ಆತ ನಿಮಗೆ ಶತ್ರು ಏಕಾದ?. ಆಗಲಿ ನಾಳೆ ಇದಕ್ಕೆ ಏನಾದರೂ ಪರಿಹಾರ ಹುಡುಕೋಣ’ ಎಂದು ಅವನನ್ನು ಸಮಾಧಾನಗೊಳಿಸಿದಳು. ಮರುದಿನ ಬೆಳಿಗ್ಗೆ ಏನು ಅನಾಹುತವಾದೀತೋ ಎಂಬ ಚಿಂತೆಯಲ್ಲೇ ರಾಜ ಮಲಗಿದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.