ADVERTISEMENT

ಬೆರಗಿನ ಬೆಳಕು: ದೈವದ ರಹಸ್ಯ

ಡಾ. ಗುರುರಾಜ ಕರಜಗಿ
Published 6 ಡಿಸೆಂಬರ್ 2021, 19:45 IST
Last Updated 6 ಡಿಸೆಂಬರ್ 2021, 19:45 IST
   

ಆವುದರಿನಾವಾಗ ದೈವ ತಾನೊಲಿದೀತೊ? |

ಪೂರ್ವಿಕದ ನಿಯತಿಯನದೆಂದು ಸಡಲಿಪುದೊ? ||

ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೊ?

ADVERTISEMENT

ದೈವಿಕ ರಹಸ್ಯವದು – ಮಂಕುತಿಮ್ಮ || 513 ||

ಪದ-ಅರ್ಥ: ಆವುದರಿನಾವಾಗ=ಆವುದರಿಂ(ಯಾವುದರಿಂದ)+ಆವಾಗ(ಯಾವಾಗ), ಪೂರ್ವಿಕದ=ಹಿಂದಣದ, ನಿಯತಿಯನದೆಂದು=ನಿಯತಿಯನು(ನಿಯಮವನು)+ಅದು+ಎಂದು, ಭಾವಿಸುಕೃತದೆಂದು=ಭಾವಿ(ಮುಂದಿನ)+ಸುಕೃತವು(ಒಳ್ಳೆಯ ಕಾರ್ಯ)+ಅದು+ಎಂದು, ಪೂರ್ವದುರಿತಕೆ=ಪೂರ್ವ(ಹಿಂದಿನ)+ದುರಿತಕೆ(ಪಾಪಕ್ಕೆ)

ವಾಚ್ಯಾರ್ಥ: ಯಾವುದರಿಂದ ಮತ್ತು ಯಾವಾಗ ದೈವ ಒಲಿದೀತೋ? ಅದು ನಮ್ಮ ಪೂರ್ವಕರ್ಮದ ಫಲದ ಬಿಗಿ ನಿಯಮವನ್ನು ಎಂದು ಸಡಲಿಸುವುದೊ? ಮುಂದೆ ನಾನು ಮಾಡುವ ಪುಣ್ಯಕಾರ್ಯ ಹಿಂದೆ ಮಾಡಿದ ಪಾಪಗಳಿಂದ ಎಂದು ಹೆಚ್ಚಾದೀತೊ? ಇದು ದೈವದ ರಹಸ್ಯ.

ವಿವರಣೆ: ಕಷ್ಟ ಬಂದಾಗ ಮನುಷ್ಯ ಯೋಚಿಸುತ್ತಾನೆ. ತಾನು ಇದರಿಂದ ಪಾರಾಗುವುದು ಹೇಗೆ? ಏನು ಮಾಡಿದರೆ ದೈವಕೃಪೆ ಆದೀತು? ಪೂಜೆ, ಭಜನೆ, ದಾನ, ಉರುಳುಸೇವೆ ಯಾವುದನ್ನು ಮಾಡಿದರೆ ದೈವ ಒಲಿದೀತು? ಯಾವಾಗ ದೈವ ನನ್ನ ಮೇಲೆ ಕರುಣೆ ತೋರೀತು ಎಂದು ಚಿಂತಿಸುತ್ತಾನೆ. ಅದಲ್ಲದೆ ಅವನಿಗೆ ತಾನು ಹಿಂದೆ ಮಾಡಿದ ಪಾಪಕರ್ಮಗಳ ನೆನಪಿದೆ. ಪ್ರಪಂಚದ ಮುಂದೆ ಸಜ್ಜನರ ಮುಖವಾಡ ಧರಿಸಿ ನಟಿಸಬಹುದು. ಆದರೆ ವ್ಯಕ್ತಿಯ ಅಂತರಂಗದಲ್ಲಿ ತಾನು ಮಾಡಿದ ತಪ್ಪು ಸದಾ ಕೊರೆಯುತ್ತಿರುತ್ತದೆ. ಅದು ಮೈಯ್ಯೊಳಗೆ ಚುಚ್ಚಿ ಮುರಿದ ಮುಳ್ಳಿನಂತೆ ಸದಾ ಯಾವಾಗಲೂ ಅಲಗುತ್ತ, ನೋವು ಕೊಡುತ್ತಲೇ ಇರುತ್ತದೆ. ಏನು ಮಾಡಿದರೆ, ಯಾವ ಪುಣ್ಯ ಕಾರ್ಯ ಮಾಡಿದರೆ ಹಳೆಯ ಪಾಪವನ್ನು ಕರಗಿಸಲಾದೀತು ಎಂದು ಯೋಚಿಸುತ್ತಾನೆ. ಆತನ ಪುಣ್ಯಕಾರ್ಯಗಳೆಲ್ಲ ಹಿಂದಿನ ಪಾಪವನ್ನು ಕರಗಿಸಲೆಂದು ಮಾಡಿದ ಪರಿಶ್ರಮವೇ.

ಕರ್ಮವೆಂಬುದು ನಮ್ಮನ್ನು ಎಂದಿಗೂ ಬಿಡದು. ಗೀತೆಯಲ್ಲಿ, ‘ನಕಶ್ಚಿತ್ ಕ್ಷಣಮಪಿ ಜಾತು ತಿಷ್ಠಶ್ಯಕರ್ಮಕೃತ್’ ಎಂದು ಬರುತ್ತದೆ. ಹಾಗೆಂದರೆ ಯಾವನೂ ಒಂದು ಕ್ಷಣ ಕೂಡ ಕರ್ಮ ಮಾಡದೆ ಇರಲಾರ. ಪ್ರತಿಯೊಂದು ಕರ್ಮಕ್ಕೂ ಒಂದು ಪ್ರತಿಫಲ. ಅದನ್ನು ತಪ್ಪಿಸುವುದು ಸಾಧ್ಯವಿಲ್ಲ. ಆದರೆ ಹಿಂದೆ ಮಾಡಿದ ಪಾಪಕರ್ಮ ಹೇಗೆ ಕೊನೆಯವರೆಗೆ ಕಾಡುತ್ತದೆಂಬುದಕ್ಕೆ ದಶರಥ ಒಂದು ಉತ್ತಮ ಉದಾಹರಣೆ. ಹಿಂದೆ ತನಗರಿವಿಲ್ಲದೆ ಶ್ರವಣಕುಮಾರನನ್ನು ಕೊಂದು, ಅವನ ತಂದೆ-ತಾಯಿಯರ ಶಾಪಕ್ಕೆ ಗುರಿಯಾದದ್ದನ್ನು ಯಾರಿಗೂ ಹೇಳದೆ ಮುಚ್ಚಿಟ್ಟವನು, ಕೊನೆಗೆ ಮರಣ ಕಾಲದಲ್ಲಿ, ರಾಮ ವನವಾಸಕ್ಕೆ ಹೊರಟ ಮೇಲೆ, ಕೌಸಲ್ಯೆಗೆ, ತನ್ನನ್ನು ಕೊರೆಯುತ್ತಿರುವ ಪಾಪಪ್ರಜ್ಞೆಯನ್ನು ಅರುಹುತ್ತಾನೆ. ಕೊನೆಗೊಂದು ಸಾರ್ವಕಾಲಿಕ ಸತ್ಯವನ್ನು ಹೇಳುತ್ತಾನೆ.

‘ಯದಾಚರತಿ ಕಲ್ಯಾಣಿ, ಶುಭಂ ವಾ ಯದಿವಾಶುಭಮ್ |

ತದೇವ ಲಭತೇ ಭದ್ರೇ ಕರ್ತಾಕರ್ಮಜಮಾತ್ಮನಃ ||

‘ಕೌಸಲ್ಯೆ, ಮನುಷ್ಯರು ಶುಭವನ್ನಾಗಲಿ ಅಶುಭವನ್ನಾಗಲಿ, ಯಾವುದನ್ನು ಮಾಡುತ್ತಾನೆಯೋ, ಅದನ್ನೇ ಹಿಂದಕ್ಕೆ ಪಡೆಯುತ್ತಾನೆ’. ಇದನ್ನು ತಿಳಿದೂ ಮನುಷ್ಯ ದೈವದ ಕರುಣೆಯನ್ನು ಪಡೆಯಲು ಏನೇನೋ ಪ್ರಯತ್ನ ಮಾಡುತ್ತಾನೆ. ಅದು ದೈವದ ರಹಸ್ಯಕಾರ್ಯವೆಂದು ಅರಿತೂ ಹೆಣಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.