ADVERTISEMENT

ಸಂಸ್ಕೃತಿಯ ತಳಪಾಯ

ಡಾ. ಗುರುರಾಜ ಕರಜಗಿ
Published 7 ಮೇ 2020, 3:47 IST
Last Updated 7 ಮೇ 2020, 3:47 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ನಗರದಲ್ಲಿ ಒಬ್ಬ ಗೃಹಸ್ಥನಿದ್ದ. ಅವನ ಹೆಸರು ವಸಿಷ್ಠ. ಆತನ ತಾಯಿ ಕಾಲವಾಗಿ ಹೋಗಿದ್ದಳು. ವಸಿಷ್ಠ ತನ್ನ ತಂದೆಯ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದ. ತಂದೆಯ ಒತ್ತಾಯಕ್ಕೆ ಮದುವೆಯಾದ. ಮದುವೆಯಾದ ನಾಲ್ಕೈದು ವರ್ಷ ಅವನ ಹೆಂಡತಿ ಮಾವನನ್ನು ಚೆನ್ನಾಗಿ ಆರೈಕೆ ಮಾಡಿದಳು. ಬರಬರುತ್ತ ಅವನ ಬಗ್ಗೆ ಉಪೇಕ್ಷೆ ಬೆಳೆಯಿತು. ಸ್ನಾನದ ಕಾಲದಲ್ಲಿ ತಲೆಯ ಮೇಲೆ ಸುಡು ಸುಡುವ ನೀರನ್ನು ಸುರಿಯುವಳು, ಒಂದು ದಿನ ಊಟಕ್ಕೆ ಉಪ್ಪೇ ಇಲ್ಲ, ಮರುದಿನ ಬರೀ ಉಪ್ಪೇ. ಕೆಲವೊಂದು ದಿನ ಅನ್ನ ಬೇಯದೇ ಇರುತ್ತಿತ್ತು. ಅವನನ್ನು ಸದಾಕಾಲ ಹೀಯಾಳಿಸಿ ಮಾತನಾಡುತ್ತಿದ್ದಳು. ತಾನೇ ಮನೆಯಲ್ಲೆಲ್ಲ ಉಗುಳಿ, ‘ನೋಡಿ, ಇದು ನಿಮ್ಮ ಅಪ್ಪನ ಕೆಲಸ’ ಎಂದು ಗಂಡನಿಗೆ ಚಾಡಿ ಹೇಳುತ್ತಿದ್ದಳು. ‘ನಿಮ್ಮ ತಂದೆ ಮಹಾ ಕಠೋರಿ, ಜಗಳಗಂಟ, ಸದಾ ರೋಗಿ, ಇಂಥವರ ಜೊತೆಗೆ ನಾನು ಬಾಳಲಾರೆ’ ಎಂದು ನಿತ್ಯವೂ ತಕರಾರು ಮಾಡುತ್ತಿದ್ದಳು. ಮೇಲಿಂದ ಮೇಲೆ ಇದನ್ನು ಕೇಳಿ ಕೇಳಿ ವಸಿಷ್ಠನಿಗೂ ಇದು ನಿಜವೇ ಇರಬೇಕು ಎನ್ನಿಸಿತು.

ಇವನ ಮನಸ್ಸು ಒಲಿದದ್ದನ್ನು ಕಂಡು ಆಕೆ ಒಂದು ಉಪಾಯವನ್ನು ಹೇಳಿದಳು, ‘ಹೇಗಿದ್ದರೂ ನಿಮ್ಮಪ್ಪ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ. ನಾಳೆ ಅವನನ್ನು ಬಂಡಿಯಲ್ಲಿ ಕರೆದುಕೊಂಡು ಸ್ಮಶಾನಕ್ಕೆ ಹೋಗಿ, ಗುಂಡಿ ತೆಗೆದು, ಸಲಿಕೆಯಿಂದ ತಲೆ ಒಡೆದು, ಮುಚ್ಚಿ ಬಂದುಬಿಡಿ. ಯಾರಿಗೂ ಸಂಶಯ ಬರುವುದಿಲ್ಲ’ ಎಂದಳು. ಮೂರ್ಖ ಗಂಡ ವಾದವನ್ನು ಒಪ್ಪಿ. ಮರುದಿನ ತಂದೆಗೆ ಹೇಳಿದ, ‘ಅಪ್ಪಾ, ನೀವು ಸಾಲ ಕೊಟ್ಟ ಮನುಷ್ಯ ಹಣ ಮರಳಿ ಕೊಡುತ್ತಿದ್ದಾನೆ. ಅದಕ್ಕೆ ನೀವೇ ಬರಬೇಕಂತೆ’. ಮುದುಕ ಒಪ್ಪಿದ. ವಸಿಷ್ಠನಿಗೆ ಹತ್ತು ವರ್ಷದ ಮಗನೊಬ್ಬನಿದ್ದ. ಆತ ತುಂಬ ಸೂಕ್ಷ್ಮಗ್ರಾಹಿ. ಏನೋ ನಡೆಯುತ್ತಿದೆ ಎಂದು ತಿಳಿದು ತಾತನೊಂದಿಗೆ ತಾನೂ ಬಂಡಿಯನ್ನೇರಿ ಕುಳಿತ.

ವಸಿಷ್ಠ ಸ್ಮಶಾನದಲ್ಲಿ ಇಳಿದು ಒಂದು ಚೌಕದ ಗುಂಡಿ ತೆಗೆಯತೊಡಗಿದ. ಅವನ ಮಗ ಕೇಳಿದ, ‘ಅಪ್ಪಾ, ಇಲ್ಲಿ ಗಡ್ಡೆ ಇಲ್ಲ, ಮರ ಇಲ್ಲ, ನೆಲವನ್ನೇಕೆ ಅಗಿಯುತ್ತೀ?’. ವಸಿಷ್ಠ, ‘ಮಗೂ, ನಿನಗೆ ಅರ್ಥವಾಗುವುದಿಲ್ಲ. ನನ್ನ ತಂದೆಗೆ ಬಹಳ ವಯಸ್ಸಾಗಿದೆ. ಈಗ ಅವರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಈ ಗುಂಡಿಯಲ್ಲಿ ಅವರನ್ನು ಹಾಕಿ ಮುಚ್ಚಿ ಬಿಡುತ್ತೇನೆ’ ಎಂದ. ಸ್ವಲ್ಪ ವಿಶ್ರಾಂತಿಗೆಂದು ಅಪ್ಪ ಮರದ ಕೆಳಗೆ ಕುಳಿತಾಗ, ಅವನ ಮಗ ಗುದ್ದಲಿಯನ್ನು ತೆಗೆದುಕೊಂಡು ಹತ್ತಿರದಲ್ಲಿ ಮತ್ತೊಂದು ಗುಂಡಿಯನ್ನು ಅಗೆಯತೊಡಗಿದ. ಅದನ್ನು ಕಂಡು ತಂದೆ ಅಲ್ಲಿಂದಲೇ ಕೂಗಿದ, ‘ಮಗೂ, ಮತ್ತೇಕೆ ಇನ್ನೊಂದು ಗುಂಡಿಯನ್ನು ತೆಗೆಯುತ್ತೀ? ಒಂದೇ ಸಾಕು’. ಮಗನೂ ಅಲ್ಲಿಂದಲೇ ಕೂಗಿದ, ‘ಹೌದಪ್ಪ, ಇವತ್ತಿಗೆ ಇದೊಂದು ಸಾಕು. ಆದರೆ ಇನ್ನು ಕೆಲವೇ ದಿನಗಳಲ್ಲಿ ನಿನಗೂ ವಯಸ್ಸಾಗುತ್ತದಲ್ಲ, ಆಗ ನಾನು ಇದೇ ಕೆಲಸ ಮಾಡಬೇಡವೇ? ಇದು ಕುಲದ ಪರಂಪರೆ. ಆಗ ಗುಂಡಿ ತೆಗೆಯುತ್ತ ಸಮಯ ವ್ಯರ್ಥ ಮಾಡುವುದಕ್ಕಿಂತ ಈಗಲೇ ತೆಗೆದು ಇಟ್ಟುಬಿಡುತ್ತೇನೆ’.

ADVERTISEMENT

ಅಪ್ಪ ಎದ್ದು ಬಂದು ಹೇಳಿದ, ‘ನಾನೇನು ಮಾಡಲಪ್ಪ? ನಿನ್ನ ಅಮ್ಮನ ಒತ್ತಾಯಕ್ಕೆ ಈ ಪಾಪಕರ್ಮವನ್ನು ಮಾಡುತ್ತೇನೆ’. ಮಗ, ‘ಅಪ್ಪಾ, ಪಾಪಕರ್ಮದಿಂದ ನಿನ್ನನ್ನು ತಡೆಯಲು ನಾನು ಇದನ್ನು ಮಾಡುತ್ತಿದ್ದೇನೆ. ದಯವಿಟ್ಟು ಅಮ್ಮನಿಗೆ ಈ ಸತ್ಯವನ್ನು ತಿಳಿಸೋಣ. ಆಕೆಗೂ ಮುಂದೆ ವಯಸ್ಸಾಗುತ್ತದೆ. ಆಗ ಆಕೆ ಅಜ್ಜನಿಗೆ ಮಾಡಿದ ಹಾಗೆ ನನ್ನ ಹೆಂಡತಿ ಆಕೆಗೆ ಮಾಡಿದರೆ ಹೇಗೆನ್ನಿಸುತ್ತದೆ ಎಂದು ತಿಳಿಸಿ ಒಪ್ಪಿಸೋಣ’. ಅಜ್ಜ, ಮಗ, ಮೊಮ್ಮಗ ಮನೆಗೆ ಬಂದು ಮನೆಯಾಕೆಯನ್ನು ಒಪ್ಪಿಸಿ ಸುಖವಾಗಿ ಬದುಕಿದರು.

ಹಳೆಯದ್ದೆಲ್ಲ ನಿಷ್ಪ್ರಯೋಜಕವಲ್ಲ, ಅದುತ್ಯಾಜ್ಯವೂ ಅಲ್ಲ. ಅದನ್ನು ಇರುವ ತನಕ ಜೋಪಾನವಾಗಿ, ಗೌರವದಿಂದ ಇಟ್ಟುಕೊಳ್ಳುವುದು ನಮ್ಮ ಸಂಸ್ಕೃತಿಯ ತಳಪಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.