ADVERTISEMENT

ಬೆರಗಿನ ಬೆಳಕು: ಆಕಸ್ಮಿಕದ ಪಾಠ

ಡಾ. ಗುರುರಾಜ ಕರಜಗಿ
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಾರಾಣಸಿಯಲ್ಲಿ ಎಸುಕಾರಿ ಎಂಬ ರಾಜನಿದ್ದ. ಅವನಿಗೊಬ್ಬ ಪುರೋಹಿತ. ಇಬ್ಬರೂ ಬಾಲ್ಯದಿಂದ ಜೊತೆಗೇ ಬೆಳೆದಿದ್ದರಿಂದ ಸ್ನೇಹಿತರಂತೆಯೇ ಇದ್ದರು. ಇಬ್ಬರಿಗೂ ಮಕ್ಕಳಿರಲಿಲ್ಲ. ಒಂದು ದಿನ ಇಬ್ಬರೂ ಕುಳಿತು ಮಾತನಾಡುತ್ತಿದ್ದರು. ಆಗ ರಾಜ ಹೇಳಿದ, ‘ಮಿತ್ರಾ, ನಮಗೆ ಯಾವುದರ ಕೊರತೆಯೂ ಇಲ್ಲ. ಆದರೆ ಮಕ್ಕಳಿಲ್ಲ, ಇಬ್ಬರಲ್ಲಿ ಒಬ್ಬರಿಗಾದರೂ ಮಗನಾಗಬೇಕಿತ್ತು. ಆಗ ಇಬ್ಬರ ಸಂಪತ್ತು ಅವನಿಗೇ ದಕ್ಕುತ್ತಿತ್ತು. ಈಗಲಾದರೂ ಮಗ ಹುಟ್ಟಿದರೆ ಹಾಗೆಯೇ ನಡೆದುಕೊಳ್ಳೋಣ’. ಇದನ್ನೇ ವಾಗ್ದಾನವೆಂದು ಇಬ್ಬರೂ ತಿಳಿದರು.

ಒಂದು ದಿನ ಪುರೋಹಿತ ದಕ್ಷಿಣ ದ್ವಾರದಿಂದ ಪುರಪ್ರವೇಶ ಮಾಡುತ್ತಿದ್ದಾಗ ಒಬ್ಬ ಮಹಿಳೆ ಏಳು ಜನ ಗಂಡು ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದನ್ನು ಕಂಡು ಆಕೆಯನ್ನು ಕೇಳಿದ, ‘ಎಷ್ಟು ಪುಣ್ಯವಂತೆಯಮ್ಮ ನೀನು, ನಿನಗೆ ಏಳು ಜನ ಗಂಡುಮಕ್ಕಳಿದ್ದಾರೆ’ ಆಕೆ, ‘ಇದೆಲ್ಲ ಈ ನಿಗ್ರೋಧ ವೃಕ್ಷದ ವೃಕ್ಷದೇವತೆಯ ಕೃಪೆ’ ಎಂದು ಹೇಳಿ ಹೋದಳು. ಪುರೋಹಿತ ಆ ಮರದ ಬಳಿಗೆ ಹೋಗಿ ‘ಹೇ ವೃಕ್ಷದೇವತೆ, ರಾಜ ನಿನಗಾಗಿ ಎಷ್ಟೊಂದು ಬಲಿಗಳನ್ನು ನೀಡುತ್ತಾನೆ, ಪೂಜೆ ಮಾಡುತ್ತಾನೆ. ಅವನಿಗೆ ಮಗನನ್ನು ನೀಡದೆ ಈ ಬಡ ಹೆಂಗಸಿಗೆ ಏಳು ಮಕ್ಕಳನ್ನು ನೀಡಿದ್ದೀಯಾ. ಇನ್ನು ಏಳು ದಿನಗಳಲ್ಲಿ ರಾಜನಿಗೆ ಮಗನನ್ನು ಕೊಡದಿದ್ದರೆ ನಿನ್ನನ್ನು ಕತ್ತರಿಸಿ ಹಾಕುತ್ತೇನೆ’ ಎಂದು ಹೆದರಿಸಿದ. ಮುಂದೆ ಆರು ದಿನಗಳೂ ಇದೇ ರೀತಿ ಹೆದರಿಕೆ ಮುಂದುವರಿಯಿತು. ವೃಕ್ಷದೇವತೆಗೆ ಚಿಂತೆಯಾಯಿತು. ಅದು ಹೋಗಿ ವೃಕ್ಷ ಮಹಾರಾಜರನ್ನು ಕೇಳಿತು. ಅವರು ‘ರಾಜನಿಗೆ ಪುತ್ರಭಾಗ್ಯವಿಲ್ಲ’ ಎಂದುಬಿಟ್ಟರು. ಅದು ಕೊನೆಗೆ ಶಕ್ರನ ಬಳಿಗೆ ಬಂದು ಕೇಳಿತು. ಶಕ್ರ ಧ್ಯಾನದಲ್ಲಿ ನೋಡಿದಾಗ ಹಿಂದೆ ನಾಲ್ಕು ಜನ ವಾರಾಣಸಿಯಲ್ಲಿ ನೇಕಾರರಾಗಿದ್ದವರು ತೃಯೋತ್ರಿಂಶ ಭವನದಿಂದ ಕೆಳಗೆ ಬರುವುದನ್ನು ಗಮನಿಸಿ ಅವರನ್ನು ಕರೆದು, ‘ನೀವು ಮನುಷ್ಯ ಲೋಕಕ್ಕೆ ಹೋಗಿ ರಾಜನ ಮಕ್ಕಳಾಗಬೇಕು’ ಎಂದು ಹೇಳಿದ. ಅವರು, ‘ನಮಗೆ ರಾಜಭೋಗ ಬೇಡ. ಪುರೋಹಿತನ ಮಕ್ಕಳಾಗಿ ಹುಟ್ಟಿ, ಸಣ್ಣವಯಸ್ಸಿನಲ್ಲೇ ಪ್ರವ್ರಜಿತರಾಗಿ ಹೋಗುತ್ತೇವೆ’ ಎಂದರು. ಶಕ್ರ ಆಗಲಿ ಎಂದು ಅಪ್ಪಣೆ ಕೊಟ್ಟ.

ಮರುದಿನ ಪುರೋಹಿತ ಮರ ಕಡಿಯಲು ಬಂದಾಗ ವೃಕ್ಷದೇವತೆ ಬಂದು ನಡೆದದ್ದನ್ನು ತಿಳಿಸಿ ಅವನಿಗೆ ನಾಲ್ಕು ಮಕ್ಕಳಾಗುವುದನ್ನು, ಅವರು ಚಿಕ್ಕ ವಯಸ್ಸಿನಲ್ಲೇ ಪ್ರವ್ರಜಿತರಾಗುವುದನ್ನು ಹೇಳಿದ. ಮಕ್ಕಳಂತೂ ಆಗಲಿ, ಅವರು ಮುಂದೆ ಪ್ರವ್ರಜಿತರಾಗದಂತೆ ನೋಡಿಕೊಳ್ಳುತ್ತೇವೆ ಎಂದ ಪುರೋಹಿತ. ವೃಕ್ಷದೇವತೆ ಹೇಳಿದಂತೆ ಪುರೋಹಿತನ ಹೆಂಡತಿಗೆ ನಾಲ್ಕು ಮಕ್ಕಳಾದರು. ಅವರು ಬೆಳೆಯುತ್ತಿದ್ದಂತೆ ರಾಜ, ಪುರೋಹಿತರು ಇಡೀ ದೇಶದಲ್ಲಿ ಒಬ್ಬನೂ ಸನ್ಯಾಸಿ ಇರದಂತೆ ನೋಡಿಕೊಂಡರು. ಮಕ್ಕಳು ದೊಡ್ಡವರಾದರು. ಅವರನ್ನು ಪರೀಕ್ಷಿಸಲು ರಾಜ ಮತ್ತು ಪುರೋಹಿತರು ಸನ್ಯಾಸಿ ವೇಷ ಧರಿಸಿ ಅವರನ್ನು ಭೇಟಿಯಾದರು. ಇವರನ್ನು ನೋಡಿದ ತಕ್ಷಣ ಮಕ್ಕಳು ಪ್ರೇರೇಪಣೆ ಪಡೆದು ಪ್ರವ್ರಜಿತರಾದರು. ಅದನ್ನು ನೋಡಿ ಪುರೋಹಿತ, ಅವನ ಹೆಂಡತಿ ಮತ್ತು ರಾಣಿ ಕೂಡ ಪ್ರವ್ರಜಿತರಾದರು. ರಾಜನಿಗೆ ಆಸೆ ಹೆಚ್ಚಿ ಎಲ್ಲ ಸಂಪತ್ತನ್ನು ತಾನೇ ಪಡೆದ. ಇನ್ನೂ ಪಡೆಯಬೇಕೆಂದು ಹಾತೊರೆದ. ಒಂದು ದಿನ ಆತ ಗಿಡುಗವೊಂದು ಅತಿಯಾಗಿ ಮಾಂಸ ತಿಂದು ಹಾರದೆ ಒದ್ದಾಡುವುದನ್ನು ಕಂಡು, ತನ್ನ ಸ್ಥಿತಿಯೂ ಹಾಗೆಯೇ ಆಯಿತಲ್ಲ ಎಂದು ಮರುಗಿ ಪ್ರವ್ರಜಿತನಾದ.

ADVERTISEMENT

ಜೀವನದಿಂದ ದೊರಕದ ಪಾಠ ಕೆಲವೊಮ್ಮೆ ಆಕಸ್ಮಿಕ ಘಟನೆಗಳಿಂದ ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.